ಕೆರೋಲಿನದಲ್ಲೊಂದು ‘ಹರಟೆ-ಕಟ್ಟೆ’
- ಸವಿತಾ ರವಿಶಂಕರ್
[email protected]
‘ಹರಟೆ-ಕಟ್ಟೆ’ !
ಏನಿದು ಎಂದಿರಾ ? ಕೆರೋಲಿನದ ಕನ್ನಡ ಸಾಹಿತ್ಯಾಭಿಮಾನಿಗಳು ಸೇರಿ ರಚಿಸಿಕೊಂಡಿರುವ ಒಂದು ಸಾಹಿತ್ಯ ಸಂಘ. ಹಳ್ಳಿಯಲ್ಲಿ , ಊರ ಮುಂದಲ ದೇಗುಲದ ಬಳಿಯ ಅಶ್ವತ್ಥಕಟ್ಟೆಯಿರುತ್ತದ್ದಲ್ಲ , ಆ ಕಟ್ಟೆಯಲ್ಲಿ ಸಂಜೆಗತ್ತಲಲ್ಲಿ ನಡೆಯುವ ಹರಟೆಕೂಟಗಳಿರುತ್ತವಲ್ಲ , ಅಂತಾದ್ದೇ ಒಂದು ವೇದಿಕೆಯಿದು. ವ್ಯತ್ಯಾಸವೆಂದರೆ ಇಲ್ಲಿ ಅರಳಿಕಟ್ಟೆಯಿಲ್ಲ , ಆದರೆ ಆಸಕ್ತರಿಗೆ ಬರವಿಲ್ಲ .
ಹರಟೆಕಟ್ಟೆಯ ಉದ್ದೇಶವಾದರೂ ಏನು ? ಹರಟೆಕಟ್ಟೆಯ ಚಟುವಟಿಕೆಗಳೇನು ? ಉತ್ತರಕ್ಕಾಗಿ ಕಳೆದ ಫೆಬ್ರವರಿಯ ಹರಟೆಕಟ್ಟೆಯ ಕಾರ್ಯಕ್ರಮದ ವಿವರಗಳನ್ನು ಓದಿ. ಹರಟೆಮಲ್ಲರ ಈ ಕಾರ್ಯಕ್ರಮದ ಕಿರು ಪರಿಚಯ ಪದ್ಯರೂಪದಲ್ಲಿವೆ.
*
‘ಹರಟೆಕಟ್ಟೆ’
‘ಹರಟೆ-ಕಟ್ಟೆ’ ಮಂದಿಯೆಲ್ಲಾ ಸಂಜೆಮ್ಯಾಗೆ ಸೇರಿಕೊಂತ
ಕಟ್ಟ್ಯಾಗೆ ಒಟ್ಟಾಗೆ ಸೇರ್ಕೊಂಡ್ರು
ಹಾಡುಹಸೆ, ನಗೆನಾಟ್ಕ, ಗದ್ಯಪದ್ಯ ಓದೋಣಾಂತ
ಕಟ್ಟ್ಯಾಗೆ ಒಟ್ಟಾಗೆ ಸೇರ್ಕೊಂಡ್ರು.
ಹರಟೆ-ಮಲ್ಲಿರೆಲ್ಲಾ ಸೇರಿ ಸಜ್ಜಾಗಿ ಕುಂತ್ಕೋತ
ಸೊಗಸಾಗಿ ಸ್ವಾಗತಗಾನ ಹಾಡುದ್ರು..,
ಹರಟೆ-ಮಲ್ಲರೆಲ್ಲಾ ಸೇರಿ ತಮಾಷೆ ಹೇಳ್ಕೊಂತ
ಗೊಳ್ ಅಂತ ಜನಗೊಳ್ನ ನಗುಸ್ಬುಟ್ರು.
