IPL 2026 Qualifier: ಆರ್‌ಸಿಬಿ ನಾಯಕ ರಜತ್ ಪಾಟಿದಾರ್ ಬೆಂಕಿಯಾಟಕ್ಕೆ ಬೆಚ್ಚಿದ ಜಿಟಿ ಬೌಲರ್ಸ್, 255 ರನ್‌ಗಳ ಬೃಹತ್ ಗುರಿ
RCB Vs GT IPL 2026 Qualifier: ಧರ್ಮಶಾಲಾದಲ್ಲಿ ಮಂಗಳವಾರ (ಮೇ 26) ನಡೆದ ಐಪಿಎಲ್ 2026ರ ರೋಚಕ ಕ್ವಾಲಿಫೈಯರ್ 1 ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ರಜತ್ ಪಾಟಿದಾರ್ ಕೇವಲ 33 ಎಸೆತಗಳಲ್ಲಿ 93 ರನ್ ಸಿಡಿಸಿ ಅಬ್ಬರಿಸಿದ್ದಾರೆ. ಇವರ ಈ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಆರ್‌ಸಿಬಿಯು ಗುಜರಾತ್ ಟೈಟಾನ್ಸ್ ವಿರುದ್ಧ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 254 ರನ್‌ಗಳ ಬೃಹತ್ ಮೊತ್ತವನ್ನು ಪೇರಿಸಿದೆ.
ಟಾಸ್ ಗೆದ್ದ ಗುಜರಾತ್ ಟೈಟಾನ್ಸ್ ನಾಯಕ ಶುಭ್‌ಮನ್ ಗಿಲ್ ಅವರು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆಯೇ ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ನಾಯಕ ರಜತ್ ಪಾಟಿದಾರ್ ಅಬ್ಬರದ ಬ್ಯಾಟಿಂಗ್ ನೆರವಿನಿಂದ 254 ರನ್‌ಗಳನ್ನು ಪೇರಿಸಿತು. ಈ ಮೂಲಕ ಜಿಟಿಗೆ 255 ರನ್‌ಗಳ ಬೃಹತ್ ಟಾರ್ಗೆಟ್ ನೀಡಿದೆ.

ಆರ್‌ಸಿಬಿಯು 254 ರನ್ ಗಳಿಸುವ ಮೂಲಕ ಐಪಿಎಲ್ ಪ್ಲೇ-ಆಫ್ ಇತಿಹಾಸದಲ್ಲೇ ಅತ್ಯಧಿಕ ಮೊತ್ತ ದಾಖಲಿಸಿದ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಆರಂಭಿಕರಾಗಿ ಕಣಕ್ಕಿಳಿದ ವಿರಾಟ್ ಕೊಹ್ಲಿ ಅವರು 43 ರನ್ ಗಳಿಸಿ, ಐಪಿಎಲ್ ಇತಿಹಾಸದಲ್ಲಿ ಸತತ ನಾಲ್ಕು ಸೀಸನ್‌ಗಳಲ್ಲಿ 600ಕ್ಕೂ ಹೆಚ್ಚು ರನ್ ಗಳಿಸಿದ ಮೊದಲ ಆಟಗಾರ ಎಂಬ ಐತಿಹಾಸಿಕ ದಾಖಲೆ ಬರೆದಿದ್ದಾರೆ.
ಮಿಂಚಿದ ಆರ್‌ಸಿಬಿ ನಾಯಕ ಪಾಟಿದಾರ್
ಆರ್‌ಸಿಬಿ ಪರ ನಾಯಕ ಪಾಟಿದಾರ್ ಕೇವಲ 33 ಎಸೆತಗಳಲ್ಲಿ 5 ಬೌಂಡರಿ, 9 ಸಿಕ್ಸರ್‌ಗಳ ಸಹಿತ ಅಜೇಯ 93 ರನ್‌ಗಳನ್ನು ಕಲೆಹಾಕಿದ್ದಾರೆ. ಉಳಿದಂತೆ ವಿರಾಟ್ ಕೊಹ್ಲಿ 43(25), ವೆಂಕಟೇಶ್ ಅಯ್ಯರ್ 19(7), ದೇವದತ್ ಪಡಿಕ್ಕಲ್ 30(19), ಜಿತೇಶ್ ಶರ್ಮಾ ಅಜೇಯ 15 (5) ರನ್ ಸಿಡಿಸಿದ್ದಾರೆ. ಗುಜರಾತ್ ನಾಯಕ ಶುಭ್‌ಮನ್ ಗಿಲ್ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡರೂ ಆರ್‌ಸಿಬಿ ಬ್ಯಾಟರ್‌ಗಳ ಅಬ್ಬರವನ್ನು ತಡೆಯಲು ವಿಫಲರಾದರು. ಇನ್ನೂ ಈ ಪಂದ್ಯದಲ್ಲಿ ಗೆಲ್ಲುವ ತಂಡವು ನೇರವಾಗಿ ಐಪಿಎಲ್ 2026ರ ಫೈನಲ್ ಪ್ರವೇಶಿಸಲಿದೆ.
