• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪ್ರತಿಯಾಂದು ಕವಿತೆ ರಚನೆಯೂ ಒಂದೊಂದು ಬಸಿರಿನಂತೆ - ಜ್ಯೋತಿ ಮಹಾದೇವ್‌

By * ಸಂದರ್ಶಕರು : ಎಂ. ಆರ್. ದತ್ತಾತ್ರಿ
|

ಸುಪ್ತದೀಪ್ತಿ" ಎಂಬ ಕಾವ್ಯನಾಮದಲ್ಲಿ ಬರೆಯುವ ಜ್ಯೋತಿ ಮಹಾದೇವ್‌ ಬಹುತೇಕ ಕವಿಗಳಂತೆಯೇ ಭಾವಜೀವಿ. ಜೊತೆಗೆ ಸ್ನೇಹಕ್ಕಾಗಿ ಯಾವ ಬೆಲೆಯನ್ನೂ ಕೊಡಲು ತಯಾರಿರುವ ಅಪರೂಪದ ಪ್ರಾಮಾಣಿಕ ಮನಸ್ಸಿನವರು. ಹದಿನಾಲ್ಕು ವರ್ಷದ ಬಾಲೆ ಬೆರಗುಗಣ್ಣಿನಿಂದ ನೋಡುತ್ತಲೇ ಕಾಂಪೌಂಡಿನೊಳಗೆ ನುಗ್ಗಿದ ಮೇಕೆಮರಿಯ ಲಾವಣ್ಯಕ್ಕೆ ಬೆರಗಾಗಿ ರಚಿಸಿದ ಮೊದಲ ಪದ್ಯದಿಂದ ಹಿಡಿದು ಮೊನ್ನೆ ಮೊನ್ನೆ ದಟ್ಸ್‌ಕನ್ನಡ.ಕಾಮ್‌ನ ಜಾಗತಿಕ ಕವಿತಾ ಸ್ಪರ್ಧೆಯಲ್ಲಿ ಸಾವಿರಕ್ಕೂ ಮೇಲ್ಪಟ್ಟು ಬಂದ ಕವಿತೆಗಳ ನಡುವೆ ಮೊದಲ ಬಹುಮಾನ ಗಳಿಸಿದ 'ಹೇಳು ಮನಸೇ" ಕವಿತೆಯ ತನಕ ಹಾದುಬಂದ ದಾರಿ ಮತ್ತು ಹತ್ತಿದ ಮೆಟ್ಟಿಲು ಮೆಟ್ಟಿಲನ್ನು ನೆನಪಿಟ್ಟವರು ಇವರು.

ದಟ್ಸ್‌ಕನ್ನಡ.ಕಾಮ್‌ನ ಸಂಪಾದಕ ಶಾಮ್‌ರ ಅಭಿಲಾಷೆಯ ಮೇರೆಗೆ ನಾನು ಜ್ಯೋತಿಯವರೊಂದಿಗೆ ನಡೆಸಿದ ಸಂಭಾಷಣೆಯ ಸಂಕ್ಷಿಪ್ತ ರೂಪವಿದು.

ದತ್ತಾತ್ರಿ : ನೀವು ಯಾವಾಗಿನಿಂದ ಕಾವ್ಯರಚನೆ ಮಾಡುತ್ತಿದ್ದೀರಿ ಹಾಗು ಅದಕ್ಕೆ ಪ್ರೇರಣೆ ಏನು?

