ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜಕೀಯ ಚದುರಂಗದಿ ನಲುಗಿದ ಟಿಬೆಟ್

By Staff
|
Google Oneindia Kannada News

Tibet : Turmoil 2008ಚೀನಾ ದಬ್ಬಾಳಿಕೆಗೆ ಗುರಿಯಾಗಿ ಆಂತರಿಕ ಕ್ಷೋಭೆಗೆ ತುತ್ತಾಗಿರುವ ದೇಶ ಟಿಬೆಟ್. ಇಂಥ ಆಕ್ರಮಣ ಟಿಬೆಟ್ಟಿಗೆ ಹೊಸದೇನಲ್ಲ. ವಸಾಹತುಶಾಯಿಗಳ ಲಾಲಸೆಗೆ ಈಡಾಗಿ ಇತಿಹಾಸದುದ್ದಕ್ಕೂ ನಲುಗಿಕೊಂಡೇ ಬಂದಿರುವ ಪುಟಾಣಿ ದೇಶದ ಸಂಕ್ಷಿಪ್ತ ಇತಿಹಾಸ.

*ವಸಂತ ಕುಲಕರ್ಣಿ, ಸಿಂಗಪುರ

ಟಿಬೆಟ್ ಇಂದು ದೊಡ್ಡದೊಂದು ಸಮಸ್ಯೆಯಾಗಿ ಭುಗಿಲೆದ್ದಿದೆ. ಈ ಸಮಸ್ಯೆ ಇಂದು ಚೀನ ಹಾಗೂ ಟೆಬೆಟ್ಟಿಗೆ ಮಾತ್ರ ಸಂಬಂಧಪಡದೆ ಒಂದು ಅಂತಾರಾಷ್ಟ್ರೀಯ ಸಮಸ್ಯೆಯಾಗಿರುವುದಕ್ಕೆ ಚೀನೀಯರು, ಟಿಬೆಟ್ಟಿನವರು ಮಾತ್ರ ಕಾರಣವಲ್ಲ. ಟಿಬೆಟ್ಟಿನ ಇತಿಹಾಸದ ಪುಟಗಳನ್ನು ತೆಗೆದು ನೋಡಿದರೆ ಈ ಸಮಸ್ಯೆಯ ಮೂಲ ಅನೇಕ ದೇಶಗಳು ಈ ಭೂಮಿಯಲ್ಲಿ ಆಡಿದ ರಾಜಕೀಯ ಆಟಗಳಲ್ಲಿರುವದು ಸ್ಪಷ್ಟವಾಗಿ ಕಾಣುತ್ತದೆ.

ಇತಿಹಾಸದ ಪುಟಗಳನ್ನು ತೆರೆದು ನೋಡಿದಾಗ, ಈ ಭೂಮಿಯ ಮೇಲೆ ಪ್ರಭುತ್ವ ಸಾಧಿಸಲು ಅನೇಕ ಶತಮಾನಗಳಿಂದ ಮುಖ್ಯವಾಗಿ ಮಂಗೋಲರು ಹಾಗೂ ಚೀನಿಯರು ಸೆಣಸುತ್ತಲೆ ಬಂದಿದ್ದನ್ನು ನೋಡಬಹುದು. ಅರೇಬಿಯನ್ನರು ಹಾಗೂ ತುರ್ಕರು ಕೂಡ ಈ ಭೂಮಿಗಾಗಿ ಉಳಿದವರೊಡನೆ ಕಾದಾಡಿದ ದಾಖಲೆಗಳಿವೆ. ಇಪ್ಪತ್ತನೆಯ ಶತಮಾನದಲ್ಲಿ ಬ್ರಿಟಿಷರು ಹಾಗೂ ರಷಿಯನ್ನರು ತಮ್ಮ "ದೊಡ್ಡ ಆಟ" ದಲ್ಲಿ ಟಿಬೆಟ್ಟನ್ನು ದಾಳವನ್ನಾಗಿ ಮಾಡಿಕೊಂಡರು.

