ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೀರಲ್ಲವೇ ನಮ್ಮನೆಲ್ಲ ಪೊರೆವ ತಾಯಿ !

By Staff
|
Google Oneindia Kannada News

ಬೆಳೆಯುವ ಶಿಶುವಿಗೆ ಹಾಲು ಎಷ್ಟು ಅವಶ್ಯಕವೋ, ಆಮೇಲೆ ಬದುಕಿರುವರೆಗೂ ನೀರು ಜೀವ ಸಂರಕ್ಷಣೆಗೆ ಅಷ್ಟೇ ಅಗತ್ಯ - ಎಂಬುದನ್ನ ಸೂಚಿಸುತ್ತ, ನೀರನ್ನು ಹಾಲಿಗೆ ಸಮೀಕರಿಸಿ ‘ ಪಯಸ್‌’ಎಂದರು ( ನೋಡಿ : ಋಗ್ವೇದ 3.33.4). ವಿಶೇಷವಾಗಿ ‘ ನಿಂತ ನೀರು’ ಎನ್ನುವ ಅರ್ಥದಲ್ಲಿ ವೇದಗಳಲ್ಲಿ (ಋಗ್ವೇದ 4.19. 4; 8.98.8) ‘ ವಾರ್‌’ ಬಳಕೆಯಾಗಿದೆ. ‘ ಜಲಾಷ’ ಎಂದರೆ ಮಳೆನೀರು (ಅಥರ್ವ 6.37); ‘ ಮೂತ್ರ’ವೆಂದೂ ಕೆಲವು ವ್ಯಾಖ್ಯಾನಕಾರರ (ಬ್ಲೂಂಫೀಲ್ಡ್‌) ಮತ. ಉರಿಯನ್ನು ಆರಿಸಬಲ್ಲುದು (ಕೀಲಂ ಜ್ವಾಲಾಂ ಅಲಯತಿ ವಾರಯತಿ ಇತಿ), ಎಂದು ‘ ಕೀಲಾಲ’ದಲ್ಲಿ ನೀರಿನ ಗುಣವನ್ನು ಕಂಡರು. ಅದಿಲ್ಲದಿದ್ದರೆ ಉಳಿವು ಉಂಟೇ ಎನ್ನುತ್ತ, ನೀರನ್ನೇ ‘ ಜೀವನ’ ಎಂದು ಉತ್ಪ್ರೇಕ್ಷಿಸಿದರು.

ಒಮ್ಮೆ ವಿರಾಟ್‌ ಜಗತ್ತು ಎಲ್ಲ ನೀರಿನಿಂದಲೇ ಕೂಡಿತ್ತು, ಮುಳುಗಿತ್ತು ಎನ್ನುವ ಕಲ್ಪನೆ ‘ ಭುವನ’ದಲ್ಲಿ ಮೂಡಿತು. ಸುತ್ತಲೂ ಅದೇ ಇದ್ದು ಬೇರೇನೂ ಗೋಚರಿಸದ ‘ ಕಾಡಿ’ನಂತೆಯೇ ಇರುವ ನೀರಿನ ಬೃಹತ್‌ ಆಕರವಾದ ಸಮುದ್ರವನ್ನು ಹೋಲಿಸಿ ಜಲವು ‘ ವನ’ವಾಯಿತು. ‘ ಕ ’ ಎಂದರೆ ‘ಪ್ರಾಣವಾಯು’ ಎಂಬ ಅರ್ಥದಲ್ಲಿ ಆ ಪ್ರಾಣವಾಯುವನ್ನು ಬಂಧಿಸುವ ಗುಣ ಇದಕ್ಕೆ ಇದೆ ಎಂದು ನೀರಿಗೆ ‘ ಕಬಂಧ’ ಎನ್ನುವುದು ಸಾರ್ಥಕವಾಯಿತು. ಪಾಲಿಸುತ್ತದೆ ಎಂಬುದರಿಂದ ‘ ಪಾಥಸ್‌’ ಪದ ಬಂತು. ‘ ಪುಷ್ಕರ’ಒಂದು ತೀರ್ಥ, ಸರೋವರ, ದ್ವೀಪಗಳ ಒಬ್ಬ ರಾಜನ ಹೆಸರೂ ಹೌದು, ಒಂದು ಮೇಘದ ಅಭಿಧಾನವೂ ಹೌದು. ‘ ಪುಣ್ಯಜಲ’ವೆಂಬ ಅರ್ಥದಲ್ಲಿ ಪ್ರಯೋಗವಾಗುತ್ತದೆ.

