ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಸ್ಟ್ರೇಲಿಯ ಕನ್ನಡಿಗರಿಗೆ ಎಸ್ ಪಿ ಬಿ ಅವಮಾನ

By Staff
|
Google Oneindia Kannada News

SPB fools Kannada fansಕನ್ನಡಿಗರ ದುಡ್ಡಲ್ಲಿ ತೆಲುಗರನ್ನ ರಂಜಿಸಿದ, ಕನ್ನಡಿಗರ ಗಡ್ಡ ಎಳೆದು ತೆಲುಗರ ಬಾಯಿಗೆ ಮಿಠಾಯಿ ಹಾಕಿದ ಬಾಲು ಬಾಬುಗಾರು !

*ಗು.ಹರೀಶ - ಸಿಡ್ನಿ, ಆಸ್ಟ್ರೇಲಿಯಾ

ಇದೇ ಏಪ್ರಿಲ್ 25ರ ಸಂಜೆ ಸಿಡ್ನಿಯಲ್ಲಿ FACTS (Fine Arts & Cultural Themes Sydney) ವತಿಯಿಂದ ಗಾಯಕ ಡಾ. ಎಸ್.ಪಿ ಬಾಲಸುಬ್ರಹ್ಮಣ್ಯಂ ಅವರ ತೆಲುಗು, ಕನ್ನಡ ರಸಸಂಜೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮ ಎಸ್ ಪಿಬಿ ಅವರ ತೆಲುಗು ನಿಯತ್ತನ್ನು ಸಾಬೀತುಪಡಿಸುವಲ್ಲಿಯೂ, ಕನ್ನಡಿಗರ ಭಾಷಾಪ್ರೇಮವನ್ನು ಒರೆಗೆ ಹಚ್ಚಿ ತಿರುತಿರುಗಿ ಆತ್ಮಾವಲೋಕನ ಮಾಡಿಕೊಳ್ಳುವಂತೆ ಪ್ರೇರೇಪಿಸುವಲ್ಲಿಯೂ ಯಶಸ್ವಿಯಾಯಿತು !

ನಾವುಗಳೆಲ್ಲ ಕಳೆದ ಒಂದು ವರುಷದ ಹಿಂದಿನಿಂದ ನಿರೀಕ್ಷಿಸಿ, ಕೆಲವು ವಾರಗಳಿಂದೀಚೆಗೆ ಪ್ರತಿ ಸ್ಥಳೀಯ ಭಾರತೀಯ ಪತ್ರಿಕೆ/ಚಾನೆಲ್‍ಗಳಲ್ಲಿ ಸ್ವಲ್ಪ ಜಾಸ್ತೀನೇ ಆಯಿತು ಅನ್ನುವಷ್ಟು ಪ್ರಚಾರ ಪಡೆದು ಸಮಸ್ತ ಸಿಡ್ನಿ ಕನ್ನಡ ಹಾಗೂ ತೆಲುಗು ಬಾಂಧವರ ಮನತಣಿಸಲೆಂದು ರೂಪುಗೊಂಡ ಕಾರ್ಯಕ್ರಮ ನೋಡನೋಡುತ್ತಿದ್ದಂತೆಯೇ ಬಂದೇಬಿಟ್ಟಿತು, ಕಳೆದ ಶುಕ್ರವಾರದ ಸಾರ್ವತ್ರಿಕ ರಜಾದಿನದಂದು. ತಿಂಗಳುಗಳ ಹಿಂದೆಯೇ 50-100-200 ಡಾಲರ್‍ಗಳಷ್ಟು ದುಡ್ಡುತೆತ್ತು, ನಮ್ಮ ಮೆಚ್ಚಿನ ಎಸ್ ಪಿಬಿ ಬರುತ್ತಾರೆ, ಅವರನ್ನು ನೋಡಬಹುದು, ಅವರ ಇಂಪಾದ ಕಂಠದಲ್ಲಿ ಸೊಂಪಾದ ಕನ್ನಡ ಹಾಡುಗಳ ರಸದೌತಣ ಉಣ್ಣಬಹುದೆಂಬ ಭಾರೀ ಭಾರೀ ನಿರೀಕ್ಷೆಯೊಂದಿಗೆ ಕಾರ್ಯಕ್ರಮಕ್ಕೆ ಹೋದ ಸಿಡ್ನಿ ಕನ್ನಡಿಗರಿಗೆ ಅಲ್ಲಿ ಆದ ಈ ಅವಮಾನಕರ ಪ್ರಸಂಗವನ್ನು ಓದಿದ ನಂತರ, ನೀವೇನಾದರೂ ಅಲ್ಲಿಗೆ ಬಂದಿಲ್ಲದಿದ್ದರೆ, ಬಂದಿರಬೇಕಿತ್ತೋ ಬರದಿದ್ದೇ ಒಳ್ಳೇದಾಯ್ತೋ, ನೀವೇ ನಿರ್ಧರಿಸಿ.

