ಅಮೆರಿಕ ಮುನ್ನಡೆಸುತ್ತಿರುವವರೇ ಭಾರತ ಮೂಲದ ಅಮೆರಿಕನ್ನರು ಎಂದ ಬೈಡನ್
ವಾಷಿಂಗ್ಟನ್, ಮಾರ್ಚ್ 05: ಈಗ ಅಮೆರಿಕವನ್ನು ಮುನ್ನಡೆಸುತ್ತಿರುವವರೇ ಭಾರತ ಮೂಲದ ಅಮೆರಿಕನ್ನರು ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.
ಜೋ ಬೈಡನ್ ಅಮೆರಿಕದ ನೂತನ ಅಧ್ಯಕ್ಷರಾಗಿ ಪದಗ್ರಹಣ ಮಾಡಿದ 50 ದಿನಗಳೊಳಗೆ ತಮ್ಮ ಆಡಳಿತದ ಪ್ರಮುಖ ಸ್ಥಾನಗಳಿಗೆ ಕನಿಷ್ಠ 55 ಭಾರತ ಮೂಲದ ಅಮೆರಿಕನ್ನರನ್ನು ನೇಮಕ ಮಾಡಿದ್ದಾರೆ.
ಇದುವರೆಗೆ ಒಬಾಮಾ-ಬೈಡನ್ ಆಡಳಿತವು ಹೆಚ್ಚಿನ ಸಂಖ್ಯೆಯ ಭಾರತ ಮೂಲದ ಅಮೆರಿಕನ್ನರನ್ನು ನೇಮಕ ಮಾಡಿದ ಹೆಗ್ಗಳಿಕೆಯನ್ನು ಹೊಂದಿದೆ.

ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾದ ಐತಿಹಾಸಿಕ ಪರ್ಸಿವಿಯರೆನ್ಸ್ ನೌಕೆಯು ಯಶಸ್ವಿಯಾಗಿ ಮಂಗಳ ಗ್ರಹದಲ್ಲಿ ಇಳಿದಿದೆ. ಭಾರತೀಯ ಮೂಲದ ಸ್ವಾತಿ ಮೋಹನ್ ಈ ಮಹತ್ವಾಕಾಂಕ್ಷೆಯ ಯೋಜನೆಯ ಕಾರ್ಯಾಚರಣೆಯ ನಿರ್ದೇಶಕ, ಪಥ ನಿರ್ದೇಶನ ಮತ್ತು ನಿಯಂತ್ರಣ ಕಾರ್ಯಾಚರಣೆಯ ತಂಡದ ಮುಖ್ಯಸ್ಥರಾಗಿದ್ದಾರೆ.
ಹೀಗೆಯೇ ಅಮೆರಿಕ ಆಡಳಿತದಲ್ಲಿ ಭಾರತದ ಮೂಲದ ಅಮೆರಿಕನ್ನರು ಹೆಚ್ಚಿನ ಸಂಖ್ಯೆಯಲ್ಲಿ ಪ್ರಮುಖ ಹುದ್ದೆಗಳನ್ನು ವಹಿಸುತ್ತಿರುವುದನ್ನು ವಿಶೇಷವಾಗಿ ಉಲ್ಲೇಖ ಮಾಡಿರುವ ಅಮೆರಿಕ ಅಧ್ಯಕ್ಷ ಜೋ ಬೈಡನ್, ಭಾರತ ಮೂಲದ ಅಮೆರಿಕನ್ನರು ದೇಶವನ್ನು ಮುನ್ನಡೆಸುತ್ತಿದ್ದಾರೆ ಎಂದು ಶ್ಲಾಘಿಸಿದ್ದಾರೆ.
ಬೈಡನ್ ವಿಜ್ಞಾನಿಗಳೊಂದಿಗೆ ನಡೆಸಿದ ವರ್ಚ್ಯುವಲ್ ಸಂವಾದದಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ್ದು, ಸ್ವಾತಿ ಮೋಹನ್, ಕಮಲಾ ಹ್ಯಾರಿಸ್, ವಿನಯ್ ರೆಡ್ಡಿ ಬಗ್ಗೆ ಉಲ್ಲೇಖಿಸಿದ್ದಾರೆ.












Click it and Unblock the Notifications