Monsoon Rain: ಮುಂಗಾರು ಆಗಮನ ವಿಳಂಬ, ಜೂನ್ ಮೊದಲ ವಾರ ಗುಡ್‌ನ್ಯೂಸ್ ಸಾಧ್ಯತೆ: ಐಎಂಡಿ
Monsoon Rain Forecast: ಪ್ರಸಕ್ತ ವರ್ಷ 2026ರಲ್ಲಿ ಅವಧಿಗೂ ಮುನ್ನವೇ ಮುಂಗಾರು ಮಳೆ (Monsoon Rain 2026) ಕೇರಳ ಪ್ರವೇಶಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಭವಿಷ್ಯ ನುಡಿದಿತ್ತು. ಸದ್ಯ ಬದಲಾದ ಹವಾಮಾನ ಕಾರಣಗಳಿದಿಂದಾಗಿ ಮುಂಗಾರು ಮಳೆ ಕೇರಳ ಪ್ರವೇಶಿಸುವುದು ತಡವಾಗಿದ್ದು, ಎಂದಿನಂತೆ ಜೂನ್ 1ರಂದು ಆಗಮಿಸುವ ಸಾಧ್ಯತೆ ಇದೆ. ಐಎಂಡಿ ಈ ಮೊದಲು ತಿಳಿಸಿದಂತೆ ಮೇ 26ರಂದು ಮಂಗಳವಾರ ಮುಂಗಾರು ಮಾರುತಗಳು ಕೇರಳವನ್ನು ಪ್ರವಶಿಸಿಲ್ಲ.
ಪ್ರತಿ ವರ್ಷ ಜೂನ್ ಮೊದಲ ವಾರದಲ್ಲಿ, ನೈಋತ್ಯ ಮುಂಗಾರು (Monsoon) ಕೇರಳಕ್ಕೆ ಆಗಮಿಸುತ್ತದೆ. ಭಾರತದ ಆರ್ಥಿಕತೆ ಮಟ್ಟಿಗೆ ಇದು ಮಹತ್ವದ ಹವಾಮಾನ ವ್ಯವಸ್ಥೆಯಾಗಿದೆ. ಇಡೀ ದೇಶಕ್ಕೆ ನಿರೀಕ್ಷಿತ ಪರಿಹಾರ ತರುತ್ತದೆ. ಮುಂಗಾರು ಮೊದಲು ಕೇರಳವನ್ನು ತಲುಪಿ, ಅಲ್ಲಿಂದ ಮುಂದಿನ ಒಂದು ವಾರದಲ್ಲಿ ದಕ್ಷಿಣ ರಾಜ್ಯಗಳ ಮೂಲಕ ಉತ್ತರ ಭಾರತದ ರಾಜ್ಯಗಳನ್ನು ವ್ಯಾಪಿಸುತ್ತದೆ. ಭಾರತದ ವಾರ್ಷಿಕ ಸುಮಾರು ಶೇ.70 ರಷ್ಟು ಮಳೆ ಇದೇ ಮುಂಗಾರಿನಿಂದ ಬರುತ್ತದೆ. ಹೀಗಾಗಿ ಮುಂಗಾರು ದೇಶಕ್ಕೆ ನೀರ್ಣಾಯಕವಾಗಿದೆ.

ಪ್ರಸ್ತುತ ಹವಾಮಾನ ಮುನ್ಸೂಚನೆ ಪ್ರಕಾರ, ಜೂನ್ 1ಇಲ್ಲವೇ ಮೊದಲ ವಾರದಲ್ಲಿ ಮುಂಗಾರು ಮಳೆಯ ಅಧಿಕೃತ ಪ್ರವೇಶ ಆಗಲಿದೆ. ಈಗಾಗಲೇ ಸಮುದ್ರಮಟ್ಟದಲ್ಲಿ ಉಂಟಾದ ಬದಲಾವಣೆ ಕಾರಣದಿಂದ ಕರ್ನಾಟಕ, ತಮಿಳುನಾಡು, ಕೇರಳ ಸೇರಿ ಕೆಲವು ದಕ್ಷಿಣ ರಾಜ್ಯಗಳಲ್ಲಿ ತೀವ್ರ ಶಾಖದ ವಾತಾವರಣ ಸಂಪೂರ್ಣ ತಗ್ಗಿದೆ. ಈ ವಾತಾವರಣವನ್ನು ಬಿಸಿಲಿನಿಂದ ಕಂಗೆಟ್ಟಿದ್ದ ಜನರು ಸ್ವಾಗತಿಸಿದ್ದಾರೆ.
