ಬೆಂಗಳೂರಲ್ಲಿ ಎಲ್ಲೆಂದರಲ್ಲಿ ಬೀದಿ ನಾಯಿಗಳಿಗೆ ಆಹಾರ ನೀಡುವಂತಿಲ್ಲ! ಪಾಲಿಕೆಯಿಂದ ರೂಲ್ಸ್ ಜಾರಿ
ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯಲ್ಲಿ ಬೀದಿ ನಾಯಿಗಳಿಗೆ ಆಹಾರ ನೀಡುವ ವಿಚಾರ ಹೆಚ್ಚು ಸದ್ದು ಮಾಡುತ್ತಿದೆ. ಈ ಹಿಂದೆ ಬೀದಿ ನಾಯಿಗಳಿಗೆ ಬಿರಿಯಾನಿ ಘೋಷಣೆ ಮಾಡಿ ಸರ್ಕಾರ ಟೀಕೆ ಎದುರಿಸಿತ್ತು. ಇತ್ತೀಚೆಗೆ ಅವುಗಳಿಗೆ ಆಹಾರ ಹಾಕಲು ಜಾಗ ಗುರುತಿಸಿದ್ದ ಪಾಲಿಕೆ ಇದೀಗ ಜನರು ನಾಯಿಗಳಿಗೆ ಆಹಾರ ನೀಡಲು ರೂಲ್ಸ್ ಜಾರಿಗೊಳಿಸಿದೆ. ಒಂದು ವೇಳೆ ಶ್ವಾನಪ್ರಿಯರು ನಿಯಮ ಮೀರಿ ಬೀದಿ ನಾಯಿಗಳಿಗೆ ಆಹಾರ ಹಾಕಿದ ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಸಲಾಗಿದೆ.
ಮಾನ್ಯ ಸರ್ವೋಚ್ಚ ನ್ಯಾಯಾಲಯದ ಆದೇಶಗಳು, ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ 1960 ಮತ್ತು ಪ್ರಾಣಿಗಳ ಜನನ ನಿಯಂತ್ರಣ ನಿಯಮಗಳು-2023 ನಿಯಮಾವಳಿಗಳ ಅನ್ವಯ ಸಾರ್ವಜನಿಕ ಆರೋಗ್ಯ, ಸುರಕ್ಷತೆ ಹಾಗೂ ಪ್ರಾಣಿ ಕಲ್ಯಾಣದ ಸಮತೋಲನ ಕಾಪಾಡಲು ಬೆಂಗಳೂರು ಉತ್ತರ ನಗರ ಪಾಲಿಕೆ ಮುಂದಾಗಿದೆ. ಈ ನಿಟ್ಟಿನಲ್ಲಿ ಬೀದಿ ನಾಯಿಗಳಿಗೆ ಆಹಾರ ನೀಡಲು ಮಾರ್ಗಸೂಚಿ ಜಾರಿಗೊಳಿಸಲಾಗಿದೆ ಎಂದು ಪಾಲಿಕೆ ಆಯುಕ್ತ ಪೋಮ್ಮಲ ಸುನೀಲ್ ಕುಮಾರ್ ತಿಳಿಸಿದ್ದಾರೆ.

ನಗರ ಪ್ರದೇಶಗಳಲ್ಲಿ ಬೀದಿ ನಾಯಿಗಳಿಗೆ ಆಹಾರ ನೀಡುವುದು ಸಂಪೂರ್ಣ ನಿಷೇಧಿತವಲ್ಲ. ಆದರೆ ಆಹಾರ ನೀಡುವ ಪ್ರಕ್ರಿಯೆಯಿಂದ ಸಾರ್ವಜನಿಕರಿಗೆ ತೊಂದರೆ, ಅಸ್ವಚ್ಛತೆ, ವಾಹನ ಸಂಚಾರಕ್ಕೆ ಅಡಚಣೆ ಹಾಗೂ ಮಕ್ಕಳ ಮತ್ತು ಹಿರಿಯ ನಾಗರಿಕರ ಸುರಕ್ಷತೆಗೆ ಧಕ್ಕೆಯಾಗಬಾರದು ಎಂಬುದು ಮಾನ್ಯ ನ್ಯಾಯಾಲಯಗಳ ಸ್ಪಷ್ಟ ನಿರ್ದೇಶನವಾಗಿದೆ.
