• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹಚ್ಚೇವು ‘ವಿಷುದೀಪ’

By Staff
|

*ರಾಘವೇಂದ್ರ ಹೆಬ್ಬಳಲು, ಸನ್ನಿವೇಲ್‌, ಕ್ಯಾಲಿಫೋರ್ನಿಯಾ

ಸನಿವೇಲ್‌ : ನವೆಂಬರ್‌ 17ರ ಶನಿವಾರ ಸನಿವೇಲ್‌ ದೇವಾಲಯ ಸಭಾಂಗಣ ನಾನಾಲಂಕಾರಗಳಿಂದ ಕಂಗೊಳಿಸುತ್ತಿತ್ತು. ಸಹೃದಯೀ ಕನ್ನಡಿಗರ ಸ್ವಾಗತಕ್ಕೆ ಸಜ್ಜಾಗಿತ್ತು. ಅಂದು ಅಲ್ಲಿ ಕೇವಲ ಕನ್ನಡ ರಾಜ್ಯೋತ್ಸವದ ಕಲರವ ಮಾತ್ರವಲ್ಲ ವಿಷುನಾಮ ಸಂವತ್ಸರದ ದೀಪಾವಳಿಯ ಬೆಳಕು - ಬೆಡಗು ಬಿಜಯಂಗೈದಿತ್ತು.

ಹೌದು. ಕವಿ ಡಿ.ಎಸ್‌. ಕರ್ಕಿ ಅವರ ‘ಹಚ್ಚೇವು ಕನ್ನಡದ ದೀಪ’ ಎಂಬ ಗೀತೆ ಜೀವತುಂಬಿ ಬಂದಿತೋ ಎಂಬಂತೆ ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟ ‘ವಿಷುದೀಪ’ ಎಂಬ ಹೆಸರಲ್ಲಿ ಕನ್ನಡರಾಜ್ಯೋತ್ಸವ ಮತ್ತು ದೀಪಾವಳಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಿತು.

ಕೂಟದ ಉಪಾಧ್ಯಕ್ಷ ಶೇಷಪ್ರಸಾದ್‌ರ ‘ಬಾರಯ್ಯ ಗಣಪತಿ’ ದೇವರನಾಮದೊಂದಿಗೆ ಆರಂಭವಾದ ಸಮಾರಂಭದಲ್ಲಿ ಕುವೆಂಪು ಅವರ ‘ಎಲ್ಲಾದರು ಇರು ಎಂತಾದರು ಇರು ಎಂದೆಂದಿಗು ನೀ ಕನ್ನಡವಾಗಿರು’ ಗೀತೆ ಮಾರ್ದನಿಸಿತು.

ಅಮೆರಿಕದಲ್ಲಿಯೇ ಹುಟ್ಟಿಬೆಳೆದ ಕಿಶೋರಿಯರಾದ ಮೇಘಾ ಜೋಷಿ ಮತ್ತು ಕುಮಾರಿ ಉದಿತಾ ಶ್ರೀಮುಷ್ಣಂ ಅವರ ಸಮರ್ಥ ಕಾರ್ಯಕ್ರಮ ನಿರೂಪಣೆ ಅಮೆರಿಕದಲ್ಲಿ ಕನ್ನಡ ಬೇರೂರಿದೆ ಎಂಬುದಕ್ಕೆ ಜ್ವಲಂತ ಸಾಕ್ಷಿಯಾಗಿತ್ತು. (ಈ ವರೆಗೆ ಎಲ್ಲ ಕಾರ್ಯಕ್ರಮದಲ್ಲೂ ಕನ್ನಡನಾಡಿನಲ್ಲಿ ಹುಟ್ಟಿ ಬೆಳೆದವರೆ ಕಾರ್ಯಕ್ರಮ ನಿರೂಪಿಸುತ್ತಿದ್ದರು). ನಿರೂಪಣೆಗೆ ಸೊಗಸಾದ ಸಾಹಿತ್ಯ ಒದಗಿಸಿದವರು ಎಚ್‌.ಸಿ. ಶ್ರೀನಿವಾಸ್‌.

