ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭೂತಗನ್ನಡಿ ಪ್ರಿಯ ನವ್ಯದ ನೇತಾರರಿಗೆ ಹೊಗಳಲಿಕ್ಕೆ ಸಾಕಷ್ಟು ಕಾರಣಗಳಿದ್ದವು...

By Super
|
Google Oneindia Kannada News

ಅನಿವಾಸಿ ಕನ್ನಡಿಗರ ಕನ್ನಡಾಭಿಮಾನವನ್ನು ಅನುಮಾನಿಸಿ ಮಾತನಾಡಿರುವ ಯು.ಆರ್‌. ಅನಂತಮೂರ್ತಿ ಹಾಗೂ ಬಿ.ಸಿ. ರಾಮಚಂದ್ರಶರ್ಮರ ಬಗ್ಗೆ ಈಗಾಗಲೇ ದಟ್ಸ್‌ ಕನ್ನಡದಲ್ಲಿ ನಡೆದಿರುವ ಓದುಗರ ಚಕಮಕಿಯನ್ನು ದಿನವೂ ನೋಡುತ್ತಿದ್ದೇನೆ. ಅನಿವಾಸಿ ಕನ್ನಡಿಗರಿಗೆ ಡಿ.ವಿ.ಜಿ, ಶಿವರುದ್ರಪ್ಪ, ನಿಸಾರ್‌ ಅಹಮದ್‌ ಮುಂತಾದವರು ಮಾತ್ರ ಪ್ರಿಯರಾದವರು, ಯು.ಆರ್‌. ಅನಂತಮೂರ್ತಿ, ಬಿ.ಸಿ. ರಾಮಚಂದ್ರಶರ್ಮ ಮುಂತಾದ ನವ್ಯರನ್ನು ಕಂಡರೆ ಅವರು ಕೆಂಡ ಕಾರುತ್ತಾರೆ ಎಂಬ ಇಂತಹ ಒಂದು ಮಾತು ಈಚೆಗೆ ಅದು ಹೇಗೆ ತಾನೇ ಹಬ್ಬುತ್ತಿದ್ದೆಯೋ ನನಗೆ ಆಶ್ಚರ್ಯವಾಗುತ್ತಿದೆ. ಯಾರೋ ಒಬ್ಬಿಬ್ಬರ ಅನಿಸಿಕೆಗಳಿಗೆ ಈ ರೀತಿಯ ಸಾರ್ವತ್ರಿಕ ಸ್ವರೂಪ ಕೊಡುವುದು ನಿಜವಾಗಲೂ ಬಹಳ ತಪ್ಪು.

ನನ್ನ ಮಟ್ಟಿಗೆ ಹೇಳುವುದಾದರೆ ಅನಂತಮೂರ್ತಿಯವರು ನಿಸ್ಸಂಶಯವಾಗಿ ಕನ್ನಡದ ಹೆಮ್ಮೆಯ, ನಾವೆಲ್ಲ ಅಭಿಮಾನ ಪಡಬೇಕಾದ ಅಪರೂಪದ ಲೇಖಕರು. ಸಂಸ್ಕಾರದಂತಹ ಒಂದು ಸುಂದರ ಕಲಾಕೃತಿಯನ್ನು ನಿರ್ಮಿಸಲು ಅನಂತಮೂರ್ತಿಯಂತಹ ಅಭಿಜಾತ ಕಲೆಗಾರನಿಗೆ ಮಾತ್ರ ಸಾಧ್ಯವಲ್ಲದೆ ಅವರ ಬಗ್ಗೆ ಅಪಸ್ವರ ಎತ್ತುವವರಿಗಲ್ಲ . ಅವರ ಸುತ್ತಲೂ ವಾದ-ವಿವಾದಗಳ ಸುಳಿಗಳು ಎಷ್ಟೇ ಇರಲಿ, ಕನ್ನಡ ಸಾಹಿತ್ಯಯಾತ್ರೆಯಲ್ಲಿ ಅವರು ನೆಟ್ಟ ಮೈಲುಗಲ್ಲನ್ನು ಮುಟ್ಟದೆ ಮುನ್ನಡೆಯುವುದು ಅವರನ್ನು ಒಪ್ಪದೆ ಇರುವವರಿಗೂ ಸಾಧ್ಯವಿಲ್ಲ. ಬಿ. ಸಿ. ರಾಮಚಂದ್ರ ಶರ್ಮರನ್ನು ಸಿನಿಕರೆಂದು ಜರೆಯುವವರು ಕೂಡ ಅವರ ತೆಳು ವ್ಯಂಗ್ಯ ಬೆರೆತ ವಿನೋದವನ್ನು ಆನಂದಿಸದೆ ಇರಲಾರರು.

