• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸೈಬರ್‌ಲೋಕದಲ್ಲಿ ಮಕ್ಕಳು !ಅಂತರ್ಜಾಲವೆಂಬ ಚಿತ್ರ ವಿಚಿತ್ರಲೋಕದ ಪ್ರವೇಶಕ್ಕೆ ನಿಮ್ಮ ಮಕ್ಕಳು ರೆಡಿಯಾ ? ಯಾವುದಕ್ಕೂ ಮಕ್ಕಳ ಜೊತೆ ಬೆಂಗಾವಲಾಗಿ ನೀವಿರಿ - ಅದಕ್ಕೆ ಮುನ್ನ ಈ ಲೇಖನ ಓದಿ..

By Staff
|
ಮುಖಪುಟ -->ಸಾಹಿತ್ಯ ಸೊಗಡು -->ಎನ್‌ಆರ್‌ಐ ಕನ್ನಡ ಕಲರವ -->ಸಮಾಚಾರ ಮಾರ್ಚ್‌ 03, 2003

ಸೈಬರ್‌ಲೋಕದಲ್ಲಿ ಮಕ್ಕಳು !

ಅಂತರ್ಜಾಲವೆಂಬ ಚಿತ್ರ ವಿಚಿತ್ರಲೋಕದ ಪ್ರವೇಶಕ್ಕೆ ನಿಮ್ಮ ಮಕ್ಕಳು ರೆಡಿಯಾ ? ಯಾವುದಕ್ಕೂ ಮಕ್ಕಳ ಜೊತೆ ಬೆಂಗಾವಲಾಗಿ ನೀವಿರಿ - ಅದಕ್ಕೆ ಮುನ್ನ ಈ ಲೇಖನ ಓದಿ..

  • ಎಂ.ಎನ್‌.ಪದ್ಮನಾಭರಾವ್‌,

ಮಿಲ್ಪಿಟಾಸ್‌(ಕ್ಯಾಲಿಫೋರ್ನಿಯ)

Email : paddu_mn@yahoo.com

M.N. Padmanabha Raoಇಂದು ದಿನನಿತ್ಯದ ಕೆಲಸಕಾರ್ಯಗಳಿಗೆ ಕಂಪ್ಯೂಟರ್‌ನ ಬಳಕೆ ಅನಿವಾರ್ಯವಾಗುತ್ತಿದೆ. ಸ್ಥಳದಿಂದ ಸ್ಥಳಕ್ಕೆ ಹೋಗಲು ರಸ್ತೆಯ ಮಾರ್ಗದರ್ಶನಕ್ಕೆ, ಮಳೆ ಬಿಸಿಲಿನ ಹವಾಮಾನ ವರದಿಗೆ, ಚಲನಚಿತ್ರಗಳ ವಿವರಗಳು ಮತ್ತು ಅವಲೋಕನಕ್ಕಾಗಿ, ಹಾಡುಗಳಿಗೆ, ಸಂಶೋಧನಾತ್ಮಕ ಲೇಖನಗಳಿಗೆ, ಮಕ್ಕಳ ವಿದ್ಯಾಭ್ಯಾಸಕ್ಕೆ ಇತ್ಯಾದಿ ಇತ್ಯಾದಿಗೆಲ್ಲ ಅದು ಬೇಕು.

ಕಂಪ್ಯೂಟರ್‌ ಇಂದಿನ ಯುಗದಲ್ಲಿ ಮಕ್ಕಳಿಂದ ಹಿಡಿದು ವಯೋವೃದ್ಧರಿಗೂ ಸಹ ಬಹಳ ಉತ್ತಮ ಉದ್ಬೋಧಕ ಉಪಕರಣವಾಗುತ್ತಿದೆ. ಜೊತೆ-ಜೊತೆಗೇ ಗೊತ್ತಿಲ್ಲದ, ಅರಿವಿಲ್ಲದ ಪ್ರಪಂಚದತ್ತ ಮುಗ್ಧ ಜನರನ್ನು ಸೆಳೆಯುತ್ತಿದೆ. ಇಂತಹ ಸಮಾಜದಲ್ಲಿ ತಂದೆ-ತಾಯಿಯರ ಹಲವಾರು ಸಮಸ್ಯೆಗಳ ಜೊತೆಗೆ ಮಕ್ಕಳಿಗೆ ಕಂಪ್ಯೂಟರ್‌ನ ಪರಿಚಯ ಒಂದು ದೊಡ್ಡ ಸವಾಲಾಗಿದೆ.

