ಎಚ್1 ಬಿ ವೀಸಾ ಲಾಟರಿ ಮೂಲಕ ಆಯ್ಕೆ ಪ್ರಕ್ರಿಯೆಯಲ್ಲಿ ಬದಲಾವಣೆ ಇಲ್ಲ!
ವಾಷಿಂಗ್ಟನ್, ಡಿಸೆಂಬರ್ 22: ಯುಎಸ್ ವೀಸಾ ಪ್ರಕ್ರಿಯೆಯಲ್ಲಿ ಹೆಚ್ಚಿನ ತಿದ್ದುಪಡಿ ನಿರೀಕ್ಷೆಯಲ್ಲಿದ್ದವರಿಗೆ ಇಲ್ಲಿದೆ ಮಹತ್ವದ ಸುದ್ದಿ. ಎಚ್1 ಬಿ ವೀಸಾ ಪ್ರಕ್ರಿಯೆಯನ್ನು ಬದಲಾಯಿಸುವ ಅಗತ್ಯವಿಲ್ಲ ಎಂದು ಯುನೈಟೆಡ್ ಸ್ಟೇಟ್ಸ್ ಅಧಿಕೃತವಾಗಿ ಪ್ರಕಟಣೆ ಹೊರಡಿಸಲು ಮುಂದಾಗಿದೆ.
ಯುಎಸ್ ಪೌರತ್ವ ಮತ್ತು ವಲಸೆ ಸೇವೆಗಳ ಕಚೇರಿಯಿಂದ ಈ ಸುದ್ದಿ ಬಂದಿದ್ದು, ಅಂತಿಮ ನಿಯಮಗಳ ಕುರಿತ ಪ್ರಕಟಣೆಯನ್ನು ಡಿಸೆಂಬರ್ 22 ರಂದು ಫೆಡರಲ್ ರಿಜಿಸ್ಟರ್‌ನಲ್ಲಿ ಪ್ರಕಟಿಸಲಾಗುವುದು ಎಂದು ತಿಳಿದು ಬಂದಿದೆ.
ಕ್ಯಾಲಿಫೋರ್ನಿಯಾದ ನಾರ್ಥನ್ ಡಿಸ್ಟ್ರಿಕ್ಟ್ ನ್ಯಾಯಾಲಯವು ಈ ಕುರಿತಂತೆ ನೀಡಿದ ಆದೇಶದ ಅನ್ವಯ ಯುಎಸ್ ಸರ್ಕಾರ ಈ ಕ್ರಮ ಜರುಗಿಸಲಿದೆ.
ಕಳೆದ ಜನವರಿಯಲ್ಲಿ, ಎಚ್ 1 ಬಿ ವೀಸಾ ಅರ್ಜಿದಾರರನ್ನು ಹೇಗೆ ಆಯ್ಕೆ ಮಾಡಲಾಗುತ್ತದೆ ಎಂಬುದನ್ನು ಮಾರ್ಪಡಿಸಲು ಯುಎಸ್ ಸರ್ಕಾರ ಮುಂದಾಗಿತ್ತು. ಲಾಟರಿ-ಆಧಾರಿತ ವ್ಯವಸ್ಥೆಯನ್ನು ಬದಿಗೊತ್ತಿ ಶ್ರೇಯಾಂಕ ಮತ್ತು ವೇತನ ಮಟ್ಟಗಳ ಆಧಾರದ ಮೇಲೆ ಆಯ್ಕೆಗೆ ಮುಂದಾಗಿತ್ತು.
ಆದರೆ, ಹಲವಾರು ಉದ್ಯಮ ಸಂಸ್ಥೆಗಳು ಮತ್ತು ಕಂಪನಿಗಳು ಪ್ರಸ್ತಾವನೆಯನ್ನು ವಿರೋಧಿಸಿದ್ದವು. ಯುಎಸ್ ಚೇಂಬರ್ ಆಫ್ ಕಾಮರ್ಸ್ ಮತ್ತು ಇತರರು ಉದ್ದೇಶಿತ ನಿಯಮದ ವಿರುದ್ಧ ಮೊಕದ್ದಮೆಗಳನ್ನು ಹೂಡಿದ್ದರು, ನ್ಯಾಯಾಲಯ ಹಾಲಿ ವ್ಯವಸ್ಥೆ ಮುಂದುವರೆಸಲು ಸೂಚಿಸಿ ತನ್ನ ತೀರ್ಪು ನೀಡಿದೆ.