ಟಿಬೆಟ್ಟಿನಲ್ಲಿ ಪ್ರಭುತ್ವವೊಂದು ಸ್ಥಾಪನೆ ಆಗಿದ್ದು ಏಳನೇಯ ಶತಮಾನದಲ್ಲಿ. ಈ ಶತಮಾನದಲ್ಲಿ ನಮ್ ರಿ ಸೊಂಗ್ ಜೆನ್ ಎಂಬ ರಾಜನೊಬ್ಬ ಟಿಬೆಟ್ಟಿನ ಜನಗಳ ಪ್ರದೇಶಗಳನ್ನು ರಾಜಕೀಯವಾಗಿ ಒಂದಾಗಿಸಿದ ನಂತರ ಅಲ್ಲಿನ ಇತಿಹಾಸ ಅರಂಭವಾಯಿತು. ಆತ ಚೀನಾದ ರಾಜನ ಆಸ್ಥಾನಕ್ಕೆ ಟಿಬೆಟ್ಟಿನ ರಾಯಭಾರಿಯನ್ನು ಕಳಿಸುವದರೊಂದಿಗೆ ಎರಡು ದೇಶಗಳ ನಡುವೆ ರಾಜಕೀಯ ಸಂಬಂಧ ಆರಂಭವಾಯಿತು. ತದನಂತರ ಎರಡು ದೇಶಗಳ ನಡುವೆ ಅನೇಕ ಯುದ್ಧಗಳು ಹಾಗೂ ಶಾಂತಿ ಸಂಧಾನಗಳು ನಡೆದು, ಕೆಲವು ಬಾರಿ ಚೀನ ಹಾಗೂ ಮತ್ತೆ ಹಲವು ಬಾರಿ ಟಿಬೆಟ್ಟಿನ ಕೈ ಮೇಲಾಯಿತು. ಏಳನೆಯ ಶತಮಾನದಿಂದ ಹತ್ತನೆಯ ಶತಮಾನದವರೆಗೆ ಟಿಬೆಟ್ಟು ಒಂದು ಶಕ್ತಿಯುತ ಹಾಗೂ ಮಹತ್ವದ ದೇಶವಾಗಿತ್ತು. ಅದು ಅಂದಿನ ಕಾಲದಲ್ಲಿ, ಚೀನ ಹಾಗೂ ಯುರೋಪು ಮತ್ತು ಮಧ್ಯ ಪ್ರಾಚ್ಯ ದೇಶಗಳ ನಡುವೆ ಒಂದು ವ್ಯಾಪಾರಿ ಮಾರ್ಗವಾಗಿ ಬೆಳೆದಿತ್ತು. ಹತ್ತನೆಯ ಶತಮಾನದಿಂದ ಹದಿಮೂರನೆಯ ಶತಮಾನದಲ್ಲಿ ಟಿಬೆಟ್ಟು ಪ್ರಬಲವಾಗಿ ಉಳಿಯದಿದ್ದರೂ ಒಂದು ಸ್ವತಂತ್ರವಾದ ರಾಷ್ಟ್ರವಂತೂ ಆಗಿತ್ತು.

ಹದಿಮೂರನೆಯ ಶತಮಾನದಲ್ಲಿ ಮಂಗೋಲರ ದಾಳಿಗೆ ತುತ್ತಾದರೂ, ಮಂಗೋಲರ ಬೌದ್ಧ ರಾಜನಾದ ಕುಬ್ಲೈ ಖಾನನು ಟಿಬೆಟ್ಟಿನ ಅಧ್ಯಾತ್ಮಿಕ ಗುರು ಶಾಕ್ಯಪಂಡಿತನನ್ನು ತನ್ನ ಗುರುವಾಗಿ ಸ್ವೀಕರಿಸಿದ್ದರಿಂದ ಟಿಬೆಟ್ಟು ಮಂಗೋಲರ ಅನಾಗರಿಕ ಹಾಗೂ ಭೀಭತ್ಸ ದಾಳಿಗಳಿಂದ ಬಚಾವಾಯಿತು. ಅಂದಿನಿಂದ ಹದಿನೆಂಟನೆಯ ಶತಮಾನದ ಮಧ್ಯದವರೆಗೆ ಟಿಬೆಟ್ಟಿನಲ್ಲಿ ಲಾಮಾ (ಧರ್ಮ ಗುರು)ಗಳ ಆಡಳಿತ ನಡೆಯುತ್ತಿತ್ತು. ಹದಿನೆಂಟನೆಯ ಶತಮಾನದಲ್ಲಿ ಚೀನದ ರಾಜರ ನೇರ ಆಡಳಿತದಲ್ಲಿ ಬಂದರೂ ಟಿಬೆಟ್ಟಿನ ಧರ್ಮಗುರುವಾಗಿ ಹಾಗೂ ರಾಜಕೀಯ ಮುಖಂಡನಾಗಿ ದಲೈ ಲಾಮಾ ಮುಂದುವರೆದರು.