ಜ್ಯೋತಿ : ನಾನಾಗಿ ಓದಿದ್ದು ಕಡಿಮೆ. ಶಾಲೆಯಲ್ಲಿ ಏನು ಓದಿದ್ದೆನೋ ಅದು ಮಾತ್ರ. ಹಾಗಾಗಿ ನಾನೇನು ಬರೆಯಲು ಪ್ರಾರಂಭಿಸಿದ್ದೆನೋ ಅದು ಒಂದು ರೀತಿಯಲ್ಲಿ ಅಂತರಂಗದ ತಳಮಳವನ್ನು ಮೀರಿ ಬರೆಯಲೇಬೇಕೆನಿಸಿದ್ದನ್ನು ಬರೆದಿದ್ದುದು. ಚೆನ್ನಾಗಿ ನೆನಪಿದೆ - ಚುಟುಕಗಳಿಂದ ಪ್ರಾರಂಭಿಸಿದೆ, ಅದು ನನ್ನ ಹದಿನಾಲ್ಕನೇ ವಯಸ್ಸಿನಲ್ಲಿ. ಆಮೇಲೆ ಎರಡು ವರ್ಷಗಳ ಕಾಲ ಬರೆಯಲಿಲ್ಲ. ನಾನು ಬರೆಯಬೇಕು ಅಂತ ಕುಳಿತು ಬರೆದದ್ದಲ್ಲ. ಮನಸ್ಸಿನಲ್ಲೇ ಕಾಡುತ್ತಿದ್ದುದು ಮಾಗಿ ಒಳಗಿನಿಂದ ಒತ್ತಿ ಬಂದರೆ ಮತ್ತು ಪದಗಳಿಂದ ಅಭಿವ್ಯಕ್ತಿಯ ಮಾರ್ಗ ಹಿಡಿದರೆ ಅದು ಕವಿತೆಯಾಗುತ್ತದೆ. ನನ್ನಲ್ಲೂ ಆದದ್ದು ಇದೇ.

ದತ್ತಾತ್ರಿ : ಆವತ್ತಿನಿಂದ ನಿರಂತರವಾಗಿ ಬರೆಯುತ್ತಿದ್ದೀರಾ?

ಜ್ಯೋತಿ : ಹೌದು. ಆಗಾಗ ಬರೆಯುವ ಪ್ರಕ್ರಿಯೆ ನಿಧಾನವಾಗುತ್ತದೆಯೇ ಹೊರತು ಬಿಟ್ಟುಹೋಗಿಲ್ಲ.

ದತ್ತಾತ್ರಿ : ನಿಮಗೆ ಬರವಣಿಗೆಗೆ ಪ್ರೇರಣೆ ಎಲ್ಲಿಂದ ಸಿಗುತ್ತದೆ?

ಜ್ಯೋತಿ : inner urge ಅಷ್ಟೇ. ನನ್ನ ಸೋದರಮಾವನಿಗೆ ಸಾಹಿತ್ಯದಲ್ಲಿ ಆಸಕ್ತಿಯಿದೆ. ಅವರು ಹೈಸ್ಕೂಲಿನಲ್ಲಿ ಕನ್ನಡ ಪಂಡಿತರಾಗಿದ್ದರು. ನನ್ನ ಅಮ್ಮನಿಗೂ ಕನ್ನಡದ ಜ್ಞಾನ ಚೆನ್ನಾಗಿತ್ತು. ಆದರೆ, ನನ್ನ ಸಾಹಿತ್ಯಕ ಬೆಳವಣಿಗೆಗೆ ಅವೆಲ್ಲಾ ಎಷ್ಟರ ಮಟ್ಟಿಗೆ ಪೂರಕವಾಯಿತು ಎನ್ನುವುದನ್ನು ಹೇಳಲಾರೆ. ಪಠ್ಯಪುಸ್ತಕಗಳಲ್ಲಿ ಇರುತ್ತಿದ್ದ ಪದ್ಯಗಳೆಲ್ಲಾ ನನ್ನನ್ನು ಮೋಡಿ ಮಾಡುತ್ತಿದ್ದವು. ಕವಿತೆಗಳನ್ನು ಉಪಾಧ್ಯಾಯರಿಗೆ ಒಪ್ಪಿಸುವಾಗ ನಾನು ಅರ್ಥಮಾಡಿಕೊಂಡು ಹೇಳುತ್ತಿದ್ದ ರೀತಿ ನನ್ನ ಉಪಾಧ್ಯಾಯರಿಗೂ ಮೆಚ್ಚುಗೆಯಾಗುತ್ತಿತ್ತು. ಮುಂದೆ ಹೈಸ್ಕೂಲು-ಕಾಲೇಜಿನಲ್ಲಿ ಸಂಸ್ಕೃತವನ್ನು ತೆಗೆದುಕೊಂಡೆ. ನಾನು ಪದವಿ ಪಡೆದದ್ದು ಜೀವಶಾಸ್ತ್ರ ಮತ್ತು ರಸಾಯನ ಶಾಸ್ತ್ರ ವಿಷಯಗಳಲ್ಲಿ. ಹಾಗಾಗಿ ಇದೇ ನನ್ನ ಕಾವ್ಯಕ್ಕೆ ಪ್ರೇರಣೆ ಎಂದು ಗುರುತಿಸಿಕೊಳ್ಳುವುದು ನನ್ನ ಮಟ್ಟಿಗೆ ಸ್ವಲ್ಪ ಸಂಶಯಾಸ್ಪದ.

