ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಾಸ್ ವೇಗಸ್‌ನಲ್ಲಿ ಗಾದೆ ಗೌರಜ್ಜಿ

By Staff
|
Google Oneindia Kannada News

Achala Seturam, Logvegas, USAದೇಶಬಿಟ್ಟು ದೇಶಕ್ಕೆ ವಲಸೆಹೋದ ನಮ್ಮ ಹೆಣ್ಣುಮಕ್ಕಳ ಬಾಣಂತನ ಉಷ್ಣ ಶೀತ ಆಗದಹಾಗೆ ಅಚ್ಚುಕಟ್ಟಾಗಿ ಆಗಬೇಕು. ಮೆಣಸಿನಸಾರು, ಶುಂಠಿ ಲೇಹ್ಯ, ಅಂಟಿನಉಂಡೆ, ಸಾಂಬ್ರಾಣಿ ಹೊಗೆ ಎಲ್ಲವೂ ತವರು ಮನೆ ಸ್ಟ್ರೈಲ್‌ನಲ್ಲೇ ಆಗ್ಬೇಕು. ಆದ್ರೆ ಮಾಡೋರು ಯಾರು? ಅನು ಪುಣ್ಯ. ಎರಡನೆ ಬಾಣಂತನಕ್ಕೆ ಅವರ ಗಾದೆ ಗೌರಜ್ಜಿ ಮೈಸೂರಿನಿಂದ ಲಾಸ್ ವೇಗಸ್ಸಿಗೆ ಬಂದು ಬಾಣಂತನ ಮಾಡ್ಕೊಟ್ಟು ಹೋದ್ರು. ಹೇಗೆ ಮಾಡಿದ್ರು ಅಂತೀರಾ? ಬದುಕಿನೊಂದಿಗೆ ಹಾಸುಹೊಕ್ಕಾದ ಹಾಸ್ಯ ವಿಲಾಸವನ್ನು ಓದುವಂಥವರಾಗಿ - ಸಂಪಾದಕ.

* ಅಚಲಸೇತು, ಲಾಸ್ ವೆಗಾಸ್

"ಅನು ನಿನ್ನ ಮಗಳಿಗೆ ಏನು ಹೆಸರು ಇಡಬೇಕೂಂತಿದ್ದೀಯೆ? ಕೂಸು ಹುಟ್ಟೊಕೆ ಮುಂಚೇನೆ ಕುಲಾವಿ "ಕೊಳ್ಳೋರು" ತಾನೆ ನೀವುಗಳು" ಹದವಾಗಿ ಬೆರೆಸಿದ ಫಿಲ್ಟರ್ ಕೊಡುತ್ತಾ ಗೌರಜ್ಜಿ ಕೇಳಿದರು."ಗೊತ್ತಿಲ್ಲ ಅಜ್ಜಿ ಇನ್ನೂ ಏನು ಡಿಸೈಡ್ ಮಾಡಿಲ್ಲ"ಎಂದು ಎಂಟು ತಿಂಗಳ ಹೊಟ್ಟೆಯ ಹೊತ್ತು ನಿಧಾನವಾಗಿ ನಡೆಯುತ್ತಾ ಮನೆಯ ಹಿಂಭಾಗದ patio ಬಾಗಿಲು ತೆರೆದೆ.ಲಾಸ್ ವೇಗಸ್ಸಿನ ಸಂಜೆಯ ಸೂರ್ಯ ಚುರುಕಾಗಿದ್ದರೂ ಅಜ್ಜಿಯ ಒಡನಾಟದಂತೆ ಆಪ್ಯಾಯಮಾನನಾಗಿದ್ದ. ಅಜ್ಜಿ ತಾವೊಂದು ಕಾಫಿ ಕಪ್ಪನ್ನು ಕೈಯಲ್ಲಿ ಹಿಡಿದು ನನ್ನ ಪಕ್ಕ ಕುಳಿತರು."ಲಕ್ಷಣವಾಗಿ ಮನ್ದೇವರ ಹೆಸರಿಡದೆ ಮಗನಿಗೆ ಹೇಗೂ ಆದಿ ಅಂತ ಅರ್ಧಮರ್ಧ ಹೆಸರಿಟ್ಟಿದಿಯ. ಮಗಳಿಗೆ ಅಂತ್ಯ ಅಂತ ಇಟ್ಬುಡು.ಆದಿ-ಅಂತ್ಯ ಚನ್ನಾಗಿ ಹೊಂದಾಣಿಕೆಯಾಗುತ್ತೆ".ಕಾಫಿಯೊಂದಿಗೆ ಅಜ್ಜಿಯ ಮಾತಿನ ಸರ್ಕಾಸಂನೂ ಸವಿಯುತ್ತಾ ಕುಳಿತೆ.

ನಮ್ಮ ಬಳಗದಲ್ಲಿರುವ ಎಲ್ಲಾ ಗೌರಮ್ಮಗಳ ಹೆಸರುಗಳ ಮುಂದೆ ಅಂಟಿಸಿರುವ ದೊಡ್ಡ ಚಿಕ್ಕ ಸಣ್ಣ ದಪ್ಪ ಮುಂತಾದ ವಿಶೇಷಣಗಳ ಅಭಾವದಿಂದಲೋ ಅಥವ ಅಂತಹ ಯಾವ ವಿಶೇಷಣಗಳಿಗೂ ಫಿಟ್ ಆಗದೆ ಮಾತು ಮಾತಿಗೂ ಗಾದೆಗಳನ್ನು ಹೇಳುವುದೇ ವಿಶೇಷವಾಗಿರುವುದರಿಂದಲೋ "ಗಾದೆ ಗೌರ"ಎಂದು ಕರೆಸಿಕೊಳ್ಳುವ ಅಜ್ಜಿಯ ಆಣಿಮುತ್ತುಗಳನ್ನು ಅಮೇರಿಕ ಸಂಸ್ಥಾನದ ಲಾಸ್ ವೇಗಸ್ ನಗರದಲ್ಲಿ ಕೇಳ್ತೀನಿ ಅಂತ ಕನಸು ಮನಸಿನಲ್ಲೂ ಎಣಿಸಿರಲಿಲ್ಲ.