ಇಪ್ಪತ್ತನೆಯ ಶತಮಾನದ ಆರಂಭದಲ್ಲಿ ಟಿಬೆಟ್ಟಿನಲ್ಲಿ ಬ್ರಿಟಿಷರ ಹಸ್ತಕ್ಷೇಪ ಆರಂಭವಾಯಿತು. ಟಿಬೆಟ್ಟಿನ ಮೇಲೆ ದಾಳಿ ನಡೆಸಿದ ಬ್ರಿಟಿಷರು ಅಲ್ಲಿ ಅನೇಕ ಸಾವು ನೋವುಗಳಿಗೆ ಕಾರಣರಾದರು. ನಂತರ ಅವರು ಟಿಬೆಟ್ಟಿನ ಸರಹದ್ದುಗಳನ್ನು ಗುರುತಿಸಿ ಚೀನದ ಜೊತೆಗೆ ಒಪ್ಪಂದ ನಡೆಸಲು ಪ್ರಯತ್ನಿಸಿದರು. ಈ ಒಪ್ಪಂದಕ್ಕೆ ಚೀನ ಒಪ್ಪಲಿಲ್ಲ. ಆದ್ದರಿಂದ ಬ್ರಿಟಿಷರು ಏಕಪಕ್ಷೀಯರಾಗಿ ಮುಂದುವರೆದು, "ಮ್ಯಾಕ್ ಮೊಹನ್" ಗಡಿಯನ್ನು ಗೊತ್ತು ಮಾಡಿದರು.

ಬ್ರಿಟಿಷರ ಆಗಿನ ಈ ಏಕಪಕ್ಷೀಯ ಗಡಿ ಒಪ್ಪಂದ, ಅವರ ಅಂದಿನ ಅಹಂಕಾರ ಹಾಗೂ ಶಕ್ತಿಯ ಚಿಹ್ನೆಯಾಗಿತ್ತು. ಆದರೆ ಅವರ ಆ ಕಾರ್ಯ ಇಂದಿನ ಟಿಬೆಟ್ಟಿನ ಸಮಸ್ಯೆ ಹಾಗೂ ಭಾರತ ಮತ್ತು ಚೀನದ ಗಡಿ ಸಮಸ್ಯೆಗಳ ಮೂಲ ಕಾರಣವಾಗಿದೆ. ಅಂದು ಬ್ರಿಟಿಷರು ಶಕ್ತಿಶಾಲಿಯಾಗಿ ಮೆರೆದರೆ, ಇಂದು ಚೀನೀಯರು ಶಕ್ತಿಶಾಲಿಯಾಗಿ ಏಕಪಕ್ಷೀಯ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದಾರೆ. ಏಕಪಕ್ಷೀಯ ನಿರ್ಧಾರಗಳೆಂದೂ ಅಂತಿಮ ನಿರ್ಣಯಗಳಾಗಿರುವ ಉದಾಹರಣೆಗಳಿಲ್ಲ. ಜಗತ್ತು ಇತಿಹಾಸದಿಂದ ಇನ್ನೂ ಪಾಠ ಕಲಿಯುತ್ತಿಲ್ಲ ಎಂಬುದು ಇದರಿಂದ ಎದ್ದು ತೋರುತ್ತದೆ.

ನಂತರ ಕಮ್ಯುನಿಸ್ಟ್ ಚಳುವಳಿ ಹಾಗೂ ಆಂತರಿಕ ಕಲಹಗಳಿಂದ ಚೀನ ಟಿಬೆಟ್ಟನ ರಾಜಕೀಯದಲ್ಲಿ ಆಸಕ್ತಿ ಕಳೆದುಕೊಂಡಿತು. 1951 ರ ವರೆಗೆ ದಲೈ ಲಾಮರ ಶಾಂತಿಯುತ ಹಾಗೂ ಸ್ವತಂತ್ರ ಆಡಳಿತ ನಡೆಯಿತು. ಆದರೆ ಚೀನ ಟಿಬೆಟ್ಟಿನ ಮೇಲಿನ ತನ್ನಯ ಪ್ರಭುತ್ವವನ್ನು ಎಂದೂ ಲಿಖಿತವಾಗಿ ಬಿಟ್ಟು ಕೊಡಲಿಲ್ಲ. ಆದರೆ ಚೀನದ ಅನೇಕ ರಾಜರ ಕಾಲದಲ್ಲಿ ಟಿಬೆಟ್ಟು ತನ್ನ ಧಾರ್ಮಿಕ ಹಾಗೂ ಸಾಮಾಜಿಕ ಸ್ವಾಯತ್ತೆಯನ್ನು ಉಳಿಸಿಕೊಂಡಿತ್ತಲ್ಲದೆ, ಆಂತರಿಕ ಆಡಳಿತ ಕೂಡ ಟಿಬೆಟ್ಟಿಯನ್ನರದೆ ಆಗಿತ್ತು.