ಮಾಜಿ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಡಳಿತವು ಕೊನೆಗೊಳ್ಳುವ ವೇಳೆಯಲ್ಲಿ ವೀಸಾ ಪ್ರಕ್ರಿಯೆಯಲ್ಲಿ ಬದಲಾವಣೆ ತಂದಿದ್ದರು. H-1B ಅರ್ಜಿಗಳನ್ನು ಸಲ್ಲಿಸಲು ಬಯಸುವ ಅರ್ಜಿದಾರರಿಗೆ ನೋಂದಣಿ ಅಗತ್ಯತೆಯ ಮಾರ್ಪಾಡು ಜಾರಿಗೊಳಿಸಿದ್ದರು.
ಪ್ರಸ್ತಾವಿತ ಹೊಸ ನಿಯಮಗಳು ಈ ವರ್ಷದ ಮಾರ್ಚ್ 9 ರಂದು ಜಾರಿಗೆ ಬರಬೇಕಿತ್ತು ಮತ್ತು 2022 ರ ಹಣಕಾಸು ವರ್ಷದ H-1B ಪ್ರಕ್ರಿಯೆಯ ಮೇಲೆ ಪರಿಣಾಮ ಬೀರಬಹುದು ಎಂದು ಅಂದಾಜಿಸಲಾಗಿತ್ತು. ಸದ್ಯ ಹಾಲಿ ಪ್ರಕ್ರಿಯೆ ಜಾರಿಗೊಳಿಸಲು ಸರ್ಕಾರ ಮುಂದಾಗಿದೆ.
ವೀಸಾ ನೀತಿ-ಬೈಡನ್ ಆಡಳಿತ
ತಾಂತ್ರಿಕ ನೈಪುಣ್ಯತೆ ಹೊಂದಿರುವ ಐಟಿ ಉದ್ಯೋಗಿಗಳನ್ನು ಅಮೆರಿಕದ ಸಂಸ್ಥೆಗಳು ನೇಮಕ ಮಾಡಿಕೊಳ್ಳುವುದಕ್ಕಾಗಿ ಹೆಚ್1 ಬಿ ವೀಸಾಗಳು ಸಹಕಾರಿಯಾಗಿದ್ದು, ಐಟಿ ಕ್ಷೇತ್ರದಲ್ಲಿರುವ ಅತಿ ಹೆಚ್ಚು ಭಾರತೀಯ ಉದ್ಯೋಗಿಗಳು ಹೆಚ್1 ಬಿ ವೀಸಾ ಪಡೆಯುವುದಕ್ಕೆ ಯತ್ನಿಸುತ್ತಾರೆ.
ಟ್ರಂಪ್ ನೀತಿಯನ್ನು ಹಿಂಪಡೆದು, H1B ವೀಸಾ ವಿಚಾರದಲ್ಲಿ ಬಹುದೊಡ್ಡ ಬದಲಾವಣೆ ತಂದಿದ್ದಾರೆ. ಹಾಗೇ ನೂತನ ಪೌರತ್ವ ನೀತಿಯಲ್ಲಿ ಕುಟುಂಬ ಆಧಾರಿತ ವಲಸೆ ಮತ್ತು ಕೌಟುಂಬಿಕ ಒಗ್ಗಟ್ಟಿನ ಸಂರಕ್ಷಣೆಗೆ ಆದ್ಯತೆ ನೀಡಿದ್ದಾರೆ. ಟ್ರಂಪ್ ಆಡಳಿತದಲ್ಲಿ 'ಗ್ರೀನ್ ಕಾರ್ಡ್' ಹೊಂದಿರುವ ಜನರಿಗೂ ಅಮೆರಿಕ ಪೌರತ್ವ ನೀಡುವ ಕಾರ್ಯ ನಿಂತುಹೋಗಿತ್ತು. ಗ್ರೀನ್ ಕಾರ್ಡ್ ಇರುವವರಿಗೆ ಉದ್ಯೋಗ ಆಧಾರಿತ ವೀಸಾ ನೀಡಲಾಗುತ್ತಿದ್ದು, ಇವರು ಅಮೆರಿಕದ ಶಾಶ್ವತ ಪೌರತ್ವ ಪಡೆಯಬಹುದು.
