ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾನ್ಸುರಿ ಮಾಂತ್ರಿಕ ಹರಿಪ್ರಸಾದ್‌ ಚೌರಾಸಿಯಾ

By Staff
|
Google Oneindia Kannada News

ಭಾರತೀಯ ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ಗುರುತರ ಸಾಧನೆ, ಉತ್ತರ ಭಾರತದ ಶ್ರೇಷ್ಟ ಬಾನ್ಸುರಿ ವಾದಕ ಎಂಬ ಕೀರ್ತಿ, ಸಮುದ್ರದಾಚೆಗಿನ ದೇಶಗಳಲ್ಲಿಯೂ ಮಾರ್ದನಿಸುವ ಬಾನ್ಸುರಿ- ಪಂಡಿತ್‌ ಹರಿಪ್ರಸಾದ್‌ ಚೌರಾಸಿಯಾ ಅವರಿಗೆ ಅಂತರರಾಷ್ಟ್ರೀಯ ಕೊಳಲುವಾದಕರೆಂಬ ಪ್ರಸಿದ್ಧಿ ತಂದು ಕೊಟ್ಟಿದೆ.

ಯುರೋಪ್‌ ಮತ್ತು ಅಮೆರಿಕಾಗಳಲ್ಲಿ ಕಚೇರಿ ನೀಡುವುದು ಚೌರಾಸಿಯಾ ಅವರಿಗೆ ಹೊಸತೇನಲ್ಲ . ಸಂಪ್ರದಾಯವನ್ನು ಉಳಿಸಿಕೊಂಡು ಹೋಗುವ ಜೊತೆಗೆ ಸೃಜನ ಶೀಲತೆಯನ್ನು ಪೋಷಿಸುವ ಚೌರಾಸಿಯಾ ಅವರ ಮನೋಭಾವ ಅಪರೂಪದ್ದು. ಉತ್ತರ ಭಾರತದ ಕೊಳಲು ವಾದನದಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರು. ಅವರದು ಶಾಸ್ತ್ರೀಯ ಸಂಗೀತದ ಹೊನಲು ಮಾತ್ರವಲ್ಲ . ಭಾರತೀಯ ಜನಪದ ಸಂಗೀತ ಕ್ಷೇತ್ರದಿಂದ ಹಿಡಿದು ಪಾಶ್ಚಾತ್ಯ ಸಂಗೀತದವರೆಗೆ ಅವರ ವ್ಯವಸಾಯ ಭೂಮಿಕೆ ಹರಡಿದೆ.

ಯಶಸ್ಸಿಗೆ ಏಣಿಯಾದ ‘ವಿಶ್ವಭಾಷೆ’ ಸಂಗೀತ
ಭಾರತೀಯ ಚಲನ ಚಿತ್ರಗಳಿಗೂ ಸಂಗೀತ ರಸವುಣಿಸಿದ ಚೌರಾಸಿಯಾ ಅವರು ‘ವಿಶ್ವಭಾಷೆ’ ಸಂಗೀತದ ಮೂಲಕ ತಲುಪಿದ್ದು ಸಾಧನೆಯ ಉತ್ತುಂಗ. ಪಂಡಿತ್‌ ಶಿವಕುಮಾರ್‌ ಶರ್ಮಾ ಜೊತೆಗೆ ಸಿಲ್‌ಸಿಲಾ, ಚಾಂದ್‌ನಿ, ಲಾಂಹೆ, ಡರ್‌, ಫಾಸ್ಲೆ, ಪರಂಪರಾ, ಚಲನಚಿತ್ರಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಅವರ ಪ್ರಾಯೋಗಿಕ ಆಲ್ಬಂ ‘ಇಟರ್ನಿಟಿ’ ಪಾಶ್ಚಾತ್ಯ ಸಂಗೀತದ ಅಂಶಗಳನ್ನು ತೆಕ್ಕೆಗೆ ತೆಗೆದುಕೊಂಡಿದೆ. ಹೀಗೆ ಪಾಶ್ಚಾತ್ಯ ಸಂಗೀತವನ್ನು ಭಾರತೀಯ ಶಾಸ್ತ್ರೀಯ ಸಂಗೀತದೊಂದಿಗೆ ಮೇಳೈಸುವ ಯತ್ನವನ್ನು ಚೌರಾಸಿಯಾ ಅವರು ನಿರಂತರ ನಡೆಸುತ್ತಲೇ ಬಂದಿದ್ದಾರೆ. ಓಸ್ಲೋದಲ್ಲಿ ಜಾಝ್‌ ಆರ್ಟಿಸ್ಟ್‌, ಜಾನ್‌ ಮ್ಯಾಕ್‌ ಲಾಫ್ಲಿನ್‌ ಮತ್ತು ಜ್ಯಾನ್‌ ಗಾರ್‌ಬರೆಕ್‌ ಅವರ ಸಹಯೋಗದಲ್ಲಿ ಸಿ.ಡಿ.ಯನ್ನೂ ವಿಶ್ವ ಸಂಗೀತಪ್ರಿಯರ ಮಡಿಲಿಗಿಟ್ಟಿದ್ದಾರೆ. ಈ ಸಿ.ಡಿ. ಚೌರಾಸಿಯಾ ಅವರ ಅಂತರರಾಷ್ಟ್ರೀಯ ಖ್ಯಾತಿಯನ್ನು ಮತ್ತಷ್ಟು ವಿಸ್ತರಿಸಿದೆ. ಹೀಗೆ ಭಜನ್‌, ಶಾಸ್ತ್ರೀಯ ಸಂಗೀತ, ಜಾನಪದ, ಸಂಪ್ರದಾಯದ ಹಾಡುಗಳು ಎಲ್ಲವೂ ಚೌರಾಸಿಯಾ ಕೈಯಲ್ಲಿ ಪಳಗಿವೆ.

