• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಆ ತಾಯಿ ಅಮೆರಿಕಾದಿಂದ ಹೊತ್ತು ತಂದದ್ದು ಏನಪ್ಪಾ ಅಂದರೆ..

By Staff
|

*ಎಸ್ಕೆ. ಶಾಮಸುಂದರ

shami.sk@greynium.com

ಶ್ರೀಮತಿ ನಾಗಲಕ್ಷ್ಮಿ ಹರಿಹರೇಶ್ವರ ಬೆಂಗಳೂರಿಗೆ ಯಾಕಾದರೂ ಬಂದಿದ್ದರು ? ಅವರಿಷ್ಟ ಕಣ್ರೀ.. ಯಾಕಾದರೂ ಬರ್ತಾರೆ, ಯಾವಾಗ ಬೇಕಾದರೂ ಹೋಗ್ತಾರೆ ಎನ್ನಬಹುದು, ಯಾರಾದರೂ. ಪ್ರಸ್ತುತ ಪ್ರಶ್ನೆ ಅದಲ್ಲ. ಲಕ್ಷಾಂತರ ರೂಪಾಯಿ ಖರ್ಚು ಮಾಡಿಕೊಂಡು ಸ್ವದೇಶಕ್ಕೆ ಬಂದು ಹೋಗಬೇಕಾದರೆ ಉದ್ದೇಶಗಳು ಹಲವಾರು ಇರತ್ವೆ. ನಾನು ಅವತ್ತೇ ಹೇಳಿದ ಹಾಗೆ ಕಾರಣಗಳು ಹಲವಾರು. ಆದರೆ, ನಾಗಲಕ್ಷ್ಮಿ ಅವರ ವಿಚಾರದಲ್ಲಿ ನಾ ಕಂಡ ಕಾರಣ ಮಾತ್ರ , ವಿಚಿತ್ರ ಆದರೂ ನಿಜ.

ನಿಜ. ಈಗಿನ ಕಾಲದಲ್ಲಿ ಪರದೇಶದಿಂದ ಬರುವಾಗ ಹೊತ್ತುಕೊಂಡು ಬರುವುದಕ್ಕೆ ಸಾಕು ಬೇಕಾದಷ್ಟು ಸಾಮಾನು ಸರಂಜಾಮುಗಳು ಇರ್ತವೆ. ಈ ಹೊತ್ತು ಭಾರತದಲ್ಲೇ ವರ್ಲ್ಡ್‌ ಮೇಡ್‌ ಗೂಡ್ಸ್‌ ಸಿಗುತ್ತದಾದ್ದರಿಂದ ಇಂಗ್ಲೆಂಡಿನಿಂದ , ನ್ಯೂಇಂಗ್ಲೆಂಡಿನಿಂದ ಇಲೆಕ್ಟ್ರಾನಿಕ್‌ ಗ್ಯಾಡ್ಜೆಟ್ಟುಗಳನ್ನು ಕಸ್ಟಂ ಕಿರಿಕಿರಿ ಅನುಭವಿಸಿ ತರವು ಅಗತ್ಯವಿಲ್ಲವಾದರೂ ತೀರ ಖಾಸಗಿಯಾದ ಬಟ್ಟೆ ಬರೆ , ಕಾಸ್‌ಮೆಟಿಕ್ಸ್‌, ಕೆಲವು ಮಾತ್ರೆ, ಸಿರಪ್ಪುಗಳಾದರೆ ಮುಗಿಯಿತು. ಇನ್ನು ಇಂಟರ್‌ನೆಟ್‌ನಲ್ಲೇ ಎಲ್ಲಾ ಭಾಷೆಗಳ (ಕನ್ನಡ ಬಿಟ್ಟು ! ) ಪುಸ್ತಕ, ಮಾಹಿತಿ ಸಿಗುತ್ತಾದಾದ್ದರಿಂದ ಬಿಲ್‌ಗೇಟ್ಸ್‌ರ ರೋಡ್‌ ಅ ಹೆ ಡ್‌ ನಿಂದ ಮೊದಲುಗೊಂಡು ಮಾನಸಿಕ ನೆಮ್ಮದಿಗೆ 14 ಸೂತ್ರಗಳು ಎಂಬಂತಹ ಟೈಟಲ್‌ಗಳನ್ನು ಇಲ್ಲಿಯ ತನಕ ತರುವ ಪ್ರಮೇಯವೂ ಇಲ್ಲ.