ನೋಡಿದ ಯಾವುದೋ ದೃಶ್ಯ ಅಥವಾ ಭಾಗವಹಿಸಿದ ಯಾವುದೋ ಸಂದರ್ಭ ಕವಿತೆಯಾಂದಕ್ಕೆ ಕಾರಣವಾಗಬಹುದು. ನಾನು ಮೊದಲು ಕವಿತೆ ಬರೆದದ್ದು ಒಂದು ಮೇಕೆ ಮರಿಯ ಮೇಲೆ. ಎಲ್ಲೆಲ್ಲೋ ಸುತ್ತಾಡುತ್ತಾ ಅದು ನಮ್ಮ ಕಾಂಪೌಂಡಿನೊಳಗೆ ಬಂತು! ಆ ಮರಿಯ ಲವಲವಿಕೆಯ ಓಡಾಟವೇ ನನ್ನಲ್ಲಿ ಕವಿತೆಗೆ ಸ್ಫೂರ್ತಿಯಾಯಿತು. ಬರೆದಿಡಬೇಕು ಎನ್ನುವ ಪರಿಜ್ಞಾನವೂ ಇಲ್ಲದೆ ಬರೀ ಹಾಡುತ್ತಾ ಖುಷಿಪಡುವ ವಯಸ್ಸು ಮತ್ತು ಮನಸ್ಸು ಅಂದಿನದು.

ದತ್ತಾತ್ರಿ : ಬರೆದದ್ದನ್ನು ಪ್ರಕಟಿಸುವ ಮನೋಭಾವ ಯಾವಾಗ ಬಂತು?

ಜ್ಯೋತಿ : ಇತ್ತೀಚಿನ ತನಕ ಬಂದಿರಲಿಲ್ಲ. ಬರೆಯುತ್ತಿದ್ದುದು ಒಂದು ರೀತಿಯಲ್ಲಿ ಸ್ವಸಂತೋಷಕ್ಕಾಗಿ. ಹಾಗಾಗಿ ಅದನ್ನು ಪ್ರಕಟಿಸುವ ಯಾವ ಇರಾದೆಯೂ ನನಗೆ ಇರಲಿಲ್ಲ. ನಿಜ ಹೇಳಬೇಕೆಂದರೆ ನಾನು ಪ್ರಕಟಿಸಿದ್ದು ಅಮೆರಿಕೆಗೆ ಬಂದಮೇಲೆಯೇ. ನನ್ನ ಕವನಗಳು ಪ್ರಕಟಣೆಗೆ ಯೋಗ್ಯವಲ್ಲ ಎನ್ನುವ ಕೀಳರಿಮೆ ನನ್ನನ್ನು ಕಾಡುತ್ತಿತ್ತು. ಭಾವನೆಗಳು ಒತ್ತರಿಸಿ ಬಂದಾಗ ಬರೆಯದೇ ಇರಲೂ ಆಗುತ್ತಿರಲಿಲ್ಲ , ಹಾಗಾಗಿ ಬರೆಯುವುದು ನಿಂತಿರಲಿಲ್ಲ. ಬರೆದದ್ದನ್ನು ಪ್ರಕಟಿಸಲು ನನ್ನ ಪತಿ ಮಹಾದೇವ್‌ ಒತ್ತಾಯ ಮಾಡುತ್ತಲೇ ಇದ್ದರು. ಇಲ್ಲಿಗೆ ಬಂದಾದ ಮೇಲೆ ಇಲ್ಲಿಯ ಕೆಲವು ಸ್ನೇಹಿತರ ಅಭಿಲಾಷೆಯ ಮೇರೆಗೆ ನನ್ನ ಕವಿತೆಗಳನ್ನು ನಮ್ಮ ಕನ್ನಡ ಕೂಟದ ಸಂಚಿಕೆಗಳಿಗೆ ಕಳಿಸಲಾರಂಭಿಸಿದೆ. ನನ್ನ ಹಿಂಜರಿಕೆಯೂ ಸ್ವಲ್ಪ ಮಟ್ಟಿಗೆ ಕರಗುತ್ತಾ ಬಂತು. ಒಂದು ರೀತಿಯಲ್ಲಿ ಸಾಹಿತ್ಯಿಕವಾಗಿ ಆಸಕ್ತಿ ಉಳ್ಳ ಸ್ನೇಹಿತರ ಗುಂಪೊಂದು ನಿರ್ಮಾಣವಾಯಿತು. ಈ ಸ್ನೇಹಿತರಿಗೆಲ್ಲ ನಾನು ಕೃತಜ್ಞಳಾಗಿದ್ದೇನೆ. ಅದೇ ಸಮಯದಲ್ಲಿ ನಾಗತಿಹಳ್ಳಿ ಚಂದ್ರಶೇಖರರ ಪರಿಚಯವಾಯಿತು. ನನ್ನ ಕವಿತೆಗಳನ್ನು ಓದಿದ ಅವರು ತಮ್ಮ 'ಅಭಿವ್ಯಕ್ತಿ" ವೇದಿಕೆಯ ಮೂಲಕ ಪುಸ್ತಕ ರೂಪದಲ್ಲಿ ಪ್ರಕಟಿಸಿದರು.