ಮೊದಲೇ ಇದು ತೆಲುಗು-ಕನ್ನಡ ಎರಡೂ ಹಾಡುಗಳ ರಸಸಂಜೆ. ಮೇಲಾಗಿ ಎಸ್ ಪಿಬಿ ತೆಲುಗರು ಹಾಗೂ ಅವರ ಇಡೀ ತಂಡ ತೆಲುಗರದೇ; ನಮಗಲ್ಲಿ ಪ್ರಾತಿನಿಧ್ಯ ಕಡಿಮೆ ಎಂಬ ಅರಿವಿದ್ದರೂ, ಎಷ್ಟಾದರೂ ನಮ್ಮ ಎಸ್ ಪಿಬಿ ; ತೆಲುಗರಾದರೇನು ಅದೆಷ್ಟು ಮಧುರ ಕನ್ನಡ ಹಾಡುಗಳನ್ನು ಅವರು ಹಾಡಿಲ್ಲ, ಈಟೀವಿಯ ಎದೆತುಂಬಿ ಹಾಡುವೆನು ಕಾರ್ಯಕ್ರಮದಲ್ಲಿ ಅದೆಷ್ಟು ಸುಲಲಿತವಾಗಿ ಕನ್ನಡ ಮಾತನಾಡುತ್ತಿದ್ದರು; ಅವರಿಂದ ಕನ್ನಡಕ್ಕೆ ಅನ್ಯಾಯ ನಡೆಯಲು ಸಾಧ್ಯವೇ ಇಲ್ಲ. ಹೆಚ್ಚು ಕನ್ನಡವೇ ಇಲ್ಲದಿದ್ದರೂ ಅಟ್‍ಲೀಸ್ಟ್ 50-50 ಆದರೂ ಕನ್ನಡ ಹಾಡುಗಳನ್ನು ಹಾಡಬಹುದು ಎಂಬ ರೀಸನೆಬಲ್ ನಿರೀಕ್ಷೆಯೊಂದಿಗೆ ಮನೆಮಕ್ಕಳೊಂದಿಗೆ, ಸ್ನೇಹಿತರೊಂದಿಗೆ ಅಲ್ಲಿಗೆ ಬಂದ ಕನ್ನಡಿಗರಿಗೆ ಮೊದಲನೇ ಷಾಕ್ ಖುದ್ದು ಎಸ್ ಪಿಬಿ ಅವರಿಂದಲೇ.