ಆದರೆ, ಕನ್ನಡ ಲೇಖನ ಸಂಪಾದನೆ ಮತ್ತು ಕನ್ನಡ ಪುಸ್ತಕ ಸಂಪಾದನೆ ಮತ್ತು ಪ್ರಕಾಶನವನ್ನು ಗೀಳಾಗಿ ಅಂಟಿಸಿಕೊಂಡವರಿಗೆ ಅವರದೇ ಹಾದಿ. ಆ ಹಾದಿಯನ್ನು ಮೊನ್ನೆಯವರಿಗೆ ತುಳಿದುಕೊಂಡು ಬಂದ ಬೆರಳೆಣಿಕೆಯಷ್ಟು ಯಾನ್‌ಕೀಸ್‌ಗಳಲ್ಲಿ ! ನಾಗಲಕ್ಷ್ಮಿಯವರು ಇವತ್ತು ಎದ್ದು ಕಾಣುವ ಹೆಸರು. ಆರೆಂಟು ತಿಂಗಳಾಯಿತು ಅಂತ ಕಾಣತ್ತೆ. ಬನಶಂಕರಿ ಬಡಾವಣೆಯ ಸುಚಿತ್ರ ಫಿಲಂ ಅಕಾಡಮಿ ಆವರಣದಲ್ಲಿ ಒಂದು ಪುಟ್ಟ ಸಮಾರಂಭಕ್ಕೆ ನನಗೆ ಆಹ್ವಾನ ಬಂದಿತ್ತು. ಏನೆಂದು ಪರಿಶೀಲಿಸಿ ನೋಡಿದರೆ ‘ ಲೇಖಕ ಲೇಖಕಿಯರಿಗೆ ಗೌರವ ಪ್ರತಿಯನ್ನು ಅರ್ಪಿಸಿ ಕೃತಾರ್ಥರಾಗಲು ಒಂದು ಸಂಜೆ!’ ಹೀಗೂ ಉಂಟಾ ?

ಈ ಪರಿಯ ಈ ಕಾರ್ಯಕ್ರಮ ವಿಶೇಷವಾಗಿ ನನಗೆ ಸೋಜಿಗವಾಗಿ ಕಂಡಿದ್ದಕ್ಕೆ ಪ್ರಬಲ ಕಾರಣಗಳಿವೆ. ಲೇಖನಗಳನ್ನು ಪುಸಲಾಯಿಸಿ ಬರೆಸಿಕೊಳ್ಳುವುದು, ಆನಂತರ ಅವರತ್ತ ತಿರುಗಿ ಕೂಡ ನೋಡದಿರುವುದು ನನಗೆ ಅಭ್ಯಾಸವಾಗಿದೆ. ಇದು ಕರ್ನಾಟಕದ ಪತ್ರಿಕೆ-ಪುರವಣಿ ಪತ್ರಿಕೋದ್ಯಮ ನನಗೆ ಕಲಿಸಿದ ಚಟ. ದಿಸ್‌ ಈವಿನಿಂಗ್‌ ಐ ವಾನ್ಟು ಥ್ಯಾಂಕ್ಯೂ ಆಲ್‌ದ್‌ ಮೇನೇಜ್‌ಮೆಂಟ್ಸ್‌ , ಥ್ಯಾಂಕ್ಯೂ !

ಹ್ಯೂಸ್ಟನ್‌ನಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನದ ಸ್ಮರಣ ಸಂಚಿಕೆಗೆ ಸಂಪಾದಕರಾಗಿದ್ದವರು ಶಿಕಾರಿಪುರ ಹರಿಹರೇಶ್ವರ. ಕನ್ನಡದಲ್ಲಿ ಚೆನ್ನಾಗಿ ಬರೆಯಬಲ್ಲ ಲೇಖಕ ಲೇಖಕಿಯರು ಪ್ರೀತಿಯಿಂದ ಬರೆದ ನೂರಾರು ವಿಷಯ ವೈವಿಧ್ಯದ ಕನ್ನಡ ಹೂಗುಚ್ಛದ ಆ ಹೊತ್ತಿಗೆಯ ಹೆಸರು ‘ದರ್ಶನ’.

ಲೇಖಕರ ಬೆನ್ನು ಹತ್ತಿ ಸಮಯಕ್ಕೆ ಸರಿಯಾಗಿ ಅವರಿಂದ ಲೇಖನ ತರಿಸಿಕೊಳ್ಳುವುದು ಮಹಾ ಕಷ್ಟದ ಕೆಲಸ. ಈ ಕಷ್ಟದ ಕೆಲಸವನ್ನು ಸಂಬಳ ಕೊಡುತ್ತಾರೆಂದು ನಾನು ಸರಿ ಸುಮಾರು ಇಪ್ಪತ್ತು ವರ್ಷ ಕಾಲ ಮಾಡಿದ್ದೇನೆ. ಆದರೆ , ಸಂಪಾದಕರಿರುವುದು ಸ್ಟಾಕ್‌ಟನ್‌ನಲ್ಲಿ, ಲೇಖಕಿ ಇರುವುದು ತ್ಯಾಮಗೊಂಡ್ಲುವಿನಲ್ಲಿ. ಲೇಖನ ಕೈ ಸೇರಬೇಕು. ಪ್ರಿಂಟಾಗುವ ಹೊತ್ತಿಗೆ ಎಡಿಟ್‌ ಮಾಡಿ ಪ್ರತಿಯಾಂದು ಸಕಾಲಕ್ಕೆ ಅಚ್ಚುಕಟ್ಟಾಗಬೇಕು. ಆ ಕೆಲಸವನ್ನು ಆನಂದದಿಂದ ಮಾಡಿದ ಹರಿಹರೇಶ್ವರ ದಂಪತಿಗಳು ಅಲ್ಲಿಗೇ ಮುಗಿಯಿತು ಎನ್ನಲಿಲ್ಲ.

