ಬೇಏರಿಯಾದಲ್ಲಿ ಅಮೋಘ ಶ್ರೀರಾಮಪಟ್ಟಾಭಿಷೇಕಂ
ಇಪ್ಪತ್ತನಾಲ್ಕು ಘಂಟೆಗಳ ನಂತರವೂ ಒಂದು ಸುಂದರವಾದ ಕನಸಿನಿಂದ ಎಚ್ಚೆತ್ತು ನಿಜಲೋಕಕ್ಕೆ ಮರಳುವ ಮನಸ್ಸೇ ಇಲ್ಲ ; ಹಿತವಾಗಿ ಕಿವಿಯಲ್ಲಿ ಮೊಳಗುತ್ತ, ನಿಂತರೆ ಕೂತರೆ ಗುನುಗುನಿಸುವಂತೆ ಪ್ರೇರೇಪಿಸುವ ಮಧುರವಾದ ಸಂಗೀತ ಬಿಟ್ಟು ಬೇರಿನ್ನಾವ ಶಬ್ದವನ್ನೂ ಕೇಳುವ ಆಸೆಯಿಲ್ಲ; ಸಮ್ಮೋಹನಕ್ಕೆ ಒಳಗಾದವಳಂತೆ ತಿರುಗುತ್ತಿರುವವಳು ನಾನೊಬ್ಬಳೇ ಖಂಡಿತ ಅಲ್ಲ. ಸೆಪ್ಟೆಂಬರ್ 13 ರಂದು ಸಿಲಿಕಾನ್ ಕಣಿವೆಯಲ್ಲಿ ನಡೆದ ಕನ್ನಡ ಕೂಟದ ಕನ್ನಡೋತ್ಸವದಲ್ಲಿ "ಶ್ರೀರಾಮಪಟ್ಟಾಭಿಷೇಕಂ" ನೃತ್ಯರೂಪಕವನ್ನು ನೋಡಿದ, ಸಾವಿರಕ್ಕೂ ಮೀರಿ ನೆರೆದಿದ್ದ ಕನ್ನಡಿಗರಲ್ಲಿ ಯಾರನ್ನಾದರೂ ಕೇಳಿ!
ಕನ್ನಡದ ಪೂಜ್ಯ ಕವಿ ಪುತಿನ ಅವರ ಗೀತರೂಪಕವೊಂದನ್ನು ಅವರ ಪುತ್ರಿ ಅಲಮೇಲು ಅಯ್ಯಂಗಾರ್ ಪ್ರದರ್ಶಿಸುತ್ತಾರೆ ಎನ್ನುವ ಸುದ್ದಿ ತಿಳಿದ ತಕ್ಷಣ ನಮ್ಮೂರಿನ ಜನ ಕಾತರದಿಂದ ಎದುರು ನೋಡಲು ಶುರು ಮಾಡುತ್ತಾರೆ ಎನ್ನುವುದು ಅತಿಶಯೋಕ್ತಿಯಲ್ಲ. ಅವರ ಒಂದು ಪ್ರದರ್ಶನವು ಮುಗಿದು ಇನ್ನೊಂದನ್ನು ನೋಡುವವರೆಗೂ ನಾವು ಆ ರಸದೌತಣದ ರುಚಿಯನ್ನು ಮರೆಯುವ ಹಾಗೇ ಇಲ್ಲ, ಮತ್ತು ಆ ಹಿತವಾದ ಕನಸನ್ನೂ ಮೆಲುಕು ಹಾಕದೇ ಇರುವುದೇ ಇಲ್ಲ. ಅಲಮೇಲು ಅಮೇರಿಕಾದ ಯಾವುದೇ ಊರಿನಲ್ಲಿ ಅವರ ಗೀತರೂಪಕಗಳನ್ನು ಪ್ರದರ್ಶಿಸಿದರೆ, ಖಂಡಿತ ತಪ್ಪಿಸಿಕೊಳ್ಳಬೇಡಿ. ಅವರನ್ನು ಕಾಡಿ, ಬೇಡಿಯಾದರೂ ನಿಮ್ಮೂರಿಗೆ ಕರೆಸಿಕೊಳ್ಳಿ.