"ಭಾರತೀಯ ಸಂಗೀತಕ್ಕೆ ಭಾಷಾ ಭೇದವಿಲ್ಲ. ದಯವಿಟ್ಟು ಎಲ್ಲರೂ ಎರಡೂ ಸಂಗೀತವನ್ನು ಎಂಜಾಯ್ ಮಾಡಿ, ನಾನು ಯಾವ ಭಾಷೆಯಲ್ಲಿ ಎಷ್ಟು ಹಾಡುಗಳನ್ನು ಹಾಡಿದೆನೆಂದು ಎಣಿಸುತ್ತಾ ಕೂಡಬೇಡಿ" ಎಂಬ ಬೋಧನೆ. ಮೊದಲನೇ ಹಾಡು ತೆಲುಗಿನ ಶಂಕರಾಭರಣಂನ "ಓಂಕಾರನಾದಾಲು"ನಿಂದಲೇ ಶುರುವಾದಾಗ ಸ್ವಲ್ಪ ನಿರಾಸೆಯಾದರೂ ಮುಂದಿನ ಹಾಡು;ಅಟ್‍ಲೀಸ್ಟ್ ಅದರ ಮುಂದಿನ ಹಾಡು ಕನ್ನಡ ಹಾಡಬಹುದು ಎಂಬೀ ನಿರೀಕ್ಷೆಯಲ್ಲಿಯೇ ಕಾಲತಳ್ಳುವಂತಾಯಿತು. ಇಡೀ ಕಾರ್ಯಕ್ರಮದಲ್ಲಿ ಶೇಕಡ 50 ಇರಬೇಕಾದ ಕನ್ನಡ ಹಾಡುಗಳು, ಕಾರ್ಯಕ್ರಮ ಮುಗಿಯುವಷ್ಟರಲ್ಲಿ ಮುಟ್ಟಿದ್ದು ಶೇಕಡ 15-20 ಕ್ಕೆ ಅಂದರೆ ಕೇವಲ 6 ಕನ್ನಡ ಹಾಡುಗಳು. ಅದರಲ್ಲಿ ನಮ್ಮ ಎಸ್ ಪಿ ಸಾಹೇಬರು ಹಾಡಿದ್ದು ಕೇವಲ ಮೂರು ಕನ್ನಡ ಹಾಡುಗಳು.

ಇಡೀ ಕಾರ್ಯಕ್ರಮವನ್ನು ಕನ್ನಡಿಗರಿಗೆ ತೆಲುಗು ಭಾಷೆ ಕಲಿಸಿಯೇ ತೀರಬೇಕೆಂದು ಪಣತೊಟ್ಟಂತಿದ್ದ ಎಸ್ ಪಿಬಿ ನಿರೂಪಿಸಿದ್ದು ತೆಲುಗಿನಲ್ಲಿಯೇ. ಮಧ್ಯೆ ಮಧ್ಯೆ ಊಟಕ್ಕೆ ಉಪ್ಪಿನಕಾಯಿಯಂತೆ ಅಲ್ಲಲ್ಲಿ ಇಂಗ್ಲಿಷ್ ಹಿಂದಿ ಹಾಗೂ ಅಳುವ ಮಗುವಿನ ಬಾಯಿಗೆ ಲಾಲಿಪಪ್ ಇಡುವಂತೆ ಆಗಾಗ ಚೂರುಪಾರು ಕಿತ್ತುಹೋದ ಕನ್ನಡ. ಕಾರ್ಯಕ್ರಮದಲ್ಲಿ ಇರಬೇಕಿದ್ದುದು ತೆಲುಗು ಹಾಗೂ ಕನ್ನಡ ಹಾಡುಗಳು ಹೀಗಿರಬೇಕಾದ್ರೆ ಹಿಂದಿ ಎಲ್ಲಿಂದಪ್ಪಾ ಬಂತು ನಾವುಗಳು ಅಂದುಕೊಳ್ಳುತ್ತಿರುವಂತೆಯೇ, ನಮ್ಮನ್ನೇ ಉದ್ದೇಶಿಸಿರುವೆಂಬಂತೆ ಮಾತನಾಡಿದ ಎಸ್ ಪಿ ನಮಗೆ ನೀಡಿದ್ದು ಲಲ್ಲೂಯಾದವ್‍ರನ್ನು ನೆನಪಿಸುವಂತಹ ಭಾಷಣವೇ;