ನನ್ನ ಬಾಣಂತನಕ್ಕೆಂದು ಸಂಭ್ರಮದಿಂದ ತಯಾರಾಗುತ್ತಿದ್ದ ಅಮ್ಮ ಬಾತ್‌ರೂಮಿನಲ್ಲಿ ಜಾರಿ ಬಿದ್ದು ಸೊಂಟದ ಮೂಳೆ ಜಖಂ ಮಾಡಿಕೊಂಡು ಪ್ರಯಾಣ ಮಾಡದಂತಾಗಿತ್ತು."ಈಗ್ಲೇ ಹೀಗಾಗ್ಬೇಕಿತ್ತೇ..ಆದಿನೂ ನೋಡ್ಕೊಂಡು ಅನು ಹೇಗೆ ಸಂಭಾಳಿಸ್ತಾಳೋ ಏನೊ. ಬೀಗಿತ್ತಿನಾದ್ರೂ ಇದ್ದಿದ್ರೆ ಅವರಾದ್ರೂ ಹೋಗ್ಬಹುದಿತ್ತು" ಎಂದು ಅಮ್ಮ ನೂರನೆ ಸಲ ಪೇಚಾಡಿಕೊಳ್ಳುವಾಗ ಅಮ್ಮನ ಅತ್ತೆ ಅಂದರೆ ಗೌರಜ್ಜಿ ತಾವು ನನ್ನ ಬಾಣಂತನ ಮಾಡಲು ವೇಗಸ್‌ಗೆ ಹೊರಟಿರುವ ನಿರ್ಧಾರವನ್ನು ಪ್ರಕಟಿಸಿದ್ದರು.ಯಾವ ಕಾಯಿಲೆ ಕಸಾಲೆಗಳ ತಾಪತ್ರಯವಿಲ್ಲದೆ ಚುರುಕಾಗಿ ಒಡಾಡಿಕೊಂಡಿದ್ದರೂ ಎಪ್ಪತ್ತರ ಹರೆಯದ ಅಜ್ಜಿಯ ನಿರ್ಧಾರ ಎಲ್ಲರನ್ನು ಬೆಚ್ಚು ಬೀಳಿಸಿತ್ತು."ಈ ವಯಸ್ಸಿನಲ್ಲಿ ಅಷ್ಟು ದೂರ ಪ್ರಯಾಣ ಮಾಡುವುದೆಂದರೆ ಹುಡುಗಾಟವೇ?ಸಣ್ಣ ಮಗೂನ ಬಾಣಂತೀನ ನೋಡ್ಕೊಳ್ಳೊದಿಕ್ಕೆ ನಿನ್ನ ಕೈಯಲ್ಲಿ ಆಗಲ್ಲ ಸುಮ್ಮನಿರು"ಎಂದು ಅಪ್ಪ ಗದರಿದಾಗ " ಮೊನ್ನೆ ಚಾಮುಂಡಿ ಬೆಟ್ಟದ ಮೆಟ್ಟಿಲು ಹತ್ತಿಕೊಂಡು ಹೋಗಿ ಅಮ್ಮನವರ ದರ್ಶನ ಮಾಡಿ ಬಂದೆನಲ್ಲ ಮೈಕೈ ನೋವು ಅಂತ ಏನಾದ್ರು ಮಲಗಿದ್ದು ಕಂಡ್ಯ? ನಿಮ್ಮನ್ನೆಲ್ಲಾ ಸಾಕಿ ಸಲುಹಲು ಮಾಡಿರುವ ಕಸರತ್ತಿನಿಂದ ಗಟ್ಟಿಯಾದ ದೇಹ ಕಣೋ ಇದು.ಮೇಲೆ ಥಳಕು ಒಳಗೆ ಹುಳುಕಲ್ಲ" ಎಂದು ಅಮ್ಮನ ಕಡೆಗೊಮ್ಮೆ ಅರ್ಥಗರ್ಭಿತವಾಗಿ ನೋಡಿ "ನೋಡೊ ನಿನ್ನ ಹೆಂಡತಿನ ನೋಡ್ಕೊಳ್ಳೋದಿಕ್ಕೆ ಇಲ್ಲಿ ಬೇಕಾದಷ್ಟು ಜನ ಇದ್ದಾರೆ.ನನ್ನ ಮೊಮ್ಮಗಳಿಗೆ ಪಾಪ ಯಾರಿದ್ದಾರೆ" ಎಂದು ಅಪ್ಪನ ಬಾಯಿ ಮುಚ್ಚಿಸಿದ್ದರು.

