ಸಿಂಗಪುರದಲ್ಲಂದು ಕೃತಕ ಮಳೆ :ಎಲ್ಲರೂ ತೊಯ್ದುತೊಪ್ಪೆ!


ಕನ್ನಡಿಗರು ಮನರಂಜನೆಗೆ ಮನಸೋಲುತ್ತಾರೆನ್ನುವುದು ಮತ್ತೊಮ್ಮೆ ಇಲ್ಲಿ ಋಜುವಾತಾಯಿತು.ಅದೇನು ಜನ ಅದೇನು ಉತ್ಸಾಹ.. ಕೊಡೆ ಮಡಿಚಿಟ್ಟು ಮಳೆಗೆ ಮೈಯೊಡ್ಡುವ ತವಕ!

Singapore drenched in Mungaru Male!ಭೂಮಧ್ಯ ರೇಖೆ ಇರುವ ಸಿಂಗಪುರದಲ್ಲಿ ಧಾರಾಕಾರವಾಗಿ ಬೆವರು ಸುರಿವಂತೆ ಮಳೆಗೇನೂ ಕಮ್ಮಿ ಇಲ್ಲ. ಆದ್ರೆ ಅದೇಕೋ ಇನ್ನೂ ವರುಣರಾಯರಿಗೆ ಕರುಣೆ ಬಂದಿಲ್ಲ.

ಸೆಕೆ, ಸೆಕೆ, ಮಳೆನೇ ಇಲ್ಲ ಎಂಬ ಗೊಣಗಾಟ ಕೇಳಿ, ಸ್ಯಾಂಡಲ್‌ವುಡ್ ಸಿನಿ ಎಂಟರ್‌ಟೈನ್‌ಮೆಂಟಿನ ನಮ್ಮ ಕನ್ನಡಿಗ ಪ್ರಕಾಶ್, ಸೆಕೆ ಧಗೆ ಎಂದು ಒದ್ದಾಡ್ತಾ ಇರುವ ಸಿಂಗಪುರ ಕನ್ನಡಿಗರೇ 1ನೇ ಜುಲೈ ಭಾನುವಾರ ಬೆಳಿಗ್ಗೆ ಬೀಚ್‌ರೋಡಿಗೆ ಬನ್ನಿ.ಜೋರಾಗಿ ಭರ್ಜರಿ ಮಳೆ ಬರುತ್ತೆ ಎಂದು ಸಿಂಗಪುರ ಕನ್ನಡಿಗರಿಗೆ ಮೆಸೆಜಾಯಿಸಿದ್ರು. ಊರಿಗೆ ಬಂದ ಸುಂದರಿ ಕೇರಿಗೆ ಬರದೆ ಇರ್ತಾಳೆಯೇ, ಗೊತ್ತಾಯಿತಾಗ ಮುಂಬರುವ ಚಿತ್ರಾಮಾನ ವರದಿ ದೇಶವಿದೇಶಗಳಲ್ಲಿ ಭರ್ಜರಿ ಬಿದ್ದ "ಮುಂಗಾರು ಮಳೆ" ಸಿಂಗಪುರದಲ್ಲೂ ವೀಕ್ಷಣೆಗಿದೆ ಎಂದು.

ಜುಲೈ 1, ಭಾನುವಾರ ಧಿಡೀರ್ ಎದ್ದು ಧಿಡೀರ್ ಉಪ್ಪಿಟ್ಟಿಸಿ ಥಿಯೇಟರಿಗೆ ಹೋದರೆ ಕನ್ನಡಿಗರ ದಂಡು ಅಲ್ಲಿತ್ತು. ಹಳಬರು 50 ಕಂಡರೆ ಹೊಸಬರು 510. ಅನಿಸಿತು ಯಾಕೋ ಅಂದು ಇವರುಗಳ ಕನ್ನಡಾಭಿಮಾನ ಬರೀ ಪಿಕ್ಚರಿಗೇ ಮೀಸಲೆಂದು. ಸಾಂಸ್ಕೃತಿಕ ಕಾರ್ಯಕ್ರಮ ಮಾಡಿದ್ರೆ ಐವತ್ತೂ ಇರೋಲ್ಲ, ಕನ್ನಡ ಪಿಕ್ಚರ್ ಅಂದ್ರೆ ಐನೂರು ಆಗ್ತಾರಲ್ಲ. ಚಲನಚಿತ್ರವೆನೆ ಕುಣಿದಾಡುವುದೆನ್ನೆದೆ ಎನ್ನುವ ಇವರು ಎಲ್ಲಿ ಅಡಗಿ ಕುಳಿತಿರುತ್ತಾರೋ ಮಿಕ್ಕ ಕಾರ್ಯಕ್ರಮಗಳಲ್ಲಿ.

