• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಿಂಗಪುರ ಚೈತ್ರಸಂಭ್ರಮದಲ್ಲಿ ಮರಿ ಕೋಗಿಲೆಗಳ ಇಂಚರ

By ವಾಣಿ ರಾಮದಾಸ್, ಸಿಂಗಪುರ
|

Fancy dress competition for childrenಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ಎಂದು ಪ್ರತಿ ವರ್ಷ ಚೈತ್ರ ಶುಕ್ಲ ಪ್ರತಿಪದ (ಪಾಡ್ಯ) ದಿನ ಬರುವ 60 ಸಂವತ್ಸರದ ಬೇರೆ ಬೇರೆ ಹೆಸರುಗಳುಳ್ಳ ಚಕ್ರ ನಮ್ಮನ್ನು ಮತ್ತೆ ಮತ್ತೆ ಕಾಲ ಪ್ರಮಾಣದಲ್ಲಿ ಪ್ರತಿ ಯುಗಾದಿಯಂದು ಸ್ವಾಗತಿಸುತ್ತಲೇ ಇರುತ್ತದೆ. ಯುಗಾದಿ ಹೊಸತನದ ಭರವಸೆಯ ಅಭಯ ಹಸ್ತ, ಹರುಷವ ತರುವ ಆದಿಶಕ್ತಿ.

ಎಲ್ಲೆಲ್ಲೂ ಚಿಗುರೊಡೆದ ಗಿಡಮರಗಳು, ಅರಳುವ ಕುಸುಮಗಳು, ಗ೦ಧ ಸೂಸುವ ತಂಗಾಳಿ, ಕೋಗಿಲೆಯ ಗಾನಕ್ಕೆ ಮನಸೋತ ವಸಂತನ ಆಗಮನದಿಂದ ಯುಗ ಯುಗಗಳೇ ಸಾಗಲಿ ಈ ಆದಿ ಶಾಶ್ವತ ಎಂಬ ಮುನ್ನುಡಿ.

ಕರ್ನಾಟಕ, ಆಂಧ್ರ, ಮಹಾರಾಷ್ಟ್ರಗಳಲಿ ಪರಿಪಾಲಿಪ ಚಾಂದ್ರಮಾನ ಯುಗಾದಿ, ಅಲ್ಲಿನ ಜನರು ವಲಸೆ ಹೋಗಿರುವೆಡೆಗಳಲಿ ಆಚರಿಸಲ್ಪಡುತ್ತದೆ. ಇದೇ ಏಪ್ರಿಲ್ 26ರ ಸಂಜೆ ಸಿಂಗಪುರದ ಕನ್ನಡಿಗರೆಲ್ಲರೂ ಕೂಡಿ ಸರ್ವಧಾರಿ ಸಂವತ್ಸರವನ್ನು ಡಿಪಿಎಸ್ ಶಾಲೆಯ 'ಸಭಾಂಗಣ'ದಲ್ಲಿ ಸಂಭ್ರಮದಿಂದ ಸ್ವಾಗತಿಸಿದರು. ಆ ಶಾಲೆಯ ಸಭಾಂಗಣ ಬಯಲಿನಲ್ಲಿತ್ತು. ಸುತ್ತಲೂ ಹಸಿರು ಗಿಡಗಳು, ಕಾಯಿಗಳಿಂದ ತುಂಬಿದ ಮಾವಿನ ಮರ, ಕುಹೂ ಕೋಗಿಲೆಯ ನಾದಗಳ ಜೊತೆಗೆ ವಿವಿಧ ವೇಷ ಸ್ಪರ್ಧೆಗೆ ತಯಾರಾಗುತ್ತಿದ್ದ ಮಕ್ಕಳ ಚಿಲಿಪಿಲಿ ಯುಗಾದಿಯ ಸಂಭ್ರಮವನ್ನು ದ್ವಿಗುಣಗೊಳಿಸಿತ್ತು.

ಶ್ರೀ ವಿಷ್ಣು ಪುರಾಣದ 38ನೇ ಸರ್ಗದಲ್ಲಿ ಬರುವ ಒಂದು ಶ್ಲೋಕದ ಪ್ರಕಾರ ಕೃಷ್ಣನ ಕಾಲಾಂತ್ಯದ ದಿನ (ಭಾದ್ರಪದ ಮಾಸದ ಕೃಶ್ಣ ತ್ರಯೋದಶಿಯಂದು) ಕಲಿಯುಗ ಪ್ರಾರಂಭವಾಯಿತೆಂದು ತಿಳಿಸಲಾಗಿದೆ. ಆದರೂ ನಾವು ಚೈತ್ರ ಶುಕ್ಲ ಪ್ರಥಮೆಯಂದು ಯುಗಾದಿ ಆಚರಿಸುತ್ತೇವೆ. ಏಕೆಂದರೆ ಕೃತ, ತ್ರೇತಾ, ದ್ವಾಪರ ಯುಗಗಳ ಆರಂಭದ ದಿನ ಯುಗಾದಿಯಂದು ಎಂದು ಪುರಾಣಗಳಲ್ಲಿ ತಿಳಿಸಲಾಗಿದೆಯಂತೆ.