Nannyಯೊಬ್ಬಳನ್ನ ಗೊತ್ತು ಮಾಡಿಕೊಂಡು manageಮಾಡ್ತೀವಿ ಏನು ತೊಂದರೆಯಾಗಲ್ಲ ಅಂತ ನಾನು ಪ್ರಶಾಂತ ಇನ್ನಿಲ್ಲದಹಾಗೆ ಹೇಳಿದರೂ ಕೇಳದೆ ಮ್ಯೆಂತ್ಯದ ದೋಸೆ ಮೆಣಸಿನ ಸಾರು ಶುಂಠಿ ಲೇಹ್ಯಗಳಿಲ್ಲದ ಬಾಣಂತನವನ್ನು ಖಂಡಿಸಿ ತಮ್ಮ ಮುದ್ದಿನ ಮೊಮ್ಮಗಳನ್ನು ಪದೇ ಪದೇ ಒಂಟಿಯಾಗಿ ಬಿಟ್ಟು ಆಫೀಸು ಕೆಲಸದ ಸಲುವಾಗಿ ಊರೂರು ಸುತ್ತುವ ಪ್ರಶಾಂತನ ಮೇಲೆ ಕಿಡಿಕಾರಿ ಹಾಗಲ್ಲ ಎಂದೇನೋ ಹೇಳಹೋದವನಿಗೆ ಗಂಡಸಿಗ್ಯಾಕೆ ಗೌರಿ ದುಃಖ ಎಂದು ಗಾದೆಯೊಂದರಿಂದ ಇರಿದು ಬಂದೇ ಬರುವುದಾಗಿ ಪಟ್ಟು ಹಿಡಿದು ಕುಳಿತರು ಗೌರಜ್ಜಿ.ಮೇಲೆ ಬೇಡ ಎಂದು ಹೇಳಿದರೂ ಪ್ರೀತಿಯ ಅಜ್ಜಿ ಬರುವುದು ನನಗೂ ಬೇಕಿತ್ತು. ಹಾಗಾಗಿ ಪಾಸ್‌ಪೋರ್ಟ್ ವೀಸ ಎಲ್ಲ ತರಾತುರಿಯಲ್ಲಿ ನಡೆದು ಡೆಲಿವರಿ ಡ್ಯು ಡೇಟಿಗಿಂತ ತಿಂಗಳ ಮೊದಲು ಅಜ್ಜಿ ವೇಗಸ್‌ನಲ್ಲಿದ್ದರು.

* * * * *

ವೇಗಸ್ಸಿನ ವೇಗದ ಜೀವನಶೈಲಿಗೆ ಅಜ್ಜಿ ಬಲುಬೇಗ ಹೊಂದಿಕೊಂಡರು.ಬಗೆಬಗೆಯ ತಿಂಡಿ ತೀರ್ಥಗಳಿಂದ ನನ್ನ ಜೊತೆ ಪ್ರಶಾಂತನ ಬಯಕೆಗಳನ್ನೂ ತೃಪ್ತಿಪಡಿಸಿದರು.
ನಯ ನಾಜೂಕಿಲ್ಲದೆ ಅಜ್ಜಿ ಆಡ್ತಿದ್ದ ಮಾತುಗಳು ಕೆಲವೊಮ್ಮೆ ಸ್ನೇಹಿತರೆದುರು ಪೇಚಿಗೀಡುಮಾಡಿದರೂ ಹೊಟ್ಟೆ ಹುಣ್ಣಾಗುವಂತೆ ನಗಿಸಿ ರಂಜಿಸುತ್ತಿದ್ದವು.

ಒಮ್ಮೆ ಹೀಗೆ ವಾರಂತ್ಯದಲ್ಲಿ ಸ್ನೆಹಿತರ ಬಳಗವೊಂದು ಮನೆಯಲ್ಲಿ ನೆರೆದಿತ್ತು.ಪಾಟ್‌ಲಕ್ ಡಿನ್ನರಿಗಾಗಿ ಬಂದವರೆಲ್ಲರೂ ಒಂದೊಂದು ಬಗೆಯ ತಿನಿಸುಗಳನ್ನು ತಂದಿದ್ದರೂ ಪಾಕಪ್ರವೀಣೆ ಉತ್ಸಾಹದಿಂದ ಹಲವಾರು ಬಗೆ ಮಾಡಿದ್ದರು.ಡೈನಿಂಗ್ ಟೇಬಲ್ಲಿನ ಮೇಲೆ ಸಾಲಾಗಿ ಜೋಡಿಸಿದ ಅಡುಗೆಗಳನ್ನು ಮಹಿಳಾಮಣಿಗಳು ಸವಿಯುತ್ತಾ "ಡೆಸರ್ಟ್" ಹಂತ ತಲುಪಿದ್ದರೂ ಮೀಡಿಯಾರೂಮಿನಲ್ಲಿ ಪ್ರಶಾಂತ ಹೊಸದಾಗಿ ಕೊಂಡ ಪ್ರೊಜೆಕ್ಟರ್ ಮತ್ತು ಸೌಂಡ್ ಸಿಸ್ಟಮ್‌ಗಳ "ಲಕ್ಷಣ"ಗಳನ್ನು ಕೂಲಂಕಷವಾಗಿ ಚರ್ಚಿಸುತ್ತಾ ಗಂಡಸರು ಊಟದ ಕರೆಗಳನ್ನು ಕಡೆಗಾಣಿಸಿದ್ದರು.ಅವರೆಲ್ಲಾ ತಮ್ಮ ಅಡುಗೆಗಳನ್ನು ಚಪ್ಪರಿಸಿ ತಿನ್ನುವ ಸವಿ ನೋಟವನ್ನು ನೋಡಲು ಕಾತುರರಾಗಿದ್ದ ಅಜ್ಜಿ ತಾವೆ ಎಲ್ಲರನ್ನು ಊಟಕ್ಕೆ ಎಬ್ಬಿಸಲು ಹೋದರು.ಸರಿಯಗಿ ಅದೇ ಟೈಮಿಗೆ ಲಲನೆಯೊಬ್ಬಳು ಕನಿಷ್ಟ ಉಡುಪು ತೊಟ್ಟು ನಲಿಯುತ್ತಾ ಕೈ ಬೀಸಿ ಎತ್ತಲೋ ಓಡಿಹೋಗುವ ಜಾಹಿರಾತನ್ನು ಹೊಸ ಪ್ರೊಜೆಕ್ಟರ್ ಗೋಡೆಯನ್ನಾವರಿಸಿದ ದೊಡ್ಡ ಸ್ಕ್ರೀನಿನ ಮೇಲೆ ಬಿಂಬಿಸುತ್ತಿರಬೇಕೇ!.ಅಜ್ಜಿಯ ಕೋಪ ಕೆರಳಿತು."ಪೃಷ್ಠ ದರುಶನಂ ಮೃಷ್ಟಾನ್ನ ಭೋಜನಂ ಅಂತ ಏನು ಎಲ್ಲರೂ ಬಾಯಿ ಬಿಟ್ಟುಕೊಂಡು ಕುಳಿತುಬಿಟ್ರಿ.ಮಾಡಿರೋ ಅಡುಗೆಯೆಲ್ಲಾ ಆರಿ ಅಕ್ಷತೆ ಆಗ್ತಾ ಇದೆ.ಏಳಿ ಏಳಿ"!!