ಪಕ್ಕದೂರಿಂದ್ ಹೊಂಟ್ಕೊಂಡ್, ‘ಅತಿಥಿ’ಗಳಾಗ್ ಬಂದ್ಕೊಂಡು
ವತ್ಸಣ್ಣ-ಪುರ್‌ಷಣ್ಣ ಕಟ್ಟ್ಯಾಗ್ ಸೇರ್ಕೊಂಡ್ರು
ಪ್ರಸಂಗ ಹೇಳ್ಕೊಂತ, ನಗೆಮಾತನಾಡ್ಕೊಂತ
ಕಟ್ಟೆಮಂದಿಗ್ ಮನೋರಂಜ್‌ನೆ ನೀಡುದ್ರು.
ಅಪ್ಪಾನ ತೊಡೆಮ್ಯಾಲೆ ಕುಂತ್ಕೋತ ಪ್ರಾರ್ಥನಾ
ಟೂಟೂಟೂ ಬೇಡಪ್ಪ ಪದ ಹೇಳ್ತು,
ಅಪ್ಪಾನ ಬಗಲಾಗೆ ಕುಂತ್ಕೋತ ಸಂಜನಾ
ನಾಯಿಮರಿ ತಿಂಡಿಬೇಕಾ ಹೇಳ್‌ಬುಡ್ತು.
ಕಟ್ಟೆಮ್ಯಾಗಲ್ ಮಂದಿಯೆಲ್ಲಾ ಕೇಳ್ಲೀ ಎಂದು ಶ್ರೀಕಾಂತಣ್ಣ
ರಾಗ್ವಾಗಿ ರತ್ನನ್‌ಪದಗಳ್ನೋದುದ್ರು
ರವಿಯಣ್ಣ, ರಿಶಿಯಣ್ಣ, ಗಣಪತಿಯಣ್ಣ ಎಲ್ಲಾ ಸೇರಿ
ಕವನ, ಕಾವ್ಯಾಮೃತವ ಹರಿಸುದ್ರು.
ಕನ್ನಡ ಬಿಡಬೇಡಿ, ಕನ್ನಡ ಮರಿಬೇಡಿ
ಕನ್ನಡ್ದಲ್ ಒಡನಾಡಿ ಎಂದು ಕೇಳ್ಕೊಂಡ್ರು
ಹೈಕಳ್ಗು, ಮಕ್ಕಳ್ಗು, ಕನ್ನಡ ಕಲ್ಸಿ ಎಂದು
ಸ್ವರ್ಣಮ್ಮ ಬುದ್ಧಿಮಾತ ಹೇಳುದ್ರು.
ತಬಲಾನ ತಟ್ಕೊಂಡು, ಮಟ್ಟ್ವಾಗಿ ಕುಟ್ಕೊಂಡು
ಸೊಗಸಾಗಿ ರವಿಯಣ್ಣ ಹಾಡುದ್ರು
ಪದಗೊಳ್ನ ಕಟ್ಕೊಂಡು, ತಾಳಾನ ತಟ್ಕೊಂಡು
ಖುಶಿಯಾಗಿ ಸವಿತಕ್ಕ ಹಾಡುದ್ಲು.
ಬಂದಾ ‘ಅತಿಥಿ’ಗಳ್ಗೆ ಕಟ್ಟೆಮಂದಿಯೆಲ್ಲಾ ಸೇರಿ
ಮನಸಾರೆ ಧನ್ಯವಾದ ಕೋರುದ್ರು
ಸಿಂಧು-ಸೀಮವ್ವ ಸೇರಿ ತಾವೇ ಮಾಡಿದ್ ಉಡುಗೊರೆ ನೀಡಿ
ಅತಿಥಿ ಸತ್ಕಾರವ ಮಾಡುದ್ರು.