ತಮ್ಮ ಒಂದು-ಎರಡು ವರ್ಷದ ಮಗು ಒಂದು ಕೈಯಲ್ಲಿ ಹಾಲಿನ ಬಾಟಲು ಮತ್ತೊಂದು ಕೈಯಲ್ಲಿ ಬಣ್ಣದ ಬಳಪ ಹಿಡಿದು ಬೆಲೆ ಬಾಳುವ ಕಂಪ್ಯೂಟರ್‌ ಮುಂದೆ ಕುಳಿತರೆ ತಂದೆ ತಾಯಿಯರಿಗೆ ಕೈ-ಕಾಲು ನಡುಗುತ್ತದೆ. ಕೀಲಿಮಣೆಯ ಮೇಲೆ ಕೈಯಾಡಿಸಿ ಕುಟ್ಟಿದರೆ, ಬೆಕ್ಕಿನ ಚಿತ್ರಕ್ಕೆ ಮೀಸೆ ಬರೆಯಲು ಹೋಗಿ ಕಂಪ್ಯೂಟರನ್ನೇ ಹಾಳು ಮಾಡಿದರೆ, ಗಣಕ ಸಂಪುಟ (ಸಿ.ಡಿ.ರಾಂ) ಓದುವ ಉಪಕರಣವನ್ನು ಎಳೆದು ಕೀಳಲು ಹೋದರೆ.... ಅಬ್ಬಾ ! ಮತ್ತೇನು ಮಾಡುವುದು. ಇದೂ ಸಹ ಪೋಷಕರಿಗೆ ಒಂದು ಪರೀಕ್ಷೆಯ ವಸ್ತುವಾಗಿ ತಲೆನೋವಾಗುವ ಸಾಧ್ಯತೆ ಇಲ್ಲದಿಲ್ಲ. ಇದು ಉತ್ಪ್ರೇಕ್ಷೆಯ ಹೇಳಿಕೆಯಲ್ಲ. ಬೆಲೆಬಾಳುವ ವಸ್ತು ಒಂದೆಡೆಯಾದರೆ ಮಕ್ಕಳ ಬುದ್ಧಿಶಕ್ತಿ, ಮೆದುಳು ಚುರುಕುಗೊಳಿಸುವ ಆಟ-ಪಾಠಗಳು, ಮನೋವಿಕಾಸಕ ಪೂರಕ ಕ್ರಿಯೆಗಳು ಇನ್ನೊಂದೆಡೆ.

ಇಂದಿನ ಯುವ ಪೀಳಿಗೆಗೆ ಕಂಪ್ಯೂಟರ್‌ನ ಮಹತ್ವ ಗೊತ್ತಾಗುತ್ತಿದೆ. ಮಕ್ಕಳಿಗೆ ಎಷ್ಟನೇ ವಯಸ್ಸಿನಿಂದ ಕಂಪ್ಯೂಟರ್‌ ಬಳಕೆ ಅಥವಾ ಪರಿಚಯ ಮಾಡಿಸಬೇಕು? ಎನ್ನುವ ಗುರುತರವಾದ ಪ್ರಶ್ನೆಗೆ ಬಹಳ ಜನ ವಿದ್ವಾಂಸರು ಮಿಶ್ರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನನ್ನ ಈ ಲೇಖನದಲ್ಲಿ ಅಮೆರಿಕಾದ ಸಿಲಿಕಾನ್‌ ವ್ಯಾಲಿಯ ಕೆಲವು ತತ್ರಾಂಶ ಅಭಿಯಂತರರ ಹಾಗೂ ಕಂಪ್ಯೂಟರ್‌ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಸಂಸ್ಥೆಗಳ ಅಭಿಪ್ರಾಯಗಳನ್ನು ಕೊಡಲಾಗಿದೆ. ಕಂಪ್ಯೂಟರ್‌ನ ಅಂತರ್ಜಾಲ ವ್ಯವಸ್ಥೆಯಲ್ಲಿರುವ ಜಾಲತಾಣಗಳ ಅವಲೋಕನಕ್ಕೆ ಮಕ್ಕಳನ್ನು ಸಿದ್ಧಗೊಳಿಸುವ ಮುಂಚೆ ಪೋಷಕರ ಕರ್ತವ್ಯದ ಬಗ್ಗೆ ಒಂದೆರಡು ಸಲಹೆಗಳನ್ನು ಸಹ ಕೊಡಲಾಗಿದೆ.

ಕಂಪ್ಯೂಟರ್‌ ರೆಡಿ, ಮಗು ರೆಡಿಯೆ ?

ಕಂಪ್ಯೂಟರ್‌ನ ಪರಿಚಯಕ್ಕೆ ನಮ್ಮ ಮಗು ಸಿದ್ಧವಿದೆಯೇ ಎನ್ನುವುದು ಎಲ್ಲಾ ಪೋಷಕರೂ ಒಂದು ಕ್ಷಣ ಆಲೋಚಿಸುವ ವಿಚಾರ. ಸಾಂಟ ಮೋನಿಕದಲ್ಲಿರುವ ಲಾಭ-ರಹಿತ ಸಂಸ್ಥೆಯಾಂದು, ಪೋಷಕರಿಗೆ ‘ಇಂದಿನ ಕಂಪ್ಯೂಟರ್‌ ಪೂರಕ ವಿಚಾರಗಳ ದಿಗ್ಧರ್ಶನ ಮತ್ತು ಮಾರ್ಗದರ್ಶನ’ ಕಾರ್ಯ ಮಾಡುತ್ತಿದೆ. ಇದರ ಅಧ್ಯಕ್ಷರಲ್ಲಿ ಒಬ್ಬರಾದ ಲೋರಿ ಲಿಪ್ಪರ್‌ ‘ಮಗುವನ್ನು ಹೊಂದಿಕೊಂಡು ನಿಮ್ಮ ಉತ್ತರ ನಿರ್ಧಾರವಾಗುತ್ತದೆ’ ಎನ್ನುತ್ತಾರೆ. ಈ ಸಂಸ್ಥೆಯು ಸೂಚಿಸಿರುವ ಕೆಲವು ಮಾರ್ಗದರ್ಶನಗಳು ಬೇಕಾದರೆ ಈ ಜಾಲತಾಣಕ್ಕೆ ಭೇಟಿಕೊಟ್ಟು , ಅಲ್ಲಿ ‘ಪೋಷಕರಿಗಾಗಿ....’ ಹೇಳಿರುವ ಹಿತವಚನಗಳನ್ನು ಓದಬಹುದು. www.childrenspartnership.org/pub/pbpg.html