ಪಿಕ್ಚರ್ ಶುರುವಾಯಿತು. ಚಿತ್ರದುದ್ದಕ್ಕೂ ನಿಲುಗಾಲವಿಲ್ಲದ ಸುರಿವ ಜಿಟಿ, ಜಿಟಿ ಮಳೆ. "ಪ್ರೇಮ ಮಧುರ, ತ್ಯಾಗ ಅಮರ" ಥೀಮ್ "ಓಲ್ಡ್ ವೈನ್ ಇನ್ ನ್ಯೂ ಬಾಟಲ್". ಈ ಥೀಮ್ ಆಧಾರವನ್ನಾಗಿ ಇಟ್ಟುಕೊಂಡ ಚಿರಕಾಲ ನೆನಪಿನಲ್ಲಿ ಉಳಿಯುವಂತಹ ಕ್ಲಾಸಿಕ್ ಚಿತ್ರಗಳು ಮೂಡಿ ಬಂದಿವೆ ಎನಿಸಿದಂತೆ ಅತ್ತಿತ್ತ ಕಣ್ಣಾಡಿಸಿದೆ. ಕಂಡದ್ದು ಕುರ್ಚಿಯಿಲ್ಲದೆ ಜನ ನಿಂತು ಅಥವಾ ಕೆಳಗೆ ಕೂತು ಚಿತ್ರ ನೊಡ್ತಾ ಇದ್ರು. ಈ ದೃಶ್ಯ ಡಾ.ರಾಜ್ ಚಿತ್ರಗಳಲ್ಲಿ ಮಾತ್ರ ಸೀಮಿತಗೊಂಡಿತ್ತು. ವಾರೆವಾಹ್ ಮುಂಗಾರು ಮಳೆಯೇ ಎಂದು ಬೀಗಿದಂತೆ ನಾನಿರುವುದು ಕಂಟೋಲ್ಡ್ ಸಿಂಗಪುರದಲ್ಲಿ ಅನ್‌ಕಂಟ್ರೋಲ್ಡ್ ಟಿಕೆಟ್, ಸಾಧ್ಯವೇ ಇಲ್ಲ. ಚಿತ್ರ ಮುಗಿದ ಮೇಲೆ ಪ್ರಕಾಶ್ ಅವರನ್ನು ನೇರ ಪ್ರಶ್ನಿಸೋಣ ಎಂದು ಯಂಗ್‌ಮ್ಯಾನ್ ಡೈಲಾಗ್‌ನಲ್ಲಿ ಮಗ್ನಳಾದೆ.

ಚಿತ್ರ ನಡೆದಿತ್ತು. ಚಿತ್ರದಲ್ಲಿ ಮಳೆರಾಯ ಬಂದ, ಮಳೆಹೂವ ತಂದ. ಚಿತ್ರದ ಪ್ರಾರಂಭದಿಂದ ಅಂತ್ಯದವರೆಗೂ ಆರ್ಭಟವಿಲ್ಲದ ಜೋರು ಮಳೆ. ಹಾಗೆಯೇ ಕಥೆಯಲ್ಲಿ, ಸಂಭಾಷಣೆಯಲ್ಲಿ, ನಟನೆಯಲ್ಲೂ ಆರ್ಭಟವಿಲ್ಲದೆ "ಸಂಯಮ" ತಂದಿರುವುದು ಶ್ಲಾಘನೀಯ. ಹುಡುಗಾಟದ ಹುಡುಗನ ಪ್ರೇಮ ಹುಡುಗುತನ ಎಂದು ತಿಳಿದ ನಾಯಕಿ ನಾಯಕನಿಗೆ ಕಪಾಳ ಮೋಕ್ಷ ಮಾಡಿ, ಹಿರಿಯರು ನಿಶ್ಚಯಿಸಿದ ವರನನ್ನು ವರಿಸುವ ಆ ತಿರುವು ಇಷ್ಟವೆನಿಸಿತು.

ಅಂದು ಹಂಸಗೀತೆಯ ವೆಂಕಟಸುಬ್ಬಯ್ಯನೇಗಲಿ ಇಂದು ಮುಂಗಾರು ಮಳೆಯ ಕರ್ನಲ್ ಸುಬ್ಬಯ್ಯನೇ ಆಗಲಿ, ಪಾತ್ರ ಯಾವುದಾದರೇನು ನನಗೆ ಕಲಾದೇವಿಯಿತ್ತ ಉಡುಗೊರೆ ಪಾತ್ರಗಳಿಗೆ ಜೀವ ತುಂಬಿ ಪ್ರೇಕ್ಷಕರ ಮನದಲ್ಲಿ ನಿಲ್ಲುವಂತೆ ಮಾಳ್ಪುದು ಎಂಬುದನ್ನು ತಮ್ಮ ನಟನಾ ಕೌಶಲ್ಯದ ಮೂಲಕ ಸಾಬೀತು ಪಡಿಸಿದ್ದಾರೆ ಅನಂತ್‌ನಾಗ್.

ಚಿತ್ರದ ಪ್ರಾರಂಭದಲ್ಲಿ ಹುಡುಗುತನದ ಗಣೇಶ್, ನಟನೆ ಸಾಧಾರಣ ಎನಿಸಿತು. ಆದರೆ ಚಿತ್ರದ ಕಡೆಯಲ್ಲಿ ದೇವದಾಸ್‌ನನ್ನು ಕಳೆದುಕೊಂಡಾಗ ಗಣೇಶ್ ಅವರ ಅಭಿನಯ ಕಂಡು ಉತ್ತಮ ನಿರ್ದೇಶನದಲ್ಲಿ "ಈತ ಬಹಳ ಸೊಗಸಾಗಿ ನಟಿಸಬಲ್ಲ" ಎಂದನಿಸಿತು.