ಇಂಡಿಯಾಗೆ ಬಂದು ಎಲ್ಲ ಲೇಖಕರಿಗೆ ಆಹ್ವಾನ ಕಳಿಸಿ ನಾಲ್ಕು ಒಳ್ಳೆಯ ಮಾತಾಡಿ, ಕಾಫಿಕೊಟ್ಟು ಗೌರವ ಪ್ರತಿಯನ್ನು ಕೈಯಲ್ಲಿಟ್ಟರು. ಭೇಷ್‌.

ಸುಂದರ ಸಂಜೆ ಎಂದರೆ ಇದೇನಾ? : ಕನ್ನಡ ಸಂದರ್ಭದಲ್ಲಿ ಸುಂದರ ಸಂಜೆ ಎನ್ನಬಹುದಾದ ಆ ಸಮಾರಂಭಕ್ಕೆ ಎಲ್‌. ಎಸ್‌ ಶೇಷಗಿರಿರಾವ್‌ ಆದಿಯಾಗಿ ಬಹುತೇಕ ಲೇಖಕ ಲೇಖಕಿಯರು ಬಂದಿದ್ದರು. ಇಡೀ ಪುಸ್ತಕದ ಡೇಟಾ ಅಳವಡಿಸುವ ಕೆಲಸವನ್ನು ಸಮರ್ಪಕವಾಗಿ ಮಾಡಿದ ಆ ಇಬ್ಬರು ಎಳೆಯರು (ಬಾಲಾಜಿ, ಭಾರದ್ವಾಜ ?) ಹಿಂದಿನ ಸಾಲಿನಲ್ಲಿ ಕುಳಿತಿದ್ದರು.

ಧ್ವನಿವರ್ಧಕ ಬಳಸದ ಆ ಸಮಾರಂಭದಲ್ಲಿ ನಾಗತಿಹಳ್ಳಿ ಚಂದ್ರಶೇಖರ ಹೇಳುತ್ತಿದ್ದರು:

‘ಏರ್‌ಪೋರ್ಟಿನಲ್ಲಿ ಲಗೇಜ್‌ ಬಿಡಿಸಿ ತೋರಿಸಿ ಸೈ ಎನಿಸಿಕೊಂಡು ಮನೆಗೆ ಬರುವ ಕಿರಿಕಿರಿಯನ್ನು ನಾನು ಸಾಕಷ್ಟು ಅನುಭವಿಸಿದ್ದೇನೆ. ಈ ತಾಯಿ , ಇಷ್ಟೊಂದು ಪುಸ್ತಕ ಹೊತ್ಕೊಂಡು ಅಲ್ಲಿಂದ ಇಲ್ಲಿಯವರೆಗೂ ಬಂದು ಎಲ್ಲರ ಕೈಯಲ್ಲಿ ಪ್ರತಿಗಳನ್ನು ಇಟ್ಟಿದ್ದಾರೆ. ಇದು ಇವರಿಗೆ ಮಾತ್ರ ಸಾಧ್ಯ ’

ನಾಗಲಕ್ಷ್ಮಿ ಬೆಂಗಳೂರಿನ ತನಕ ಯಾಕಾದರೂ ಬಂದಿದ್ದರು ಅಂದರೆ, ಇದಕ್ಕೆ !

ಸ್ವತಃ ಲೇಖಕಿಯೂ ಆಗಿರುವ ನಾಗಲಕ್ಷ್ಮಿ ತಮ್ಮದೇ ಆದ ಕವನ ಸಂಕಲವನ್ನು ಹೊರತಂದಿದ್ದಾರೆ. ಅದೇನು ಸುದ್ದಿಯಲ್ಲ. ಇವತ್ತು ತಾವೇ ಬರೆದ ಕವನಗಳನ್ನು ತಾವೇ ಪ್ರಕಟಿಸಿ, ಯಾರೂ ಓದದಿದ್ದರೂ ಪರವಾಗಿಲ್ಲ ತಾವೇ ಓದಿ ಸುಖಿಸುವ , ನಾರ್ಸಿಸ್ಟ್‌ ಗಲ್ಲಿಗೊಬ್ಬರು ಹುಟ್ಟಿಕೊಂಡಿದ್ದಾರೆ. ಈ ಮಧ್ಯೆ, ಮರಣ ಶಯ್ಯೆಯಲ್ಲಿ ಮಲಗಿದ್ದ ಒಬ್ಬ ಸಂವೇದನಾಶೀಲ ಮನುಷ್ಯ ಮತ್ತು ಲೇಖಕನಿಗೆ ಇದೇ ನಾಗಲಕ್ಷ್ಮಿ ‘ಜೀವನ ಭಾಗ್ಯ’ ಕೊಟ್ಟರು ಎಂದರೆ ನೀವು ನಂಬುತ್ತೀರಾ?

Click here to go to top

ಮುಖಪುಟ / ಸಾಹಿತ್ಯ ಸೊಗಡು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more