ಆದರೆ ನನಗೆ ನಿಜಕ್ಕೂ ಬೇಸರವಾಗಿದ್ದು ಅನಿವಾಸಿ ಕನ್ನಡಿಗರ ಬಗ್ಗೆ ಇವರಿಬ್ಬರು ನೀಡಿರುವ ಹೇಳಿಕೆಗಳಿಂದ. ಶರ್ಮರಿಗೆ ವೀರಶೈವ ಸಮಾವೇಶದಲ್ಲಾದ ಅನುಭವ ನಿಜವೇ ಇರಬಹುದು. ಅಷ್ಟೇ ಏಕೆ ? ಇದೇ ತರಹದ ಅನುಭವ ಇನ್ನು ಕೆಲವರಿಗೆ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲೇ ಆಗಿರಬಹುದು, ಇದನ್ನು ನಾನು ಸುಳ್ಳೆನ್ನುವುದಿಲ್ಲ . ಆದರೆ ಎಲ್ಲೋ ಇರುವ ಹುಳುಕನ್ನು ಹೊರಗೆ ಎಳೆಯುವ ಬದಲು, ಕಸದಲ್ಲೇ ಇರುವ ರಸವನ್ನು ಅವರು ಅರಸಬಹುದಿತ್ತು. ಕರ್ನಾಟಕದಲ್ಲೇ ಕನ್ನಡ ಉಸಿರಾಡಲು ಹೆಣಗುತ್ತಿರುವಾಗ ಎಲ್ಲೋ ಸಾವಿರಾರು ಮೈಲು ದೂರದಲ್ಲಿ, ನಮ್ಮದಲ್ಲದ ಪರಕೀಯ ಪರಿಸರದಲ್ಲಿ ಕನ್ನಡದ ಕೆಲಸ ನಡೆಯುತ್ತಿದ್ದರೆ ಅದು ಎಷ್ಟೇ ಕಿರಿದಾದರೂ ಸರಿಯೇ ನಮ್ಮ ತಾಯ್ನೆಲದ ಇಂತಹ ಹಿರಿಯ ಬರಹಗಾರರು, ಸಾಹಿತಿಗಳು ಅದನ್ನು ಗುರುತಿಸಿ, ಒಂದೆರಡು ಒಳ್ಳೆಯ ಮಾತುಗಳನ್ನು ಆಡಿದ್ದರೆ, ಕನ್ನಡಕ್ಕಾಗಿ ಕೈ ಎತ್ತುತ್ತಿರುವ, ಕೊರಳೆತ್ತುತ್ತಿರುವ ಸಾವಿರಾರು ಅನಿವಾಸಿ ಕನ್ನಡಿಗರ ಮೈ ಮನಗಳಲ್ಲಿ ನಿಸ್ಸಂದೇಹವಾಗಿ ಹೊಸ ಚೈತನ್ಯ ಉಂಟಾಗುತ್ತಿತ್ತು.

ಅರವತ್ತರ ದಶಕದಲ್ಲಿ ಅಮೆರಿಕಾಕ್ಕೆ ಬಂದು ಅಡಿಗರ ಬಗ್ಗೆ ಗೊತ್ತಿಲ್ಲದ ಜನರು ಒತ್ತಟ್ಟಿಗಿರಲಿ, ಈ ಬಗ್ಗೆ ಈಗಾಗಲೇ ಅನೇಕ ಕಡೆ ಪ್ರಸ್ತಾಪವಾಗಿದೆ. ಈಗಾಗಲೇ ವಿದ್ಯಾ ಗದಗಕರ್‌ ಅವರು ಅಭಿಪ್ರಾಯಪಟ್ಟಿರುವಂತೆ ಆಗಿನ ಕಾಲದಲ್ಲಿ ಈಗಿನಂತೆ ಅಂತರ್ಜಾಲದ ಮೂಲಕ ಸಂವಹನ ಸಾಧ್ಯವಿಲ್ಲದಿದ್ದುದು ಅವರ ಅರಿವಿನ ಅಭಾವಕ್ಕೆ ಕಾರಣವಿದ್ದರೂ ಇರಬಹುದು. ಅವರ ಮನೋಭಾವವೋ ಅಥವಾ ಇನ್ನೇನೋ ಕೊರತೆಯೋ, ಸಮಕಾಲೀನ ಸಾಹಿತಿ, ಸಾಹಿತ್ಯದ ಮೇಲೆ ಇವರಿಗೆ ಯಾಕೆ ಆಸಕ್ತಿ ಮೂಡಲಿಲ್ಲವೋ ಇದಕ್ಕೆ ಅರವತ್ತರ ದಶಕದಲ್ಲಿ ಅಮೆರಿಕಾಕ್ಕೆ ಬಂದವರೇ ಉತ್ತರಿಸಬೇಕು. ನಾನು ಈ ಬಗ್ಗೆ ಯಾರಾದರೂ ಏನಾದರೂ ಬರೆದಾರೆಂದು ಈವರೆಗೂ ನಿರೀಕ್ಷಿಸಿದ್ದೆ.