ಮಾವೊ ನೇತೃತ್ವದಲ್ಲಿ ವಾಮ ಪಂಥೀಯರು ಚೀನದಲ್ಲಿ ತಮ್ಮ ಆಡಳಿತವನ್ನು ಗಟ್ಟಿಗೊಳಿಸಿದ ಮೇಲೆ, ಅವರ ದೃಷ್ಟಿ ತಮ್ಮ ಗಡಿ ರಾಜ್ಯ ಹಾಗೂ ಹಳೆಯ ಸಾಮಂತ ರಾಜ್ಯವಾದ ಟಿಬೆಟ್ಟಿನ ಮೇಲೆ ತಿರುಗಿತು. 1951ರಲ್ಲಿ ಟಿಬೆಟ್ಟನ್ನು ಆಕ್ರಮಿಸಿದ ಚೀನ, ಹಳೆಯ ಪರಂಪರೆಯಂತೆ ಅದಕ್ಕೆ ಸ್ವಾಯತ್ತತೆಯನ್ನು ನೀಡಲು ಮುಂದಾಗಲಿಲ್ಲ. ಕಮ್ಯುನಿಸ್ಟ ತತ್ವಗಳನ್ನು ಬಲವಾಗಿ ನಂಬಿದ ಚೀನದ ಹೊಸ ಮುಖಂಡರಿಗೆ ತಮ್ಮ ದೇಶದಲ್ಲಿ ಒಂದು ಬೇರೆಯಾದ ಪ್ರಬಲ ಅಧ್ಯಾತ್ಮಿಕ ಹಾಗೂ ಸಾಮಾಜಿಕ ವ್ಯವಸ್ಥೆ ಇರುವದು ಸಹನೀಯವಾಗಲಿಲ್ಲ ಎನಿಸುತ್ತದೆ. ಬಹುಶಃ ಸಂಪೂರ್ಣ ದೇಶವನ್ನು ಒಂದೇ ರೀತಿಯ ವ್ಯವಸ್ಥೆ ಹಾಗೂ ನಂಬಿಕೆಗಳಿಗೆ ಒಳಪಡಿಸುವ ಕನಸನ್ನು ಕಂಡ ಚೀನದ ಮುಖಂಡರಿಗೆ ಟಿಬೆಟ್ಟಿನ ಜನರ ಚಳುವಳಿ ನುಂಗಲಾರದ ತುತ್ತಾಗಿ ಹೋಗಿದೆ.

ಟಿಬೆಟ್ಟಿನ ಜನರ ಮುಖ್ಯ ಶ್ರದ್ಧಾ ಕೇಂದ್ರವಾದ ದಲೈ ಲಾಮಾರ ಪೀಠವನ್ನು ನಾಶಗೊಳಿಸುವ ಇಲ್ಲವೆ ದುರ್ಬಲಗೊಳಿಸುವ ಮೂಲಕ ಟಿಬೆಟ್ಟಿನ ಸಂಸ್ಕ್ರತಿಯನ್ನು ಇಲ್ಲವಾಗಿಸುವ ಪ್ರಯತ್ನವನ್ನು ಚೀನ ಮುಂದುವರೆಸಿಕೊಂಡು ಬಂದಿದೆ. 1995ರಲ್ಲಿ ಟಿಬೆಟ್ಟಿನ ಪಂಚೆನ್ ಲಾಮಾರ ನೇಮಕಾತಿಯಲ್ಲಿ ಚೀನದ ಹಸ್ತಕ್ಷೇಪವನ್ನು ಗಮನಿಸಿದಾಗ ಚೀನದ ದುರುದ್ದೇಶ ಅರ್ಥವಾಗುತ್ತದೆ. ಏಕೆಂದರೆ ಪಂಚೆನ್ ಲಾಮಾ ಮುಂದಿನ ದಲೈ ಲಾಮಾರ ನೇಮಕರಣದಲ್ಲಿ ಮುಖ್ಯ ಭೂಮಿಕೆ ವಹಿಸುತ್ತಾರೆ. ಚೀನದಿಂದ ನೇಮಕವಾದ ಪಂಚೆನ್ ಲಾಮಾ ಚೀನಕ್ಕೆ ಅನುಕೂಲವಾಗುವ ಹಾಗೆ ಮುಂದಿನ ದಲೈ ಲಾಮಾರನ್ನು ಗುರುತಿಸಿ ನೇಮಿಸುತ್ತಾರೆ. ಅಲ್ಲಿಂದ ಚೀನದ ಹಾದಿ ಸುಗಮ. ಚೀನದಿಂದ ನೇಮಕವಾದ ಪಂಚೆನ್ ಲಾಮಾರನ್ನು ಅನೇಕ ಟಿಬೆಟ್ಟನ್ನರು ಗುರುತಿಸಿಲ್ಲ. ಆದರೆ ಚೀನವು ಅದಕ್ಕೆ ಸೊಪ್ಪು ಹಾಕಿಲ್ಲ.

