ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ಯಾಲಿಫೋರ್ನಿಯಾದ ಖ್ಯಾತ ಸಂಗೀತ ನಿರ್ದೇಶಕ ರವಿ ರವೀಂದ್ರನಾಥ್‌ ಅವರೊಂದಿಗೆ ಸಂದರ್ಶನ

By Staff
|
Google Oneindia Kannada News

(ಸಂದರ್ಶಕರು : ಎಸ್‌.ಕೆ. ಹರಿಹರೇಶ್ವರ, ಸ್ಟಾಕ್‌ಟನ್‌, ಕ್ಯಾಲಿಫೋರ್ನಿಯಾ)

ಬಹುಮುಖ ಪ್ರತಿಭೆಯ ರವಿ ರವೀಂದ್ರನಾಥ್‌ ವೃತ್ತಿಯಲ್ಲಿ ಕಂಪ್ಯೂಟರ್‌ ತಜ್ಞರು. ‘ನಾರ್ಟೆಲ್‌ ನೆಟ್‌ವರ್‌ಕ್ಸ್‌’ ಎಂಬ ಪ್ರಖ್ಯಾತ ಕಂಪನಿಯಲ್ಲಿ ಉನ್ನತ ಹುದ್ದೆಗಳಲ್ಲಿ ಸುಮಾರು 20 ವರ್ಷ ಕೆಲಸ ಮಾಡಿದವರು. ‘ಏ.ಡಿ.ಸಿ ಟೆಲೆಕಮ್ಯೂನಿಕೇಷನ್‌ಸ್‌’ ಎಂಬ ಸಂಸ್ಥೆಯಲ್ಲಿ ಮೊನ್ನೆ ಮೊನ್ನೆಯ(2001) ವರೆಗೂ ಇಂಜನಿಯರಿಂಗ್‌ ವಿಭಾಗದಲ್ಲಿ ಉಪಾಧ್ಯಕ್ಷರಾಗಿ ಕೆಲಸ ನಿರ್ವಹಿಸಿದವರು. ಸ್ಯಾನ್‌ ಹೋಸೆ ನಗರದಲ್ಲಿರುವ ‘ರ್ಯಾಪಿಡ್‌ 5 ನೆಟ್‌ ವರ್ಕ್‌ಸ್‌’ ಎಂಬ ಕಂಪನಿಯಲ್ಲಿ ಈಗ ಇಂಜನಿಯರಿಂಗ್‌ ವಿಭಾಗದಲ್ಲಿ ಉಪಾಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದಾರೆ. ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟಕ್ಕೆ 1984-85 ರಲ್ಲಿ ಅಧ್ಯಕ್ಷರಾಗಿದ್ದವರು. ಸಾಹಿತ್ಯ, ಸಂಗೀತ ಮತ್ತು ನಾಟಕ ಕಲೆಗಳಲ್ಲಿ ನುರಿತ ನಿಪುಣರು. ಸುಗಮ ಸಂಗೀತ ಕ್ಷೇತ್ರದಲ್ಲಿ ಅವರ ಸಾಧನೆಗಳ ಪರಿಚಯ ಈ ಸಂದರ್ಶನದಲ್ಲಿದೆ.