ಒಂದು ಉತ್ತಮ ಸೂಚಕ ವಿಚಾರವೆಂದರೆ ‘ಪೋಷಕರು ಕಂಪ್ಯೂಟರ್‌ ಬಳಕೆಯನ್ನು ಮಗುವಿನ ಮಾನದಂಡವಾಗಿ ಗುರುತಿಸದೆ, ಮೈಲಿಗಲ್ಲಿನ ಗಡುವುಗಳ ಮಿತಿಯನ್ನು ಹಾಕಬಾರದು. ಕೆಲವು ಹದಿನೈದು ತಿಂಗಳುಗಳ ಮಕ್ಕಳು ನಡೆದರೆ ಕೆಲವು ಎರಡು ವರ್ಷದ ಮಕ್ಕಳು ನಡೆಯಲು ಸಾಧ್ಯವಾಗದೇ ಇರಬಹುದು!’ ಹಾಗಾಗಿ, ‘ಕಂಪ್ಯೂಟರ್‌ನ ಪರಿಚಯ ಮಕ್ಕಳಿಗೆ ಸ್ವಲ್ಪ ಸ್ವಲ್ಪ ವಾಗಿ ಸ್ವಾಭಾವಿಕ ಕ್ರಿಯೆಯನ್ನಾಗಿಸಿದರೆ ಉತ್ತಮ.

‘ಕಂಪ್ಯೂಟರ್‌ ಪರಿಚಯ ಮತ್ತು ಕಲಿಕೆ ತಮ್ಮ ಇತರೆ ಆಟ-ಪಾಠಗಳಿಗೆ ಪೂರಕವಾಗಿದ್ದರೆ ಮಕ್ಕಳ ಮನೋವಿಕಸನಕ್ಕೆ ಸಹಾಯಕ’ ಎನ್ನುತ್ತಾರೆ ಎವೆಲಿನ್‌ ಡುಬೋಕ್‌, ಫ್ರೀಮಾಂಟ್‌ನಲ್ಲಿರುವ ರಿವರ್‌ಡೀಪ್‌ ಸಂಸ್ಥೆಯ ವಾರ್ತಾಮಹಿಳೆ. ಈ ಸಂಸ್ಥೆ ಮಕ್ಕಳಿಗೆ ವಿದ್ಯಾಭ್ಯಾಸದ ತತ್ರಾಂಶಗಳನ್ನು ತಯಾರಿಸುತ್ತದೆ. ಇವರು ಮುಂದುವರೆದು ಹೇಳುತ್ತಾರೆ ‘ನಿಮ್ಮ ಮೂರುವರ್ಷದ ಮಗುವಿಗೆ ಕಂಪ್ಯೂಟರ್‌ನ ಪರಿಚಯ ಮಾಡಿಸಿದರೆ, ಅದರ ಚಟುವಟಿಕೆಗಳಿಗೆ ಉತ್ತಮ ಚಾಲನೆ ಸಿಗುತ್ತದೆ ಎನಿಸಿದರೆ, ಮಗುವನ್ನು ಜೊತೆಯಲ್ಲಿ ಕೂಡಿಸಿಕೊಂಡು ಆಟ-ಪಾಠಗಳನ್ನು ಹೇಳಿಕೊಡುವುದರಲ್ಲಿ ಪ್ರಯೋಜನವಿದೆ. ಆದರೆ ಮಗುವನ್ನು ಸರಿಯಾಗಿ ನೋಡಿಕೊಳ್ಳಲು ಸಾಧ್ಯವಾಗದೇ- ಏನಾದರೂ ಮಾಡಿಕೊಳ್ಳಲಿ, ನನ್ನ ತಂಟೆಗೆ ಬರದಿರುವಂತಾದರೆ ಸಾಕು - ಎನ್ನುವ ಮನೋಭಾವದಿಂದ ಕಂಪ್ಯೂಟರ್‌ ಪರಿಚಯ ಸರಿಯಲ್ಲ. ಕಂಪ್ಯೂಟರ್‌ ಮಗುವನ್ನು ನೋಡಿಕೊಳ್ಳುವ ನ್ಯಾನಿ ಆಗದೆ ಮಗುವಿನ ಮಾನಸಿಕ ಬುದ್ಧಿಶಕ್ತಿಯನ್ನು ಜಾಗೃತಗೊಳಿಸುವ ಉಪಕರಣವಾಗಬೇಕು’.