ಈ ಐತಿಹಾಸಿಕ ವಿಶ್ಲೇಷಣೆಯಿಂದ ಸ್ಪಷ್ಟವಾಗುವ ಅಂಶವೇನೆಂದರೆ ಪೂರ್ವ ಕಾಲದಿಂದಲೂ ಟಿಬೆಟ್ಟು ತನ್ನ ಧಾರ್ಮಿಕ, ಐತಿಹಾಸಿಕ ಹಾಗೂ ರಾಜಕೀಯ ಸ್ವಾಯತ್ತತೆಯನ್ನು ಉಳಿಸಿಕೊಂಡು ಬಂದಿದೆ. ಅನೇಕ ವೇಳೆ ಚೀನದ ರಾಜರ ಆಶ್ರಯದಲ್ಲಿದ್ದು, ಚೀನದೊಂದಿಗೆ ಅತ್ಯಂತ ಸಮೀಪವಾದ ಸಂಬಂಧವನ್ನು ಹೊಂದಿ ಕೂಡಾ, ಅದು ತನ್ನತನವನ್ನು ಉಳಿಸಿ ಬೆಳೆಸಿದೆ. ಅನೇಕ ಪ್ರಬಲ ಶಕ್ತಿಗಳ ರಾಜಕೀಯ ಚದುರಂಗದಲ್ಲಿ ಸಿಕ್ಕಿ ನಲುಗಿದರೂ ತನ್ನ ಪ್ರಾಚೀನ ಧಾರ್ಮಿಕ ಹಾಗೂ ಸಾಮಾಜಿಕ ಸ್ವಾತಂತ್ರ್ಯವನ್ನು ಇದುವರೆಗೂ ಬಿಟ್ಟೂಕೊಟ್ಟಿಲ್ಲ.

ದಲೈ ಲಾಮಾರ ಪೀಠ ಟಿಬೆಟ್ಟಿನ ಸಾಂಸ್ಕ್ರತಿಕ, ಸಾಮಾಜಿಕ ಹಾಗೂ ಧಾರ್ಮಿಕ ಅನನ್ಯತೆಯ ಕೇಂದ್ರ ಬಿಂದು. ಶತಮಾನಗಳಿಂದ ಬೇರೊಬ್ಬರ ಸಾಮಂತರಾಗಿದ್ದುಕೊಂಡರೂ ದಲೈ ಲಾಮಾ ಪೀಠ ತನ್ನ ಜನರ ಅನನ್ಯತೆಯನ್ನು ಎತ್ತಿ ಹಿಡಿಯುವಲ್ಲಿ ಸಮರ್ಥವಾಗಿದೆ. ಈಗಿನ ದಲೈ ಲಾಮಾ ಹೇಳುತ್ತಿರುವದೂ ಅದನ್ನೇ. ಅವರಿಗೆ ಚೀನದಿಂದ ಸ್ವತಂತ್ರವಾಗುವ ಉದ್ದೇಶವೇನಿಲ್ಲ. ಚೀನದ ರಾಜಕೀಯ ಚೌಕಟ್ಟಿನಲ್ಲಿದ್ದುಕೊಂಡೇ ತಮ್ಮ ಜನರಿಗೆ ಧಾರ್ಮಿಕ ಹಾಗು ಸಾಂಸ್ಕ್ರತಿಕ ಸ್ವಾಯತ್ತತೆಯನ್ನು ನೀಡಲು ಚೀನವನ್ನು ಒತ್ತಾಯಿಸುತ್ತಿದ್ದುದು ಕಂಡು ಬರುತ್ತಿದೆ. ಮೊನ್ನೆ ತಾನೆ ಅಮೆರಿಕದ ಸಿಯಾಟ್ಟಲ್ ನಲ್ಲಿ ದಲೈಲಾಮಾ "ಚೀನದ ಒಕ್ಕೂಟದಲ್ಲಿ ಉಳಿಯುವದು ಟಿಬೆಟ್ಟನ ಹಿತದಲ್ಲಿಯೇ ಇದೆ, ಟಿಬೆಟ್ಟನ್ನರು ಹಾನ್ ಚೀನಿಯರ ಶತ್ರುಗಳಲ್ಲ" ಎಂದು ಘೋಷಿಸಿದ್ದರು. ದಲೈಲಾಮಾರ ಈ ಹೇಳಿಕೆ ಟಿಬೆಟ್ಟಿನ ಸ್ವಾಯತ್ತತೆಯ ಕುರಿತಾಗಿ ಅವರ ನಿಲುವನ್ನು ಪ್ರತಿಧ್ವನಿಸುತ್ತದೆ.