  • ರವಿ ರವೀಂದ್ರನಾಥ್‌ ಅವರೇ, ನಿಮಗೆ ಹಾಡು ಹೇಳುವ ಹವ್ಯಾಸ ಯಾವಾಗಿನಿಂದ ಪ್ರಾರಂಭವಾಯಿತು?
ನನ್ನ ಅಮ್ಮ ಅಪ್ಪ ಮತ್ತು ಮನೆಯ ಹಿರಿಯರು ಹೇಳುತ್ತಾರೆ; ಹಾಡುಗಳನ್ನು ಕಲಿಯಲು, ಬೇಗ ಬೇಗ ಗ್ರಹಿಸಿ, ನೆನಪಿಟ್ಟುಕೊಂಡು ಸಮಯ ಸಿಕ್ಕಾಗಲೆಲ್ಲಾ ಅವುಗಳನ್ನು ಹಾಡಲು ತೊಡಗುತ್ತಿದ್ದೆನಂತೆ ; ಅದಕ್ಕಾಗಿ ನನಗೆ ‘ಆಲ್‌ ಇಂಡಿಯಾ ರೇಡಿಯೋ’ಎಂದು ಅಣಗಿಸುತ್ತಿದ್ದುದೂ ಉಂಟು; ನನ್ನ ಅವಿರತ ಗುನುಗುನು ಹಾಡಿಗೆ ತಕರಾರು ಎತ್ತುತ್ತಿದ್ದುದು ಉಂಟು. ಛುಡಾಯಿಸಲು ‘ಆಕಾಶವಾಣಿ’ ನನ್ನ ಉಪನಾಮವಾಗಿತ್ತು ನಿಜ, ಆದರೆ ಒಂದು ಸೋಜಿಗ ಏನು ಗೊತ್ತೆ ? ನಾನು ಕಲಿತು ಹಾಡುತ್ತಿದ್ದ ಆ ಹಾಡುಗಳೆಲ್ಲ ಪಕ್ಕದಮನೆಯ ರೇಡಿಯೋಗಳಿಂದ ಬರುತ್ತಿದ್ದ ಹಾಡುಗಳನ್ನು ಕೇಳಿ, ಇಲ್ಲವೇ ನಮ್ಮ ಮನೆಯ ಅಕ್ಕಪಕ್ಕದಲ್ಲಿ ಇದ್ದ ಅಂಗಡಿಗಳಿಗೆ ಹೋದಾಗ ಅವರುಗಳ ರೇಡಿಯೋ ಹಾಡುಗಳನ್ನ ಕೇಳಿ. ನಮ್ಮ ಮನೆಯಲ್ಲಿ ಆವಾಗ ರೇಡಿಯೋವೇ ಇರಲಿಲ್ಲ ! ನಮ್ಮ ಮನೆಗೆ ರೇಡಿಯೋ ಬಂದದ್ದು ನಾನು ಕಾಲೇಜು ಸೇರಿದ ಮೇಲೇನೇ!

  • ಆ ದಿನಗಳಲ್ಲಿ ನಿಮಗೆ ಮೆಚ್ಚುಗೆಯಾಗಿದ್ದ ಹಾಡುಗಳು ಯಾರದ್ದು ?
ನನ್ನ ಮೆಚ್ಚುಗೆಯ ಹಾಡುಗಳು ಎಂದರೆ, ಮನ್ನಾ ಡೇ, ರಫಿ ಮತ್ತು ಮುಖೇಶ್‌. ನನ್ನ ಮೇಲೆ ಪಿ.ಬಿ.ಶ್ರೀನಿವಾಸ್‌ ಅವರು ತುಂಬಾ ಪ್ರಭಾವ ಬೀರಿದರು- ಅವರ ಕನ್ನಡ ಚಿತ್ರಗೀತೆಗಳಿಂದ. ಆವಾಗಲೇ ನನಗೆ ಅನ್ನಿಸತೊಡಗಿತ್ತು- ನಮ್ಮ ಕನ್ನಡ ಚಿತ್ರಗೀತೆಗಳು ಹಿಂದಿ ಸಿನೆಮಾದ ಹಾಡುಗಳಿಗಿಂತ ಕಡಿಮೆ ದರ್ಜೆಯವೇನಲ್ಲ , ಅಂತ. ಈ ಕಾರಣಕ್ಕೇನೇ, ನಾನು ಶಾಲೆಯಲ್ಲಿ ಓದುತ್ತಿದ್ದಾಗ, ಸಮಯ ಸಿಕ್ಕಾಗಲೆಲ್ಲ , ಕನ್ನಡ ಹಾಡುಗಳಿಗೆ ಆದ್ಯತೆ ನೀಡಬೇಕೆಂದು ವಾದಿಸುತ್ತಿದ್ದೆ, ಒತ್ತಾಯಿಸುತ್ತಿದ್ದೆ . ಆದರೆ, ನನಗೆ ಆಗಲೇ ಅನ್ನಿಸತೊಡಗಿತ್ತು , ನಮ್ಮ ಕನ್ನಡಿಗರಿಗೆ ನಮ್ಮ ಭಾಷೆ, ನಮ್ಮ ಕಲೆ, ನಮ್ಮ ಸಂಸ್ಕೃತಿ ಮುಂತಾದವುಗಳ ಮೇಲೆ, ಭಾರತದ ಇನ್ನಿತರ ಭಾಷಿಕರ ಹಾಗೆ ತುಂಬು ಅಭಿಮಾನ ಇಲ್ಲ ; ಹಾಗಿರುವುದು ತಪ್ಪು; ಈ ವಿಚಾರ ನಾನು ಯುವಕನಾಗಿದ್ದಾಗಿನಿಂದಲೂ ನನಗೆ ತುಂಬಾ ಖೇದ ಉಂಟು ಮಾಡುತ್ತಿತ್ತು . ‘ನಾವು ಸಮ ನಿಮಗೆ’- ಎಂದು ಸ್ವಾಭಿಮಾನದ ಸಂಕೇತವಾಗಿ ಏನಾದರೂ ಮಾಡಬೇಕು- ಎಂದು ಒಳ ಮನಸ್ಸು ಚಡಪಡಿಸುತ್ತಿತ್ತು !