ದತ್ತಾತ್ರಿ : ಈ ಹಲವಾರು ವರ್ಷಗಳಿಂದ ಕಾವ್ಯ ರಚಿಸುತ್ತಿದ್ದೀರಲ್ಲಾ, ನೀವು ಗಮನಿಸಿದಂತೆ ನಿಮ್ಮ ಕಾವ್ಯದ ದಿಕ್ಕೇನು? ನಿಮ್ಮ ಕಾವ್ಯಕ್ಕೆ ನೀವೇನಾದರೂ ಪ್ರಜ್ಞಾಪೂರ್ವಕವಾಗಿ ಹಾದಿಯನ್ನು ನಿರ್ದೇಶಿಸುತ್ತಿದ್ದೀರಾ?

ಜ್ಯೋತಿ : ನನ್ನ ಕಾವ್ಯರಚನೆ ತುಡಿತಗಳಿಂದ ಪ್ರಭಾವಿತವಾದದ್ದು. ಭಾವನೆಗಳನ್ನು ಒಂದು ಕ್ರಮಬದ್ಧವಾಗಿ ದಾಖಲಿಸಬೇಕೆಂಬ ಯಾವ ಉದ್ದೇಶವೂ ನನ್ನಲ್ಲಿಲ್ಲ. ನನ್ನ ಮಟ್ಟಿಗೆ ಅದು ಸಲ್ಲದ ಕೆಲಸ. ನನ್ನೊಳಗೇ ಬೆಳೆದ ಭಾವನೆಗಳು ಯಾವ ಸ್ವಪ್ರೇರಣೆಯಿಲ್ಲದೆ ಮೊಗ್ಗಾಗಿ, ಹೀಚಾಗಿ, ಹೂವಾಗಿ, ಕಾಯಾಗಿ ಕೊನೆಗೆ ಮಾಗಿದ ಹಣ್ಣಾಗಿ ಕಳಿಚಿದಾಗಲೇ ಅದು ಒಂದು ಕವಿತೆಯಾಗುತ್ತದೆ. ನನ್ನ ಕವನ ಸಂಕಲನ 'ಭಾವ ಲಹರಿ"ಯಲ್ಲಿ ಒಂದು ಮಾತು ಹೇಳಿದ್ದೇನೆ - ಕವಿತಾ ರಚನೆಯೂ ಒಂದು ರೀತಿಯಲ್ಲಿ ಬಸಿರಿನಂತೆ ಭಾಸವಾಗುತ್ತದೆ ಎಂದು. ಪ್ರತಿಯಾಂದು ಕವಿತೆಯನ್ನು ಬರೆದಾಗಲೂ ನನಗೆ ಇದೇ ಅನಿಸುತ್ತದೆ. ಪ್ರಕಟಿಸಲು ಆರಂಭಿಸಿದ ಮೇಲೆ ಓದುಗನನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಸ್ವಲ್ಪ ಮಟ್ಟಿಗೆ ತಿದ್ದುವುದಕ್ಕೆ ಪ್ರಾರಂಭಿಸಿದೆ.