ದೇವನೊಬ್ಬ ನಾಮಹಲವು : ನಮ್ಮ ಸನಾತನ ಧರ್ಮದ ಮೂಲ ತತ್ವಗಳಲ್ಲಿ ‘ಒಬ್ಬನೇ ದೇವನು, ತಿಳಿದವರು ಬಹುವಿಧವಾಗಿ ಹೇಳುತ್ತಾರೆ’ (ಏಕಂ ಸದ್ವಿಪ್ರಾ ಬಹುಧಾ ವದಂತಿ) ಎಂಬ ವಿಚಾರ ಬಹು ಮುಖ್ಯವಾದುದು. ದೇವನೊಬ್ಬನೇ ಇದ್ದರೂ ಹಲವು ರೂಪಗಳಲ್ಲಿ ಆರಾಧಿಸಲ್ಪಡುತ್ತಾನೆ. ಈ ರೂಪಗಳ ಪರಿಚಯವನ್ನು ‘ಭಾಗ್ಯಲೋಕಕ್ಕೆ ಬಂದ ಭಗವಂತ’ ಎಂಬ ನೃತ್ಯ ರೂಪಕದಲ್ಲಿ ಮಕ್ಕಳು ಬಹಳ ಮುದ್ದಾಗಿ ಮಾಡಿಸಿದರು. ನಾಗಲಕ್ಷ್ಮೀ ಹರಿಹರೇಶ್ವರರ ವಿಚಾರಪೂರ್ಣ ಮುನ್ನುಡಿಯಾಡನೆ ಪ್ರಾರಂಭವಾದ ಈ ರೂಪಕದ ನಿರ್ದೇಶಕಿ ಮೀರಾ ಮಾರ್ಗಪುರಂ.

ರಮ್ಯಕಪರ್ದಿನಿ ಶೈಲಸುತೆ ...: ಕರ್ನಾಟಕದ ನಾಡದೇವತೆ ಮಹಿಷಾಸುರ ಮರ್ದಿನಿ ಶ್ರೀಚಾಮುಂಡೇಶ್ವರಿ. ಆ ಆದಿಶಕ್ತಿಯು ಅಜ್ಞಾನಾಂಧಕಾರವನ್ನು ಹೋಗಲಾಡಿಸಿ ಸುಜ್ಞಾನದ ಜ್ಯೋತಿಯನ್ನು ಬೆಳಗಿಸುವವಳು. ದೇವಿಯ ಈ ಸ್ವರೂಪವನ್ನು ತೋರಿಸುವ ನೃತ್ಯ ‘ಅಯಿಗಿರಿನಂದಿನಿ’ ಎಂಬ ವಿಖ್ಯಾತವಾದ ಸ್ತುತಿಯಿಂದ ಆಯ್ದ ಶ್ಲೋಕಗಳನ್ನೊಳಗೊಂಡಿತ್ತು. ರೀಮಾ ಕಶ್ಯಪ್‌ ಮತ್ತು ಸಂಗಡಿಗರು ಮಾಡಿದ ಸಾಮೂಹಿಕ ದೀಪಗಳ ನೃತ್ಯ ಚೇತೋಹಾರಿ. ನೃತ್ಯ ನಿರ್ದೇಶಕಿ, ರಿಮಾ ಕಶ್ಯಪ್‌.