  • ಸರಿ, ನಿಮ್ಮ ಈ ಬಿಸಿರಕ್ತದ ಅಮಲಿನ ಒಳತೋಟಿಗೆ ಪರಿಹಾರದ ಅವಕಾಶವೇನಾದರೂ ದೊರಕಿತೋ?
ಅದಕ್ಕೊಂದು ಅವಕಾಶ 1968 ನನಗೆ ದೊರಕಿತು. ಆವಾಗ ನಾನು ಮದರಾಸಿನ(ಈಗ ಚೆನ್ನೈ) ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ (ಐ.ಐ.ಟಿ) ಯಲ್ಲಿ ಓದುತ್ತಿದ್ದೆ . ಅಲ್ಲಿ ಮುಂಚಿನಿಂದಲೂ ತಮಿಳು, ತೆಲುಗು, ಮಲಯಾಳಂ ಮುಂತಾದವರ ವೃಂದಗಳು ತಮ್ಮ ತಮ್ಮ ಸಮಾರಂಭಗಳನ್ನ , ಸಂಗೀತ ನೃತ್ಯ ನಾಟಕ ಕಾರ್ಯಕ್ರಮಗಳನ್ನ ಅದ್ಧೂರಿಯಿಂದ ಇನ್‌ಸ್ಟಿಟ್ಯೂಟ್‌ನ ಭಾರೀ ಸಂಭಾಂಗಣಗಳಲ್ಲಿ ವಿಜೃಂಭಣೆಯಿಂದ ಆಚರಿಸುತ್ತಿದ್ದರು. ಇದಕ್ಕೆ ವ್ಯತಿರಿಕ್ತವಾಗಿ ಅಲ್ಲಿದ್ದ ಕನ್ನಡಿಗರಾದರೋ, ಐ.ಐ.ಟಿ ಕ್ಯಾಂಪಸ್ಸಿನ ಯಾರದೋ ಒಬ್ಬರ ಮನೆಯಲ್ಲಿ , ದಿವಾನಖಾನೆಯಲ್ಲೋ ಹೊರಾಂಗಣದಲ್ಲೋ ಯುಗಾದಿ ಕಾರ್ಯಕ್ರಮವನ್ನು ನಡೆಸುತ್ತಿದ್ದುದು ರೂಢಿಯಲ್ಲಿತ್ತು . ಮೊಟ್ಟ ಮೊದಲ ಬಾರಿಗೆ, 1979 ರ ಯುಗಾದಿಯನ್ನು ನಾವು ಬೇರೆ ರೀತಿಯಲ್ಲಿ ಆಚರಿಸಿದೆವು : ವಿಶಾಲವಾದ ಸಭಾಂಗಣ ಜನಸ್ತೋಮದಿಂದ ತುಂಬಿ ತುಳುಕಾಡುತ್ತಿತ್ತು ! ಕನ್ನಡದ ಗೀತೆಗಳು, ಕನ್ನಡಿಗರ ಸಂಗೀತ, ಕನ್ನಡದ ನಾಟಕ, ಕನ್ನಡಿಗರಿಂದ ನೃತ್ಯ, ಕನ್ನಡ ಕಲಾ ಪ್ರದರ್ಶನ, ಮಂಗಳೂರಿನಿಂದ ಇಲ್ಲಿಗಾಗಿಯೇ ಆಹ್ವಾನಿತರಾಗಿ ಬಂದಿದ್ದ ಮೇಳದವರಿಂದ ಯಕ್ಷಗಾನ ಬಯಲಾಟ- ಹೀಗೆ ಕನ್ನಡಮಯವನ್ನಾಗಿ ಆ ಕಾರ್ಯಕ್ರಮವನ್ನು ನಾನು ಸಂಘಟಿಸಿದೆ. ಅದರ ಮುಂದಿನ ವರುಷದಿಂದ ಅನೂಚಾನವಾಗಿ ಕನ್ನಡಿಗರ ಯುಗಾದಿ ಅದೇ ರೀತಿ ನಡೆದು ಬರುತ್ತಿದೆ!

