ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬನ್ನಂಜೆ ಬರುತ್ತಿದ್ದಾರೆ!

By Staff
|
Google Oneindia Kannada News

*ಎಸ್‌. ಕೆ. ಹರಿಹರೇಶ್ವರ, ಸ್ಟಾಕ್‌ಟನ್‌, ಕ್ಯಾಲಿಫೋರ್ನಿಯಾ

ಕನ್ನಡ ಮತ್ತು ಸಂಸ್ಕೃತಗಳಲ್ಲಿ ಪ್ರಖ್ಯಾತ ವಿದ್ವಾಂಸರೂ, ಎರಡೂ ಭಾಷೆಗಳಲ್ಲಿ ಸಾಹಿತ್ಯ, ಇತಿಹಾಸ, ತತ್ವಶಾಸ್ತ್ರ, ವಿಮರ್ಶೆ ಮುಂತಾದ ಹಲವು ಪ್ರಕಾರಗಳಲ್ಲಿ ಅಧ್ಯಯನ, ಅಧ್ಯಾಪನ, ಚಿಂತನೆ, ಸಂಶೋಧನೆ, ಕಾವ್ಯಸೃಜನ, ಗ್ರಂಥ ರಚನೆ, ಪ್ರವಚನ - ಹೀಗೆ ಹಲವು ಬಗೆಗಳಲ್ಲಿ ನಿಸ್ಸೀಮರೆನಿಸಿ, ರಾಜ್ಯದಲ್ಲಿ ರಾಷ್ಟ್ರಮಟ್ಟದಲ್ಲಿ ಹಾಗೂ ಅಂತರರಾಷ್ಟ್ರೀಯ ಸ್ತರಗಳಲ್ಲಿ ಪುರಸ್ಕೃತರೂ, ತಮ್ಮ ಬಹುಮುಖ ವಿದ್ವತ್‌ ಪ್ರತಿಭೆಯಿಂದ ಕನ್ನಡ ನಾಡಿಗೂ ಭಾರತಕ್ಕೂ ಹೆಮ್ಮೆ ತಂದ ಬನ್ನಂಜೆ ಗೋವಿಂದಾಚಾರ್ಯರು ಅಮೆರಿಕಾ ಪ್ರವಾಸ ಮಾಡಲಿದ್ದಾರೆ.

ಸಧ್ಯಕ್ಕೆ ತಿಳಿದಿರುವ, ತಾತ್ಕಾಲಿಕ ವೇಳಾಪಟ್ಟಿಯಂತೆ ಅವರು ಸೆಪ್ಟೆಂಬರ್‌ 1 , 2001 ರಿಂದ ಅಕ್ಟೋಬರ್‌ 11, 2001 ರವರೆಗೆ ಅಮೆರಿಕಾದಲ್ಲಿ ಇರುತ್ತಾರೆ.

ಮನಮೋಹಕ ಮಾತಾಳಿ
ಬನ್ನಂಜೆಯವರ ವಿದ್ವತ್ಪೂರ್ಣ ಪ್ರವಚನಗಳನ್ನು ಕೇಳುವುದೇ ಒಂದು ಸೌಭಾಗ್ಯ. ನಿರರ್ಗಳವಾಗಿ ಹರಿಯುವ ಬನ್ನಂಜೆಯವರ ಮಾತಿನ ಮೋಡಿ ಎಂತಹುದೆಂದರೆ, ಎಂತೆಂಥ ಕಗ್ಗಂಟೆನಿಸಿದ ಕ್ಲಿಷ್ಟ ವಿಷಯಗಳನ್ನೂ ಬೆಣ್ಣೆಯಾಗಿಸಿ, ಸಾಹಿತ್ಯ ಮತ್ತು ಆಧ್ಯಾತ್ಮ , ಭಕ್ತಿ ಮತ್ತು ಜ್ಞಾನಗಳನ್ನು ಸಮನ್ವಯಿಸಿ, ಹೃದಯಂಗಮವಾಗಿಸಿ, ಭಿನ್ನರುಚಿಯ ಪಂಡಿತರಿಗೂ ಪಾಮರರಿಗೂ ಅದೊಂದು ರಸದೌತಣದ ಸಮಾರಾಧನೆಯಾಗಿಸಿ ಬಿಡುತ್ತದೆ ! ಭಾರತಕ್ಕೆ ಹೋದಾಗ ನಾವು ಅವರ ಭಾಷಣ ಕೇಳಿ ತಲೆದೂಗಿದ್ದುಂಟು, ಅಲ್ಲಿಂದ ತಂದ ಧ್ವನಿಮುದ್ರಿಕೆಗಳನ್ನು ಮತ್ತೆ ಮತ್ತೆ ಕೇಳಿ ಸಂತೋಷಿಸಿದ್ದುಂಟು; ಈಗ ನೇರವಾಗಿ ಅವರ ಸಮಕ್ಷಮವೇ ಕುಳಿತು ಆ ವಾಗ್ಝರಿಯನ್ನು ಆಲಿಸುವ, ಅದರ ಸೊಗಸನ್ನು ಅನುಭವಿಸುವ ಸದವಕಾಶ ಅಮೆರಿಕಾದ ಕನ್ನಡಿಗರಿಗೆ ಕೈಗೆಟುಕುವ ಸಾಧ್ಯತೆಯಿದೆ. ಬನ್ನಂಜೆಯವರು ಇತ್ತ ಬರುತ್ತಿದ್ದಾರೆ !