* * * * *

ಹರಟೇ ಮಲ್ಲ ಆದಿಯ ಜೊತೆ ಮಾತುಕತೆಯಾಡ್ತಾ ಅಜ್ಜಿ ಕೆಲವು ಇಂಗ್ಲೀಷ್ ಪದಗಳನ್ನು ಕಲಿತರೆ ಅಜ್ಜಿಗೆ ಇಂಗ್ಲೀಷ್ ಕಲಿಸುವ ಭರಾಟೆಯಲ್ಲಿ ಆದಿಗೆ ಬರುತ್ತಿದ್ದ ಕನ್ನಡವೂ ಅಧ್ವಾನವಾಗಿ ಹೋಗಿತ್ತು.ಒಂದ್ಸಲ ಸ್ನೇಹಿತರೊಬ್ಬರ ಮಗುವಿನ ಬರ್ತಡೇ ಪಾರ್ಟಿಗೆ ಹೊರಟಿದ್ದೆವು.ನೀಲಿ ಬಣ್ಣದ ಸೂಟ್ ಧರಿಸಿ ಬಲು ಮುದ್ದಾಗಿ ಕಾಣುತ್ತಿದ್ದ ಆದಿಗೆ "ಅಂಗಿ ಮೇಲೆ ಅಂಗಿ ಶಾನುಭೋಗರ ತಂಗಿ ಅನ್ನೊ ಹಾಗೆ ಬಟ್ಟೆ ಹಾಕ್ಕೊಂಡು ದೃಷ್ಟಿ ಬಡಿಯೋಥರ ಕಾಣ್ತಿಯಲ್ಲೊ ಮುಂಡೆಗಂಡಾ" ಎಂದು ಕಾಂಪ್ಲಿಮೆಂಟ್ ಕೊಟ್ಟು ಅಪ್ಪಿ ಮುದ್ದಾಡಿದರು.

ಕಾರಿನಲ್ಲಿ ಹೋಗ್ತಾ ಯಾವುದೋ ಜಮಾನದ ಫ್ಯಾಮಿಲಿ ಪಾಲಿಟಿಕ್ಸ್‌ ಅನ್ನು ಆಸಕ್ತಿಯಿಂದ ಕೊರೆಯುತ್ತಿರುವವರನ್ನು ಇಂಟರಪ್ಟ್ ಮಾಡ್ತಾ ಪದೇ ಪದೇ ಅಜ್ಜಿ ಎಂದು ಕಾಡುತ್ತಿದ್ದ ಆದಿಗೆ "ಐ ಅಮ್ಮ ಟಾಕ್ ಟಾಕ್ ನೊ ಟಾಕ್ ಮಧ್ಯೆ ಮಧ್ಯೆ" ಎಂದು ಗದರಿದರು." ಮೈ ಕಣ್ಣಲ್ಲಿ ಕಸ ಬಿದ್ದಿಂಗ್ ಬ್ಲೋ ಇಟ್ ಎಂಡ್ ದೆನ್ ಟಾಕ್ ಟಾಕ್"-ಕಂಗ್ಲಿಷ್‌ನಲ್ಲಿ ಆದಿಯ ಕೋರಿಕೆ. ಆದಿಯ ಕಣ್ಣನ್ನು ಊದಲು ಬಗ್ಗುವಾಗ ಮಧ್ಯಾಹ್ನ ಭುಂಜಿಸಿದ ಈರುಳ್ಳಿ ಆಲೂಗೆಡ್ಡೆ ಹುಳಿ ಅರಗದಿರುವ ಪರಿಣಾಮವನ್ನು ಎಲ್ಲರೂ ಸಶಬ್ದವಾಗಿ ಎದುರಿಸುವಂತೆ ಮಾಡಿದರು.ಆದಿ ಜೋರಾಗಿ " ಥು ಅಜ್ಜಿ ಯು ಡಿಡ್ ಪುರು ಪುರು ಇಟ್ಸ್ ಸ್ಟಿಂಕಿಂಗ್" ಎಂದು ಮೂಗು ಮುಚ್ಚಿಕೊಂಡಿತು.