ಪ್ರಾಥಮಿಕ ಹಂತದಲ್ಲಿ ಮಗುವನ್ನು ಜೊತೆಯಲ್ಲಿ ಸೇರಿಸಿಕೊಂಡು ಕಂಪ್ಯೂಟರ್‌ ಆಟ-ಪಾಠಗಳಲ್ಲಿ ತೊಡಗಿದರೆ ಮಕ್ಕಳ ಕಣ್ಣು ಮತ್ತು ಕೈಯಿನ ಚಾಲನಾಶಕ್ತಿ, ಒಂದಕ್ಕೊಂದು ಪೂರಕ ಮತ್ತು ಸಹಕಾರ ಕ್ರಿಯೆಗೆ ಸಹಾಯವಾಗುತ್ತದೆ. ಇದು ಮಗುವಿನ ಮುಂದಿನ ತರಗತಿಯ ವಿದ್ಯಾಭ್ಯಾಸಕ್ಕೆ ಅತಿಮುಖ್ಯ. ಈ ಕ್ರಿಯೆ ಮಕ್ಕಳಿಗೆ ‘ಕಲಿಯಲು ಹೇಗೆ ಕಲಿಯಬೇಕು?’ ಎಂದು ಹೇಳಿಕೊಡುತ್ತದೆ. ಯಾವ ಮಕ್ಕಳಿಗೆ ಹೇಗೆ ಕಲಿಯಬೇಕು ಎಂದು ಗೊತ್ತಾಗುತ್ತದೆಯೋ, ಆ ಮಕ್ಕಳು ತಮ್ಮ ಉನ್ನತ ವ್ಯಾಸಂಗವನ್ನು ಚೆನ್ನಾಗಿ ಮಾಡಲು ಶಕ್ತರಾಗುತ್ತಾರೆ.’ ..ಆದರೆ ಕಂಪ್ಯೂಟರ್‌ ಮತ್ತು ತತ್ರಾಂಶ, ಶಾಲೆಯ ಉಪಾಧ್ಯಾಯರಿಗೆ ಪರ್ಯಾಯವಲ್ಲ. ಶಾಲೆಯ ಬೋಧನ ಶೈಲಿ ಅನೇಕ ವರ್ಷಗಳಿಂದ ತನ್ನ ಪರಿಣಾಮವನ್ನು ಸಾಬೀತು ಪಡಿಸಿದೆ’ ಎನ್ನುತ್ತಾರೆ ರಾಂಡಿ ಹೊಲೆನ್‌ಕಾಂಪ್‌, ತಂತ್ರಜ್ಞಾನ ಕ್ಷೇತ್ರದ ಪರಿಣಿತೆ ಮತ್ತು ಸಾನ್‌ ಹೋಸೆಯ ಶಾಲಾ ಉಪಾಧ್ಯಾಯ. ಅವರು ಮುಂದುವರೆದು ‘ಪ್ರಾಥಮಿಕ ಹಂತದ ಮುಖ್ಯ ಕಲಿಕೆ ಎಂದರೆ ಸಾಮಾಜಿಕ ಹೊಂದಾಣಿಕೆ ಮತ್ತು ಜ್ಞಾನ. ಮಕ್ಕಳಿಗೆ ಶಾಲೆಯ ವಾತಾವರಣ ಬೇಕು ಮತ್ತು ಅದು ಮಕ್ಕಳಿಗೆ ಹೇಗೆ ಓದಬೇಕು ಎಂದು ತಿಳಿಸುತ್ತದೆ. ನೀವು ಶಿಶುವಿಹಾರ ಅಥವಾ ಒಂದನೇ ತರಗತಿಯ ಶಾಲಾ ಕೊಠಡಿಗೆ ಹೋದರೆ ಮಕ್ಕಳು ಜೋರಾದ ಧ್ವನಿಯಲ್ಲಿ ಓದುತ್ತಿರುವ ಅಥವಾ ಹಾಡು ಹೇಳುತ್ತಿರುವ ವಾತಾವರಣ ಕಂಡುಬರುತ್ತದೆ. ಕಂಪ್ಯೂಟರ್‌ ಮುಂದೆ ಕುಳಿತು ಅಭ್ಯಾಸ ಮಾಡಿದರೆ ಖಂಡಿತವಾಗಿ ಅವರ ಜ್ಞಾನಪರಿಧಿ ವಿಕಸಿಸುತ್ತದೆ. ಆದರೆ ಇದರಿಂದ ಹೇಗೆ ಓದಬೇಕು ಎನ್ನುವುದಾಗಲಿ ಅಥವಾ ಸಾಮಾಜಿಕ ಜ್ಞಾನ ಬರುವುದಿಲ್ಲ. ಉನ್ನತ ತರಗತಿಗಳಿಗೆ ಮಕ್ಕಳು ತೇರ್ಗಡೆಯಾದಾಗ ಕಂಪ್ಯೂಟರ್‌ ಬೇಕಾಗುತ್ತದೆ’ ಎನ್ನುತ್ತಾರೆ.

ಐದನೆ ತರಗತಿಯಲ್ಲಿ ಮಕ್ಕಳು ಬಹಳಷ್ಟು ಮನೆಗೆಲಸ, ಸಂಶೋಧನಾತ್ಮಕ ವರದಿ ತಯಾರಿಕೆ ಮತ್ತು ತನ್ನ ದೈನಂದಿನ ಶಾಲಾ ಚಟುವಟಿಕೆಗಳಲ್ಲಿ ತನ್ನ ಕಲೆಗಾರಿಕೆಯನ್ನು ಪ್ರದರ್ಶಿಸಬೇಕಾಗುತ್ತದೆ. ಇದಕ್ಕಾಗಿ ಕಂಪ್ಯೂಟರ್‌ನಲ್ಲಿನ ಕ್ಲಿಷ್ಟ ರೀತಿಯ ಆಟ-ಪಾಠಗಳಲ್ಲಿ ನುರಿತಿದ್ದರೆ ಬಹಳ ಅನುಕೂಲ.