"ಸಂಗೀತಕ್ಕೆ ಭಾಷೆ ಇಲ್ಲ... ಎಲ್ಲಾ ಭಾಷೆಗಳನ್ನೂ ಪ್ರೀತಿಸಿ .... ಬೇರೆ ಭಾಷೆಗಳೆಡೆಗೆ ಸಹನೆಯಿರಲಿ" ಎಂಬ ಪಾಠ. ತಾವು ಹಾಡುತ್ತಿರುವುದು ಶಾಸ್ತ್ರೀಯಸಂಗೀತವಲ್ಲ ಸಿನಿಮಾಸಂಗೀತ, ಅದಕ್ಕೆ ಭಾಷೆ-ಭಾವನೆಗಳೇ ಪ್ರಧಾನ ಎಂಬ ಸಾಮಾನ್ಯಜ್ಞಾನವೂ ಕನ್ನಡಿಗರಿಗೆ ಇಲ್ಲ ಎಂದುಕೊಂಡಿದ್ದರು ಅನ್ನಿಸುತ್ತೆ ನಮ್ಮ ಬಾಲು. ಒಟ್ಟಾರೆ ಎಲ್ಲಾ ಹಾಡುಗಳ ಗುಣಮಟ್ಟವೂ ಅಷ್ಟರಲ್ಲೇ ಇತ್ತು. ಕನ್ನಡಿಗರ ಗಾಯದ ಮೇಲೆ ಉಪ್ಪು ಸುರಿವಂತೆ ಎಸ್‍ಪಿ ತಮ್ಮೊಂದಿಗೆ ಕರೆತಂದಿದ್ದ ತಂಡದ ಇತರರು (ಕೇಳಲೇಬೇಡಿ...ಅವರೂ ತೆಲುಗರೇ) ತೆಲುಗು ನಟರ ಮಿಮಿಕ್ರಿ ಕಿರಿಕಿರಿ ಶುರು ಮಾಡಿದರು. ತಾಳಕ್ಕೆ ಮೇಳವೆಂಬಂತೆ ಎಸ್‍ಪಿ ಸೇರಿದಂತೆ ಇಡೀ ತಂಡದವರು ಆಯ್ಕೆ ಮಾಡಿಕೊಂಡು ಬಂದಿದ್ದ ಹಾಡುಗಳು, ಇಡೀ ಕಾರ್ಯಕ್ರಮ ಮೊದಲೇ ಯೋಚಿಸಿ ಕನ್ನಡಿಗರಿಗೆ ಟೋಪಿ ಹಾಕಲೆಂದೇ ರೂಪಿತವಾದಂತೆ ಕಂಡುಬಂತು. ಅಬ್ಬರದ ಹೊಚ್ಚ ಹೊಸ ತೆಲುಗು ಹಾಡುಗಳ ನಡುವೆ ಅಲ್ಲಲ್ಲಿ ಆಯ್ದ ಸಪ್ಪೆಯಾದ ಸವೆದ ಕನ್ನಡ ಹಾಡುಗಳು. ಬೇಕುಬೇಕೆಂದೇ ಕನ್ನಡಿಗರಿಗೆ ವಿರಕ್ತಿ ಬರಲೆಂದು ರೂಪಿಸಿದ ಪೂರ್ವನಿಯೋಜಿತ ಮೋಸ. ಯಾರಾದರೂ ಹೊಸಬರು, ತಿಳಿಯದವರು ಈ ಹಾಡುಗಳನ್ನು ಕೇಳಿದರೆಂದರೆ, "ಕನ್ನಡ ಹಾಡುಗಳೆಂದರೆ ಬರೀ ಸಪ್ಪೆಸಪ್ಪೆ ಕೇಳುವುದಕ್ಕೆ ಬೇಸರ..ತೆಲುಗು ಹಾಡುಗಳು ಭಾರೀ ಜೋರ್" ಎಂಬ ಭಾವನೆ ಬರಬೇಕು ಹಾಗೆ.