"ಶ್ರೀರಾಮಪಟ್ಟಾಭಿಷೇಕಂ" ಗೀತರೂಪಕದ ಮೊದಲನೇ ಭಾಗದಲ್ಲಿ ರಾಮ ಸೀತೆಯರ ಅಂತರಾಳವನ್ನು ಪುತಿನ ಅವರು ಹೂವಿನ ಪಕಳೆಗಳನ್ನು ಬಿಚ್ಚಿಟ್ಟಂತೆ ನಮಗೆ ತೋರಿಸಿದ್ದಾರೆ. ಇಲ್ಲಿ ಅವರ ಕವಿಹೃದಯ ಕಂಡದ್ದು ರಾವಣವಧೆಯ ನಂತರದ ಕ್ಷಣಗಳು. ಅಲ್ಲಿಯವರೆಗೂ ಸೀತೆಯನ್ನು ಕಣ್ಣಾರೆ ನೋಡಿಯೇ ಇರದ ರಾಕ್ಷಸಗಣ, ವಾನರಗಣಗಳಿಗೆ ಕುತೂಹಲ. ಜನಕರಾಜಕುಮಾರಿ, ಭೂದೇವಿಸುತೆ ಜಾನಕಿಯು ಅಪ್ರತಿಮ ಸುಂದರಿ, ಧೀರಾಗ್ರೇಸರ ರಾಮನ ಏಕೈಕ ಪತ್ನಿ, ಸಹಚರಿ, ಅರಮನೆಯ ಸುಖಸಂತೋಷಗಳನ್ನು ತ್ಯಜಿಸಿ ಪತಿಯನ್ನು ಅಡವಿಗೆ ಹಿಂಬಾಲಿಸಿದ ಸಾಧ್ವಿ ಎಂಬ ಹೊಗಳಿಕೆಗಳನ್ನೆಲ್ಲ ಕೇಳಿದ್ದವರಿಗೆ, ರಾವಣ ಬಲಾತ್ಕಾರವಾಗಿ ಅಪಹರಿಸಿಕೊಂಡು ಹೋಗುವಂತಹ ತ್ರಿಭುವನಸುಂದರಿಯೇ ಅವಳು? ಅವಳನ್ನು ಯಾವಾಗ ಕಂಡೇವು ಎನ್ನುವ ತವಕ. ಸೀತೆಯನ್ನು ನೋಡಿದಾಕ್ಷಣ ಅವರನ್ನು ವಿಸ್ಮಯಗೊಳಿಸಿದ ಸಂಗತಿಯೇನೆಂದರೆ, ಅವಳ ಕಣ್ಣುಕೋರೈಸುವ ರೂಪ.
ಈ ಪ್ರಸಂಗದಲ್ಲಿ ಜನಸಾಮಾನ್ಯರು ಕಂಡ ಬಾಹ್ಯಸೌಂದರ್ಯವನ್ನು ವರ್ಣಿಸುತ್ತ ಪುತಿನ ಅವರು ಬರೆದ "ಎಂದೂ ಕಾಣದಿಹ ಚಂದದವಳ ನೋಡೆ ಮಂದಿಯಂದಣವ ಮುತ್ತುತ್ತಿಹುದಹಹ" ಪದಗಳ ಒಳಪದರಗಳಲ್ಲಿ ನಿಮಗೇನು ಕಾಣಿಸುತ್ತದೆ? ಅಡವಿಯ ಜರ್ಜರ ಜೀವನದಲ್ಲಿ ಕಳೆದ ದಿನಗಳಲ್ಲಾಗಲೀ, ರಾವಣನ ಸೆರೆಯಲ್ಲಿ, ರಾಮನಿಲ್ಲದೇ ಬೆಂದ ತಾಪದಲ್ಲಾಗಲೀ ಕುಂದಿಲ್ಲದ ಸೌಂದರ್ಯವೆಂದುಕೊಳ್ಳಬಹುದು. ಅದು ನಿಜವಾಗಿ ರಾವಣನ ಸೆರೆಯಿಂದ ತನ್ನನ್ನು ಬಿಡುಗಡೆ ಮಾಡಿದ ತನ್ನ ಪರದೈವ ರಾಮನನ್ನು ಮತ್ತೆ ನೋಡುವೆನೋ ಇಲ್ಲವೋ ಎಂದು ಕಾತರಿಸಿ, ಹಂಬಲಿಸಿದ್ದ ಹೆಣ್ಣುಜೀವವು ಒಂದು ಅತ್ಯಂತ ಸಂತೋಷಕರ ಕ್ಷಣದ ಬೆಳಕಿನಲ್ಲಿ ಮಿಂಚುತ್ತ ಸೂಸುವ ಸೌಂದರ್ಯವೂ ಆಗಿರಬಹುದೇ? ತನ್ನ ಅಂತರಂಗದ ಸಖ ರಾಮನನ್ನು ನೋಡಹೋಗುವ ಮುನ್ನ ಅಲಂಕರಿಸಿಕೊಳ್ಳಲು ಯಾವ ಆಡಂಬರದ ವಸ್ತ್ರಾಲಂಕಾರವಾಗಲೀ, ವಜ್ರವೈಢೂರ್ಯಗಳ ಆಭರಣಗಳಾಗಲೀ ಇಲ್ಲದ, ಅವನನ್ನು ಮತ್ತೆ ಸೇರುವ ಭಾಗ್ಯದ ಸಂಭವವನ್ನೇ ಬಿಂಬಿಸುವ ಸೌಂದರ್ಯವೂ ಆಗಿರಬಹುದೇ? ಗೀತರೂಪಕದ ಕಲಾವಿದರು ಸಮರ್ಪಕವಾಗಿ ಮೂಡಿಸಿದ ವಿಸ್ಮಯ, ಸೀತೆಯಾಗಿ ಸುಂದರ ತರುಣಿ ಚಿನ್ಮಯಿ ಬೆಟ್ಟದಪುರ ನಡೆದು ಬಂದ ರಾಜಗಾಂಭೀರ್ಯ, ಪುತಿನ ಅವರ "ವಸುಮತೀ ದುಹಿತೆ" ಕವಿತೆಯನ್ನು ಶುಭಾ ಶ್ರೀವತ್ಸನ್, ಹೆಮ್ಮಿಗೆ ಶ್ರೀವತ್ಸನ್ ತಂಡದವರು ಅದ್ಭುತವಾಗಿ ಹಾಡಿದ ಸಂಗೀತ ಇವೆಲ್ಲವೂ ನಮ್ಮ ಅನುಭವಕ್ಕೆ ಸಿಕ್ಕ ಮಧುರ ಕ್ಷಣಗಳು.
