ರಮೇಶ್ ಜಾರಕಿಹೊಳಿಗೆ ಮಂತ್ರಿ ಸ್ಥಾನ ಕೊಡಲಿ- ಶಾಸಕ ರಾಜೂ ಗೌಡ ಆಗ್ರಹ
ಯಾದಗಿರಿ, ಅಕ್ಟೋಬರ್ 18: ರಾಜ್ಯ ಸಚಿವ ಸಂಪುಟ ವಿಸ್ತರಣೆ ಸಂಬಂಧ ಮುಖ್ಯಮಂತ್ರಿಗಳು ನಿರ್ಧರಿಸುತ್ತಾರೆ. ಇದರಲ್ಲಿ ಸಿಎಂ ಅವರದೇ ಪರಮಾಧಿಕಾರ ಎನ್ನುವ ಬಿಜೆಪಿ ಕರ್ನಾಟಕದ ಉಸ್ತುವಾರಿ ಅರುಣ್ ಸಿಂಗ್ ಅವರ ಹೇಳಿಕೆಯ ಬಳಿಕ ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆಯ ಬಗ್ಗೆ ಚರ್ಚೆಗಳು ಆರಂಭವಾಗಿದೆ.
ಸಚಿವ ಸಂಪುಟ ವಿಸ್ತರಣೆ ಮುನ್ನೆಲೆಗೆ ಬಂದ ಹಿನ್ನೆಲೆಯಲ್ಲಿ ಸಚಿವಾಕಾಂಕ್ಷಿಗಳು ಹಾಗೂ ಅವರ ಬೆಂಬಲಿಗರ ಚಟುವಟಿಕೆಗಳು ಗರಿಗೆದರಿದೆ. ಈ ಬಗ್ಗೆ ಶಾಸಕ ರಾಜೂಗೌಡ ಮಾತನಾಡಿದ್ದು, "ನಾನು ಸಚಿವ ಆಕಾಂಕ್ಷಿ ಅಲ್ಲ. ನನ್ನ ಬೇಡಿಕೆಗಳೆಲ್ಲವನ್ನೂ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು, ರಾಜ್ಯ ಹಾಗೂ ಕೇಂದ್ರ ನಾಯಕರು ಪೂರೈಸಿದ್ದಾರೆ," ಎಂದಿದ್ದಾರೆ.
Breaking; ಶಾಸಕ ಹರೀಶ್ ಪೂಂಜಾಗೆ ಬೆದರಿಕೆ, ಸಿಐಡಿ ತನಿಖೆಗೆ ಆದೇಶ
ಯಾದಗಿರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, "2016ರಲ್ಲಿ ನಾವು ಸಮಾವೇಶ ಮಾಡಿದ ಸಂದರ್ಭದಲ್ಲಿ ಒಂದು ಬೇಡಿಕೆ ಇಟ್ಟಿದ್ದೆವು. ನಮಗೆ 16 ರಿಂದ 17 ಶೇಕಡಾ ಮೀಸಲಾತಿ ಕೊಡಿ ನಾವು ಯಾರೂ ಸಚಿವ ಸ್ಥಾನ ಕೇಳಲ್ಲ ಎಂದು ಮೊದಲೇ ಹೇಳಿದ್ದೇವು. ಅದಾದ ಮೇಲೂ ಬಿ.ಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದ ಸಂದರ್ಭದಲ್ಲಿ, ಮಂತ್ರಿ ಮಂಡಲ ವಿಸ್ತರಣೆಯಾಗುವ ಸಂದರ್ಭದಲ್ಲಿಯೂ ನಾವು ಇದೇ ಮಾತು ಹೇಳಿದ್ದೇವು," ಎಂದರು.
"ರಾಜ್ಯ ನಾಯಕರು ಈಗ ನಮ್ಮ ಬೇಡಿಕೆಗಳನ್ನು ಪೂರ್ಣಗೊಳಿಸಿದ್ದಾರೆ. ಎಲ್ಲರಿಗೂ ಮೀಸಲಾತಿ ನೀಡಿದ್ದಾರೆ. ನಮ್ಮ ಎಲ್ಲಾ ಆಸೆಗಳನ್ನು ಈಡೇರಿಸಿದ ಮೇಲೆ ಮತ್ತೆ ನಾವು ಹೋಗಿ ಮಂತ್ರಿ ಸ್ಥಾನ ಕೇಳಿದರೆ, ನಮ್ಮ ಮಾತಿಗೆ ಬೆಲೆ ಇರಲ್ಲ. ಹೀಗಾಗಿ ನಾವು ಮಂತ್ರಿ ಸ್ಥಾನ ಕೇಳುತ್ತಿಲ್ಲ. ನಾವೆಲ್ಲ ಪಕ್ಷಕ್ಕಾಗಿ ದುಡಿಯುತ್ತೇವೆ. ಪಕ್ಷ ಸಂಘಟನೆಗೆ ನಾವು ಕೆಲಸ ಮಾಡುತ್ತೇವೆ ಹೊರತು ಸಚಿವ ಸ್ಥಾನ ಕೇಳುವವರಲ್ಲ," ಎಂದು ಸ್ಪಷ್ಟಪಡಿಸಿದರು.