ದುಬಾರಿಯಾದ ಗುಜರಾತ್ ಟೈಟಾನ್ಸ್ ಬೌಲರ್ಸ್
ಈ ಐಪಿಎಲ್ ಸೀಸನ್‌ನಲ್ಲಿ ಬಲಿಷ್ಠ ಬೌಲಿಂಗ್ ಪಡೆಯನ್ನು ಹೊಂದಿರುವ ತಂಡ ಗುಜರಾತ್ ಟೈಟಾನ್ಸ್ ಆಗಿದೆ. ಆದರೆ ಅದೇ ಬೌಲರ್‌ಗಳ ವಿರುದ್ಧ ಇಂದಿನ ಪಂದ್ಯದಲ್ಲಿ ಆರ್‌ಸಿಬಿ ಬ್ಯಾಟರ್‌ಗಳು ದಂಡಯಾತ್ರೆಯನ್ನೇ ಮಾಡಿದರು. ಜಿಟಿ ಪರ ಬೌಲಿಂಗ್ ಮಾಡಿದ ಕಗಿಸೊ ರಬಾಡ ಎರಡು ವಿಕೆಟ್ ಕಿತ್ತರೂ ಸಹ 54 ರನ್ ನೀಡಿ ದುಬಾರಿ ಎನಿಸಿಕೊಂಡರು. ಉಳಿದಂತೆ ಪ್ರಸಿದ್ಧ್ ಕೃಷ್ಣ 53/1 ರನ್, ಮೊಹಮ್ಮದ್ ಸಿರಾಜ್ 46, ಜೇಸನ್ ಹೋಲ್ಡರ್ 39/2, ಕುಲ್ವಂತ್ ಖೆಜ್ರೋಲಿಯಾ 31, ರಶೀದ್ ಖಾನ್ 29 ರನ್ ಬಿಟ್ಟುಕೊಟ್ಟರು. ಒಟ್ಟಿನಲ್ಲಿ ಗುಜರಾತ್ ಟೈಟಾನ್ಸ್ ಬೌಲರ್‌ಗಳು ಹೆಚ್ಚು ರನ್ ಬಿಟ್ಟುಕೊಟ್ಟು ದುಬಾರಿಯಾದರು ಅಂದ್ರೆ ತಪ್ಪಾಗಲಾರದು.
ಆರ್‌ಸಿಬಿ ಪ್ಲೇಯಿಂಗ್ 11: ವಿರಾಟ್ ಕೊಹ್ಲಿ, ವೆಂಕಟೇಶ್ ಅಯ್ಯರ್, ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್ (ನಾಯಕ), ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ಜೇಕಬ್ ಡಫಿ, ಭುವನೇಶ್ವರ್ ಕುಮಾರ್, ಜೋಶ್ ಹ್ಯಾಜಲ್‌ವುಡ್, ರಸಿಖ್ ದಾರ್ ಸಲಾಮ್.
ಗುಜರಾತ್ ಟೈಟಾನ್ಸ್ ಪ್ಲೇಯಿಂಗ್ 11: ಶುಭ್‌ಮನ್ ಗಿಲ್ (ನಾಯಕ), ಸಾಯಿ ಸುದರ್ಶನ್, ಜೋಸ್ ಬಟ್ಲರ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಜೇಸನ್ ಹೋಲ್ಡರ್, ನಿಶಾಂತ್ ಸಿಂಧು, ರಶೀದ್ ಖಾನ್, ಕುಲ್ವಂತ್ ಖೆಜ್ರೋಲಿಯಾ, ಕಗಿಸೊ ರಬಾಡ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ.












Click it and Unblock the Notifications