"ಢರ್ರಂ ಭುರ್ರಂ ಭಯಮ್ ನಾಸ್ತಿ ಟಿಸ್ಸಾಕಾರಂ ಮಹಾಘೋರಮ್, ನಿಶ್ಯಬ್ದಂ ಪ್ರಾಣಸಂಕಟಂ ಅಂತ ಕಣೊ ಮಗು.ನಾನು ಮಾಡಿರೊ ಢರ್ರಂ ಬುರ್ರಂನಿಂದ ಯಾವ ತೊಂದರೆಯೂ ಇಲ್ಲ" ಎಂದು ಅಜ್ಜಿ ತಮ್ಮಿಂದಾದ ವಾಯು ಮಾಲಿನ್ಯವನ್ನು ಒಪ್ಪಿಕೊಳ್ಳಲು ನಿರಾಕರಿಸಿದರು.ಬಾಲವಿಹಾರದ ಕ್ಲಾಸ್‌ಗಳಿಗೆ ತಪ್ಪದೆ ಹೋಗುವ ಆದಿ"ಅಜ್ಜಿ ಯು ರೆಸೈಟೆಡ್ ಏ ಶ್ಲೋಕ " ಎಂದು ಮೆಚ್ಚುಗೆ ವ್ಯಕ್ತಪಡಿಸಿದರೆ ಅಜ್ಜಿಯ ಮಾತಿನಿಂದ ನಗೆಗಡಲಲ್ಲಿ ಮುಳುಗಿದ್ದ ಪ್ರಶಾಂತ "ಮುಂದಿನ ವಾರ ನೀನು ಕನ್ನಡ ಕೂಟದ ಪ್ರೊಗ್ರಾಮಿನಲ್ಲಿ ಹೇಳಬೇಕಾಗಿರೋ ಗಣೇಶನ ಶ್ಲೋಕದ ಜೊತೆ ಈ ಶ್ಲೋಕಾನೂ ಸೇರಿಸಬೇಡವೊ ಮತ್ತೆ" ಎಂದು ನಗೆಯ ಚಟಾಕಿ ಹಾರಿಸಿದ.

* * * * *

ಇಗ್ನೊರೆನ್ಸ್ ಈಸ್ ಬೆಟರ್ ದಾನ್ ಹಾಫ್ ನಾಲೆಡ್ಜ್ ಅನ್ನೊ ಮಾತಿನಂತೆ ಅಜ್ಜಿಯ ಅರೆಬರೆ ಇಂಗ್ಲಿಷ್ ಜ್ಞಾನ ನೆರೆಮನೆಯ ಲೌಲೀನ್ ಜೊತೆ ತರಲೆ ತೆಗೆಯುವಂತೆ ಮಾಡಿತು.ಇದೇನು ಇವಳಿಗೂ ಗಾದೆ ಹೇಳುವ ಚಟಾನಾ ಅಂತೀರ? ಏನು ಮಾಡುವುದು... "ಜನರೇಶನ್ ಸ್ಕಿಪ್ ಮಾಡಿ ವಂಶ ಪಾರಂಪರ್ಯವಾಗಿ ಬರುವ ಖಯಾಲಿ ಇದು."ಹಾಗಂತ ಪ್ರಶಾಂತನ ಅಂಬೋಣ. ಅಷ್ಟೊತ್ತಿಗಾಗಲೇ ಮಗಳು "ಆದ್ಯ" ಧರೆಗಿಳಿದು ಬಂದಿದ್ದಳು.ಒಂದು ಸುಂದರ ಸಂಜೆ ಮಗುವನ್ನು ನೋಡುವ ಸಲುವಾಗಿ ಲೌಲೀನ್ ಮಾರ್ಟಿನ್ ಮನೆಗೆ ಬಂದಾಗ ಮಗುವಿನೊಡನೆ ನಾನು ರೂಮಲ್ಲಿದ್ದೆ.ಅಜ್ಜಿ ಅವಳನ್ನು ಲಿವಿಂಗ್ ರೂಮಿನಲ್ಲಿ ಕೂರಿಸಿ ಮೂಕಾಭಿನಯದಿಂದ ಕಾಯಲು ಹೇಳಿ ತಮ್ಮ ನಳಪಾಕದ ಜನಪ್ರಿಯತೆಯನ್ನು ಅಂತಾರಾಷ್ತ್ರೀಯ ಮಟ್ಟಕ್ಕೆ ಏರಿಸಲೋ ಏನೊ ಬಿಸಿಬಿಸಿ ದೋಸೆ ಚಟ್ನಿ ತಂದು ಕೊಟ್ಟರು.ಬೇಡ ಎಂದು ನಯವಾಗಿ ಲೌಲೀನ್ ತಟ್ಟೆಯನ್ನು ದೂರ ಸರಿಸಿದುದು ಸಂಕೋಚ ಅಂದುಕೊಂಡು ಬಲವಂತವಾಗಿ ತಟ್ಟೆಯನ್ನು ಅವಳ ಕೈಲಿಟ್ಟರು.ವಿಧಿಯಿಲ್ಲದೆ ಅಜ್ಜಿಯ ಹಾವಭಾವಗಳ ಇನ್‌ಸ್ಟ್ರಕ್ಷನ್ ಫಾಲೋ ಮಾಡುತ್ತ ದೋಸೆಯ ಚೂರು ಮುರಿದು ಧಾರಾಳವಾಗಿ ಹಸಿರು ಮೆಣಸಿನ ಕಾಯಿರುವ ಚಟ್ನಿಯಲ್ಲಿ ಅದ್ದಿ ಬಾಯಿಗಿಟ್ಟುಕೊಂಡಳು.