ಬಹಳಷ್ಟು ಪೋಷಕರು ತಮ್ಮ ಮಕ್ಕಳ ಹತ್ತನೇ ವಯಸ್ಸಿನಲ್ಲಿ ಮನೆಗೆ ಎರಡನೇ ಕಂಪ್ಯೂಟರ್‌ ತರುವ ಬಗ್ಗೆ ಅಂಗಡಿಗಳ ಅಲೆದಾಟ, ವಾರ್ತಾ ಪತ್ರಿಕೆಗಳಲ್ಲಿ ಬರುವ ಜಾಹೀರಾತುಗಳ ಮೇಲಿನ ಅವಲೋಕನ ಪ್ರಾರಂಭಿಸುತ್ತಾರೆ. ಕಂಪ್ಯೂಟರ್‌ ತಯಾರಿಕಾ ಸಂಸ್ಥೆಯಾದ ಡೆಲ್‌ ಕಂಪ್ಯೂಟರ್‌ ತನ್ನ ಬಹಳಷ್ಟು ವೈಯಕ್ತಿಕ ಕಂಪ್ಯೂಟರ್‌ ಮಾರಾಟವನ್ನು ಮತ್ತು ವಿದ್ಯಾಭ್ಯಾಸದ ತತ್ರಾಂಶ ಕ್ಷೇತ್ರದಲ್ಲಿರುವ ಅನೇಕ ಸಂಸ್ಥೆಗಳು ತಮ್ಮ ವ್ಯಾಪಾರದೃಷ್ಟಿಯನ್ನು ಮಾಧ್ಯಮಿಕ ಶಾಲಾ ವಿದ್ಯಾರ್ಥಿಗಳ ಕಡೆ ಮತ್ತು ಶಾಲೆ - ಮನೆಗೆಲಸಗಳಿಗೆ ಕಂಪ್ಯೂಟರ್‌ ಬಳಕೆ ಹಾಗೂ ಅಂತರ್ಜಾಲ ತಾಣಗಳ ಅವಲೋಕನದ ಅವಶ್ಯಕತೆ ಇರುವ ಮಕ್ಕಳ ಕಡೆ ಕೇಂದ್ರೀಕರಿಸುತ್ತವೆ ಎನ್ನುವುದು ಗಮನಾರ್ಹ ವಿಚಾರ.

ಅತಿಯಾಗಿ ಕಂಪ್ಯೂಟರ್‌ ಆಟಗಳನ್ನು ಬಳಸುವುದರಿಂದ ಆರರಿಂದ-ಎಂಟನೇ ತರಗತಿಗಳಲ್ಲಿರುವ ಮಕ್ಕಳಿಗೆ ಶಾಲೆಯಲ್ಲಿನ ಕೆಲಸ ಕಾರ್ಯಗಳ ಬಗೆಗಿನ ನಿಷ್ಠೆ ಹಾರಿ ಹೋಗುತ್ತದೆ ಮತ್ತು ಮನೆಯಲ್ಲಿ ಪೋಷಕರಿಗೆ ಮಕ್ಕಳ ಜೊತೆಯಲ್ಲಿ ಕುಳಿತು ಕಂಪ್ಯೂಟರ್‌ನಲ್ಲಿರುವ ಪಾಠಗಳಲ್ಲಿ ಸಹಕರಿಸಲು ಅಥವಾ ಹೇಳಿಕೊಡಲು ಸಮಯದ ಅಭಾವ! ಆದ್ದರಿಂದ ಅನೇಕ ಸಂಘ-ಸಂಸ್ಥೆಗಳು ಕೌಮಾರ್ಯಾವಸ್ಥೆಯಲ್ಲಿರುವ ಮಕ್ಕಳಿಗೆ ಹೆಚ್ಚಿನ ವೇಳೆ ಕಂಪ್ಯೂಟರ್‌ ಮೇಲೆ ಕಳೆಯದಂತೆ ನೋಡಿಕೊಳ್ಳಬೇಕು ಎಂದು ಪೋಷಕರಿಗೆ ಹಿತವಚನವನ್ನು ಹೇಳಿ ‘ಕಂಪ್ಯೂಟರ್‌ನಲ್ಲಿ ಅಂತರ್ಜಾಲ ವ್ಯವಸ್ಥೆಯನ್ನು ಪ್ರವೇಶಿಸುವ ಸಾಮರ್ಥ್ಯವಿದ್ದರೆ ಅತಿ ಜಾಗ್ರತೆ’ ಎಂದು ಎಚ್ಚರಿಸುತ್ತವೆ.