ಅಮೆರಿಕದಲ್ಲಿ ಈಗ ಸುಮಾರು 6 ಲಕ್ಷ ಎಚ್ -1 ಬಿ ವೀಸಾ ಹೊಂದಿರುವವರು ಕಾರ್ಯನಿರ್ವಹಿಸುತ್ತಿದ್ದಾರೆ. ಅವರಲ್ಲಿ ಹೆಚ್ಚಿನವರು ಭಾರತ ಮೂಲದವರು. ಚೀನಾವು ಎರಡನೇ ಸ್ಥಾನದಲ್ಲಿದೆ. ಹೊರಗಿನಿಂದ ಬರುವ ಎಲ್ಲಾ ಕ್ಷೇತ್ರಗಳಲ್ಲಿ ಕೆಲಸ ಮಾಡುವ ವೃತ್ತಿಪರರಿಗೆ ಪ್ರತಿ ವರ್ಷ ಅಮೆರಿಕ ಸರ್ಕಾರವು 85 ಸಾವಿರ ಎಚ್ -1 ಬಿ (H-1B) ವೀಸಾಗಳನ್ನು ನೀಡುತ್ತದೆ. ಇದು ಅತಿ ಹೆಚ್ಚು ಐಟಿ ವೃತ್ತಿಪರರನ್ನು ಹೊಂದಿದೆ.
2015ರಿಂದ ಈಚೆಗೆ ಎಚ್ 1ಬಿ ವೀಸಾ ಹೊಂದಿರುವವರ ಬಾಳ ಸಂಗಾತಿ ಅಥವಾ ಉನ್ನತ ಕೌಶಲ್ಯ ಇರುವವರು, ಗ್ರೀನ್ ಕಾರ್ಡ್ ಗಾಗಿ ಕಾಯುತ್ತಿರುವ ವೀಸಾ ಇರುವಂಥವರು ಎಚ್ -4 ಅವಲಂಬಿತ ವೀಸಾದ ಅಡಿಯಲ್ಲಿ ಅಮೆರಿಕದಲ್ಲಿ ಉದ್ಯೋಗ ಮಾಡಬಹುದಿತ್ತು. ಒಬಾಮ ಆಡಳಿತಾವಧಿಯಲ್ಲಿ ಈ ನಿಯಮ ಪರಿಚಯಿಸಲಾಗಿತ್ತು. ಆದರೆ, ಕಳೆದ ಅಧ್ಯಕ್ಷೀಯ ಚುನಾವಣೆ ಬಳಿಕ ಅಮೆರಿಕದಲ್ಲಿ 30 ಲಕ್ಷ ಉದ್ಯೋಗ ಸೃಷ್ಟಿಯಾಗಿದೆ. ಆದರೆ ಅಮೆರಿಕದಲ್ಲಿ ನಿರುದ್ಯೋಗ ಸಮಸ್ಯೆ ತಾರಕಕ್ಕೇರಿದೆ. ಹೀಗಾಗಿ ಎಚ್-4 ವೀಸಾ ರದ್ದು ಮಾಡುವ ಅನಿವಾರ್ಯತೆ ಎದುರಾಗಿದೆ ಎಂದು ಕೋವಿಡ್ 19 ಸಂದರ್ಭದಲ್ಲಿ ವೀಸಾ ನೀತಿಯನ್ನು ಟ್ರಂಪ್ ಸರ್ಕಾರ ಇನ್ನಷ್ಟು ಬಿಗಿಗೊಳಿಸಿತ್ತು.












Click it and Unblock the Notifications