ವಿಸ್ಮಯ ಕಳೆದು ದಿಗ್ಭ್ರಮೆಯನ್ನುಂಟು ಮಾಡುವ ಮುಂದಿನ ಸಂದರ್ಭದಲ್ಲಿ ರಾಮನ ಆಂತರ್ಯದ ತುಮುಲವನ್ನು ಪುತಿನ ಅವರು ನಮ್ಮ ಮುಂದಿಡುತ್ತಾರೆ. ಸೀತೆಯ ಸೌಂದರ್ಯಕ್ಕೆ ದಂಗಾದ ಜನರ ಪ್ರತಿಕ್ರಿಯೆ ರಾಮನ ಮನಸ್ಸಿನಲ್ಲಿ ಅಳುಕುಂಟು ಮಾಡುತ್ತದೆ. ಹೊನ್ನಿನಂತೆ ಉಜ್ವಲವಾಗಿ ಕಂಗೊಳಿಸುತ್ತಿರುವ ಜ್ಯೋತಿರ್ಮಯಿಯ ಕಡೆ ಅವನು ಕಣ್ಣೂ ಹಾಯಿಸಲಾರ. ಪುತಿನ ರಾಮನ ನಡವಳಿಕೆಯನ್ನು ವರ್ಣಿಸಿರುವ "ಇಂಥ ಚಂದುಳ್ಳವಳು ಎಂತು ಕಾಮಿಯಮನೆಯೊಳಂದಗೆಡದಿದ್ದೆ ಎಂದುಮ್ಮಳಗೊಂಡು...ನೋಡಲಾರೆ ನಿನ್ನ ಜಾನಕಿ" ಮತ್ತು "ಪೋ ಪೋ ಪೋ ಚೆಲುವೆ ಮನಬಂದೆಡೆ, ನಂಟನೋ ಕೆಳೆಯನೋ ಉಂಟಾದವರೆಡೆ" ಪದಗಳ ಅಂತರಾರ್ಥವೇನಿರಬಹುದು? ಋಷಿಮುನಿಗಳನ್ನು ಕಾಡಿಸುತ್ತಿದ್ದ ಅಸುರರನ್ನು ಕೊಂದು ಸಣ್ಣ ವಯಸ್ಸಿನಲ್ಲೇ ಅಪ್ರತಿಮ ಶೂರನೆಂದು ಹೆಸರು ಗಳಿಸಿದವ ರಾಮ. ಪಿತೃವಾಕ್ಯ ಪರಿಪಾಲನೆಗಾಗಿ ರಾಜ್ಯವನ್ನು ತೊರೆದು ಕಾಡಿಗೆ ಹೋಗಿ ಆದರ್ಶಪ್ರಾಯನೆನಿಸಿಕೊಂಡವನು. ಲಂಕೆಯನ್ನು ಧ್ವಂಸ ಮಾಡಿ, ರಾವಣನನ್ನು ಕೊಂದು, ಸೀತೆಯನ್ನು ರಕ್ಷಿಸಿದ ತಾನು ಹೇಗೇ ನಡೆದುಕೊಂಡರೂ, ಕಾಲಿಗೆ ಬಿದ್ದು ಪೂಜಿಸುವ ಜನತೆಯ ಪ್ರೀತ್ಯಾದರಗಳಿಗೆ ಪಾತ್ರನಾಗಿದ್ದೇನೆ ಎನ್ನುವುದನ್ನು ಹಗುರವಾಗಿ ತೆಗೆದುಕೊಳ್ಳಲಾರದ ರಾಮ. ನಿಜವಾಗಿ ಜನಾಪವಾದವನ್ನು ಎದುರಿಸಲಾರದೆ ಅವಳನ್ನು ದೂರ ಕಳಿಸಿಬಿಡುವ ಮಟ್ಟಕ್ಕೆ ಇಳಿದುಬಿಟ್ಟನೇ?