ಮುಂಗಾರು ಘೋಷಣೆಗೆ ಮುನ್ನ ಪರಿಗಣಿಸುವ ಮಾನದಂಡಗಳು
ಹವಾಮಾನ ಇಲಾಖೆಯು ಮುಂಗಾರಿನ ಮುನ್ಸೂಚನೆ ನೀಡುವ ಮೊದಲು ಮೂರು ಪ್ರಮುಖ ಮಾನದಂಡಗಳು ಹೊಂದಾಣಿಕೆ ಆಗಬೇಕು. ಕೇರಳ ವ್ಯಾಪ್ತಿಯಲ್ಲಿ ಗುರುತಿಸಲಾದ 14 ಹವಾಮಾನ ಕೇಂದ್ರಗಳಲ್ಲಿ ಕನಿಷ್ಠ ಶೇ. 60 ಕೇಂದ್ರಗಳು ಸತತ ಎರಡು ದಿನಗಳವರೆಗೆ 2.5 ಮಿ.ಮೀ. ಅಥವಾ ಅದಕ್ಕಿಂತ ಹೆಚ್ಚು ಮಳೆ ದಾಖಲಿಸಬೇಕು. ಇದರೊಂದಿಗೆ ನಿರ್ದಿಷ್ಟ ಗಾಳಿ ಮತ್ತು ಮೋಡದ ಹೊದಿಕೆಯ ಮಿತಿಗಳನ್ನು ಪೂರೈಸಬೇಕು. ಈ ಮಾನದಂಡಗಳಂತೆ ಯಾವೊಂದು ನಿರೀಕ್ಷೆಗಳು ಪೂರ್ಣಗೊಂಡಿಲ್ಲ. ಹೀಗಾಗಿ ಮುಂಗಾರು ತಡವಾಗಿದ್ದು, ಕೆಲವೇ ದಿನಗಳಲ್ಲಿ ಆಗಮಿಸಲಿದೆ ಎಂದು ಹೇಳಲಾಗಿದೆ. ಹವಾಮಾನದ ಮಟ್ಟಿಗೆ ಮುನ್ಸೂಚನೆ ನೀಡಿದ ಮೇಲೂ ಒಂದಷ್ಟು ಬದಲಾವಣೆಗಳು ಆಗುವುದು ತೀರಾ ಸಜಜವಾಗಿದೆ.
ಕೇರಳ ರಾಜ್ಯಾದ್ಯಂತ ಭಾರೀ ಮಳೆ ದಾಖಲು
ಅಧಿಕೃತ ಮುಂಗಾರು ಘೋಷಣೆಗಾಗಿ ಕಾಯುತ್ತಿರುವ ಸಂದರ್ಭದಲ್ಲಿ, ಕೇರಳ ರಾಜ್ಯದಾದ್ಯಂತ ಈಗಾಗಲೇ ಸಾಧಾರಣದಿಂದ ಭಾರೀ ಮಳೆಯಾಗುತ್ತಿದೆ. ತಿರುವನಂತಪುರಂ, ಕೊಲ್ಲಂ, ಆಲಪ್ಪುಳ ಮತ್ತು ಎರ್ನಾಕುಲಂ ಸೇರಿದಂತೆ ನಾಲ್ಕು ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರೀ ಮಳೆ ಆಗುತ್ತಿದೆ. ಈ ಭಾಗಗಳಿಗೆ ಐಎಂಡಿ ಯೆಲ್ಲೋ ಅಲರ್ಟ್ ನೀಡಿದೆ.
ಕೇರಳ ಮತ್ತು ಲಕ್ಷದ್ವೀಪಗಳಿಗೆ ಮುಂದಿನ ಒಂದು ವಾರ ಕಾಲ ಭಾರೀ ಮಳೆ ಮುಂದುವರಿಯುವ ಸಾಧ್ಯತೆ ಇದೆ. ಕರ್ನಾಟಕ, ತಮಿಳುನಾಡಿನಲ್ಲಿ ಸಾಧಾರಣ ಮಳೆ ಎಚ್ಚರಿಕೆ ನೀಡಲಾಗಿದೆ. ಕೆಲವೆಡೆ ಧಾರಾಕಾರ ಮಳೆಯಾಗಲಿದೆ. ದೇಶದ ಉತ್ತರ, ಮಧ್ಯ ಮತ್ತು ಪಶ್ಚಿಮ ಭಾಗದ ರಾಜ್ಯಗಳಲ್ಲಿ ಶಾಖದ ಅಲೆಯುವ ಮುಂದುವರಿದಿದೆ. ಮುಂದಿನ ಎರಡು ವಾರಗಳಲ್ಲಿ ಈ ಭಾಗದಲ್ಲೂ ಮಳೆಯ ಸಿಂಚನವಾಗಿ, ತಂಪು ಗಾಳಿ ಬೀಸುವ ಜೊತೆಗೆ ಶಾಖದ ಅಲೆಗೆ ಮುಕ್ತಿ ಸಿಗಲಿದೆ. ದೆಹಲಿಯ ವಿವಿಧೆಡೆ ಗರಿಷ್ಠ ತಾಪಮಾನ 45 ಡಿಗ್ರಿ ಸೆಲ್ಸಿಯಸ್‌ನಷ್ಟು ದಾಖಲಾಗಿದೆ.













Click it and Unblock the Notifications