ದತ್ತಾತ್ರಿ : ಬರೆದ ಕವಿತೆಯನ್ನು ಮತ್ತೆ ತಿದ್ದಬೇಕೋ ತಿದ್ದಬಾರದೋ ಎನ್ನುವುದು ಸಾಹಿತ್ಯಲೋಕದಲ್ಲಿ ಒಂದು ಜಿಜ್ಞಾಸೆ...

ಜ್ಯೋತಿ : ಹೌದು. ಇದು ಒಂದು ರೀತಿಯ ದ್ವಂದ್ವವೇ. ಒಮ್ಮೊಮ್ಮೆ ಚೆನ್ನಾಗಿ ಅಭಿವ್ಯಕ್ತಿಗೊಂಡ ಕವಿತೆಯನ್ನು ನಾವು ಮತ್ತೆ ತಿದ್ದಿದಾಗ ಅದರ ತಾಜಾತನವು ಮಾಯವಾಗಿ ಕವಿತೆ ಕೃತಕವಾಗುವ ಅಪಾಯವಿದೆ. ಇನ್ನು ಕೆಲವೊಮ್ಮೆ ತಿದ್ದುಪಡಿಗಳಿಂದ ಕವಿತೆಯು ಹೆಚ್ಚು ಸುಂದರವಾಗುವುದುಂಟು. ನನಗನ್ನಿಸುತ್ತದೆ ಇದು ಶುದ್ಧವಾಗಿ ಕವಿಯ ಬರೆಯುವ ಪ್ರಕ್ರಿಯೆಗೆ ಸಂಬಂಧಪಟ್ಟದ್ದು ಮತ್ತು ಕವಿತೆಯಿಂದ ಕವಿತೆಗೆ ತೆಗೆದುಕೊಳ್ಳಬಹುದಾದ ನಿರ್ಧಾರ. ಕವಿತೆಯ ಸಂದರ್ಭ, ವ್ಯಕ್ತತೆ ಮತ್ತು ಅವ್ಯಕ್ತತೆಗಳು ಬರೆದ ಕವಿಗೆ ಸ್ಪಷ್ಟವಾಗಿರುವುದರಿಂದ ಆ ಸನ್ನಿವೇಶಗಳ ಆಧಾರದ ಮೇಲೆ ತಿದ್ದಬೇಕೋ ಬೇಡವೋ ಎನ್ನುವುದನ್ನು ಕವಿಯೇ ನಿರ್ಧರಿಸಬೇಕು.