ಈ ಸ್ಥಳಗಳಲ್ಲಿ ನಾಯಿಗಳಿಗೆ ಆಹಾರ ಹಾಕಬೇಡಿ
ಈ ಹಿನ್ನೆಲೆಯಲ್ಲಿ ಬೀದಿ ನಾಯಿಗಳಿಗೆ ಆಹಾರ ನೀಡಲು ಆಸಕ್ತಿ ಹೊಂದಿರುವ ಪ್ರಾಣಿ ಪ್ರೇಮಿಗಳು, ಸ್ವಯಂ ಸೇವಕರು, ಸಂಘ ಸಂಸ್ಥೆಗಳು ಹಾಗೂ ಸೇವಾದಾರರು ಸಾರ್ವಜನಿಕ ರಸ್ತೆ, ಪಾದಚಾರಿ ಮಾರ್ಗ, ಬಸ್ ನಿಲ್ದಾಣ, ಮಾರುಕಟ್ಟೆ ಪ್ರದೇಶ, ಶಾಲೆ, ಕಾಲೇಜು, ಆಸ್ಪತ್ರೆ, ಅಂಗನವಾಡಿ, ಧಾರ್ಮಿಕ ಸ್ಥಳಗಳು, ಸ್ಪೋರ್ಟ್ಸ್ ಕ್ಲಬ್, ಕ್ರೀಡಾಂಗಣ, ಮಕ್ಕಳ ಆಟದ ಮೈದಾನ ಸೇರಿದಂತೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಓಡಾಡುವ ಪ್ರದೇಶಗಳಲ್ಲಿ ಆಹಾರ ನೀಡಬಾರದು ಎಂದು ಸೂಚಿಸಲಾಗಿದೆ.
ಸಾರ್ವಜನಿಕರಿಗೆ ತೊಂದರೆ ಹಾಗೂ ವಾಹನ ಸಂಚಾರಕ್ಕೆ ಅಡಚಣೆ ಆಗದ ಸ್ಥಳಗಳನ್ನು ಗುರುತಿಸಿ, ಸಂಬಂಧಿತ ವಲಯ ಕಚೇರಿ ಅಥವಾ ಪಶುಪಾಲನಾ ವಿಭಾಗದ ಗಮನಕ್ಕೆ ತರಲು ಮನವಿ ಮಾಡಿದರು.
ಶೀಘ್ರ 'ಫಿಡಿಂಗ್ ಸ್ಟಾಟ್' ಅನುಮೋದನೆ
ಸ್ವೀಕರಿಸಲಾದ ಪ್ರಸ್ತಾವನೆಗಳ ಕುರಿತು ನಗರ ಪಾಲಿಕೆಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸುತ್ತಿದ್ದಾರೆ. ಸಾರ್ವಜನಿಕ ಹಿತಾಸಕ್ತಿ, ಮಕ್ಕಳ ಹಾಗೂ ಹಿರಿಯ ನಾಗರಿಕರ ಸುರಕ್ಷತೆ, ಸ್ವಚ್ಛತೆ ಮತ್ತು ಆರೋಗ್ಯದ ಮಾನದಂಡಗಳು, ವಾಹನ ಸಂಚಾರದ ಮೇಲೆ ಪರಿಣಾಮ, ಸ್ಥಳೀಯರ ಅಭಿಪ್ರಾಯ, ನಾಯಿಗಳ ವರ್ತನೆ ಹಾಗೂ ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆ ಮೊದಲಾದ ಅಂಶಗಳನ್ನು ಪರಿಗಣಿಸಿ ಮಾತ್ರ ಅಧಿಕೃತ ಆಹಾರ ಹಾಕುವ ಸ್ಥಳಗಳಿಗೆ (Feeding Spot) ಒಪ್ಪಿಗೆ ಕೊಡಲಾಗುವುದು ಎಂದರು.