ಅರವತ್ತೆೈದು ವರ್ಷ ವಯಸ್ಸಿನ ಜ್ಞಾನವೃದ್ಧರು, ನಮ್ಮ ಬನ್ನಂಜೆಯವರು ! ವೇದ ಮತ್ತು ವೇದಾಂಗಗಳ ಬಗ್ಗೆ ಅವರ ತಾದಾತ್ಮ್ಯತೆಯ ಕುರುಹೋ ಎಂಬಂತೆ ಉಡುಪಿಯಲ್ಲಿ ಅವರ ಮನೆಯ ಹೆಸರು ‘ಈಶಾವಾಸ್ಯ’! ಮೊದಲು ತರ್ಕಕೇಸರಿ ಪಡುಮುನ್ನೂರು ನಾರಾಯಣ ಆಚಾರ್ಯರಲ್ಲಿ ಶಿಷ್ಯವೃತ್ತಿ ; ಆಮೇಲೆ, ಪಳಿಮಾರು ಭಂಡಾರಕೇರಿ ಮಠದ ವಿದ್ಯಾಮಾನ್ಯ ತೀರ್ಥರ ಬಳಿ, ಪೇಜಾವರ ಮಠದ ವಿಶ್ವೇಶ ತೀರ್ಥರ ಅಡಿ ಹತ್ತು ವರ್ಷ ಕಾಲ ವೇದ , ವೇದಾಂಗಗಳು, ಮಹಾಭಾರತ, ಪುರಾಣಗಳಲ್ಲಿ ವ್ಯಾಸಂಗ. ದ್ವೆತ ಮತ ಪ್ರವರ್ತಕ ಆಚಾರ್ಯ ಮಧ್ವರ ತತ್ವವಾದದಲ್ಲಿ ವಿಶೇಷ ಅಧ್ಯಯನ, ಪರಿಣತಿ.

ಆಚಾರ್ಯ ಶ್ರೀಮಧ್ವರ ಮೇರು ಕೃತಿ ಶ್ರೇಣಿ ಪ್ರಕಟಿಸಿದ ಸಾಹಸಿ

ಬನ್ನಂಜೆ ಗೋವಿಂದಾಚಾರ್ಯರ ಮಹತ್ವದ ಗ್ರಂಥ ಸಂಪಾದನೆಯೆಂದರೆ ಒಟ್ಟು ಸುಮಾರು ಎರಡು ಸಾವಿರ ಪುಟಗಳ ಐದು ಸಂಪುಟಗಳಲ್ಲಿ ಆಚಾರ್ಯ ಶ್ರೀಮಧ್ವರ ಸಂಪೂರ್ಣ ಕೃತಿ ಸಮುಚ್ಛಯ. ಈವರೆಗೆ ಅಪ್ರಕಟಿತವಾಗಿದ್ದ (ಉದಾಹರಣೆಗೆ, ತಿಥಿ ನಿರ್ಣಯ ಮತ್ತು ನ್ಯಾಸ ಪದ್ಧತಿ), ಪ್ರಕಟಿತವಾಗಿದ್ದರೂ ಶುದ್ಧಪಾಠ ವ್ಯಾಖ್ಯಾನ ವಿವರಣೆಗೆ ಹಾತೊರೆಯುತ್ತಿದ್ದ ಮಧ್ವಾಚಾರ್ಯರ ಎಲ್ಲ ರಚನೆಗಳ ಅಧಿಕೃತ ಪಾಠ, ಅಡಿಟಿಪ್ಪಣಿ, ವೃತ್ತಿ, ಕಾರಿಕೆ, ವ್ಯಾಖ್ಯೆಗಳೊಂದಿಗೆ ಈ ಮೇರು ಕೃತಿ ಶ್ರೇಣಿಯನ್ನು ಪ್ರಕಟಿಸಿದ ಸಾಹಸಿಗಳು, ಬನ್ನಂಜೆಯವರು !

ಉಭಯಭಾಷೆಗಳಲ್ಲಿ ಪ್ರಭುತ್ವವುಳ್ಳ ಬನ್ನಂಜೆಯವರು ಕನ್ನಡಿಸಿದ ಸಂಸ್ಕೃತ ಗ್ರಂಥಗಳು- ಬಾಣಭಟ್ಟನ ಕಾದಂಬರಿ, ಕಾಳಿದಾಸನ ಅಭಿಜ್ಞಾನ ಶಾಕುಂತಲ, ಶೂದ್ರಕನ ಮೃಚ್ಛಕಟಿಕಾ, ಭವಭೂತಿಯ ಉತ್ತರರಾಮಚರಿತಗಳು ಜನಪ್ರಿಯವಾಗಿವೆ. ಮಧ್ವಾಚಾರ್ಯರ ತಂತ್ರಸಾರ ಸಂಗ್ರಹ, ರಾಮಾಯಣ, ಕೃಷ್ಣಾಮೃತ ಮಹಾರ್ಣವ ಮೊದಲಾದವನ್ನೂ, ನಾರಾಯಣ ಪಂಡಿತರ ಸಂಗ್ರಹರಾಮಾಯಣ, ಪ್ರಮೇಯ ನವಮಲ್ಲಿಕಾ ಮುಂತಾದವುಗಳನ್ನೂ, ಕೇನ,ಈಶಾವಾಸ್ಯ ಮುಂತಾದ ಹಲವು ಪ್ರಮುಖ ಉಪನಿಷತ್‌ಗಳನ್ನೂ ಕನ್ನಡಿಸಿದ್ದಾರೆ. ಮೂವತ್ತಕ್ಕೂ ಹೆಚ್ಚು ಕೃತಿಗಳು ಹೊರಬಂದಿವೆ; ಇವರ ಸುಮಾರು ಎಂಟುನೂರಕ್ಕೂ ಹೆಚ್ಚು ಸಂಶೋಧನಾತ್ಮಕ ಲೇಖನಗಳು ಪ್ರಕಟಿತವಾಗಿವೆ.


ಮುಖಪುಟ / ಸಾಹಿತ್ಯ ಸೊಗಡು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X