ಇವರು ತಮ್ಮ ಇಪ್ಪತ್ತನೆಯ ವರ್ಷದಲ್ಲೇ ಅಮೆರಿಕಾಕ್ಕೆ ಬಂದಿದ್ದರು ಎಂದಿಟ್ಟುಕೊಂಡರೂ ಅವರೆಲ್ಲರ ವಯಸ್ಸು ಕನಿಷ್ಠ ಪಕ್ಷ ಈಗ ಅರವತ್ತು-ಎಪ್ಪತ್ತು ಇರಬಹುದು. ಈಗಾಗಲೇ ತಮ್ಮ ಜೀವನದ ಸಂಧ್ಯಾ ಕಾಲದಲ್ಲಿ ಇರಬಹುದಾದ ಈ ವಿಶ್ರಾಂತ ಜೀವಿಗಳನ್ನು ಈ ಬಗ್ಗೆ ಈಗ ಕಾಡುವುದು ಸರಿಯಲ್ಲ. ಬಿ. ಸಿ. ಶರ್ಮರು ಈ ಹೊತ್ತು ಬೆಂಗಳೂರಿನಲ್ಲಿ ಕುಳಿತು ಇವರ ಮೇಲೆ ಚಾವಟಿ ಪ್ರಹಾರ ಮಾಡುವುದು ಸಲ್ಲ.

ಇವರಾರೂ ಈ ಹೊತ್ತಿನ ನಮ್ಮ ಅನಿವಾಸಿ ಕನ್ನಡಿಗರ ಪ್ರತಿನಿಧಿಗಳಲ್ಲ . ಅನಂತಮೂರ್ತಿ, ಶರ್ಮರಂತಹ ಹಿರಿಯರು ಇವರ ಬಗ್ಗೆ ಮಾತಾಡುತ್ತಾ ಅನಿವಾಸಿ ಕನ್ನಡಿಗರ ಅವಗುಣಗಳನ್ನು ಭೂತಗನ್ನಡಿಯಲ್ಲಿ ಎಣಿಸುವ ಬದಲು ಅನೇಕ ವರ್ಷಗಳ ಕಾಲ ಅಮೆರಿಕೆಯಲ್ಲಿ ನೆಲೆಸಿ ಕನ್ನಡಕ್ಕಾಗಿ ಶ್ರಮಿಸಿ ಈಗ ಕನ್ನಡನಾಡಿನಲ್ಲೇ ನೆಲೆಸುವ ದಿಟ್ಟ ನಿರ್ಧಾರ ತೆಗೆದುಕೊಂಡಿರುವ ನಮ್ಮೆಲ್ಲರ ಪ್ರೀತಿಯ ಹರಿಹರೇಶ್ವರ ದಂಪತಿಗಳ ಸಾಹಸವನ್ನು ಹೊಗಳಬಹುದಿತ್ತು , ಸುಕುಮಾರ ಪದಗಳನ್ನು ಆಯ್ದು, ಹಿತವಾದ ಭಾಷೆಯಲ್ಲಿ ನೇಯ್ದು ಅಲೆಮಾರಿಯ ಕನಸುಗಳನ್ನು ಅಂತರ್ಜಾಲದಲ್ಲಿ ಹೆಣೆದ ದತ್ತಾತ್ರಿಯ ಬೆನ್ನು ತಟ್ಟಬಹುದಿತ್ತು , ಆಂಗ್ಲಮಯ ಗದ್ದಲದ ನಡುವೆ ಕನ್ನಡ ಸುಗಮ ಸಂಗೀತವನ್ನು ದನಿಯೆತ್ತಿ ಹಾಡುವ ಹಾಡುಗಾರ ರಾಮಪ್ರಸಾದರನ್ನು ಒಂದು ಘಳಿಗೆ ನೆನೆಯಬಹುದಿತ್ತು , ತಮ್ಮ ಬಿಡುವಿರದ ದಿನಚರಿಯ ನಡುವೆ ತಾವು ಕಂಡ ಉಂಡ ಚಿತ್ರ-ವಿಚಿತ್ರ ಅನುಭವಗಳನ್ನು ವಿಚಿತ್ರಾನ್ನದಲ್ಲಿ ದಾಖಲಿಸಿ, ಓದುಗರ ಮೆಚ್ಚಿಗೆಗೆ ಪಾತ್ರರಾದ ಶ್ರೀವತ್ಸ ಜೋಷಿಗೊಮ್ಮೆ ಭೇಷ್‌ ಅನ್ನಬಹುದಿತ್ತು, ನಮ್ಮೆಲ್ಲರ ಮೂಕ ಭಾವನೆಗಳಿಗೆ, ಅನಂತ ಅನಿಸಿಕೆಗಳಿಗೆ 'ಬರಹದ' ರೂಪ ಕೊಟ್ಟ ಶೇಷಾದ್ರಿ ವಾಸುವಿಗೊಂದು ಮೆಚ್ಚಿಗೆಯ ಗುಲಾಬಿ ಹೂವು ಕೊಟ್ಟರೇನಾಗುತ್ತಿತ್ತು? ತಮಗನಿಸಿದ್ದನ್ನು ಕನ್ನಡದಲ್ಲೇ ಬರೆವ ಛಲ, ಬಲ ಹೊತ್ತ ನಟರಾಜ್‌, ನಳಿನಿಮಯ್ಯ, ಜ್ಯೋತಿ ಮಹದೇವ, ಕುಸುಮಾ ಭಟ್‌, ಸಂಧ್ಯಾ, ಶೈಲಜಾ ಭಟ್‌, ಗುರುಪ್ರಸಾದ್‌ ಕಾಗಿನೆಲೆ, ವಸುಧೇಂದ್ರ, ಸುಕುಮಾರ್‌, ರವಿ ಕೃಷ್ಣಾ ರೆಡ್ಡಿ, ಅಶ್ವತ್ಥರಾವ್‌, ಪದ್ಮನಾಭರಾವ್‌ ಮುಂತಾದ ಕನ್ನಡದ ಬೆಳಕ ಬೀರುವ ನೂರಾರು ಕಿರು ಹಣತೆಗಳನ್ನು ಹೆಸರಿಸಿ ಹರಸಬಹುದಾದ ಸುಂದರ ವೇದಿಕೆ ಇತ್ತು. ಆದರೆ ಈ ಮಹನೀಯರು ಇದಾವುದನ್ನೂ ಮಾಡದೆ ನಮ್ಮ ಕನ್ನಡಾಭಿಮಾನವನ್ನೇ ಬೂಟಾಟಿಕೆ, ಪಾಪ ಮನೋಭಾವ ಎಂದು ಕ್ರೂರವಾಗಿ ಬಣ್ಣಿಸಿ ನಮ್ಮ ಅಂತಃಕರಣಕ್ಕೆ ಬರೆ ಎಳೆದಿದ್ದು ಎಷ್ಟು ಸರಿ ??