ನಿಗದಿತ ಸ್ಥಳಗಳಲ್ಲಿ ಮಾತ್ರ ನಾಯಿಗಳಿಗೆ ಆಹಾರ ನೀಡಿ
ಅನುಮೋದಿತ ಸ್ಥಳಗಳಲ್ಲಿ ಆಹಾರ ನೀಡುವವರು ನಿಗದಿತ ಸಮಯದಲ್ಲಿ ಮಾತ್ರ ಆಹಾರ ನೀಡಬೇಕು. ಆಹಾರ ನೀಡಿದ ಬಳಿಕ ಉಳಿದ ಆಹಾರ, ಪ್ಲಾಸ್ಟಿಕ್ ಹಾಗೂ ತ್ಯಾಜ್ಯಗಳನ್ನು ತೆರವುಗೊಳಿಸಿ ಸ್ಥಳ ಸ್ವಚ್ಛವಾಗಿರಿಸಬೇಕು. ಸಾರ್ವಜನಿಕ ರಸ್ತೆ ಹಾಗೂ ಪಾದಚಾರಿ ಮಾರ್ಗಗಳನ್ನು ತಡೆದು ಆಹಾರ ನೀಡಬಾರದು. ನಾಯಿಗಳು ಗುಂಪುಗೂಡಿ ಸಾರ್ವಜನಿಕರಿಗೆ ಭಯ ಅಥವಾ ತೊಂದರೆ ಉಂಟು ಮಾಡದಂತೆ ನೋಡಿಕೊಳ್ಳಬೇಕು ಎಂದು ಪಾಲಿಕೆ ಕಟ್ಟುನಿಟ್ಟಾಗಿ ತಿಳಿಸಿದೆ.
ಶಾಲಾ ಸಮಯ, ಆಸ್ಪತ್ರೆ ಪ್ರದೇಶ ಹಾಗೂ ಹೆಚ್ಚಿನ ಜನಸಂಚಾರ ಇರುವ ವೇಳೆಯಲ್ಲಿ ಆಹಾರ ನೀಡುವುದನ್ನು ತಪ್ಪಿಸಬೇಕು. ಸಾರ್ವಜನಿಕರು ನಾಯಿಗಳ ಮೇಲೆ ಕ್ರೌರ್ಯ ತೋರಬಾರದು ಹಾಗೂ ಆಹಾರ ನೀಡುವವರು ಸಾರ್ವಜನಿಕರೊಂದಿಗೆ ವಾಗ್ವಾದಕ್ಕೆ ಇಳಿಯದೇ ಪಾಲಿಕೆ ಮಾರ್ಗಸೂಚಿ ಪಾಲಿಸುವಂತೆ ಕೋರಿದರು.
ಪಾಲಿಕೆಯ ವತಿಯಿಂದ ಪ್ರಾಣಿಗಳ ಜನನ ನಿಯಂತ್ರಣ (ABC), ರೇಬೀಸ್ ವಿರೋಧಿ ವ್ಯಾಕ್ಸಿನೇಷನ್ (ARV) ಹಾಗೂ ಸಾಮೂಹಿಕ ನಾಯಿ ವ್ಯಾಕ್ಸಿನೇಷನ್ (MDV) ಕಾರ್ಯಕ್ರಮಗಳನ್ನು ಹಂತ ಹಂತವಾಗಿ ಜಾರಿಗೆ ತರಲಾಗುತ್ತದೆ. ಬೀದಿ ನಾಯಿಗಳ ಸಂಖ್ಯೆಯನ್ನು ವೈಜ್ಞಾನಿಕವಾಗಿ ನಿಯಂತ್ರಣ, ರೇಬಿಸ್ ತಡೆಗೆ ಪಾಲಿಕೆ ಗುರಿ ಹಾಕಿಕೊಂಡಿದೆ.
ಸಾರ್ವಜನಿಕರು ಬೀದಿ ನಾಯಿಗಳ ವಿಚಾರದಲ್ಲಿ ಮಾನವೀಯತೆ ತೋರಬೇಕು. ಅವುಗಳಿಗೆ ಹಿಂಸೆ ನೀಡುವುದು, ವಿಷ ಹಾಕುವುದು ಅಥವಾ ಕಾನೂನು ಬಾಹಿರವಾಗಿ ಸ್ಥಳಾಂತರಿಸುವುದು ಶಿಕ್ಷಾರ್ಹ ಅಪರಾಧವಾಗಿದೆ. ಅದೇ ರೀತಿ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡುವ ರೀತಿಯಲ್ಲಿ ಅನಧಿಕೃತವಾಗಿ ಆಹಾರ ನೀಡುವುದನ್ನೂ ನಿಷೇಧಿಸಲಾಗಿದೆ. ಪಾಲಿಕೆಯೊಂದಿಗೆ ಜನರು, ಪ್ರಾಣಿ ಪ್ರೇಮಿಗಳು, ನಿವಾಸಿ ಸಂಘಗಳು ಸಹಕರಿಸುವಂತೆ ಮನವಿ ಮಾಡಲಾಗಿದೆ.













Click it and Unblock the Notifications