ವೇಷಭೂಷಣ ಸ್ಪರ್ಧೆ : ಸಿಂಗಪುರದಲಿ ನಡೆದ ಸರ್ವಧಾರಿ ಸಂವತ್ಸರದ ಯುಗಾದಿ ಹಬ್ಬದ ಸಮಾರಂಭದಲ್ಲಿ ಈ ಬಾರಿ ತ್ರೇತಾ, ದ್ವಾಪರ ಯುಗಗಳ ಪಾತ್ರಗಳ ವೇಷಭೂಷಣ, ಕಲಿಯುಗದಲಿ ಕರ್ನಾಟಕದ ಮಹನೀಯರು ಎಂಬುದು ವಿವಿಧ ವೇಷಗಳ ಸ್ಪರ್ಧೆಯ ವಸ್ತುವಾಗಿತ್ತು. ಈ ಸ್ಪರ್ಧೆಯಲಿ ಭಾಗವಹಿಸಿದ ಮಕ್ಕಳ ಅಲಂಕಾರ, ಅಭಿನಯ, ಹುರುಪು ಸಮಾರಂಭಕ್ಕೆ ಮೆರುಗು ಕೊಟ್ಟಿತ್ತು.

ತ್ರೇತಾಯುಗದಲಿ(5 ವರುಷದ ಕೆಳಗಿನ ಮಕ್ಕಳು) ವೇದಿಕೆಯ ಭಯವಿಲ್ಲದೆ ಸೊಗಸಾಗಿ ಕುಣಿದ ಲಕ್ಷ್ಮಣ, ಮೈಕಿನ ಮುಂದೆ ಮೌನಿಯಾದ ರಾಮ, ಜನಗಳ ಕಂಡು ತಾಯ್ ಮಡಿಲಿಗೆ ಓಡಿದ ಹನುಮ, ಮಾತೃ-ಪಿತೃ ಎಂದು ಹೇಳಲಾಗದೆ ತೊದಲಿದ ಶ್ರವಣ, ರಾಮನಿಗೆ ಹಣ್ಣು ನೀಡಲು ಮರೆತ ಶಬರಿ. ಮುದ್ದು ಮಕ್ಕಳು ಹೇಗೆ ಮಾಡಿದರೂ ಚಂದವೋ ಚಂದ, ಅಂದವೋ ಅಂದ. ದ್ವಾಪರ ಯುಗದಲಿ(6ರಿಂದ 10 ವರುಷದ ಮಕ್ಕಳು) ಕೂದಲು ಬಿರಿಹೊಯ್ದ ಭೀಷ್ಮ, ದ್ರೋಣರನು ಪ್ರಶ್ನಿಸಿದ ದ್ರೌಪದಿ, ಉತ್ತರನಿಗೆ ಧೈರ್ಯವಿತ್ತ ಬೃಹನ್ನಳೆ, ಮಗನ ಮೋಹದಲಿ ಅಂಧನಾದ ಧೃತರಾಷ್ಟ್ರ, ಕಲಿಯುಗದಲಿ ನಾನಿರುವುದೆ ನಿಮಗಾಗಿ ಎಂದ ರಾಜಕುಮಾರ್, ಹೈದರಾಲಿಗೆ ಹೆದರದೆ ಚಿತ್ರದುರ್ಗವ ಕಾಯ್ದ ವೀರ ಮದಕರಿ, ವೀಳೆಯ ಮೆಲ್ಲುತ್ತಾ ಹದಿಬದೆಯ ಧರ್ಮವನು ತಿಳಿಯ ಪಡಿಸಿದ ಸಂಚಿ ಹೊನ್ನಮ್ಮ. ಹೀಗೆ ಇನ್ನೂ ವಿವಿಧ ಪಾತ್ರಕ್ಕೆ ತಕ್ಕಂತೆ ವೇಷಭೂಷಣಗಳನು ತಯಾರಿಸಿದ ತಾಯಂದಿರ ಶ್ರಮಕ್ಕೆ, ಸುರಿಯಿತು ಚಪ್ಪಾಳೆ ಸುರಿಮಳೆ. ಮಕ್ಕಳ ಮಾತಿಗೆ, ಅಭಿನಯಕ್ಕೆ, ಹರಿಯಿತು ನಗೆ ಹೊನಲು, ಹೊಡೆಸಿತು ಶಿಳ್ಳು.