ಹರಟೆಮಲ್ಲ-ಮಲ್ಲಿರೆಲ್ಲಾ ಬುತ್ತಿಗಂಟಾ ಹಂಚಿಕೊಂಡು
ಭಾರಿ ಭೋಜನವನೆ ಮಾಡುದ್ರು
ಹರಟೆಕಟ್ಟ್ಯಿಂದ್ ಹೊರಡೊಮುಂದೆ ನಾಡಗೀತೆ ಹೇಳಿಕೊಂಡು
ಕನ್ನಡಾಂಬೆ ಪಾದಕ್ಕೆ ನಮಿಸಿದ್ರು
- ಸವಿತಾ ರವಿಶಂಕರ್
*
ಶ್ರೀವತ್ಸ ಜೋಶಿಯವರು, ‘ಹರಟೆ-ಕಟ್ಟೆ’ಗೆ ಅತಿಥಿಗಳಾಗಿ ಬಂದಾಗ ಹಾಡಿದ ಸ್ವಾಗತಗೀತೆ :
(ತೆರೆದಿದೆ ಮನೆ ಓ ಬಾ ಅತಿಥಿ ಧಾಟಿಯಲ್ಲಿ ಹಾಡುವುದು.)
ಅತಿಥಿ
ತೆರೆದಿದೆ ಮನೆ ಓ.. ಬಾ ಅತಿಥಿ
ಹೊಸ ವಿಷಯವಾ, ಲಘು ವಿನೋದವಾ
‘ಹರಟೆ-ಕಟ್ಟೆಗೆ’ ತಾ ಅತಿಥಿ.
ಆವ ವಿಷಯವನು ತಂದರು ಸರಿಯೇ,
ಆವ ರೀತಿಯಲಿ ನುಡಿದರೂ ಸರಿಯೇ
ಕಸ್ತೂರಿ ಕನ್ನಡವ ನುಡಿಯುವ ಬಾ
ಗದ್ಯ ಪ್ರಬಂಧಗಳ ಓದುವ ಬಾ
ಕಥೆ ಹೇಳು ಬಾ, ಕವಿತೆ ಓದು ಬಾ,
ಮಾತಾಡು ಬಾ, ನಗೆಯಾಡು ಬಾ,
ಕಥೆ ಹೇಳಿ, ಕವಿತೆ ಓದಿ, ಮಾತಾಡಿ, ನಗೆಯಾಡಿ
ಸಾಹಿತ್ಯ-ಚಿಂತನೆಗೆ ಜೊತೆಯಾಗು ಬಾ
ವಿಚಿತ್ರಾನ್ನದಾ ವಿವಿಧ-ರಚನೆಯಾ,
ವಿಚಿತ್ರಾನ್ನದಾ ರುಚಿ-ರಚನೆಯಾ
ರಸದೌತಣವ ತಾ.. ತಾ... ತಾ...
- ರವಿ ಮತ್ತು ಸವಿತ ರವಿಶಂಕರ್
*
ಅತಿಥಿಗಳು ‘ಹರಟೆ-ಕಟ್ಟೆ’ಗೆ ಬಂದಾಗ ಅವರಿಗೆಂದೆ ಬರೆದ ಕವನ :
ಶ್ರೀವತ್ಸ ಜೋಶಿ
ಹೆಸರಿಹದು ಶ್ರೀವತ್ಸ ಜೋಶಿ
ಮಾತಿಹದು ಸ್ನೇಹಪರ ತಮಾಷಿ
ಊರಿಹದು ವಾಶಿಂಗ್ಟನ್ನು ಡಿ ಸಿ
ಕೆರೋಲಿನಾ ‘ಹರಟೆ-ಕಟ್ಟೆ’ ಸಹವಾಸಿ
ದಟ್ಸ್‌ಕನ್ನಡದೆ ಸಿಕ್ಕಿದೆ ಲೇಖಕನ ಪಟ್ಟ
ವಿಚಿತ್ರಾನ್ನದ ರುಚಿರಚನೆ ಭಲೆ ಅಡಿಗೆಭಟ್ಟ
ಲೇಖನದ ಪಾಕದಲಿ ಕೈಚಳಕ ಮೇಲ್ಮಟ್ಟ
ಕನ್ನಡಮ್ಮನ ಹೆಮ್ಮೆ ಸಾಹಿತ್ಯ ಪುಟ್ಟ.
-ರವಿಶಂಕರ್ ಮತ್ತು ಸವಿತ












Click it and Unblock the Notifications