ಇರಾನ್‌ನಿಂದ ತೈಲ ಖರೀದಿಸಿದರೆ ನೆಟ್ಟಗಿರೊಲ್ಲ: ಟ್ರಂಪ್ ಬೆದರಿಕೆ, ಭಾರತಕ್ಕೂ ಸಂಕಷ್ಟ
ವಾಷಿಂಗ್ಟನ್, ಅಕ್ಟೋಬರ್ 12: ಇರಾನ್ ಮೇಲಿನ ನಿರ್ಬಂಧ ನವೆಂಬರ್ 4ರಿಂದ ಜಾರಿಗೆ ಬರುತ್ತಿದ್ದು, ಅಷ್ಟರೊಳಗೆ ಎಲ್ಲ ದೇಶಗಳು ಅಲ್ಲಿಂದ ತೈಲ ಖರೀದಿ ಪ್ರಮಾಣವನ್ನು ಸಂಪೂರ್ಣ ಸ್ಥಗಿತಗೊಳಿಸಬೇಕು. ಇದನ್ನು ಪಾಲಿಸದ ದೇಶಗಳನ್ನು ಅಮೆರಿಕ ನೋಡಿಕೊಳ್ಳಲಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.
ಇರಾನ್‌ನಿಂದ ಕಚ್ಚಾ ತೈಲ ಖರೀದಿಗೆ ತನ್ನ ಸಂಸ್ಥೆಗಳು ವ್ಯವಹಾರ ನಡೆಸಿವೆ ಎಂದು ಭಾರತ ಪ್ರಕಟಿಸಿದ ಬೆನ್ನಲ್ಲೇ ಟ್ರಂಪ್ ಈ ಎಚ್ಚರಿಕೆ ನೀಡಿದ್ದಾರೆ.
ಅಲ್ಲದೆ, ಅಮೆರಿಕ ನೀಡಿರುವ ಗಡುವಿನ ಒಳಗೆ ಕಚ್ಚಾ ತೈಲ ಆಮದು ಸ್ಥಗಿತಗೊಳಿಸುವ ಸಂಬಂಧ ಭಾರತದೊಂದಿಗೆ ಮಾತುಕತೆ ನಡೆಸಲು ಇರಾನ್‌ನಲ್ಲಿರುವ ಅಮೆರಿಕದ ರಾಯಭಾರಿ ಭಾರತಕ್ಕೆ ಭೇಟಿ ನೀಡಲಿದ್ದಾರೆ.

ಇರಾನ್ ಮೇಲೆ ಅಮೆರಿಕ ನಿರ್ಬಂಧ ವಿಧಿಸುತ್ತಿದ್ದು, ಅದರೊಂದಿಗಿನ ಎಲ್ಲ ವ್ಯವಹಾರಗಳನ್ನು ಕಡಿತಗೊಳಿಸುವಂತೆ ಅಮೆರಿಕ ಸೂಚಿಸಿದೆ. ಆದರೆ, ತಮ್ಮ ತೈಲ ಆಮದಿಗೆ ಇರಾನ್‌ಅನ್ನು ಹೆಚ್ಚಾಗಿ ನೆಚ್ಚಿಕೊಂಡಿರುವ ಭಾರತ, ಅಮೆರಿಕದ ಎಚ್ಚರಿಕೆಯನ್ನೂ ಮೀರಿ ತೈಲ ಖರೀದಿ ವ್ಯವಹಾರ ಮುಂದುವರಿಸಲು ಸಿದ್ಧತೆ ನಡೆಸಿದೆ.
ಭಾರತಕ್ಕೆ ಪರ್ಯಾಯ ಮಾರ್ಗದ ಮೂಲಕ ತೈಲ ಒದಗಿಸಲು ಏರ್ಪಾಡು ಮಾಡುವುದಾಗಿ ಅಮರಿಕ ಭರವಸೆ ನೀಡಿದ್ದರೂ ಅದು ಕಾರ್ಯಗತವಾಗುವುದು ತಡವಾಗಬಹುದು. ಇದರಿಂದ ಭಾರತ ತೀವ್ರ ತೈಲ ಕೊರತೆಗೆ ಒಳಗಾಗಲಿದೆ. ಇರಾನ್ ಜತೆ ವಹಿವಾಟು ಮುಂದುವರಿಸಿದರೆ ಭಾರತದ ಮೇಲೆಯೂ ಅಮೆರಿಕ ಕ್ರಮಗಳನ್ನು ತೆಗೆದುಕೊಳ್ಳಲು ಮುಂದಾಗುವ ಸಾಧ್ಯತೆ ಇದೆ.

ಭಾರತ ಮತ್ತು ಚೀನಾದಂತಹ ದೇಶಗಳು ಇರಾನ್‌ನಿಂದ ತೈಲ ಖರೀದಿಯನ್ನು ಮುಂದುವರಿಸುವ ನಿರ್ಧಾರದ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಟ್ರಂಪ್, 'ನಾವು ಅವರ ಕಾಳಜಿ ತೆಗೆದುಕೊಳ್ಳುತ್ತೇವೆ' ಎಂದು ಎಚ್ಚರಿಕೆ ನೀಡಿದರು.












Click it and Unblock the Notifications