ಅದ್ಯಾಕೊ ನಮ್ಮಲ್ಲಿ ಇತ್ತೀಚೆಗೆ ನಮ್ಮ ಕನ್ನಡ ಹುಡುಗರೇ ವಾಸಿ, ನೋಡೋಕ್ಕೂ ಚೆನ್ನಾಗಿರ್ತಾರೆ, ನಟನೆಯೂ ಪರವಾಗಿಲ್ಲ. ಹೀರೋಯಿನ್‌ಗಳಿಗೇ ಬಂದಿದೆ ಬರಗಾಲ. ಕನ್ನಡದವ್ರು ಕಾಣಿಸೋದೇ ಇಲ್ಲ, ಆಮದಾಗಿ ಬಂದವ್ರಿಗೆ ಒಂದಿದ್ರೆ ಒಂದಿರೋಲ್ಲ.

ನವಿರುತನ, ಕೌಟುಂಬಿಕತೆ ಹಾಗು ವ್ಯಕ್ತಿಗತ ಮೌಲ್ಯಗಳನ್ನು ಎತ್ತಿ ಹಿಡಿದು ಸರಳ ಕಥೆಯನ್ನು ನಿರ್ದೇಶಕ ಯೋಗರಾಜ್ ಭಟ್ ಅಚ್ಚುಕಟ್ಟಾಗಿ ನಿರೂಪಿಸುವ ಪ್ರಯತ್ನ ಪಟ್ಟಿದ್ದಾರೆ. ಪ್ರತಿಯೋರ್ವರ ಮನೆಗಳಲ್ಲಿ ನಿತ್ಯ ನಡೆಯುವ ಸಂಭಾಷಣೆ ಚಿತ್ರದಲ್ಲೂ ಮೂಡಿ ಹೊಸತನ ಎನಿಸುತ್ತದೆ. ಅನಿಸುತಿದೆ ಯಾಕೋ ಹಾಡು ಥಟ್ಟನೆ ತಟ್ಟಿತು. ಚಿತ್ರದುದ್ದಕ್ಕೂ ಸುರಿವ ಮಳೆ, ಪ್ರಕೃತಿಯ ಕ್ಯಾಮರಾ ಸೆರೆ, ಎರಡೂ ಕಾಲೆತ್ತಿ ಢಣಢಣಿಸುವ ಮೊಲ, ಹಸಿರು, ನೀರು, ಬೆಟ್ಟ, ಗಾಳಿ ಎಂಥಾ ಸೌಂದರ್ಯ ನೋಡು, ನಮ್ಮ ಕರುನಾಡ ಬೀಡು ಎನಿಸಿತು. ಕ್ರೌರ್ಯವನ್ನಾಗಲೀ, ಪ್ರೇಮವನ್ನಾಗಲಿ, ಅಶ್ಲೀಲತೆಯನ್ನಾಗಲಿ ಹೆಚ್ಚಾಗಿಸದೆ ಎಷ್ಟಿರಬೇಕೋ ಅಷ್ಟನ್ನೇ ಮಾತ್ರ ಚಿತ್ರದಲ್ಲಿ ಅಳವಡಿಸಿಕೊಂಡಿರುವುದು ಪ್ರಶಂಸನೀಯ.

ಪಿಕ್ಚರ್ ಮುಗಿದಂತೆ ಪ್ರಕಾಶ್ ಅವರನ್ನು ಭೇಟಿಯಾಗಿ ಒಟ್ಟಿನಲ್ಲಿ ಪಿಕ್ಚರ್ ಚೆನ್ನಾಗಿದೇಪ್ಪಾ ಎನ್ನುತ್ತಿದ್ದಂತೇ ಬಿಂಟನ್, ಬಾತಮ್ (ಇವೆರಡೂ ಇಂಡೋನೇಶಿಯಾಕ್ಕೆ ಸೇರಿದ ದ್ವೀಪಗಳೆ, ಸಿಂಗಪುರಕ್ಕೆ ಬಹಳ ಹತ್ತಿರದಲ್ಲಿದೆ.) ಮತ್ತೆ ಜೆ.ಬಿ. (ಜೋಹರ್ ಬಾರೂ, ಮಲೇಷಿಯಾಕ್ಕೆ ಸೇರಿದ್ದು) ಕನ್ನಡಿಗರೇ ಅಲ್ಲದೆ ಕನ್ನಡೇತರರು ಬಂದಿದ್ರು ಈ ಚಿತ್ರ ನೋಡಲು ಎಂದಾಗ ಕನ್ನಡ ಚಿತ್ರದ ಬಗ್ಗೆ ಹೆಮ್ಮೆ ಮೂಡದಿರುತ್ತದೆಯೇ?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+