ಹಪ್ಪಳದ ಮೆಣಸಿಗೇ ಸ್ಪೈಸಿ ಸ್ಪೈಸಿ ಎಂದು ಒದ್ದಾಡುವವಳಿಗೆ ಚಟ್ನಿಯ ಖಾರ ತಡೆಯಲಾಗದೆ ಬೆವರು ಕಿತ್ತುಕೊಂಡು ಒದ್ದಾಡುತ್ತಾ "ಐ ಆಮ್ ಸ್ವೆಟಿಂಗ್ ಲೈಕ್ ಅ ಪಿಗ್ ವಾಟರ್ ವಾಟರ್" ಎಂದರಚಿದಳು.ಅಜ್ಜಿಗೆ ಅವಳು ಹೇಳಿದ್ರಲ್ಲಿ ಅರ್ಥವಾಗಿದ್ದು ಎರಡೇ ಪದಗಳು"ವಾಟರ್" ಮತ್ತು "ಪಿಗ್".ಖಾರ ತಿನ್ನಿಸಿದೆನೆಂದು ಹಂದಿ ಎಂದು ಬೈಯುತ್ತಿದ್ದಾಳೆಂದುಕೊಂದು ನೀರನ್ನು ತಂದು ಅವಳ ಮುಂದೆ ಕುಕ್ಕಿ ಎದೆ ತಟ್ಟಿಕೊಂಡು "ಮಿ ನೊ ಪಿಗ್ ಯು ಕೆಂಪು ಮಂಕಿ"ಎಂದು ಕಿಡಿಕಾರಿದರು.ಪರಿಸ್ಥಿತಿ ಕೈ ಮೀರುತ್ತಿರುವುದರ ಅರಿವಾಗಿ ನಿದ್ದೆಗೆ ಜಾರುತ್ತಿದ್ದ ಮಗುವನ್ನು ದಡಬಡ ತೊಟ್ಟಿಲಲ್ಲಿ ಮಲಗಿಸಿ ಆತಾತುರವಾಗಿ ಓಡಿ ಬಂದೆ. "ಅಜ್ಜಿ ಲಿಸನ್ ಟು ಮಿ ..ಲೌಲೀನ್ ಏನು ಮಾತಾಡ್ತಿದ್ದೀರ..ಅಲ್ಲ..ಅಜ್ಜಿ ಸ್ವಲ್ಪ ತಾಳಿ...ಲೌಲೀನ್ ಪ್ಲೀಸ್ ವೇಟ್.. ಯಾರ ಜೊತೆ ಯಾವ ಭಾಷೆಯಲ್ಲಿ ಮಾತಾಡಬೇಕು ಅಂತ ನಾನು ನಿರ್ಧರಿಸುವುದರಲ್ಲಿ ಅಜ್ಜಿಯ ರೌದ್ರಾವತಾರದಿಂದ ವಿಪರೀತ ಗಾಬರಿಯಾಗಿದ್ದ ಲೌಲೀನ್ "ಐ ಡಿಂಟ್ ಮೀನ್ ಟು ಅಫೆಂಡ್ ಹರ್..ಐ ವಿಲ್ ಕಮ್ ಸಮ್ ಅದರ್ ಟೈಮ್" ಎಂದು ಮಗುವನ್ನೂ ನೋಡದೆ ಎದ್ನೋ ಬಿದ್ನೋಂತ ಹೋರಗೋಡಿದಳು.ಅಜ್ಜಿಗಾದರೂ ಅವಳ ಮಾತಿನ ಅರ್ಥ ತಿಳಿಸಲು"ಅಜ್ಜಿ ಅವಳು ಏನು ಹೇಳಿದ್ಲೂಂದ್ರೆ.."

"ಅಲ್ಲ ಖಾರ ಆಯ್ತೂಂತ ನನ್ನೆ ಹಂದಿ ಅನ್ನೊದೆ? ಏನಂದ್ಕೊಂಡಿದಾಳವಳು..ಲೌಲಿ ಅಂತೆ ಲೌಲಿ ಹೆಸರು ಸುಂದರಿ ಮುಖ ವಂದರಿ"

"ಹಾಗಲ್ಲ ಅಜ್ಜಿ ಅವಳು.."

"ಸುಮ್ನಿರೆ ಸಾಕು ಬೆಳ್ಳಗಿರೋದನ್ನೆಲ್ಲಾ ಹಾಲು ಅನ್ನೋಳು ನೀನು.ಮಂತ್ರಕ್ಕಿಂತ ಉಗುಳೆ ಜಾಸ್ತಿ ಅನ್ನೊ ಹಾಗೆ ಅವಳು ಟಸ್ಸ ಪುಸ್ಸ ಅಂತ ಮಾತಾಡ್ಸೋದೆ ನಿನಗೆ ಹೆಚ್ಚುಗಾರಿಕೆ.ಅದಕ್ಕೆ ಅವಳ್ನ ವಹಿಸ್ಕೊಂಡು ಮಾತಾಡ್ತಾ ಇದ್ದೀಯ.

"ಅಯ್ಯೊ ಇಲ್ಲ ಅಜ್ಜಿ..

"ಮುಖ ನೋಡಿ ಮಣೆ ಹಾಕೋ ಜಾಯಮಾನ ಸರಿಯಲ್ಲ ತಿಳ್ಕೊ.

"ಸ್ವಲ್ಪ ಸುಮ್ನಿರಿ ಅಜ್ಜಿ ತಲೆ ಚಿಟ್ಟು ಹಿಡಿಸ್ತಾಇದ್ದೀರ"

"ಹೌದಮ್ಮಾ ಇದ್ದಿದ್ದು ಇದ್ದಿದ್ದ ಹಾಗೆ ಹೇಳಿದ್ರೆ ಸಿದ್ದಪ್ಪಂಗೆ ಸಿಡಿಲು ಹೊಡಿತಂತೆ...

ಸತತವಾಗಿ ಬೀಳುತ್ತಿದ್ದ ಗಾದೆ ಪ್ರಹಾರದಿಂದ ತತ್ತರಿಸಿ ಏನು ಹೇಳಕ್ಕೆ ಹೊರಟೆ ಅನ್ನೊದ್ನೆ ಮರೆತೆ.

"ಲೌಲೀನ್ ಪ್ರಕರಣ"ದಿಂದ ಅಜ್ಜಿ ಕೂಲಾದ ಮೇಲೆ ನಮ್ಮೂರಿಗೆ ಬಂದವರು ನೋಡಲೇಬೇಕಾದ ಪ್ರೇಕ್ಷಣೀಯ ಸ್ಥಳಗಳಿಗೆ ಕರೆದುಕೊಂದು ಹೋದ್ವಿ.ಅಜ್ಜಿಗೆ ಯಾವ್ದನ್ನು ನೋಡಿ"ವಾವ್" ಅನಿಸಲಿಲ್ಲ.ಐದು ಘಂಟೆ ಪ್ರಯಣ ಮಾಡಿ Grand Canyonಗೆ ಕರೆದೊಯ್ದರೆ "ಅಯ್ಯೋ ಈ ದೊಡ್ಡ ಹಳ್ಳಾನ ನೋಡಕ್ಕೆ ಎಳೇ ಬೊಮ್ಮಟೇನು ಕಟ್ಕೊಂಡು ಇಷ್ಟು ದೂರ ಕರ್ಕೊಂಡು ಬಂದ್ರಲ್ಲೊ"ಎಂದುಬಿಡುವುದೇ?

ವಯಸ್ಸಾದ ಅಜ್ಜಿನ ಊರು ಸುತ್ತಿಸೋದಕ್ಕೆ ನಮಗೆ ಆಸೆ ಅನ್ನೊದಕಿಂತ ಕಂಪಲ್ಶನ್ ಅಂದರೆ ಸರಿಯಾಗಿರತ್ತೆ.ನಮ್ಮೂರಿಗೆ ಬರುವ ನೆಂಟರಿಷ್ಟರಿಗೆಲ್ಲ "ಸ್ಟಾಂಡರ್ಡ್ ಟೂರ್" ಕೊಟ್ಟು ಕೊಟ್ಟು ಅಭ್ಯಾಸವಾಗಿಹೊಗಿತ್ತು."package" ಮುಗಿಸೋ ಕಂಪಲ್ಶನ್‌ನಿಂದ ಅಜ್ಜಿನೂ ಎಳಕೊಂಡು ನಮ್ಮ ಟೂರ್‌ನ ಮುಂದುವರಿಸಿದ್ವಿ.
"ಹೂವರ್ ಡ್ಯಾಮ್"ನ್ನು ಕನ್ನಂಬಾಡಿ ಕಟ್ಟೆಗೆ "ಮೌಂಟ್ ಚಾರ್‍ಲ್‌ಸ್ಟನ್" ಚಾಮುಂಡಿ ಬೆಟ್ಟಕ್ಕೆ ಕಡೆಗೆ ಸುಂದರ "ಲೇಕ್ ಮೀಡನ್ನು" ಕುಕ್ಕನಳ್ಳಿ ಕೆರೆಗೆ ಹೋಲಿಸುತ್ತಾ ತಾವು ನೋಡಬೇಕಾಗಿರೋದನೆಲ್ಲ ಮೈಸೂರೆಂಬ ವಿಶಾಲ ಪ್ರಪಂಚದಲ್ಲಿ ನೋಡಾಗಿದೆ ಅಂತ ಅಜ್ಜಿ ಕೊಡುತ್ತಿದ್ದ "ಸಟಲ್" ಕ್ಲೂಗಳಿಗೆ ಕೊನೆಗೂ ಈಲ್ಡಾಗಿ ಮುಂದಿನ ಟ್ರಾವಲ್ ಪ್ಲಾನ್‌ಗಳನ್ನ cancel ಮಾಡಿದ್ವಿ.

ಅಜ್ಜಿಗೆ ತುಂಬಾ ಹಿಡಿಸಿದ್ದು ಎಂದರೆ ಕೆಸಿನೋಗಳ ಸ್ಲಾಟ್ ಮೆಶಿನ್ನುಗಳು."ಅಂಗೈಯಲ್ಲೆ ತುಪ್ಪಾ ಇಟ್ಟ್ಕೊಂಡು ಸುಮ್ನೆ ಹಳ್ಳ ತಿಟ್ಟು ಅಂತ ಅಲೆಸಿದ್ರಲ್ಲೊ"ಎಂದು ಭಕ್ತರು ಭಗವಂತನ ಪಾದಕ್ಕೆ ಹೂ ಆರ್ಪಿಸುವಂತೆ ಶ್ರದ್ಧೆಯಿಂದ ಒಂದೊಂದೇ ನಾಣ್ಯ ಹಾಕುತ್ತಾ ಸುಮಾರು ಹೊತ್ತು ಆಡಿದರು.ತಮಗಾಗುತ್ತಿದ್ದ "ಗಿಲ್ಟಿ ಪ್ಲೆಶರ್" ಕಾನ್ಶಿಯಸ್‌ನೆಸ್‌ನಿಂದ ತಪ್ಪಿಸಿಕೊಳ್ಳಲು"ಊರು ಹೋಗು ಕಾಡು ಬಾ ಅನ್ನೋ ವಯಸ್ನಲ್ಲಿ ನನಗ್ಯಾಕೆ ದುಡ್ಡು ಕಾಸು ಎಲ್ಲ.ನೀವ್ಗಳು ಪಾಪ ಮನೆ ಮಠ ಅಂತ ಸಾಲ ಸೋಲ ಮಾಡ್ಕೊಂಬಿಟ್ಟಿದ್ದೀರ. ಜ್ಯಾಕ್ಪಾಟು ಹೊಡೆದ್ರೆ ತೀರಿಸಿ ಹೋಗೋಣಾಂತ" ಎಂದು ಜೂಜಾಡುವ ಆಸೆಯ ಹಿಂದಿರುವ ತಾತ್ವಿಕ ಕಾರಣವನ್ನು ವಿವರಿಸಿದರು.ಪ್ರಶಾಂತ ನನ್ನ ಕಡೆ ಕಣ್ಣು ಮಿಟುಕಿಸುತ್ತ "ನಿಮ್ಮ ಮೊಮ್ಮಗಳು ಹಟ ಮಾಡಿ ದೊಡ್ಡ ಮನೆ, ಪ್ರೊಜೆಕ್ಟರ್ ಅದೂ ಇದೂಂತ ತುಂಬಾ ಖರ್ಚು ಮಾಡಿಸಿದ್ದಾಳೆ ನೋಡಿ ಏನಾದ್ರು ಮಾಡಿ"ಎಂದು ಜೋಕ್ ಮಾಡಿದ."ನಿನ್ನ ತೆವಲಿಗೆ ಎಲ್ಲಾ ತೊಗೊಂಡು ಸಾಬಿ ದುಡಿದಿದ್ದೆಲ್ಲ ಬೂಬಮ್ಮನ ಲಂಗಕ್ಕಾಯ್ತು ಅಂತೀಯ ಕಳ್ಳ" ಅಂತ ಅಜ್ಜಿ ಪ್ರಶಾಂತನ್ನ ಕಂಡೆಂ ಮಾಡಿದರು.