ಕಾರ್ಯಕ್ರಮ ಮಧ್ಯಾವಧಿಗೆ ಬರುವಷ್ಟರಲ್ಲಿ ನಮ್ಮ ಸಹನೆ ಕಟ್ಟೆಯೊಡೆಯತೊಡಗಿತು, ಕೋಪ ಮಿತಿಮೀರತೊಡಗಿತು. ಈ ಲೇಖಕನೂ ಸೇರಿದಂತೆ ಕೆಲ ಯುವ ಕನ್ನಡಿಗರು ವೇದಿಕೆಯೆಡೆಗೆ ಧಾವಿಸುವಲ್ಲಿ ನಾವು ಅವರನ್ನು ಡೈರೆಕ್ಟ್ ಆಗಿ ಭೇಟಿ ಮಾಡಲು ಸಾಧ್ಯವಿಲ್ಲ ಎಂದು ತಿಳಿಯಿತು. ಆಗಲಿ, ಆಯೋಜಕರಲ್ಲಿರುವ ನಮ್ಮ ಕನ್ನಡ ನಾಯಕರನ್ನಾದರೂ ತರಾಟೆಗೆ ತೆಗೆದುಕೊಳ್ಳೋಣ ಎಂದು ಹುಡುಕಾಡುವಲ್ಲಿ, ನಮ್ಮ ಸನ್ಮಾನ್ಯ ಆಯೋಜಕರು ಅಲ್ಲಿಂದ ಕಾಲ್ಕಿತ್ತುತ್ತಿರುವುದು ಕಣ್ಣಿಗೆ ಬಿತ್ತು. ದೂರದಿಂದಲೇ "ಇದಕ್ಕೂ ನನಗೂ ನಿಮಗೂ ಯಾವುದೇ ಸಂಬಂಧ ಇಲ್ಲ" ಎಂಬ ಬೇಜವಾಬ್ದಾರೀ ನಿರ್ಲಜ್ಜ ಹೇಳಿಕೆಯೊಂದಿಗೇ ಕಾಲ್ಕಿತ್ತರು ನಮ್ಮ ನರಸತ್ತ ಅಯೋಜ ಕನ್ನಡಿಗರು. ಬಗ್ಗಿದವನನ್ನು ಬಡಿ ಎಂಬಂತೆ ಅಲ್ಲೇ ಇದ್ದ ಬೆಂಗಳೂರಲ್ಲಿ 15 ವರ್ಷ ಕಳೆದಿರುವೆನೆಂದು ಹೇಳಿಕೊಳ್ಳುವ ತೆಲುಗು ಆಯೋಜಕರಿಂದ ಮತ್ತೊಂದು ಬೇಜವಾಬ್ದಾರೀ ಹೇಳಿಕೆ, "ಇಡೀ ಜನಗಳಲ್ಲಿ ಶೇಕಡಾ-80 ತೆಲುಗರಿದ್ದಾರೆ, ಹಾಗಾಗಿ ಹೆಚ್ಚು ತೆಲುಗು ಹಾಡುಗಳು ಬರುತ್ತಿವೆ" ..