ಪುಟ್ಟ ಭೂಪಾಲಿ 'ಎಲ್ಲೂ ಹೋಗೋಲ್ಲ ಮಾಮ' ಎಂದು ಹಾಡಿದರೆ, ಮನೋಜ್ಞ 'ಹಿಂದೂಸ್ಥಾನವು ಎಂದೂ ಮರೆಯದ' ಹಾಡಿಗೆ ಚಪ್ಪಾಳೆ ಗಿಟ್ಟಿಸಿದನು. ನಂತರ ಕುವೆಂಪು ಅವರ 'ದೂರಕೆ ದೂರಕೆ' ಕುಮಾರಿ ಶೃತಿ ಹಾಗೂ ಲಕ್ಷ್ಮೀ ನಾರಾಯಣ ಭಟ್ಟರ ಹಾಡು ಹಕ್ಕಿಗಳೆ ಹಾರಿ ಬಾನಿಗೆ, ಮರದ ಗೂಡಿನಿಂದ, ಹೋಗಿ ಚೆಲ್ಲಿರಿ ದಿಕ್ಕು ದಿಕ್ಕಿಗೂ ಒಳಗಿನ ಆನಂದ-ಕುಮಾರಿ ಅರ್ಚನಾ ಗಣಪತಿ, 'ಘಲ್ಲು ಘಲ್ಲೆನುತಾ' ಎಂದಳು ಸುದೀಕ್ಷಾ, 'ಜಲಲ ಜಲಧಾರೆ' ಎಂದು ಹಾಡಿದಳು ಶೀತಲ್.

ವೇಷ, ಗಾಯನದ ನಂತರ ರಂಜನಿ ಜಯಸಿಂಹ ಅವರ ನೃತ್ಯ ನಿರ್ದೇಶನದಲಿ ಗಣಪತಿ ವಂದನೆ ಮುಗಿದಂತೆ ಗಿಲಿ, ಗಿಲಿ ಗಿಲಕ್, ಕಾಲುಗೆಜ್ಜೆ ಝಣಕ್ ಎಂದು ರಂಗನ್ನೇರಿಸಿದರು ವಿನುತಾ ಐತಾಳ್. ಈ ಬಾರಿಯ ಕಾರ್ಯಕ್ರಮದಲಿ ಕರೋಕೆ ಕಾರ್ಯಕ್ರಮ ಹಾಗೂ ಸಭಿಕರಲ್ಲೇ ತೀರ್ಪುಗಾರರನ್ನಾಗಿ ನಿಯೋಜಿಸಿದ ಮಾರ್ಪಾಡುಗಳು ಶ್ಲಾಘನೀಯ. ಕಾರ್ಯಕ್ರಮಕ್ಕೆ ಬರುವ ಜನರಿಗಾಗಿ ಬಸ್ಸು ವ್ಯವಸ್ಥೆ ಹಾಗೂ ತಿಂಡಿ-ಊಟದ ಸರಬರಾಜಿಗೆ ಫುಡ್ ಸ್ಟಾಲ್ ಅನುಕೂಲಕರವಾಗಿತ್ತು ಕೂಡ.

ಕಾರ್ಯಕ್ರಮದ ಅಧ್ಯಕ್ಷತೆ ಹಾಗೂ ಬಹುಮಾನ ವಿತರಣೆ ಸಿಂಗಪುರ ಕನ್ನಡ ಸಂಘದ ಹಿಂದಿನ ಪದಾಧಿಕಾರಿಗಳಾಗಿದ್ದ ಗುರುಪ್ರಕಾಶ್ ಅವರಿಂದ. ಕಾರ್ಯಕ್ರಮದ ನಿರೂಪಣೆ ಭಾರ್ಗವಿ ಆನಂದ್, ಸ್ವಾಗತ ಭಾಷಣ ಪ್ರಕಾಶ್ ಹಂದೆ, ವಂದನಾರ್ಪಣೆ ಈಗಿನ ಅಧ್ಯಕ್ಷರಾದ ರಾಮದಾಸ್ ಅವರಿಂದ ನಡೆಯಿತು.

ತಾಯ್ ಗೂಡಿನಿಂದ ದೂರಕೆ ಹಾರಿ ದಿಕ್ಕು ದಿಕ್ಕಿನಲೂ ಕನ್ನಡದ ಆನಂದವನು ಚೆಲ್ಲಿ, ಕನ್ನಡದಾ ಮಕ್ಕಳೆಲ್ಲಾ ಒಂದಾಗಿ ಬನ್ನಿ ಎಂದು ಸಾರುವ ಇಂತಹ ಮನೆಯ ಹಬ್ಬಗಳು ಮರಳಿ ಬರುವ ಯುಗಾದಿಯ ಸಂತಸವನು ಮತ್ತದೇ ಹುಮ್ಮಸ್ಸಿನಿಂದ ಆಚರಿಸುವಂತಾಗಲಿ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more