ಅಜ್ಜಿ ವಾಪಸ್ಸು ಹೊರಡುವ ದಿನ ಓಡೊಡಿ ಬಂದೇ ಬಿಟ್ಟಿತು.ಪರಿಚಯದವರೊಬ್ಬರು ಲಾಸ್ ಏಂಜಲೀಸ್‌ನಿಂದ ಬೆಂಗಳೂರಿಗೆ ಹೊರಟಿದ್ದರು.ಜೊತೆಯಾಗಿರತ್ತೆ ಅಂತ ಅಜ್ಜಿ ಅವರ ಜೊತೆ ಪ್ರಯಾಣ ಮಾಡೊಹಾಗೆ ಟಿಕೆಟ್ ಬುಕ್ ಮಾಡಿದ್ವಿ.ಪ್ರಶಾಂತ ಆದಿ ಇಬ್ಬರು ಏರ್ ಪೋರ್ಟ್‌ತನಕ ಬಿಡಲು ಹೊರಟರು."ಅಜ್ಜಿ ನೀವಿದ್ರಲ್ಲಿ ಏನಾದ್ರು ಮಾಡಿಸ್ಕೊಳ್ಳೇ ಬೇಕು" ಅಂತ ಬಾಣಂತನದ ಗಿಫ್ಟಾಗಿ ಅಮೇರಿಕನ್ ಈಗಲ್ ಚಿನ್ನದ ನಾಣ್ಯ ಕೊಟ್ಟೆ."ಅಯ್ಯೊ ಇದೆಲ್ಲ ಯಾಕೆ..ಅದೇನೊ ಹೇಳ್ತಾರಲ್ಲ ಉಂಡೂ ಹೋದ ಕೊಂಡೂ ಹೋದ ಅಂತ ಹಾಗಾಯ್ತು"ಎಂದು ನಾಣ್ಯವನ್ನು ಕೈಯಲ್ಲೆ ತೂಗಿ "ಆದಿ ಬಾಣಂತನದಲ್ಲಿ ನಿಮ್ಮಮ್ಮನಿಗೆ ಕೊಟ್ಟಿದ್ದು ಇದಕ್ಕಿಂತ ತೂಕವಾಗಿತ್ತೇನೋ"!ಎಂದರು.

ಅಜ್ಜಿಯನ್ನು ಅಪ್ಪಿ ಬೀಳ್ಕೊಡುವಾಗ ಗಂಟಲುಬ್ಬಿ ಬಂತು. "ಅಳಬೇಡಮ್ಮ ಪುಟ್ಟಿ ಸಮಾಧಾನ ಮಾಡ್ಕೊ. ನಿಮ್ಮನ್ನೆಲ್ಲ ಬಿಟ್ಟು ಹೋಗೊಕೆ ನನಗೂ ಮನಸೇ ಇಲ್ಲ.ಓಡೋಡಿ ಹೋಗಿ ನಿಮ್ಮಮ್ಮನ ಕಿಟಿಪಿಟಿ ಕೇಳಕ್ಕೆ ನನಗೇನು ಆಸೆಯೆ? ಅಲ್ಲ ಒಳ್ಯೊಳೇ ನಿಮ್ಮಮ್ಮ..ಸ್ವಲ್ಪ ದುಡುಕು..ಸಿಡುಕು..ಇರಲಿ.. ನಿಮ್ಮನೇ ಹತ್ರಾನೆ ಹೊಸ ಕೆಸಿನೋ ತೆಗಿತಾರಂತಲ್ಲ ಅದು ಶುರು ಆಗ್ಲಿ ನಾನು ಮತ್ತೆ ಬಂದು ಬಿಡ್ತೀನಿ.ನಿಮ್ಮಗಳ ಕಾರಿಗೇಂತ ಕಾಯೋ ತಾಪತ್ರಯವಿಲ್ಲದೆ ನಾನೆ ನಡಕೊಂಡು ಹೋಗಿ ಬರಬಹುದು. ರಾಹು ಕಾಲ ಗುಳಿಕ ಕಾಲ ಎಲ್ಲಾ ಸರಿಯಾಗಿ ನೋಡ್ಕೊಂಡು ಪೂರ್ವ ದಿಕ್ಕಿನ ಮಿಶಿನ್ ಹಿಡಿದು ಆಡಿದ್ರೆ ಯಾಕೆ ಜ್ಯಾಕ್ಪಾಟ್ ಹೊಡೆಯಲ್ವೋ ನೋಡೇಬಿಡ್ತೀನಿ."

ಅಜ್ಜಿಯ ಪ್ಲಾನ್ ಕೇಳಿ ಪ್ರಶಾಂತನ ಕೈಲಿದ್ದ ಸೂಟ್ಕೇಸ್ ದಢಕ್ ಅಂತ ಕೆಳಗೆ ಬಿತ್ತು!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X