ಈ ದೀಪಾವಳಿಗೆ ದಾಶರಥಿ ಪಟಾಕಿ : ಹಾಸ್ಯ ನಾಟಕಗಳ ಸರದಾರ ದಾಶರಥಿ ದೀಕ್ಷಿತರ ಪ್ರಸಿದ್ಧ ಹಾಸ್ಯ ಬರಹ ‘ನಗೆಗಡಲು’ . ಇಲ್ಲಿನ ಪೆದ್ದ ಗುರು ಮತ್ತು ಮುಠ್ಠಾಳ ಶಿಷ್ಯರ ಕಥೆಯು ಮೂಲವಾಗಿ ಪಾದ್ರಿಯೋರ್ವನಿಂದ ತಮಿಳು ಭಾಷೆಯಲ್ಲಿ ಬರೆಯಲ್ಪಟ್ಟಿತ್ತು. ಈ ತಮಿಳು ಕಥೆಯನ್ನೇ ಆಧಾರವಾಗಿಟ್ಟುಕೊಂಡು ಸರಳ ಸಂಭಾಷಣೆಯನ್ನು ಸೇರಿಸಿ ನಾಟಕ ರಚಿಸಿದವರು ಆಶಾ ಬಾಲಕೃಷ್ಣಭಟ್‌. ಅವರೇ ನಿರ್ದೇಶಿಸಿ, ಮಕ್ಕಳಿಂದ ಅಭಿನಯ ಮಾಡಿಸಿದ ‘ಗಾಂಪರ ಗುಂಪು’ ನಾಟಕವನ್ನು ನೋಡಿ ಸಭಿಕರು ಕರತಾಡನಗಳೊಂದಿಗೆ ಸಂತೋಷ ವ್ಯಕ್ತಪಡಿಸಿದರು. ಹಳ್ಳಿಗರ ಮಾತಿನ ಸೊಗಡಿನ ಸೂತ್ರಧಾರಿಕೆಯಿಂದ ಕೂಡಿದ್ದ ಈ ನಾಟಕ ಹಾಸ್ಯದ ಹೊನಲನ್ನೇ ಹರಿಸಿತು. ಸೂತ್ರಧಾರಿಗಳೂ ಪಾತ್ರಧಾರಿಗಳೂ ಆದ ಮಕ್ಕಳು ನೈಜ ಅಭಿನಯ ನೀಡಿ ಎಲ್ಲರ ಮೆಚ್ಚುಗೆಯನ್ನು ಗಳಿಸಿದರು.

ಒಂದು ಎರಡು ಬಾಳೆಲೆ ಹರಡು: ಹಾ! ಇಲ್ಲಿನ ಕನ್ನಡ ಕೂಟದ ಕಾರ್ಯಕ್ರಮಗಳಲ್ಲಿ ತುಂಬಾ ಮುಖ್ಯವಾದದ್ದು ಯಾವುದು ಗೊತ್ತಲ್ಲ? ಅದೇ ಸ್ವಾಮಿ! ಊಟ! ಕಾರ್ಯಕ್ರಮಗಳನ್ನು ನೋಡಿ ಹಸಿದ ಜನರ ಮನೋದರಗಳನ್ನು ಒಂದೇ ಸಲ ತೃಪ್ತಿಗೊಳಿಸುವ ಹಬ್ಬದೂಟ! ಈ ಸಲ ನೆರೆದಿದ್ದವರೆಲ್ಲರಿಗೂ ವಾಂಗೀಭಾತ್‌, ಆಂಬೊಡೆ, ಕ್ಯಾರೆಟ್‌ ಹಲ್ವಾ ಮುಂತಾದ ರುಚಿಕರವಾದ ತಿನಿಸುಗಳ ಸಮಾರಾಧನೆ ನಡೆಯಿತು. ಕನ್ನಡ ಕೂಟದ ಭೋಜನ ವ್ಯವಸ್ಥಾಪಕೀ ಅನ್ನಪೂರ್ಣೆಯರಿಗೆ ಎಲ್ಲರೂ ಕೃತಜ್ಞತೆ ಹೇಳಿದವರೇ! ಆತ್ಮ ತೃಪ್ತಿಯಾದರೆ ಪರಮಾತ್ಮನೂ ತೃಪ್ತನು !

ಮುಖಪುಟ / ಸಾಹಿತ್ಯ ಸೊಗಡು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more