"ಅಲ್ಲಾ ಸ್ವಾಮಿ ನಿಮಗ್ಯಾರು ಹೇಳಿದರು ತೆಲುಗರು ಶೇ 80 ಇದ್ದಾರೆಂದು, ಕನ್ನಡಿಗರು ತೆಲುಗರು ಎಷ್ಟೇ ಪರ್ಸೆಂಟ್ ಇರಲಿ, ನಮ್ಮ ಹತ್ತಿರ ಹಣತೆಗೆದುಕೊಂಡಿದ್ದು ಶೇ 50 ಕನ್ನಡ ಹಾಡುಗಳಿರುತ್ತವೆಂದು ಅಲ್ಲವೇ" ಎಂಬ ಪ್ರಶ್ನೆಗೆ "ನೋಡೋಣ" ಎಂಬ ನವಾಬರ ಶೈಲಿಯ ಉತ್ತರ. "ಕನ್ನಡ-ತೆಲುಗು ಕಾರ್ಯಕ್ರಮದಲ್ಲಿ ಹಿಂದೀ ಹಾಡು ಏಕೆ" ಎಂಬ ಪ್ರಶ್ನೆಗೆ "ಹಿಂದೀ ನಮ್ಮ ರಾಷ್ಟ್ರಭಾಷೆ, ಅದನ್ನು ಎಲ್ಲಿ-ಯಾವಾಗ-ಎಷ್ಟು ಬೇಕೆಂದರೂ ಹಾಡಬಹುದು" ಎಂಬ ವೇದವಾಕ್ಯವೇ ಉತ್ತರ. ನಿಜ ಹೇಳ್ಬೇಕೂಂದ್ರೆ ಅಲ್ಲಿದ್ದುದ್ದು ಸುಮಾರು ಶೇ 49 ಕನ್ನಡಿಗರು. ಆದರೆ ಸದ್ದು ಮಾಡೋದು ನಮ್ಮ ಸ್ವಭಾವ ಮತ್ತು ಒಪ್ಪಿಕೊಂಡು ಸುಮ್ಮನಿರೋದು ನಮ್ಮ ಜಾಯಮಾನ ಅಲ್ಲವೇ? ಇಷ್ಟಕ್ಕೂ ಇಷ್ಟೇ ಪರ್ಸೆಂಟ್ ಕನ್ನಡ-ತೆಲುಗು ಜನ ಬರುವರೆಂದು ಎಸ್‍ಪಿ ಏನಾದ್ರೂ ಕನಸು ಕಂಡಿದ್ರಾ? ಕಂಡಿದ್ರೂ ಕನ್ನಡ ಜನ ಕೂಡಾ ದುಡ್ಡು ತೆತ್ತು ತನ್ನನ್ನು ನೋಡಲು-ಕೇಳಲು ಬರುತ್ತಾರೆ, ಅವರ ದುಡ್ಡು ತಿನ್ನುವ ನಾನು, ಅವರಿಗೆ ಕನಿಷ್ಠ ನ್ಯಾಯವನ್ನಾದರೂ ಮಾಡಬೇಕು ಎಂಬ ಮನುಷ್ಯತ್ವವೂ ಇಲ್ಲದೇ ಹೋಯಿತೇ ಎಸ್‍ಪಿ ಅವರೇ? ನಿಮ್ಮ ತೆಲುಗರ ಮುಂದೆಯೇ ನಮ್ಮ ಕನ್ನಡಿಗರ ಮಾನ ತೆಗೆಯಲು ಅವಕಾಶ ಸಿಕ್ಕಿದ್ದು?

ಇಷ್ಟು ವಿರೋಧಿಸಿದಾಗಲೂ ಕದಲದ ಆಯೋಜಕರು, ಕೊನೆಗೆ ಎಸ್‍ಪಿ ಅವರಿಗೆ ನಮ್ಮ "ಮನವಿ"ಯನ್ನು ಮುಟ್ಟಿಸುತ್ತೇವೆಂಬ ಭರವಸೆಯೊಂದಿಗೆ ನಮ್ಮನಮ್ಮ ಸೀಟುಗಳಿಗೆ ಹಿಂದಿರುಗಿದೆವು. ಬೇರೇನು ತಾನೇ ಮಾಡಲು ಸಾಧ್ಯ? ನೆನಪಿಡಿ ಇದು ಆಸ್ಟ್ರೇಲಿಯಾ; ಬೆಂಗಳೂರು ಅಲ್ಲ. ಇಲ್ಲಿ ಎಲ್ಲಕ್ಕೂ ಮಿತಿಯಿರುವಂತೆ ನಮ್ಮ ಪ್ರತಿಭಟನೆಗೂ ಇದೆ.

ಮಧ್ಯಾವಧಿಯ ನಂತರ ಕಾರ್ಯಕ್ರಮ ಶುರುವಾದಾಗ ಎಸ್‍ಪಿ ಮಾಸ್ಟರಿಂದ ಮತ್ತದೇ ದೇಶಭಕ್ತಿ, ಪರಭಾಷಾಸಹನೆ, ಭಾಷಾವಿಹೀನ ಸಂಗೀತದ ಬಗೆಗೆ ಭೋದನೆ. ಈ ಸರತಿ ಅಂತೂ ಹೇಳಲೇಬೇಕಿಲ್ಲ ಇದು ಕನ್ನಡಿಗರನ್ನು ಕುರಿತೇ ಎಂದು ಅಲ್ಲವೇ? ಇರಲಿ ನೋಡೋಣ ಎಂದು ಕುಳಿತುಕೊಂಡವರಿಗೆ ಮತ್ತದೇ ತೆಲುಗು-ಹಿಂದಿಯ ರಸದೌತಣ. ನಡುನಡುವೆ ಯಾವಾಗಾದರೊಮ್ಮೆ ಕನ್ನಡದಲ್ಲಿ ಬಡಬಡಿಕೆ (ಅದನ್ನು ಹಾಡು ಎನ್ನುವುದಕ್ಕಿಂತಾ ಇದೇ ಸರಿಯಾದ ಪದ).