ಪುತಿನ ಅವರ "ಏಕೆ ನಿಂತ ರಾಮ" ಮತ್ತು "ನೋಡಲಾರೆ" ಕವಿತೆಗಳ ಸಾರವನ್ನು ಅತ್ಯಂತ ಸಮರ್ಪಕವಾಗಿ, ಭಾವುಕತೆಯಿಂದ ನಟಿಸಿ/ನರ್ತಿಸಿ ತೋರಿಸಿದ ಪುಷ್ಪಾ ರಾಮಾನುಜ, ನಮ್ಮನ್ನೂ ದಿಗ್ಭ್ರಾಂತರನ್ನಾಗಿ ಮಾಡಿದರು. ರಟ್ಟೆ ಹಿಡಿದು ಸೆಳೆದುಕೊಂದು ಹೋದ ರಾವಣನನ್ನು ಕಡೆಗಣ್ಣಿನಿಂದಲೂ ನೋಡದೇ, ಅವನನ್ನು ಮೋಹಕ್ಕೀಡುಮಾಡಿದ ತನ್ನ ಸೌಂದರ್ಯವನ್ನೇ ಹಳಿದುಕೊಳ್ಳುತ್ತ, ಅಸಹಾಯಕಳಾಗಿ ಪಟ್ಟ ಪರಿತಾಪವನ್ನು ರಾಮನಲ್ಲಿ ಹೇಳಿಕೊಳ್ಳುತ್ತ "ದೀನೆ ಪತಿಪ್ರಾಣೆ ಸತಿಗೆ ಹೀನಮನುಜರಆಡುವ ಪರಿಗದೇನನಾಡುವೆ" ಎಂದು ಪು.ತಿ.ನ ವರ್ಣಿಸಿರುವ ಸೀತೆಯ ಸಂತಾಪ, ನೋವು, ಹತಾಶೆ, ಎಲ್ಲವನ್ನೂ ಚಿನ್ಮಯಿ ಬೆಟ್ಟದಪುರ ಅವರು ಹೃದಯಸ್ಪರ್ಶಿಯಾಗಿ ವ್ಯಕ್ತಪಡಿಸಿ ಎಲ್ಲರ ಕಣ್ಣಲ್ಲೂ ನೀರೂರುವಂತೆ ಮಾಡಿದರು. ರಾಮನನ್ನು ಅಂಗಲಾಚಿ ಬೇಡಿಕೊಂಡ ಹನುಮಂತನ ಅಳಲನ್ನು ಅತ್ಯಂತ ಸ್ವಾಭಾವಿಕವಾಗಿ ಅಭಿನಯಿಸಿದ ರಘುರಾಂ ಶೆಟ್ಟಿಯವರು ನಾವೂ ಅವರೊಂದಿಗೆ ಹಪಹಪಿಸುವಂತೆ ಮಾಡಿದರು.
ದಿಗ್ಭ್ರಮೆ ಕಳೆದು, ಅಸಹಾಯಕತೆಯ ನೋವನ್ನು ಅನುಭವಿಸಿ, ಮತ್ತೆ ದಿಗ್ಭ್ರಮೆಗೆ ಮರಳಿಸುವ ಮುಂದಿನ ಸಂದರ್ಭಗಳಲ್ಲಿ ರಾಮನ ಮಾತುಗಳಿಂದ ನೊಂದ ಸೀತೆ "ಹೊತ್ತಿಸು ಚಿತೆಯನು ಲಕ್ಷ್ಮಣ, ನಿನ್ನತ್ತಿಗೆ ಬೀಳಲಿ ಈ ಕ್ಷಣ" ಎಂದು ಲಕ್ಷ್ಮಣನಿಗೆ ಆಜ್ಞಾಪಿಸಿದ್ದು, ನೆರೆದ ಜನತೆ ವಿಹ್ವಲರಾಗಿ ತನ್ನನ್ನು ಇನ್ನಿಲ್ಲದ ಹಾಗೆ ಬೇಡಿಕೊಂಡರೂ, ರಾಮನನ್ನು ಇನ್ನಿಲ್ಲದ ಹಾಗೆ ಪ್ರಾರ್ಥಿಸಿಕೊಂಡರೂ ಸಹ ಕೇಳದೇ ಚಿತೆಯನ್ನು ಪ್ರವೇಶಿಸಿ, ಅಗ್ನಿದೇವ ಅವಳನ್ನು ದಹಿಸದೇ ಚಿತೆಯಿಂದ ಹೊರತಂದಿದ್ದು ಎಲ್ಲವೂ ನಮಗೆ ಚಿರಪರಿಚಿತವೇ. ಈ ಸಂಗತಿಗಳ ಲೌಕಿಕ, ತಾತ್ವಿಕ ಒಳಾರ್ಥಗಳನ್ನೂ ನಾವು ಊಹಿಸಬಲ್ಲೆವು. ಪ್ರದರ್ಶನದ ವೇಳೆಯಲ್ಲಿ ಇಲ್ಲಿ ಎಲ್ಲರನ್ನೂ ವಿಸ್ಮಯಕ್ಕೆ ಒಳಗಾಗಿಸಿದ್ದು ಶ್ರೀವತ್ಸ ದುಗ್ಲಾಪುರ ಅವರ ರಂಗಸಜ್ಜಿಕೆಯ ಸಾಧನಗಳು. ಶ್ರೀವತ್ಸ ಅವರು ತಮ್ಮ ಕೈಚಳಕದಿಂದ ನಿರ್ಮಿಸಿದ ಚಿತೆಯನ್ನು ರಂಗದ ಮೇಲೆ ತಂದಾಗ ಮತ್ತು ಚಿತೆಯ ಬೆಂಕಿ ಹೊತ್ತಿಕೊಂಡಾಗ ಕಿವಿಗಡಚಿಕ್ಕುವಂತೆ ಕರತಾಡನ ಕೇಳಿಬಂದಿದ್ದು ಅವರ ಪ್ರತಿಭೆಗೆ ಸಾಕ್ಷಿ. ನಿರ್ಜೀವ ವಸ್ತುಗಳೂ ಈ ಗೀತರೂಪಕಕ್ಕೆ ಜೀವ ನೀಡುವಂತಾದ ಒಂದು ಮುಖ್ಯ ಕಾರಣ ಶ್ರೀವತ್ಸ ಮತ್ತು ಸಂಗಡಿಗರು ಅತ್ಯಂತ ನೈಜತೆ ಮತ್ತು ನೈಪುಣ್ಯತೆಯಿಂದ ನಿರ್ಮಿಸಿದ ಪುಷ್ಪಕ ವಿಮಾನ, ಪಲ್ಲಕ್ಕಿಗಳು, ಭರತನ ಆಶ್ರಮದಿಂದ ಹಿಡಿದು ರಾಮನ ಅರಮನೆಯ ಸಿಂಹಾಸನದವರೆಗೆ ಕಂಡುಬಂದ ಸಲಕರಣೆಗಳು. ನಮ್ಮೂರಿನ ಅಸಾಧಾರಣ ಪ್ರತಿಭೆಯ ಶ್ರೀವತ್ಸ ದುಗ್ಲಾಪುರ ಈ ಗೀತರೂಪಕದಲ್ಲೊಬ್ಬ ಪಾತ್ರಧಾರಿಯೂ ಆಗಿ ಮಿಂಚಿದರು.
ಅಗ್ನಿಪರೀಕ್ಷೆಯ ನಂತರ "ಚೆನ್ನೆ ನೀನೆನ್ನ ಮನ್ನಿಸೌ" ಎಂದು ಸೀತೆಯ ಕ್ಷಮಾಪಣೆ ಬೇಡಿಕೊಳ್ಳುವ ರಾಮನ ಮೃದುತ್ವ, "ಕನಕಮೃಗಕೆಳಸಿ ಗುಣವಂತನನುಜನ ಶಪಿಸಿ ಘನದುಃಖಕೆ ಸಂದೆ" - ಮಾಯಾಮೃಗದ ಬೆನ್ನಟ್ಟಿ ನಿನ್ನನ್ನು ಕಳಿಸದೇ ಇದ್ದಿದ್ದರೆ, ಇಷ್ಟೆಲ್ಲ ಅನಾಹುತಗಳು ನಡೆಯುತ್ತಲೇ ಇರಲಿಲ್ಲ ಎಂದು ತಾನೇ ಮರುಕ್ಷಮಾಪಣೆ ಕೇಳುವ ಸೀತೆಯ ಭೂಮಿತೂಕದ ಸಹನೆ, ನಂತರ ಒಬ್ಬರಲ್ಲೊಬ್ಬರು ಮೈಮರೆತು ಬೆರೆಯುವ ಪ್ರೇಮದ ಮಾರ್ದವತೆ ಎಲ್ಲವೂ ಪುತಿನ ಅವರ ಕವಿತೆಯಲ್ಲಿ ಅಡಗಿವೆ. ಈ ಅಡಗಿದ ಭಾವಗಳು ನಮ್ಮ ಹೃದಯವನ್ನು ಮೆತ್ತಗೆ ತಾಗುವಂತೆ ನಟಿಸಿ/ನರ್ತಿಸಿ ತೋರಿಸಿದ ಪುಷ್ಪಾ ರಾಮಾನುಜ ಮತ್ತು ಚಿನ್ಮಯಿ ಬೆಟ್ಟದಪುರ ನಮ್ಮನ್ನೂ ಕನಸಿನ ಲೋಕಕ್ಕೆ ಕರೆದೊಯ್ದರು.