‘ಕಂಪ್ಯೂಟರ್‌ ಮನೆಯಲ್ಲಿ ಸಾಮಾನ್ಯ ಸ್ಥಳದಲ್ಲಿದ್ದು ಎಲ್ಲರೂ ಅದನ್ನು ಬಳಸುವಂತಿರಬೇಕು. ಮಕ್ಕಳು ಅದನ್ನು ಉಪಯೋಗಿಸುವಾಗ ಪೋಷಕರು, ಮಕ್ಕಳ ಚಟುವಟಿಕೆಗಳನ್ನು ಗಮನಿಸಲು ಸಾಧ್ಯವಾಗುವಂತಿರಬೇಕು’ ಎನ್ನುತ್ತಾರೆ ಡೆಲ್‌ ಸಂಸ್ಥೆಯ ವಾರ್ತಾ ಮಹಿಳೆ ಜೆನಿಫರ್‌ ಜೋನ್ಸ್‌.

ಇವರೆಲ್ಲಾ ಹೇಳಿರುವುದನ್ನು ಗಮನದಲ್ಲಿಟ್ಟುಕೊಂಡು ತಮ್ಮ ಮಕ್ಕಳಿಗೆ ಅನುಕೂಲವಾಗುವ ರೀತಿಯಲ್ಲಿ ಕಂಪ್ಯೂಟರ್‌ನ ಬಳಕೆ, ಪರಿಚಯಮಾಡಿಕೊಟ್ಟರೆ ಒಳ್ಳೆಯದು. ಇದರಿಂದ ಮಕ್ಕಳಿಗೆ ತಮ್ಮ ಭವಿಷ್ಯದ ಸವಾಲುಗಳನ್ನು ಎದುರಿಸಲು ಸಹಾಯವಾಗುತ್ತದೆ ಅಲ್ಲವೆ?

ಹಾಗಾದರೆ ಮಕ್ಕಳನ್ನು ಕಂಪ್ಯೂಟರ್‌ನ ಅಂತರ್ಜಾಲ ವ್ಯವಸ್ಥೆಯ ಹೆದರಿಕೆಯಿಂದ ಮುಕ್ತಗೊಳಿಸಲು ಸಹಾಯಕವಾಗುವ ಸಾಮಾನ್ಯ ಜ್ಞಾನ ಏನು? ಎನ್ನುವ ಪ್ರಶ್ನೆ ಕೂಡ ಸ್ವಾಭಾವಿಕ ಮತ್ತು ಉತ್ತರ ಹುಡುಕುವುದು ಅನಿವಾರ್ಯ!

ದಾರಿಯಲ್ಲಿ ನಡೆಯಲು ದಾರಿ ದೀಪಗಳ ಸಹಾಯವಿದೆ. ರಸ್ತೆಯನ್ನು ದಾಟಲು ಪೋಲೀಸಿನವರ, ಸಂಚಾರಿ ದೀಪಗಳ ಮತ್ತು ಸಾರ್ವಜನಿಕರ ಸಹಾಯ ಹಸ್ತವಿದೆ. ಆದರೆ ಕಂಪ್ಯೂಟರ್‌ನ ಅಂತರ್ಜಾಲ ಪುಟಗಳನ್ನು ನೊಡಲು ಅಥವಾ ಹುಡುಕಲು ನಮಗೆ ಬೇಕಾಗಿರುವುದು ಕೌಟುಂಬಿಕ ಸಲಹೆ ಮತ್ತು ಸಹಕಾರ. ಮಕ್ಕಳಿಗೆ ತಮ್ಮ ಕುಟುಂಬವೇ ಶ್ರೀರಕ್ಷೆ. ರಸ್ತೆ ದಾಟುವ ಮುಂಚೆ ಎರಡೂ ಬದಿಯನ್ನು ನೋಡುವಂತೆ, ದೊಡ್ಡವರ ಕೈ ಹಿಡಿದು ನಡೆಯುವುದು ಕಲಿತಂತೆ ಮತ್ತು ಕಾರಿನಲ್ಲಿ ಹೋಗುವಾಗ ಬೆಲ್ಟ್‌ಗಳನ್ನು ಹಾಕಿಕೊಳ್ಳುವಂತೆ ಅನೇಕ ಸಾರಿ ಈ ಸಾಮಾನ್ಯ ನಿಯಮಗಳು ನಮ್ಮನ್ನು ಅಪಾಯಗಳಿಂದ ಕಾಪಾಡಲು ನೆರವಿಗೆ ಬರುತ್ತವೆ. ಇದೆಲ್ಲವನ್ನೂ ಮಕ್ಕಳು ತಮ್ಮ ಕೌಟುಂಬಿಕ ಸಹಕಾರದಿಂದ ಕಲಿಯುತ್ತಾರೆ. ಇದೇ ರೀತಿ ಕಂಪ್ಯೂಟರ್‌ನ ಅಂತರ್ಜಾಲ ಪುಟದ ವ್ಯವಸ್ಥೆಯ ಪ್ರವೇಶಕ್ಕೂ ಸಹ ಕೆಲವು ಸಾಮಾನ್ಯ ನಿಯಮಗಳಿವೆ.

