ದ.ಕ್ಯಾಲಿಫೋರ್ನಿಯಾ ಹಿಂದೂ ಪರಂಪರಾ ಶಿಬಿರದಲ್ಲಿ ಮಕ್ಕಳದೇ ಮೇಲುಗೈ
*ವರದಿ: ಮಧು ಹೆಬ್ಬಾರ್
ಇರ್ವಿನ್ : ಎರಡನೆಯ ಹಿಂದೂ ಪರಂಪರಾ ಶಿಬಿರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ವಾಸಿಸುತ್ತಿರುವ ಸುಮಾರು 35 ಭಾರತೀಯ ಕುಟುಂಬದ ಸದಸ್ಯರು ಶಿಬಿರದಲ್ಲಿ ಭಾಗವಹಿಸಿದ್ದರು.
ಹಿಂದೂ ಸ್ವಯಂ ಸೇವಕ ಸಂಘ ಈ ಶಿಬಿರವನ್ನು ಆಯೋಜಿಸಿತ್ತು. 53 ಮಂದಿ ಮಕ್ಕಳು ಹಾಗೂ 28 ಮಂದಿ ಪಾಲಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವಿವಿಧ ವಯೋಮಾನದ ಮಕ್ಕಳಿಗೆ ಹಾಗೂ ಪಾಲಕರಿಗೆ ಪ್ರತ್ಯೇಕ ಆಟೋಟ ಕಾರ್ಯಕ್ರಮಗಳು, ಶ್ಲೋಕ ಗಾಯನ ಮತ್ತು ಗೀತ ಗಾಯನ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು.
ಶ್ಲೋಕ ಅಧ್ಯಯನದಲ್ಲಿ ಮಕ್ಕಳು ಹೆಚ್ಚಿನ ಆಸಕ್ತಿ ತೋರಿಸಿದ್ದು ಕಾರ್ಯಕ್ರಮ ಆಯೋಜಕರಿಗೂ, ಪಾಲಕರಿಗೂ ಆಶ್ಚರ್ಯವುಂಟುಮಾಡಿತ್ತು. ಕಾರ್ಯಕ್ರಮದ ಸಮಾರೋಪದಲ್ಲಿ ಭಾರತೀಯ ಸಂಸ್ಕೃತಿ ಎಂಬ ವಿಷಯದ ಬಗ್ಗೆ ಬೆಂಗಳೂರಿನ ಶೇಷಾದ್ರಿ ಉಪನ್ಯಾಸ ನೀಡಿದರು. ಭಾರತ ಎಂಬ ಶಬ್ದದ ಅರ್ಥ ಹಾಗೂ ಭಾರತದ ಸಂಸ್ಕೃತಿಯ ವಿಸ್ತಾರದ ಬಗ್ಗೆ ಶೇಷಾದ್ರಿ ತಮ್ಮ ಉಪನ್ಯಾಸದಲ್ಲಿ ವಿವರಿಸಿದರು.
ದಕ್ಷಿಣ ಕ್ಯಾಲಿಫೋರ್ನಿಯಾದ ನಾಲ್ಕು ಪ್ರದೇಶಗಳಲ್ಲಿ ಹಿಂದೂ ಸ್ವಯಂ ಸೇವಕ ಸಂಘ ಬಾಲಗೋಕುಲಗಳನ್ನು ನಡೆಸುತ್ತಿದೆ. ಬಾಲಗೋಕುಲದ ಬಗ್ಗೆ ಮಾಹಿತಿ ಪಡೆಯಲು ಇಚ್ಚಿಸುವವರು ರಾಮಾ ಶಾಸ್ತ್ರಿ ಅವರನ್ನು ಸಂಪರ್ಕಿಸಬಹುದು : (818) 892-2695
ಮುಖಪುಟ / ಸಾಹಿತ್ಯ ಸೊಗಡು