ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂಗ್ಲೆಂಡ್ ಕನ್ನಡ ಬಳಗದ ಮೂರು ದಿನಗಳ ರಜತೋತ್ಸವ

By Staff
|
Google Oneindia Kannada News

Alvaston Hall, Nantwich, Cheshireಲಂಡನ್, ಆ, 22 : ಇಂಗ್ಲೆಂಡ್ ಕನ್ನಡಿಗರ "ಕನ್ನಡ ಬಳಗ"ದ ಮೂರು ದಿವಸಗಳ ರಜತೋತ್ಸವ ಸಮಾರಂಭ ಇಂದು ಇಲ್ಲಿ ನೆರವೇರಲು ವೇದಿಕೆ ಸಜ್ಜಾಗಿದೆ. ಕನ್ನಡ ಪರಂಪರೆ, ಸಾಂಸ್ಕೃತಿಕ ಇತಿಹಾಸದ ಹಿನ್ನೆಲೆಯಲ್ಲಿ ಕಂಗೊಳಿಸಲಿರುವ ಈ ಉತ್ಸವ ಕಳೆದ 25 ವರ್ಷಗಳಿಂದ ಆಂಗ್ಲ ನಾಡಿನಲ್ಲಿ ನೆಲೆಸಿರುವ ಕನ್ನಡ ಸಮುದಾಯದ ಸಂಭ್ರಮದ ಕ್ಷಣಗಳಿಗೆ ಸಾಕ್ಷಿಯಾಗಲಿದೆ.

ಚೆಶೈರಿನಲ್ಲಿರುವ ರಮಣೀಯ ತಾಣ ನ್ಯಾನ್ಟ್ ವಿಚ್ ನ ಅಲ್ವಸ್ಟೆನ್ ಸಭಾಂಗಣದಲ್ಲಿ ವ್ಯವಸ್ಥೆಯಾಗಿರುವ ರಜತೋತ್ಸವ ಸಮಾರಂಭಕ್ಕೆ ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಆಗಮಿಸುವ ಕಾರ್ಯಕ್ರಮವಿತ್ತು. ಆದರೆ, ಕಾರಣಾಂತರಗಳಿಂದ ಅವರ ಉಪಸ್ಥಿತಿ ಕೊನೆ ಕ್ಷಣದಲ್ಲಿ ರದ್ದಾಯಿತು.

ಕರ್ನಾಟಕದಿಂದ ಇಲ್ಲಿಗೆ ಸಾಹಿತಿ, ಕವಿ, ಹಾಗೂ ಇತರ ಕ್ಷೇತ್ರಗಳ ಗಣ್ಯರ ದಂಡೇ ಆಗಮಿಸಿದೆ. ಡಾ. ನಿಸಾರ್ ಅಹಮದ್, ಜಯಂತ್ ಕಾಯ್ಕಿಣಿ, ಡಾ. ಕೃಷ್ಣೇಗೌಡ, ಮುಖ್ಯಮಂತ್ರಿ ಚಂದ್ರು, ಸಂಗೀತಾ ಕಟ್ಟಿ, ಶಂಕರ್ ಶಾನುಭೋಗ್, ನೂಪುರ್ ಆರ್ಟ್ಸ್‌ನ ಹರಿ ಮತ್ತು ಚೇತನಾ, ಕೆಎಸ್ಎಲ್ ಸ್ವಾಮಿ (ರವೀ) ಕನ್ನಡ ಹಬ್ಬದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಕ್ರೂ ಮತ್ತು ನ್ಯಾನ್ಟ್ ವಿಚ್ ಪ್ರಾಂತ್ಯವನ್ನು ಪ್ರತಿನಿಧಿಸುವ ಬ್ರಿಟಿಷ್ ಪಾರ್ಲಿಮೆಂಟ್ ಸದಸ್ಯ ಎಡ್ವರ್ಡ್ ಚಿಂಮ್ ಸನ್ ಅವರು ಉದ್ಘಾಟನಾ ಸಮಾರಂಭದಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ಇಂಗ್ಲೆಂಡ್ ಹಾಗೂ ಕನ್ನಡನಾಡಿನಿಂದ ಆಗಮಿಸಿರುವ ಕಲಾವಿದರ ವತಿಯಿಂದ ನಾನಾ ಬಗೆಯ ಸಾಂಸ್ಕೃತಿಕ ಕಾರ್ಯಕ್ರಮಗಳು ಏರ್ಪಾಟಾಗಿವೆ. ಪ್ರತಿದಿನ ಸಂಜೆ ಗಾಯನ, ನೃತ್ಯ ಮತ್ತು ಹಾಸ್ಯ ಗೋಷ್ಠಿಗಳಿಗೆ ಬೆಳ್ಳಿ ಹಬ್ಬ ತೆರೆದುಕೊಳ್ಳುತ್ತದೆ. ಕನ್ನಡ ಚಲನಚಿತ್ರ ನಡೆದು ಬಂದ ದಾರಿಯ ಅವಲೋಕನ, ಚಿತ್ರ ಪ್ರದರ್ಶನ, ಕನ್ನಡನಾಡಿನ ಪ್ರವಾಸೋದ್ಯಮದ ಸಾಧ್ಯತೆಗಳನ್ನು ಬಿಂಬಿಸುವ ದೃಶ್ಯ ಶ್ರವಣ ಕಾರ್ಯಕ್ರಮಗಳನ್ನು ಸಜ್ಜುಗೊಳಿಸಲಾಗಿದೆ.