ತಿದ್ದುವ ಕೆಲಸ ಹೀಚನ್ನು ಬಲವಂತವಾಗಿ ಹಣ್ಣು ಮಾಡುವುದಲ್ಲ, ಅಥವ ಹಣ್ಣನ್ನು ಮತ್ತೂ ಮಾಗಿಸಲು ಹೋಗುವುದಲ್ಲ. ಬದಲಾಗಿ, ತೊಟ್ಟು ಕಳಚಿ ನೆಲಕ್ಕೆ ಬಿದ್ದ ರಭಸದಲ್ಲಿ ಹಣ್ಣಿಗೆ ಅಂಟಿದ ಮಣ್ಣನ್ನು ತೊಳೆಯುವ ಕೆಲಸವನ್ನಷ್ಟೇ ಅದು ಮಾಡಬೇಕು. ಇದು ಬರೆಯುವವನ ತೃಪ್ತಿಯ ಮೇಲಿದೆ. ಉದಾಹರಣೆಗೆ ನನ್ನ 'ಸ್ಮರಣೆ" ಎನ್ನುವ ಕವಿತೆ. ಕವಿತೆ ಹುಟ್ಟುವ ಸಂದರ್ಭದಲ್ಲಿ ನನಗೆ ಆ ಕ್ಷಣಕ್ಕೆ ಹೊಳೆದದ್ದು ಎರಡು ಸಾಲು ಮಾತ್ರ. ಪೂರ್ತಿ ಕವಿತೆಯ ರಚನೆಯಾದಾಗ ಮೊದಲಿದ್ದ ಆ ಎರಡು ಸಾಲುಗಳು ನಂತರ ತಿದ್ದುಪಡಿಯ ಹೊತ್ತಿಗೆ ಕೊನೆಯ ಎರಡು ಸಾಲುಗಳಾದವು! ನನ್ನ ಮಟ್ಟಿಗೆ, ಆ ಬದಲಾವಣೆ ಕ್ಲುಪ್ತತೆಯ ದೃಷ್ಟಿಯಿಂದ ಸಮಂಜಸವೆನಿಸಿತು. ಮೊದಲ ಬರಹ ಕವಿಯ ತೃಪ್ತಿಗೆ ಮತ್ತು ನಂತರದ ತಿದ್ದುಪಡಿಗಳು ಓದುಗನ ದೃಷ್ಟಿಗೆ. ಎಲ್ಲೋ ಒಂದು ಬಿಂದುವಿನಲ್ಲಿ ಇವೆರಡೂ ಸಮತೂಗುತ್ತವೆ. ಆ ಬಿಂದುವನ್ನು ಗುರುತಿಸುವುದು ಕವಿಯ ಜವಾಬ್ದಾರಿ.

ದತ್ತಾತ್ರಿ : ನಿಮ್ಮ ಮೊದಲ ಸಂಕಲನ 'ಭಾವ-ಲಹರಿ"ಯ ರಚನೆಗಳಿಗೂ ಮತ್ತು ನಿಮ್ಮ ಇತ್ತೀಚಿನ ಕವಿತೆಗಳಿಗೂ ಒಬ್ಬ ಓದುಗನಾಗಿ ನನಗೆ ಅಗಾಧವಾದ ಬದಲಾವಣೆಗಳು ಕಾಣುತ್ತಿವೆ. ವಿಶೇಷವಾಗಿ ನೀವು ಆರಿಸಿಕೊಳ್ಳುವ ವಸ್ತುವಿನಲ್ಲಿ ಮತ್ತು ಕವಿತೆಯ ಹರಿವಿನಲ್ಲಿ. ನೀವು ನಿಮ್ಮ ಈ ಬದಲಾವಣೆಗಳನ್ನು ಯಾವ ರೀತಿ ಗುರುತಿಸಿಕೊಳ್ಳುತ್ತೀರಿ?

ಜ್ಯೋತಿ : ಬದಲಾವಣೆ ಜೀವನದ ಧರ್ಮ. ಭಾವನೆಗಳು ಮತ್ತು ಅವನ್ನು ಅರ್ಥೈಸುವ ರೀತಿ ಕೂಡ ಬದಲಾವಣೆಯ ಸಮಸ್ತ ಗುಣಧರ್ಮಗಳಿಗೆ ಒಳಪಟ್ಟದ್ದು. ಮೇಲಾಗಿ, ನನ್ನ ಮೊದಲ ಕವಿತಾ ಸಂಕಲನ 'ಭಾವ ಲಹರಿ"ಯಲ್ಲಿ ನನ್ನ ಹದಿನಾರನೇ ವಯಸ್ಸಿಗೆ ಬರೆದ ಪದ್ಯಗಳಿಂದ ಹಿಡಿದು ಸುಮಾರು ಐದಾರು ವರ್ಷಗಳ ಹಿಂದಿನತನಕ ಬರೆದ ಪದ್ಯಗಳವರೆಗಿನ (1983 ಎಪ್ರಿಲ್‌ನಿಂದ 1997 ಏಪ್ರಿಲ್‌ವರೆಗೆ) ಶ್ರೇಣಿಯಿದೆ. ಹಾಗಾಗಿ ಅವತ್ತಿನ ಕವಿತೆಗಳನ್ನು ಇವತ್ತಿನದಕ್ಕೆ ಹೋಲಿಸಿದರೆ ವಸ್ತುವಿನಲ್ಲಿ, ಅಭಿವ್ಯಕ್ತಿಯಲ್ಲಿ, ಭಾವಕ್ಕೆ ಮತ್ತು ಭಾಷೆಗೆ ತನ್ಮಯವಾಗುವ ರೀತಿಯಲ್ಲಿ ಅಗಾಧವಾದ ವ್ಯತ್ಯಾಸ ಕಂಡರೆ ಆಶ್ಚರ್ಯ ಪಡಬೇಕಿಲ್ಲ. ಭಾವ ಲಹರಿಯಲ್ಲೂ ಕೂಡ 'ಜನನಿ" ಮತ್ತು 'ಜಲ ಧಾರೆ"ಯಂಥ ಪದ್ಯಗಳು ಬೇರೆ ನಿಲ್ಲುತ್ತವೆ.