ಕನಸು ಕಾಣುತ್ತಲೇ ನಾವು ರಾಮ ಸೀತೆಯರೊಂದಿಗೆ ಅಯೋಧ್ಯೆಗೆ ತೆರಳಿದೆವು. ಇವರ ಬರುವನ್ನೇ ಕಾತುರದಿಂದ ಕಾಯುತ್ತಿದ್ದ "ಎಂದಣ್ಣನನು ಕಾಂಬೆ" ಗೀತೆಯಲ್ಲಿ ಭರತನಾಗಿ ರಾಧಿಕಾ ಚಂದ್ರಶೇಖರ್ ಅವರ ಅಭಿನಯ ಮತ್ತು ಈ ಒಂದು ಕವಿತೆಗೆ ಮಾತ್ರ ಸಂಯೋಜಿಸಿದ ಶ್ರೀವತ್ಸನ್ ವರದರಾಜನ್ ಅವರ ಸಂಗೀತ ಎರಡೂ ಸಮರ್ಪಕವಾಗಿ ಮೂಡಿಬಂದವು. ನಂತರ, ಅಯೋಧ್ಯೆಯ ಪ್ರಜೆಗಳ ಸಂಭ್ರಮ, ಋಷಿಮುನಿಗಳ ಸಮ್ಮುಖದಲ್ಲಿ ವೈಭವೋಪೇತವಾಗಿ ನಡೆದ ಪಟ್ಟಾಭಿಷೇಕ ಇವೆಲ್ಲವನ್ನೂ ಒಂದು ಹಿತವಾದ ಮಂಪರಿನಲ್ಲಿ "ಅನುಭವಿಸಿದೆವು" ಎಂದರೆ ಅದು ಖಂಡಿತ ಅತಿಶಯೋಕ್ತಿಯಲ್ಲ. ಹನುಮಂತನಾಗಿ ನಟಿಸಿ, ನರ್ತಿಸಿದ ರಘುರಾಂ ಶೆಟ್ಟಿಯವರ ಹುಮ್ಮಸ್ಸಿನ ಕುಣಿತದಲ್ಲಿ ಪಾಲ್ಗೊಂಡು ಅವರಷ್ಟೇ ಉತ್ಸಾಹದಿಂದ ಸಂಭ್ರಮಿಸಿ ಕುಣಿದ ಯುವಕರ ತಂಡ ಮತ್ತು ಸುಂದರ ತರುಣಿಯರು ನಾವೇ ಪಟ್ಟಾಭಿಷೇಕದ ತಯಾರಿಯಲ್ಲಿ ಪಾಲ್ಗೊಳ್ಳುತ್ತಿದ್ದೇವೆ ಎಂಬ ವಾತಾವರಣವನ್ನು ಮೂಡಿಸಿದರು.
ಗೀತರೂಪಕದ ಉದ್ದಕ್ಕೂ ಎರಡು ಕಣ್ಣುಗಳಿಗೆ ಮೀರಿದ ದೃಶ್ಯಗಳು, ಎರಡು ಕಿವಿಗಳಿಗೆ ಮೀರಿಗೆ ಸುಮಧುರ ಸಂಗೀತ ಕೊನೆಯಾಗುತ್ತಿದೆಯಲ್ಲ ಎನ್ನುವ ಸಂಕಟ ಶುರುವಾಗುವ ಮೊದಲು, ಅಂತಿಮವಾಗಿ ನೋಡಿದ ಒಂದು ದೃಶ್ಯವನ್ನು ಯಾರೂ ಮರೆಯುವ ಹಾಗೇ ಇಲ್ಲ. ಸಾಲಂಕೃತಳಾಗಿ ಸೌಂದರ್ಯದಿಂದ ತುಂಬಿ ತುಳುಕುತ್ತಿರುವ ಸೀತೆ, ರಾಜಗಂಭೀರ್ಯದೊಂದಿಗೆ ರಕ್ಷಣಾಭಾವವನ್ನೂ ಸೂಸುತ್ತಿರುವ ರಾಮ, ಅಷ್ಟೇ ರಾಜಗಂಭೀರ್ಯದೊಂದಿಗೆ ಭ್ರಾತೃಪ್ರೇಮವನ್ನು ಸೂಸುತ್ತಿರುವ ಲಕ್ಷ್ಮಣ, ಭಕ್ತಿಯೇ ಮೈವೆತ್ತಂತೆ ಅವರ ಪಾದದ ಬಳಿ ಕುಳಿತಿರುವ ಆಂಜನೇಯ - ಇವರನ್ನು ನಿಮ್ಮ ಕಣ್ಣಮುಂದೆ ತಂದು ನಿಲ್ಲಿಸಿದರೆ ಹೇಗಿರುತ್ತದೆ ಎಂದು ಊಹಿಸಿಕೊಳ್ಳಿ. ನಮ್ಮನ್ನೇ ನಾವು ಜಿಗುಟಿಕೊಂಡು ಕನಸಿನಿಂದ ಎಚ್ಚೆತ್ತು ಇಡೀ ಸಭಾಂಗಣವೇ ಕಂಪಿಸುವಂತೆ ಚಪ್ಪಾಳೆ ಹಾಕಿದ್ದು ಪುತಿನ ಅವರಿಗೆ ಕೇಳಿಸಿದೆ ಎಂದು ನನ್ನ ಅನಿಸಿಕೆ.