  • ಇಷ್ಟು ಹುಮ್ಮಸಿದ್ದವರು, ವಿದ್ಯಾರ್ಥಿ ದೆಶೆಯಲ್ಲಿ ಹಾಡುಗಾರಿಕೆಯ ಆಟಗಳಲ್ಲಿ ಪಾರಿತೋಷಕ ಗಳಿಸಿರಬೇಕು, ನೀವು?
ನಮ್ಮ ಐ.ಐ.ಟಿ ಯಲ್ಲಿ ಪ್ರತಿ ವರ್ಷವೂ ಸಂಗೀತ ಸ್ಪರ್ಧೆಗಳು ಇರುತ್ತಿದ್ದವು. ನಮ್ಮ ಇನ್‌ಸ್ಟಿಟ್ಯೂಟಿನವರೇ ಭಾಗವಹಿಸುವ ಕೆಲವು ಸ್ಪರ್ಧೆಗಳು ಮತ್ತು ಬೇರೆಬೇರೆ ಐ.ಐ.ಟಿ ಗಳವರೂ ಬಂದು ಭಾಗವಹಿಸಲು ಅವಕಾಶವುಳ್ಳ ಇನ್ನೂ ಕೆಲವು ಸ್ಪರ್ಧೆಗಳು. ಇವುಗಳಲ್ಲಿ ಸಾಮಾನ್ಯವಾಗಿ ಇಂಗ್ಲೀಷು, ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂನ ಹಾಡುಗಳನ್ನೇ ಹಾಡಿ ಭಾಗವಹಿಸಿದವರು ಬಹುಮಾನ ಪಡೆಯುತ್ತಿದ್ದರು. ಇವು ಸಣ್ಣ ಪುಟ್ಟ ಸ್ಪರ್ಧೆಗಳಲ್ಲ ; ಭಾರೀ ಭಾರೀ ಸ್ಪರ್ಧೆಗಳು! ನಮ್ಮವರ ವಿರೋಧವನ್ನೂ ಲೆಕ್ಕಿಸದೆ, ಬರುವ ಬಹುಮಾನ ಕಳೆದುಕೊಳ್ಳುತ್ತೀಯ ಎಂಬ ಮುನ್ನೆಚ್ಚರಿಕೆಗೂ ಮಣಿಯದೇ, ನಾನು ಚೆನ್ನಾಗಿ ಅಭ್ಯಾಸ ಮಾಡಿ ಒಂದು ಕನ್ನಡ ಗೀತೆಯನ್ನು ಹಾಡಿಯೇ ಬಿಟ್ಟೆ ! ಭಾಷೆ ಯಾವುದಾದರೇನಂತೆ, ಸುಶ್ರಾವ್ಯವಾಗಿ ಜನಮನ ಮೋಹಕವಾಗಿ ಹಾಡುವುದೇ ಪಾರಿತೋಷಕ ಗಿಟ್ಟಿಸುವ ಒಳಗುಟ್ಟು ಅಲ್ಲವೇ?

  • ನೆನಪಿನಲ್ಲಿ ಉಳಿಯುವ ವಿಶೇಷ ಘಟನೆ ಏನಾದರೂ ವಿದ್ಯಾರ್ಥಿ ಜೀವನದಲ್ಲಿ ನಡೆಯಿತೆ?
ಹೌದು, ಒಂದು ಅಂಥದಿದೆ. ಅಲ್ಲಿ ಐ.ಐ.ಟಿ ಯಲ್ಲಿ ನಾನು ಮರೆಯಲಾರದ ಒಂದು ಘಟನೆ ನಡೆಯಿತು. ಏನು ಗೊತ್ತೆ ? ಹೆಸರಾಂತ ಗಾಯಕರಾದ ಪಿ.ಬಿ.ಶ್ರೀನಿವಾಸ ಮತ್ತು ಎಸ್‌.ಜಾನಕಿಯವರು ತಮ್ಮ ದೊಡ್ಡ ಸುಸಜ್ಜಿತ ವಾದ್ಯವೃಂದದೊಡನೆ ಅಲ್ಲಿಗೆ ಹಾಡುವ ಒಂದು ಭಾರೀ ಕಾರ್ಯಕ್ರಮ ನಡೆಯಿತು ; ಅದರಲ್ಲಿ ಅವರ ಹಾಡಿಗೆ ಮ್ಯಾಂಡಲೀನ್‌ ನುಡಿಸಲು ನನಗೆ ಅವಕಾಶ ಮಾಡಿಕೊಟ್ಟಾಗ ನನಗೂ ಗಂಧರ್ವಲೋಕಕ್ಕೂ ಮೂರೇ ಬೆಟ್ಟು ಅಂತರ ಎನಿಸಿತು!


ಮುಖಪುಟ / ಸಾಹಿತ್ಯ ಸೊಗಡು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X