ದತ್ತಾತ್ರಿ : ಅದೇ ವಸ್ತುಗಳು ನಿಮ್ಮನ್ನು ಮತ್ತೆ ಕಾಡಿದರೆ ಅಂದಿನ ಕವಿತೆಗಿಂತಾ ಉತ್ತಮವಾದ ಕವಿತೆ ರೂಪುಗೊಳ್ಳುತ್ತದಾ?

ಜ್ಯೋತಿ : ಅದು ಹೇಳಲು ಬರುವುದಿಲ್ಲ. ಅದೇ ವಸ್ತು ಮತ್ತೆ ಬಂದರೆ ಅದು ಮತ್ತೊಂದು ಬೇರೆ ತರಹದ ಕವಿತೆಯಾಗುವ ಸಾಧ್ಯತೆಗಳೇ ಜಾಸ್ತಿ ಇವೆ. ಕವಿತೆಗಳು ಅನುಭವ ಮತ್ತು ಪ್ರಜ್ಞೆಯ ಸಾರವನ್ನು ಹೀರುವ ಗಿಡಗಳು. ಅನುಭವ ಮತ್ತು ಪ್ರಜ್ಞೆ ಸಮಯಾವಲಂಬಿಗಳು. ವಸ್ತು ಕೂಡ ಅಷ್ಟೆ. ಭಾವ ಲಹರಿಯಲ್ಲಿರುವ ಪ್ರಣಯ ಗೀತೆಗಳು ಆವತ್ತಿಗೆ ಮತ್ತು ಆ ವಯಸ್ಸಿಗೆ ಕಾಣಿಸಿಕೊಂಡವು. ಅದೇ ವಸ್ತು, ಪ್ರೀತಿ, ನನ್ನ ಇತ್ತೀಚಿನ ಕವಿತೆಗಳಲ್ಲೂ ಕಾಣಿಸಿಕೊಂಡಿದೆ. ಆದರೆ ಅದರ ಸ್ವರೂಪ ಮಾತ್ರ ಬೇರೆ. ವರ್ಷ ವರ್ಷಗಳು ಉರುಳುವಲ್ಲಿ ಮನುಷ್ಯ ಮನುಷ್ಯನ ನಡುವಿನ ಸಂಬಂಧಗಳು ಬೇರೆ ಬೇರೆ ಸ್ತರಗಳನ್ನು ಆಕ್ರಮಿಸಿಕೊಂಡಂತೆಯೇ, ಅವಕ್ಕೆ ಅನುಗುಣವಾದ ಭಾವನೆಗಳು ಕೂಡ. ಹಾಗಾಗಿ ಕವಿತೆಯನ್ನು ಅರ್ಥ ಮಾಡಿಕೊಳ್ಳುವಾಗ ಭಾವಗಳನ್ನು ಮತ್ತು ಜೊತೆಜೊತೆಗೆ ಭಾವದ ಸ್ಥರಗಳನ್ನೂ ಗುರುತಿಸುವುದು ಬಹಳ ಅಗತ್ಯ.

;

English summary
An Interview with NRI kannada writer Jyothi Mahadev by MR Dattatri.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more