ನರ್ತನ, ಸಂಗೀತ, ರಂಗಸಜ್ಜಿಕೆ, ಎಲ್ಲ ರೀತಿಯಿಂದಲೂ ಅಮೋಘವಾಗಿ ಮೂಡಿಬಂದ ಈ ಪ್ರದರ್ಶನವನ್ನು ಯಶಸ್ವಿಯಾಗಿಸಿದವರದು ಒಂದು "ಸೈನ್ಯ" ವೇ. ಅವರಲ್ಲಿ ಹೆಸರಿಸಬೇಕಾದವರು - ಇಪ್ಪತ್ತೇಳು ಕವಿತೆಗಳನ್ನೊಳಗೊಂಡಿದ್ದ ಈ ಗೀತರೂಪಕದ ಎಲ್ಲ ನೃತ್ಯಗಳನ್ನು ಸಂಯೋಜಿಸಿ, ನಿರ್ದೇಶಿಸಿ, ರಾಮನ ಪಾತ್ರಕ್ಕೆ ಜೀವನೀಡಿದ ಪುಷ್ಪಾ ರಾಮಾನುಜ, ಸೀತೆಯಾಗಿ ನಮ್ಮನ್ನು ಸೂರೆಗೊಂಡ ಚಿನ್ಮಯಿ ಬೆಟ್ಟದಪುರ, ನರ್ತಕಿಯರಾಗಿ ರಮ್ಯಾ ಅಭಿಜಿತ್, ಶುಭಾ ಐತಾಳ್, ಪಲ್ಲವಿ ಅನೂಪ್, ಮೀರಾ ಬೇಲೂರ್, ಸೋನಾಲಿ ಬಿಳಿಗಿರಿ, ಜ್ಯೋತಿ ಹೆಡ್ಡೆಸೆ, ಕಾಮಿನಿ ಅಯ್ಯರ್, ಸಹನಾ ಕುಕ್ಕೆ, ಸಿಂಧು ರಾವ್, ನೈನಾ ಶಾಸ್ತ್ರಿ, ನೇಹಾ ವೆಂಕಟೇಶ್. ಯುವಕರ ತಂಡದಲ್ಲಿ ಮೋಹನ್ ಭವಾನಿಕುಮಾರ್, ಶ್ರೀವತ್ಸ ದುಗ್ಲಾಪುರ, ವಿನಯ್ ಹೆಗ್ಡೆ, ಶ್ರೀಧಾ ಜೋಯಿಸ, ಕಿರಣ್ ಕುಮಾರ್, ಪ್ರಶಾಂತ್ ಪಡುಬಿದ್ರಿ, ರಾಜೇಶ್ ರಾಮರಾವ್ ಮತ್ತು ಶೇಷಾದ್ರಿ ವಾಸು. ಋಷಿಗಳಾಗಿ ರಮೇಶ್ ಬೆಟ್ಟದಪುರ, ತಿರುನಾರಾಯಣ ಅಯ್ಯಂಗಾರ್, ರಘುರಾಂ ಮಾರ್ಗಪುರಂ, ಬಿ.ವಿ. ಮುರಳೀಧರ, ಬಿ.ಎಸ್.ಕೇಶವಮೂರ್ತಿ ಮತ್ತು ವಿಠ್ಟಲ್ ಶ್ರೀಮುಷ್ಣಮ್, ಲಕ್ಷ್ಮಣನಾಗಿ ಸುಮನಾ ಕೇಶವನ್, ಶತೃಘ್ನನಾಗಿ ಪಲ್ಲವಿ ಅನೂಪ್, ವಶಿಷ್ಠರಾಗಿ ಹೆಮ್ಮಿಗೆ ವರದರಾಜನ್, ವಾಲ್ಮೀಕಿ ಮತ್ತು ಅಗ್ನಿಯಾಗಿ ಕೆ.ವಿ.ರಾಮಪ್ರಸಾದ್, ಕಥಕನಾಗಿ ಅಶೋಕ್ ಉಪಾಧ್ಯಾಯ, ವಿಭೀಷಣನಾಗಿ ಭಗವಾನ್ ಕೃಷ್ಣಸ್ವಾಮಿ, ಅನಸೂಯೆಯಾಗಿ ಉಷಾ ಬೆಟ್ಟದಪುರ.