ಚೀನದ ಸರ್ವಾಧಿಕಾರ ತನ್ನ ನೀತಿಗನುಗುಣವಾಗಿ ಟಿಬೆಟ್ಟಿನ ಸಾಂಸ್ಕ್ರತಿಕ ಹಾಗೂ ಧಾರ್ಮಿಕ ಬದುಕನ್ನು ಛಿದ್ರಗೊಳಿಸುವದಲ್ಲದೇ ಅವರನ್ನು ಅವರ ನೆಲದಲ್ಲಿಯೇ ಅಲ್ಪಸಂಖ್ಯಾತರನ್ನಾಗಿಸುವ ಪ್ರಯತ್ನ ನಡೆಸುತ್ತಲಿದೆ ಎಂದು ಹೇಳಲಾಗುತ್ತಿದೆ. ಟಿಬೆಟ್ ಪ್ರದೇಶದಲ್ಲಿ ಸೈನ್ಯವನ್ನು ಹರಡುವದು, ಚೀನದ ಪ್ರಧಾನ ಜನಾಂಗವಾದ "ಹಾನ್" ಜನರನ್ನು ಹೆಚ್ಚು ಹೆಚ್ಚಿನ ಸಂಖ್ಯೆಯಲ್ಲಿ ಟಿಬೆಟ್ಟಿನ ಪ್ರದೇಶಗಳಲ್ಲಿ ಕಾಯಮ್ಮಾಗಿ ನೆಲೆಸುವಂತೆ ಮಾಡುವದು, ಟಿಬೆಟ್ಟಿನ ಜನರ ಧಾರ್ಮಿಕ ವ್ಯವಹಾರಗಳಲ್ಲಿ ಮೂಗು ತೂರಿಸುವದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಶಾಂತಿ ಪೂರ್ಣ ಪ್ರತಿಭಟನೆಗಳನ್ನು ತಮ್ಮ ಪ್ರಾಬಲ್ಯದಿಂದ ಹತ್ತಿಕ್ಕಲು ಪ್ರಯತ್ನಿಸುವದು ಇತ್ಯಾದಿಗಳನ್ನು ಚೀನದ ಸರ್ಕಾರ ಮಾಡುತ್ತಿದೆ ಎಂದು ಹೇಳಲಾಗುತ್ತಿದೆ. ಇಂದು ಚೀನದ ಟಿಬೆಟ್ ಸ್ವಾಯತ್ತ ಪ್ರದೇಶದಲ್ಲಿ ಪ್ರತಿ ಹತ್ತು ಟಿಬೆಟ್ಟನ್ನರಲ್ಲಿ ಒಬ್ಬ ಜೇಲಿನಲ್ಲಿದ್ದಾನೆ ಎಂದು ಹೇಳಲಾಗಿದೆ. ಅಲ್ಲದೆ, ಈಗ ಟಿಬೆಟ್ಟಿನಲ್ಲಿ 6 ಮಿಲಿಯನ್ ಟಿಬೆಟನ್ನರಿದ್ದರೆ, 7.5 ಮಿಲಿಯನ್ ಚೀನೀಯರಿದ್ದಾರೆ. ಅಧುನಿಕ ತಂತ್ರಜ್ಞಾನದ ಹೊಸ ಆಶ್ಚರ್ಯ ಎಂದು ಬಣ್ಣಿಸಲಾದ ಟಿಬೆಟ್ಟಿಗೆ ಕಲ್ಪಿಸಿರುವ ಹೊಸ ರೈಲು ಮಾರ್ಗ, ಚೀನೀಯರ ಹಾದಿಯನ್ನು ಮತ್ತಷ್ಟು ಸುಗಮಗೊಳಿಸಿದೆ ಎಂದೂ ಹೇಳಲಾಗಿದೆ. ಇನ್ನು ಸ್ವಲ್ಪ ವರ್ಷಗಳಲ್ಲಿ ಟಿಬೆಟ್ಟಿನಲ್ಲಿ ಜನಸಂಖ್ಯಾ ಅಂಕಿ ಅಂಶಗಳು ಸಂಪೂರ್ಣವಾಗಿ ಬದಲಾಗುವ ಸಾಧ್ಯತೆ ಇದೆ ಎಂಬ ಮಾತು ಕೇಳಿಬರುತ್ತಿದೆ. ಚೀನ ಈ ವಿಷಯದಲ್ಲಿ ಮುಕ್ತ ಧೋರಣೆ ತೋರಬೇಕು.