ಸಲವೆಂದರೆ ನೀರು, ಸಲಿಲವೆಂದರೂ ನೀರೇ (ಸರ(ಲ)ತಿ ಗಚ್ಛತಿ ಇತಿ ಸಲಿಲ:). ಗಾಳಿಯಂತೆ ಎಲ್ಲೆಡೆಯಲ್ಲೂ ಹರಿದಾಡಬಲ್ಲ, ಎಲ್ಲ ದಿಕ್ಕುಗಳಲ್ಲೂ ಸಮಾನ ಒತ್ತಡವನ್ನು ಬಿತ್ತಬಲ್ಲ ಗುಣ ನೀರಿಗೆ ಇದೆ ಎಂದೇ ಅದು ‘ ಸರ್ವತೋಮುಖ’ವೆನಿಸಿಕೊಂಡಿತು. ಜೊತೆಗೆ, ಮುಂದುವರಿಯುವ ಗುಣ ಪ್ರಧಾನವಿದ್ದು ನೀರು ‘ ಅಂಭಸ್‌’ಆಯಿತು. ಗಮನಶೀಲತೆಯೇ ‘ ಅರ್ಣಸ್‌’ಗೆ ಕಾರಣ. ‘ ತೋಯ’ ಎಂದರೆ ನೀರು ಕನ್ನಡದಲ್ಲಿ ಈಗೀಗ ಕಡಿಮೆ ಬಳಕೆ ಆಗುತ್ತಿದ್ದರೂ, ನೆನೆದಿರುವುದು ಎನ್ನುವುದಕ್ಕಂತೂ ‘ ತೊಯ್ದಿ’ರಲೇಬೇಕು. ‘ ಕೃಪೀಟ’ ಹೊಟ್ಟೆಯಾಳಗಣ ನೀರಿಗೆ ಹೆಸರು. ದರ್ಭೆ ಎಂದೇ ಸಾಮಾನ್ಯಾರ್ಥಕೊಡುವ ಇನ್ನೂ ಹಲವಾರು ನಾನಾರ್ಥಗಳಿರುವ ‘ ಕುಶ’ ನೀರಾದುದು ಹೇಗೆ ? ‘ ಕುಶಧಾರಾ’ಎಂಬ ನದಿಯಾಂದಿದೆ; ಇದರಿಂದ ಬಂದಿತೇನೋ ! ಮೋಡ ಸುರಿಸುವ ಹೂವು - ಎಂಬ ಕವಿಯ ಮಾತು ಎಷ್ಟು ಸುಂದರವಾಗಿ ‘ ಮೇಘಪುಷ್ಪ’ದಲ್ಲಿ ಅಡಗಿದೆ ! ಆ ಹೆಪ್ಪುಗಟ್ಟಿದ ಮೋಡದ ರಸವೇ ಅಲ್ಲವೇ ಈ ‘ ಘನರಸ’!

ಎಲ್ಲ ನೀರೂ ಒಂದೇ ಅಲ್ಲ ..

ನೀರೊಳಗಿದ್ದರೂ ರನ್ನನ ಉರಗಪತಾಕನಿಗಾದಂತೆ ಹೊರಬರುವ ಮೈಯ ಬೆವರು ನೀರು, ಬಿದ್ದ, ಹರಿದ, ನಿಂತ, ತಂಗಿದ, ಮೊಳೆತ ಮಳೆ ನೀರು, ಹೊಳೆ ನೀರು, ಕೊಳದ ನೀರು, ಕೊಳಕು ನೀರು, ಕಳೆ ನೀರು-ಗಳು ಬೇರೆ ಬೇರೆ. ಪನ್ನೀರು ಬೇರೆ, ಕೆನ್ನೀರು ಬೇರೆ. ‘ ಕಣ್ಣೀರು’ ಉಮ್ಮಳಿಸಿ ಅಳು ತಂದ ಬಳುವಳಿಯ ಬಿಸಿ ಹಬೆಯಾಗಬಹುದು, ಇಲ್ಲವೇ ಸುಖದ ನಗುವಿನ ಸುಗ್ಗಿ ಎದೆಯನ್ನ ಹಿಗ್ಗಿಸಿದಾಗ ಮನಸ್ಸಿನ ಕಿಟಕಿ ಹೊರಸೂಸುವ ಆನಂದ ಬಾಷ್ಪವಾಗಲೂ ಬಹುದು. ಆರತಿಯ ಕೆಂಪುನೀರು, ಓಕುಳಿಯ ಬಣ್ಣದ ನೀರು, ದೃಷ್ಟಿತಾಗದೆ ಇರಲು ಸುಳಿನೀರು- ಬೇರೆ ಬೇರೆ. ಇದಲ್ಲದೆ, ಚಿಕ್ಕಂದಿನಲ್ಲಿ ನೀರೂಡಿಸಿದವರ ನೆನಪನ್ನ ತಲೆಯಲ್ಲಿ ಹೊತ್ತು , ಹುಟ್ಟು ಹಾಕಿದವರ ಮಕ್ಕಳಿಗೋ ಮೊಮ್ಮಕ್ಕಳಿಗೋ ಫಲಕೊಡುವ ನಾರಿಕೇಳದ ಪರಿಶುದ್ಧ ‘ಎಳನೀರು’- ಇವೆಲ್ಲಕ್ಕಿಂತ ಸಂಪೂರ್ಣ ಭಿನ್ನವಾದ ನೀರು ಕೇಳ!

ಮುಖಪುಟ / ಸಾಹಿತ್ಯ ಸೊಗಡು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X