ಇಡೀ ಕಾರ್ಯಕ್ರಮದಲ್ಲಿ ಎದ್ದುಕಂಡಿದ್ದು; ಎಸ್‍ಪಿ ಅವರ ಇಷ್ಟುದಿನಗಳ ಖೋಟಾ ಕನ್ನಡಪ್ರೇಮ ಬಹಿರಂಗವಾದದ್ದು; ಸಮೋಸ ತಿಂದುಕೊಂಡು ತೆಲುಗು-ಹಿಂದೀ ಹಾಡುಗಳಿಗೆ ಚಪ್ಪಾಳೆ ಹೊಡ್ಕೊಂಡು ಬೇಜವಾಬ್ದಾರಿ ಹೇಳಿಕೆ ಕೊಟ್ಕೊಂಡು ಕನ್ನಡವನ್ನು ಮರೆತು-ಮೆರೆಯುತ್ತಿರುವ ನಮ್ಮ ಕನ್ನಡ ನಾಯಕಮಣಿಗಳು. ಕನ್ನಡ ಇರುತ್ತೆ ಎಂದು ನಂಬ್ಕೊಂಡು ಹೋದಾ ನಮ್ಮಂಥಾ ಬೆಪ್ಪ ಕನ್ನಡಿಗರ ದುಡ್ಡಿಗೆ ಮೋಸ; ತಲೆಯ ಮೇಲೊಂದು ದೊಡ್ಡ ಟೋಪಿ; ಯಾವಾಗ್ಲೂ ಗಲಾಟೆ ಮಾಡೋವ್ರೆಂಬ ಹಣೆಪಟ್ಟಿ; ಎದುರಲ್ಲೇ ಮಂಡಿಗೆ ಮೆಲ್ಲುತ್ತಿದ್ದ ತೆಲುಗರ ಮುಂದೆ ಕನ್ನಡಿಗರ ಮಾನ ಮೂರು ಕಾಸಿಗೆ ಹರಾಜು.

ಅಲ್ಲಿ ನೋಡಿದರೆ ಕಾವೇರಿ;ಶಾಸ್ತ್ರೀಯಭಾಷೆ;ರೈಲ್ವೆ;ಹೊಗೆನಕಲ್ ಹೀಗೆ ಹತ್ತು ಹಲವು ವಿಷಯಗಳಲ್ಲಿ ನಮಗೆ ನಮ್ಮ ನಾಡಿಗೆ ಪರಕೀಯರಿಂದ ಅವಮಾನ. ಇಲ್ಲಿ ಆದದ್ದೂ ಅಷ್ಟೇ. ಎರಡೂ ಕಡೆ ಎದ್ದುಕಾಣುತ್ತಿರುವುದು ಒಂದೇ, ನಮ್ಮ ನಾಯಕರ ನಿರ್ಲಜ್ಜತೆ, ನಿಷ್ಕ್ರಿಯತೆ, ಸ್ವಾರ್ಥ.
ಪೂರಕ ಓದಿಗೆ:

ಸಂಗೀತ ಜ್ಞಾನಮು ಬುದ್ದಿ ವಿನಾ..
ಸಂಗೀತದ ನೆಪದಲ್ಲಿ ಜಿದ್ದಿಗೆ ಬಿದ್ದ ಟಿವಿ ಮಾಧ್ಯಮ
ಬಾಲುರಿಂದಲೂ ಒಂದು ಬಾರಿ ತಪ್ಪು ನಡೆದಿತ್ತು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X