ಮೊದಲು ಮಕ್ಕಳ ವಯಸ್ಸಿಗನುಗುಣವಾಗಿ ಯಾವುದು ಯೋಗ್ಯ ಮತ್ತು ಯಾವುದು ಸುರಕ್ಷಿತ ಜಾಲತಾಣಗಳು ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು. ಅನೇಕ ಜಾಲತಾಣಗಳು ಮಕ್ಕಳ ವೀಕ್ಷಣೆಗೆ ಯೋಗ್ಯವಲ್ಲ. ಅನೇಕ ಜಾಲಪುಟಗಳಲ್ಲಿರುವ ಲೈಂಗಿಕಾಸಕ್ತಿ ಕೆರಳಿಸುವ ವಿಚಾರಗಳು, ಕ್ರೌರ್ಯ ತುಂಬಿದ ಸಂಗತಿಗಳು, ಮಾದಕ ವಸ್ತುಗಳನ್ನು ಕುರಿತ ವಿಚಾರಗಳು, ಕುಡಿತ ಹಾಗೂ ಜೂಜಿನ ಬಗ್ಗೆಯ ವಿವರಗಳು ಮಕ್ಕಳ ಮನಸ್ಸಿನ ಮೇಲೆ ಗಾಢವಾದ ಪರಿಣಾಮವನ್ನು ಬೀರಬಲ್ಲವು. ಆದರ,ೆ ಶಾರೀರಿಕವಾಗಿ ಅಪಾಯಮಾಡಲಾರದು. ಪೋಷಕರು ಖಂಡಿತವಾಗಿ ಮಕ್ಕಳನ್ನು ಈ ಜಾಲತಾಣಗಳಿಂದ ದೂರವಿಡಬೇಕು. ಪೋಷಕರ ಮೊದಲನೇ ಕರ್ತವ್ಯವೆಂದರೆ ಮಕ್ಕಳಿಗೆ ಹಾನಿಮಾಡುವ ಯಾವುದೇ ವ್ಯಕ್ತಿ ಅಥವಾ ವ್ಯವಸ್ಥೆಯಿಂದ ಮಕ್ಕಳನ್ನು ದೂರವಿಡಬೇಕು. ಮತ್ತೊಂದೆಂದರೆ ಮಕ್ಕಳ ಮನೋವಿಕಸನಕ್ಕೆ ಬೇಕಾದ ಅವಕಾಶಗಳನ್ನು ಕಲ್ಪಿಸುವುದು. ಈ ಎರಡೂ ವಿಚಾರಗಳು ಬಹಳ ಮುಖ್ಯ ಮತ್ತು ಅನಿವಾರ್ಯ.

ಕಂಪ್ಯೂಟರ್‌ನ ಅಂತರ್ಜಾಲ ವ್ಯವಸ್ಥೆಯನ್ನು ಪ್ರವೇಶಿಸುವ ಯೋಗ್ಯ ಮಕ್ಕಳಿಗೆ ಎರಡು ವಿಚಾರಗಳನ್ನು ಪೋಷಕರು ಮನದಟ್ಟು ಮಾಡಿಸಬೇಕು. ಮಕ್ಕಳು ಯಾವುದೇ ಕಾರಣಕ್ಕೂ ತಮ್ಮ ರಹಸ್ಯ ಪದ (password) ಗಳನ್ನು ಯಾರಿಗೂ ಕೊಡಬಾರದು ಮತ್ತು ಅವರಿಗೆ ಹೆದರಿಸಿ ಬರುವ ಅನೇಕ ಇ-ಮೈಲ್‌ ಅಥವಾ ಸಂದೇಶಗಳಿಗೆ ಉತ್ತರಿಸಬಾರದು. ಈ ವಿಚಾರಗಳನ್ನು ಹಿರಿಯರಿಗೆ ಒಡನೆಯೇ ಹೇಳಬೇಕು. ಈ ಬಗ್ಗೆ ಶ್ರೀ ಲ್ಯಾರಿ ಮ್ಯಾಗಿಡ್‌ ಬರೆದ ಒಂದು ಮಾರ್ಗಸೂಚಕ ಲೇಖನ ಅತಿ ಉಪಯುಕ್ತ. ಇದನ್ನು ಓದಲು www.safekids.com or www.missingkids.com ಜಾಲತಾಣಕ್ಕೆ ಹೋಗಿ Child Safety on the Information Highway ಎನ್ನುವ ಲೇಖನ ಓದಲೇಬೇಕು. ಇದೇ ರೀತಿಯ ಇವರ ಇನ್ನೊಂದು ಲೇಖನ www.getnetwise.org ಜಾಲತಾಣದಲ್ಲಿದೆ. ಇದು ಮಕ್ಕಳ ವಯಸ್ಸಿಗನುಗುಣವಾದ ಮಾರ್ಗಸೂಚಿಗಳ ವಿವರಗಳನ್ನು ಕೊಡುತ್ತದೆ.

ಪ್ರಾಥಮಿಕ ಶಾಲೆಯಲ್ಲಿರುವ ಮಕ್ಕಳು ಹಿರಿಯರ ನೆರವಿಂದ ಮತ್ತು ಅವರು ತಮ್ಮ ಬಳಿಯಿದ್ದಾಗ ಮಾತ್ರವೇ ಕಂಪ್ಯೂಟರ್‌ನ ಅಂತರ್ಜಾಲ ವ್ಯವಸ್ಥೆಯನ್ನು ಪ್ರವೇಶಿಸಬೇಕು. ಮಕ್ಕಳು ಬೆಳೆದಂತೆ, ಕಂಪ್ಯೂಟರ್‌ನ ಪರಿಸರ ಅರ್ಥವಾದಂತೆ ಅವರಿಗೆ ಕೆಲವು ರೀತಿಯ ಸ್ವಾತಂತ್ರ್ಯ ಕೊಡಬಹುದು ಆದರೆ ಅವರನ್ನು ಅವರಷ್ಟಕ್ಕೇ ಬಿಡಬಾರದು.