ಒಂದು ಧನಾತ್ಮಕ ಬೆಳವಣಿಗೆ ಏನೆಂದರೆ, ಚೀನದಲ್ಲಿ ನಡೆಯುತ್ತಿರುವ ಪ್ರಜಾಸತ್ತಾತ್ಮಕ ಬದಲಾವಣೆಗಳು. ಬಲವಾದ ಬದಲಾವಣೆಗಳು ಚೀನದಲ್ಲೂ ನಡೆದಿದ್ದು ಅಲ್ಲಿನ ಅನೇಕ ಬುದ್ಧಿಜೀವಿಗಳು ದಲೈ ಲಾಮಾರೊಂದಿಗೆ ಸಂಧಾನ ನಡೆಸಿ ಎಂದು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆಂಬುದು ಒಂದು ಪ್ರಕಟಗೊಂಡ ವಿಷಯ. ಆದರೆ ಚೀನದ ಸರ್ಕಾರ ಇದಕ್ಕೆ ಸೊಪ್ಪು ಹಾಕಿಲ್ಲ ಎನ್ನುವದು ಅದರ ಇತ್ತೀಚಿನ ವರ್ತನೆಯಿಂದ ತಿಳಿದು ಬರುತ್ತದೆ.

ಏನೇ ಆದರೂ ಚೀನ ತನ್ನ ಸರ್ವಾಧಿಕಾರದ ಮಾರ್ಗವನ್ನು ಭವಿಷ್ಯದಲ್ಲಿ ಬಿಟ್ಟು ಬಿಡುವುದು ಅದಕ್ಕೆ ಅನಿವಾರ್ಯವಾಗಿದೆ. ತಮ್ಮ ದೇಶದಲ್ಲೇ ಬೀಸುತ್ತಿರುವ ಪ್ರಾಂಜಲತೆಯ ಹೊಸ ಗಾಳಿಯನ್ನು ಸ್ವಾಗತಿಸಿ ಪ್ರಜಾಪ್ರಭುತ್ವದೆಡೆಗೆ ಹೆಜ್ಜೆಯಿಡಲು ಪ್ರಯತ್ನಿಸುತ್ತಿರುವ ಚೀನ ಟಿಬೆಟ್ಟಿನ ಜನರ ಆಶೋತ್ತರಗಳನ್ನು ಕೂಡ ಅರ್ಥೈಸಿಕೊಂಡು ಒಗ್ಗಟ್ಟಿನ ಮಾರ್ಗವನ್ನು ಕಂಡು ಹಿಡಿಯಬಹುದಾಗಿದೆ. ಮುಖ್ಯವಾಗಿ, ಚೀನ ದಲೈ ಲಾಮಾರ ಜೊತೆ ಮಾತುಕತೆ ಆರಂಭ ಮಾಡಬೇಕು. ಭಾರತ ಈ ವಿಷಯದಲ್ಲಿ ಚೀನಕ್ಕೆ ಸಹಾಯ ಮಾಡಬಹುದು. ಚೀನ ಇದು ತಮ್ಮ ಆಂತರಿಕ ವಿಷಯ ಎಂದು ಸಾಧಿಸತೊಡಗಿದರೂ, ಅದು ಇಲ್ಲಿ ಭಾರತದ ಮಹತ್ವವನ್ನು ಅಲ್ಲಗಳೆಯಲಾಗುವದಿಲ್ಲ. ಇದನ್ನು ಮನಗಂಡು, ಚೀನ ಮುಕ್ತ ಮನಸ್ಸಿನಿಂದ ಭಾರತ ಮತ್ತು ದಲೈ ಲಾಮಾರ ಜೊತೆ ಮಾತುಕತೆ ನಡೆಸಿದರೆ ಈ ಸಮಸ್ಯೆಯ ಪರಿಹಾರ ಶೀಘ್ರದಲ್ಲೆ ದೊರಕುವದು. ಟಿಬೆಟ್ಟನ್ನರು ಚೀನದ ಭಾಗವಾಗಿ ಉಳಿಯಲು ದಲೈ ಲಾಮ ಟಿಬೆಟ್ಟನ್ನರ ಮನವೊಲಿಸಬಹುದು. ಚೀನ ಕೂಡ ಟಿಬೆಟ್ಟನ ಸಾಮಾಜಿಕ ಹಾಗೂ ಧಾರ್ಮಿಕ ವಿಷಯಗಳಲ್ಲಿ ತಲೆ ತೂರಿಸದೆ ಹೋದರೆ ಟಿಬೆಟ್ಟು ಚೀನದ ಭಾಗವಾಗಿ ಉಳಿದು ತನ್ನ ಸ್ವಾಯತತೆಯನ್ನು ಗಳಿಸಬಹುದು. ಟಿಬೆಟ್ಟನ್ನರು ತಮ್ಮ ಕಡೆಯಿಂದ ಹಿಂಸಾಚಾರವನ್ನು ನಡೆಯಗೊಡಬಾರದು. ಹಿಂಸೆಯಿಂದ ಯಾವದೇ ಶಾಶ್ವತ ಪರಿಹಾರ ಸಾಧ್ಯವಿಲ್ಲ.