1983ರಲ್ಲಿ ಆರಂಭವಾದ ಇಲ್ಲಿನ ಕನ್ನಡ ಬಳಗ, ಇಂಗ್ಲೆಂಡಿನಲ್ಲಿ ನೆಲೆಸಿರುವ ಕನ್ನಡಿಗರನ್ನು ಒಂದು ಗೂಡಿಸುವುದು ಹಾಗೂ ಕನ್ನಡ ಸಂಸ್ಕೃತಿಯನ್ನು ಬಿಳಿಯರ ನಾಡಿನಲ್ಲಿ ಕಾಪಾಡುವ ಧ್ಯೇಯೋದ್ದೇಶಗಳನ್ನು ಹೊಂದಿದೆ. ಕನ್ನಡ ಬಳಗ ಈ ಇಪ್ಪತ್ತೈದು ವರ್ಷಗಳಲ್ಲಿ ಅನೇಕ ಸಾಂಸ್ಕೃತಿಕ, ಸಾಮಾಜಿಕ, ಶೈಕ್ಷಣಿಕ ಮತ್ತು ಸಹಾಯಾರ್ಥ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಇಲ್ಲಿನ ಯುವಜನತೆ ಮತ್ತು ಕನ್ನಡಿಗರಿಗೆ ಕರ್ನಾಟಕದ ಪರಂಪರೆಯ ಪರಿಚಯ ಮಾಡಿಸುವಲ್ಲಿ ಸಫಲವಾಗಿದೆ.

ಈ ಸಂದರ್ಭದಲ್ಲಿ ಹೊಸ ಕನ್ನಡ ಚಲನಚಿತ್ರಗಳನ್ನು ಕೂಡ ಪ್ರದರ್ಶಿಸಲಾಗುತ್ತಿದೆ. ಹೊಸ ತಂತ್ರಜ್ಞಾನದೊಂದಿಗೆ ಕನ್ನಡ ಚಿತ್ರರಂಗವೂ ಮುಂದೆ ಹೋಗುತ್ತಿರುವುದನ್ನು ಪ್ರಚುರಪಡಿಸುವುದು ಈ ಪ್ರದರ್ಶನದ ಉದ್ದೇಶ. ಬೆಳ್ಳಿಹಬ್ಬದ ಸಂಭ್ರಮಕ್ಕೆ ಆಗಸ್ಟ್ 25ರಂದು ತೆರೆಬೀಳಲಿದೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X