ಕಂಪ್ಯೂಟರ್‌ನ ಅಂತರ್ಜಾಲ ವ್ಯವಸ್ಥೆಯನ್ನು ನಮ್ಮ ಮನೆಗೆ ಒದಗಿಸುವ ಸಂಸ್ಥೆಗಳಾದ MSN ಮತ್ತು AOL ಪೋಷಕರಿಗೆ ಸಹಕಾರಿಗಳಾಗಿವೆ. ಇವು ಮಕ್ಕಳನ್ನು ಅಪಾಯದಿಂದ ಪಾರು ಮಾಡಲು ಕೆಲವು ನಿಯಂತ್ರಣ ಸಾಮರ್ಥ್ಯಗಳನ್ನು ಪೋಷಕರಿಗೆ ಒದಗಿಸುತ್ತದೆ. ಇದರಿಂದ ಪೋಷಕರು ಕೆಲವು ಅಪಾಯಕಾರಿ ಜಾಲತಾಣಗಳಿಗೆ ಮಕ್ಕಳು ಪ್ರವೇಷಿಸುವುದನ್ನು ನಿಯಂತ್ರಿಸಬಹುದು. ಈ ನಿಯಂತ್ರಣಾ ಶೋಧಿಕೆಗೆ Internet filter ಎನ್ನುತ್ತಾರೆ. ಈ ನಿಯಂತ್ರಣಾ ಶೋಧಿಕೆಗಳನ್ನು ಉಪಯೋಗಿಸುವ ಮೊದಲು ಅರ್ಥಮಾಡಿಕೊಳ್ಳಬೇಕಾದ್ದು ಅತ್ಯವಶ್ಯಕ ಕೂಡ!. ಈ ಶೋಧಿಕೆಗಳಿಂದ ಅಂತರ್ಜಾಲ ವ್ಯವಸ್ಥೆಯ ಎಲ್ಲಾ ಅಪಾಯಗಳನ್ನು ಪರಿಹರಿಸಲು ಸಾಧ್ಯವಿಲ್ಲ .

ಕೌಮಾರ್ಯದಲ್ಲಿರುವ ಹೆಣ್ಣುಮಕ್ಕಳು ವಯಸ್ಕರಂತೆ ವರ್ತಿಸಿ ಸಾಮಾನ್ಯವಾಗಿ ಲೈಂಗಿಕ ಆಕ್ರಮಣಕ್ಕೆ ತುತ್ತಾಗುತ್ತಾರೆ. ಇವರು ಅಂತರ್ಜಾಲ ವ್ಯವಸ್ಥೆಯಲ್ಲಿರುವ ಚಾಟ್‌ ಕೊಠಡಿಗಳಿಂದ ಆಕರ್ಷಿತರಾಗಿ ಬಹಳಬೇಗ ನೋವನ್ನು ಅನುಭವಿಸುತ್ತಾರೆ. ನಾನಾವಿಧವಾದ ಮಾನಸಿಕ ಸಂದಿಗ್ಧಗಳಿಗೆ ಸಿಲುಕುತ್ತಾರೆ. ಇಂತಹ ವಯಸ್ಸಿನ ಮಕ್ಕಳಿಗೆ ಕೆಲವು ಮಾರ್ಗ ಸೂಚಕಗಳು ಬೇಕಾದರೆ www.safeteens.com ಜಾಲತಾಣದಲ್ಲಿದೆ. ಇಲ್ಲಿರುವ ಲೇಖನ ಓದಲು ಮುದಕೊಡದಿದ್ದರೂ ಅಪಾಯಗಳಿಂದ ರಕ್ಷಿಸಿಕೊಳ್ಳಲು ಸಹಾಯಕ.

ಇಷ್ಟೆಲ್ಲಾ ಗೊತ್ತಾದ ಮೇಲೆ ಪೋಷಕರೂ ಸಹ ತಮ್ಮ ಬುದ್ದಿಮತ್ತೆಯನ್ನು ತೀಕ್ಷ್ಣಗೊಳಿಸಬೇಕಾಗುವುದು ಅನಿವಾರ್ಯ. ಒಮ್ಮೆ ನಿಟ್ಟುಸಿರೆಳೆದು, ಸ್ವಲ್ಪ ಆರಾಮವಾಗಿ ಮಕ್ಕಳೊಡನೆ ಕಂಪ್ಯೂಟರ್‌ನಲ್ಲಿ ತಮ್ಮ ಸಮಯ ಕಳೆದರೆ ಇಡೀ ಕುಟುಂಬಕ್ಕೆ ಮನೋಲ್ಲಾಸಕಾರಿ ಮತ್ತು ಮಕ್ಕಳ ಮನೋವಿಕಸನಕ್ಕೆ ಪ್ರಯತ್ನಕಾರಿ ವಿಚಾರವಲ್ಲವೇ?

(ಆಧಾರ: ಸಾನ್‌ ಹೋಸೆ ಮರ್ಕ್ಯುರಿ ವಾರ್ತಾಪತ್ರಿಕೆಯ ಹಲವು ಲೇಖನಗಳು)

Click here to go to top

ಮುಖಪುಟ / ಸಾಹಿತ್ಯ ಸೊಗಡು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more