"ನಾವು ಸಚಿವ ಸ್ಥಾನ ಆಕಾಂಕ್ಷಿ ಅಲ್ಲ. ಮೊನ್ನೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಬಳಿ ಖುದ್ದು ಹೇಳಿದ್ದೇನೆ. ನನಗೆ ಮಂತ್ರಿ ಸ್ಥಾನ ಬೇಡ. ನನ್ನ ಎಲ್ಲಾ ಆಸೆಗಳನ್ನು ಈಡೇರಿಸಿದ್ದಾರೆ. ನನ್ನ ಕ್ಷೇತ್ರದ ಅಭಿವೃದ್ಧಿಗೆ 600ಕ್ಕೂ ಹೆಚ್ಚು ಕೋಟಿ ರೂಪಾಯಿ ಅನುದಾನ ಕೊಟ್ಟಿದ್ದಾರೆ. ಕೇಳದೇನೆ ಎಲ್ಲಾ ಕೊಟ್ಟಿದ್ದಾರೆ. ಮಂತ್ರಿ ಮಾಡುವ ಕೆಲಸಕ್ಕಿಂತ ಹೆಚ್ಚು ಕೆಲಸ ಮಾಡುತ್ತಿದ್ದೇನೆ. ಈಗಾಗಲೇ ನನ್ನ ಉಳಿದ ಬೇಡಿಕೆಗಳನ್ನು ಮುಖ್ಯಮಂತ್ರಿಗಳ ಮುಂದಿಟ್ಟಿದ್ದೇನೆ" ಎಂದರು.
ಇನ್ನು "ಮುಖ್ಯಮಂತ್ರಿಗಳು ಕೆಲವೊಂದು ನಾಯಕರಿಗೆ ಸಚಿವ ಸ್ಥಾನ ನೀಡುವ ಮಾತುಕೊಟ್ಟಿದ್ದಾರೆ. ಕೆಲವೊಬ್ಬರನ್ನು ಸಚಿವರನ್ನಾಗಿ ಮಾಡುವ ಅಗತ್ಯವಿದೆ. ಮಾಜಿ ಸಚಿವರಾದ ಕೆ.ಎಸ್ ಈಶ್ವರಪ್ಪ ಹಾಗೂ ರಮೇಶ್ ಜಾರಕಿಹೊಳಿ ಅವರನ್ನು ಸಚಿವರನ್ನಾಗಿ ಮಾಡಬೇಕಿದೆ. ಯಾಕೆಂದರೆ ಅವರು ಆರೋಪ ಮುಕ್ತರಾಗಿ ಬಂದಿದ್ದಾರೆ. ಅಂತವರನ್ನು ಸಚಿವರನ್ನಾಗಿ ಮಾಡಿದರೆ ಉತ್ತಮವಾಗಿರುತ್ತದೆ," ಎಂದು ತಮ್ಮ ಅಭಿಪ್ರಾಯ ತಿಳಿಸಿದರು.
"ನಾವೆಲ್ಲ ಪಕ್ಷ ಕಟ್ಟುವಂತಹ ಕೆಲಸಗಳನ್ನು ಮಾಡುತ್ತೇವೆ. ನಾವು ಕಾಟಾಚಾರಕ್ಕೆ ಮಂತ್ರಿಯಾಗಬೇಕಿಲ್ಲ. ಸಚಿವರಾದ ಮೇಲೆ ಎನಾದರೂ ಒಂದು ಸಾಧನೆ ಮಾಡಬೇಕು. ಆ ಸ್ಥಾನಕ್ಕೆ ಗೌರವ ತಂದುಕೊಡುವ ಕೆಲಸ ಮಾಡಬೇಕು. ಈ ಹಿಂದೆ 113 ಬಂದಿದ್ದರೆ ನಾವೆಲ್ಲ ಮೊದಲ ಹಂತದಲ್ಲೇ ಸಚಿವರಾಗುತ್ತಿದ್ದೇವು. ಇದೀಗ ನಮ್ಮ ಸರ್ಕಾರ ಸಮ್ಮಿಶ್ರ ಸರ್ಕಾರದಂತಾಗಿದೆ. ಮುಂದಿನ ಬಾರಿ 2023ರ ಚುನಾವಣೆಗೆ ದುಡಿಯುತ್ತೇವೆ. 150ರಲ್ಲಿ 130 ಸ್ಥಾನಗಳನ್ನು ಗೆದ್ದೇ ಗೆಲ್ಲುತ್ತೇವೆ. ಆಗ ನಮ್ಮನ್ನು ಸಚಿವರನ್ನಾಗಿ ಮಾಡುತ್ತಾರೆ" ಎಂದರು.