ಪ್ರತಿಯೊಂದು ಕವಿತೆಗೂ ಅದರ ಭಾವವನ್ನು ಸಮರ್ಪಕವಾಗಿ ಪ್ರತಿಬಿಂಬಿಸುವ ರಾಗ, ತಾಳಗಳನ್ನು ಪು.ತಿ.ನ ಅವರೇ ಸ್ವತಃ ಸಂಯೋಜಿಸಿದ್ದು, ಸಂಗೀತದಲ್ಲೂ ಅವರಿಗಿದ್ದ ಅಸಾಧಾರಣ ಪಾಂಡಿತ್ಯಕ್ಕೆ ಸಾಕ್ಷಿ. ಸಂಗೀತ ನಿರ್ದೇಶನದೊಂದಿಗೆ, ಸುಮಧುರವಾಗಿ ಹಾಡುಗಳನ್ನೂ ಹಾಡಿ ರಂಜಿಸಿದವರು ಶುಭಪ್ರಿಯ ಶ್ರೀವತ್ಸನ್ ಮತ್ತು ಹೆಮ್ಮಿಗೆ ಶ್ರೀವತ್ಸನ್. ಅವರೊಂದಿಗೆ ಸಮರ್ಥವಾಗಿ ದನಿಗೂಡಿಸಿದವರು ಗಾಯತ್ರಿ ಅವ್ವಾರಿ, ಪದ್ಮಪ್ರಿಯ ಪರಮೇಶ್ವರನ್, ಹರಿಣಿ ವಿಕಾಸ್, ಮನುದತ್ ಗುರುದತ್ತ, ಕಾರ್ತಿಕ್ ಗೋಪಾಲರತ್ನಮ್, ಅನಿಲ್ ನರಸಿಂಹ. ಹಾಡುಗಾರಿಕೆಗೆ ಕಳೆಕೊಟ್ಟ ವಾದ್ಯವೃಂದದಲ್ಲಿ ಶ್ರೀರಾಮ್ ರಾಘವನ್ (ಮೃದಂಗ), ರವಿ ಗುಟಾಲ (ತಬಲ), ಮಹಿಧರ್ ತಿರುಮಲ (ವೀಣೆ), ಮೋಹನ್ ರಂಗನ್ (ಕೊಳಲು), ಅಜಯ್ ನರಸಿಂಹ (ಪಿಟೀಲು), ರಶ್ಮಿ ರಾಜನ್ (ನಟ್ಟುವಾಂಗ).
ಶ್ರೀವತ್ಸ ದುಗ್ಲಾಪುರ ಅವರ ನೇತೃತ್ವದಲ್ಲಿ ರಂಗಸಜ್ಜಿಕೆಗೆ ನೆರವಾದವರು ಮುರಳಿ ಪವಾರ್, ಸೌಜನ್ಯ ಕೇಣಿ, ಬಿ.ಎಸ್.ಕೇಶವಮೂರ್ತಿ, ಸುರೇಶ್ ಬಿಳಿಗಿರಿ. ವಿವಿಧ ರೀತಿಯಲ್ಲಿ ಸಹಾಯ ಮಾಡಿದ ಮತ್ತಿತರು : ರವಿ ಶಂಕರ್ (ವಿಡಿಯೋ), ಶ್ರೀಕಲಾ ಶ್ರೀಪತಿ (ಛಾಯಾಗ್ರಹಣ), ಸೋನಾಲಿ ಬಿಳಿಗಿರಿ (ಕರಪತ್ರ), ಸಂಧ್ಯಾ ರವೀಂದ್ರನಾಥ್ (ಆಂಗ್ಲ ಅನುವಾದ). ಪ್ರಸಾಧನ ಮಾಡಿದವರು ಗಿರೀಶ್ ಹೆಗ್ಡೆ, ಗೋಪಾಲ್ ಭಟ್, ರಘುರಾಮ್ ಶೆಟ್ಟಿ, ಅಶೋಕ್ ಉಪಾಧ್ಯಾಯ. ಇಡೀ ತಂಡದ ವಹಿವಾಟಿನ ಜವಾಬ್ದಾರಿ ಹೊತ್ತವರು ತಿರುನಾರಾಯಣ ಅಯ್ಯಂಗಾರ್. ಸಹಾಯಕರು ಭಾರತ ಮತ್ತು ಅಮೇರಿಕಾದ ಅನೇಕ ಮಿತ್ರರು ಮತ್ತು ಕಲಾವಿದರ ಕುಟುಂಬದವರು.












Click it and Unblock the Notifications