ಚೌರಾಸಿಯಾ ಅವರು ಜಗತ್ತಿನ ಶ್ರೇಷ್ಟ ಸಂಗೀತ ತಜ್ಞರ ಜೊತೆಗೆ ವೇದಿಕೆಯನ್ನು ಹಂಚಿಕೊಂಡಿದ್ದಾರೆ. ಪಂಡಿತ್‌ ಜಸ್‌ರಾಜ್‌, ಪಂಡಿತ್‌ ಶಿವಕುಮಾರ್‌ ಶರ್ಮಾ, ಕಿಶೋರಿ ಅಮೋನ್‌ಕರ್‌, ಡಾ. ಹಲ್‌ ಮುರಾಲಿ ಕೃಷ್ಣನ್‌, ಉಸ್ತಾದ್‌ ಜಾಕಿರ್‌ ಹುಸೇನ್‌, ಜಾನ್‌ ಮ್ಯಾಕ್‌ ಲಾಫ್ಲಿನ್‌, ಜ್ಯಾನ್‌ ಗಾರ್‌ಬರೆಕ್‌, ಲಾರ್ರಿ ಕೋರ್ರಿಯೆಲ್‌, ಎಗ್‌ಬರ್‌ಟೋ ಗಿಸ್‌ ಮೋಂಟಿ .... ಹೀಗೆ ಲಿಸ್ಟ್‌ ಬೆಳೆಯುತ್ತದೆ.

ಪ್ರಶಸ್ತಿಗಳ ಪಟ್ಟಿ ಮಾಡುವುದಾದರೆ

1984 - ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ
1990- ಮಹಾರಾಷ್ಟ್ರ ಸರಕಾರದಿಂದ ಮಹಾರಾಷ್ಟ್ರ ಗೌರವ ಪುರಸ್ಕಾರ
1992- ಭಾರತ ಸರಕಾರದಿಂದ ಪದ್ಮಭೂಷಣ
1992- ಒರಿಸ್ಸಾ ಸರಕಾರದಿಂದ ಕೋನಾರ್ಕ ಸನ್ಮಾನ
1994- ಉತ್ತರ ಪ್ರದೇಶ ಸರಕಾರದಿಂದ ಯಶ್‌ ಭಾರತೀ ಸನ್ಮಾನ
1999- ಮಧ್ಯ ಪ್ರದೇಶ ಸರಕಾರದಿಂದ ಕಾಳಿದಾಸ ಸನ್ಮಾನ
2000- ಪದ್ಮವಿಭೂಷಣ ಪ್ರಶಸ್ತಿ ಮತ್ತು ಪ್ರಖ್ಯಾತ ಉಸ್ತಾದ್‌ ಹಫೀಸ್‌ ಖಾನ್‌ ಅವಾರ್ಡ್‌

ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X