ಚೀನ ಒಂದು ಜಗತ್ತಿನ ಮಹಾಶಕ್ತಿಯಾಗಲು ಬಯಸಿದರೆ ಕೇವಲ ಆರ್ಥಿಕ ಬಲ ಹಾಗೂ ಸೈನ್ಯ ಬಲವನ್ನು ಗಳಿಸಿದರೆ ಸಾಲದು. ಅದು ತನ್ನ ಸಾಮಾಜಿಕ ಮತ್ತು ಪ್ರಾದೇಶಿಕ ಅಸಮತೋಲನಗಳನ್ನು ಸರಿದೂಗಿಸಬೇಕಾಗಿದೆ. ಅದಲ್ಲದೆ ತನ್ನ ಸುತ್ತಮುತ್ತಲಿನ ದೇಶಗಳ ಅಂತರಿಕ ಸಮಸ್ಯೆಗಳಿಗೆ ಎಣ್ಣೆ ಸುರಿಯುವ ಕೆಲಸ ಮಾಡುವದನ್ನು ಬಿಟ್ಟು ಬಿಡಬೇಕು. ಒಂದು ದೇಶವನ್ನು ಮತ್ತೊಂದು ದೇಶದ ವಿರುದ್ಧ ಎತ್ತಿ ಕಟ್ಟುವದನ್ನು ಹಾಗು ಮಗದೊಂದರ ಮೇಲೆ ಕತ್ತಿ ಮಸೆಯುವದನ್ನು ಪೂರ್ತಿಯಾಗಿ ಬಿಟ್ಟು ಬಿಡಬೇಕು. ದೊಡ್ಡವ ಎನಿಸಿಕೊಳ್ಳಬೇಕಾದರೆ ಕ್ಷುಲ್ಲಕ ವಿಷಯಗಳಲ್ಲಿ ತಲೆ ತೂರಿಸಬಾರದು ಎಂಬುವ ವ್ಯಾವಹಾರಿಕ ಪ್ರಜ್ಞೆ ಚೀನಕ್ಕೆ ಇಲ್ಲದಿರುವದು ದುರ್ಭಾಗ್ಯ. ಕೆಲವು ದೇಶಗಳು ಬೇರೆ ದೇಶಗಳಲ್ಲಿ ಅರಾಜಕತೆ ಹರಡಲು ಪ್ರಯತ್ನಿಸಿ ಕೈಸುಟ್ಟುಕೊಂಡಿರುವ ಬೇಕಾದಷ್ಟು ಉದಾಹರಣೆಗಳು ಇವೆ. ಚೀನದ ಬುದ್ಧಿ ಜೀವಿಗಳು ಹಾಗೂ ರಾಜಕೀಯ ತಜ್ಞರು ಈ ದಿಶೆಯಲ್ಲಿ ಪ್ರಾಮಾಣಿಕ ಯೋಚನೆ ನಡೆಸಬೇಕಾಗಿದೆ.

ಆದರೆ ಇದನ್ನು ಚೀನದ ಶಕ್ತಿಯುತ ನಾಯಕರು ಮನಗಾಣುವ ಸ್ಥಿತಿಯಲ್ಲಿ ಇದ್ದಾರೆಯೆ ಎಂಬುದು ಮಾತ್ರ ಪ್ರಶ್ನಾತ್ಮಕ ವಿಷಯ. ಚೀನದ ಬುದ್ಧಿ ಜೀವಿಗಳು ಮತ್ತು ಅಲ್ಲಿನ ಜನತೆ ರಾಜಕೀಯ ನಾಯಕರನ್ನು ಸರಿದಾರಿಗೆ ತರುವ ಪರಿಸ್ಥಿತಿಯಲ್ಲಿದ್ದಾರೆಯೆ? ಚೀನದ ವಿಷಯದಲ್ಲಿ ಇದನ್ನು ಅಪೇಕ್ಷಿಸುವದು ಎಷ್ಟರ ಮಟ್ಟಿಗೆ ವ್ಯಾವಹಾರಿಕ ಎನ್ನುವುದು ಯಕ್ಷ ಪ್ರಶ್ನೆ. ಚೀನ ಇಂದು ಜಗತ್ತಿನ ಅತ್ಯಂತ ಬಲಿಷ್ಠ ರಾಷ್ಟ್ರಗಳಲ್ಲೊಂದು. ಆದರೆ ಸಮಯದ ಹೊಡೆತಕ್ಕೆ ಅನೇಕ ಬಲಿಷ್ಠ ದೇಶಗಳು ಸಿಕ್ಕು ಬಲಹೀನವಾಗಿವೆ. ಸಮಯದ ಬತ್ತಳಿಕೆಯಲ್ಲಿ ಇನ್ನೂ ಯಾವ ಯಾವ ಅಸ್ತ್ರಗಳಿವೆ ಎಂಬುದು ಯಾರಿಗೆ ಗೊತ್ತು?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X