ಅನಿವಾಸಿ ಕನ್ನಡಿಗರೇ, ಇಂತಹ ಕೂರಂಬುಗಳಿಗೆ, ಮಾತ್ಸರ್ಯದ ವಿಷ ನುಡಿಗಳಿಗೆ ಎದೆಗುಂದದಿರಿ. ನಾವೆಲ್ಲಿದ್ದರೂ ಹೇಗಿದ್ದರೂ ಕನ್ನಡತನ ನಮ್ಮ ಉಸಿರಾಗಿರಲಿ. ನಮ್ಮ ತನು ಕನ್ನಡ, ಮನ ಕನ್ನಡ, ಧನ ಕನ್ನಡವಾಗಿರಲಿ. ಕನ್ನಡತನ ನಮ್ಮ ಮನೆಯಂಗಳದ ಮೋಹದ ಮಲ್ಲಿಗೆ, ದೇವರ ಮುಂದಿನ ನಂದಾದೀಪ. ಕನ್ನಡ ನಮಗೆ ಐಷಾರಾಮವಲ್ಲ , ಜೀವ ಜಲ. ಹಚ್ಚೋಣ ಕನ್ನಡದ ದೀಪ. ಕರುನಾಡೇ ಇರಲಿ, ಹೊರನಾಡೇ ಇರಲಿ ಹಚ್ಚೋಣ ಕನ್ನಡದ ದೀಪ!!

Post your views

ಪೂರಕ ಓದಿಗೆ-
ಇಗೋ ಕನ್ನಡ : ಬೆಂಗಳೂರಿನಲ್ಲಿ ಅಮೆರಿಕನ್ನಡಿಗನ ಪ್ರಾತ್ಯಕ್ಷಿಕೆ
ಎನ್ನಾರೈಗಳನ್ನೇಕೆ ಬೀಳುಗಳೆವಿರಿ, ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ
ಒಂದು ಸುಳ್ಳಿನ ಸುತ್ತ ಮುತ್ತ ...

Click here to go to top
ಮುಖಪುಟ / ಸಾಹಿತ್ಯ ಸೊಗಡು

English summary
A debate on relationship between Native Kannadigas and displaced kannadigas. A debate triggered by controversial statements made by Prof. B.c. Ramachandra Sharma and Dr. U.R. Anatha Murthy. Triveni Rao from Illinois throws her towel!
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X