ಅಮೆರಿಕದ ನಗರವೊಂದರ ಕುಡಿಯುವ ನೀರಿಗೆ ವಿಷ ಬೆರೆಸಿದ್ದ ಹ್ಯಾಕರ್
ವಾಷಿಂಗ್ಟನ್,ಫೆಬ್ರವರಿ 09: ಹ್ಯಾಕರ್ ಓರ್ವ ನಗರದ ಕುಡಿಯುವ ನೀರಿಗೇ ವಿಷ ಹಾಕಿರುವ ಘಟನೆ ಅಮೆರಿಕದ ಫ್ಲೋರಿಡಾ ರಾಜ್ಯದಲ್ಲಿ ನಡೆದಿದೆ.
ಅದೃಷ್ಟವಶಾತ್ ವಿಷಪೂರಿತ ನೀರು ಪೂರೈಕೆಯಾಗಿಲ್ಲ. ಕಳೆದ ವರ್ಷ ನವೆಂಬರ್ ತಿಂಗಳಲ್ಲಿಯೂ ಇಲಿನಾಯ್ಸ್ ನಗರದಲ್ಲಿ ಇದೇ ಮಾದರಿಯಲ್ಲಿ ವಾಟರ್ ಯೂಟಿಲಿಟಿಯನ್ನು ರಷ್ಯನ್ ಹ್ಯಾಕರ್ ಗಳು ಟಾರ್ಗೆಟ್ ಮಾಡಿದ್ದರು. ಆದರೆ ಅದನ್ನು ವಿಫಲಗೊಳಿಸಲಾಗಿತ್ತು.
15,000 ನಿವಾಸಿಗಳು ವಾಸಿಸುತ್ತಿರುವ ಪ್ರದೇಶಕ್ಕೆ ಗುಣಮಟ್ಟದ ನೀರು ಪೂರೈಕೆಯ ಉದ್ದೇಶದಿಂದ ಕಾರ್ಯನಿರ್ವಹಣೆ ಮಾಡುತ್ತಿರುವ ನೀರು ಸಂಸ್ಕರಣ ಘಟಕದ ವ್ಯವಸ್ಥೆಯನ್ನು ಸಂಪೂರ್ಣವಾಗಿ ತನ್ನ ಕೈಗೆ ತೆಗೆದುಕೊಂಡ ಹ್ಯಾಕರ್ ನೀರು ಶುದ್ಧೀಕರಣ, ಸಂಸ್ಕರಣೆಗೆ ಬಳಕೆ ಮಾಡುವ ಅಲ್ಲಿನ ಕೆಮಿಕಲ್ ಮಟ್ಟವನ್ನು ವಿಪರೀತವಾಗಿ ಏರಿಕೆ ಮಾಡಿದ್ದಾನೆ.
ಕುಡಿಯುವ ನೀರಿನಿಂದ ಮೆಟಲ್ ಗಳನ್ನು ಹೊರತೆಗೆಯುವುದಕ್ಕಾಗಿ ನೀರು ಸಂಸ್ಕರಣಾ ಘಟಕಗಳಲ್ಲಿ ಸೋಡಿಯಮ್ ಹೈಡ್ರಾಕ್ಸೈಡ್ ನ್ನು ಬಳಕೆ ಮಾಡಲಾಗುತ್ತದೆ.
ನೀರು ಸಂಸ್ಕರಣೆ ಕಾರ್ಯಾಚರಣೆಗಳಿಗೆ ಬಳಕೆ ಮಾಡುತ್ತಿದ್ದ ರಿಮೋಟ್ ಕಂಟ್ರೋಲ್ ವ್ಯವಸ್ಥೆಯನ್ನು ಹ್ಯಾಕ್ ಮಾಡಿ ಆ ವ್ಯವಸ್ಥೆಯನ್ನು ಸಂಪೂರ್ಣವಾಗಿ ತನ್ನ ಹಿಡಿತಕ್ಕೆ ತೆಗೆದುಕೊಂಡು ಹ್ಯಾಕರ್ ಈ ಕುಕೃತ್ಯ ಎಸಗಿದ್ದಾನೆ. ಎಫ್ ಬಿಐ ನ ಅಧಿಕಾರಿಗಳು, ಫೆಡರಲ್ ಅಧಿಕಾರಿಗಳು ಓಲ್ಡ್ ಸ್ಮಾರ್ ಗೆ ವಿಷ ಹಾಕುವ ಹ್ಯಾಕರ್ ನ ಯತ್ನದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ನೀರು ಸಂಸ್ಕರಣಾ ಪ್ರಕ್ರಿಯೆಯನ್ನು ದೂರದಿಂದಲೇ ನಿರ್ವಹಣೆ ಮಾಡುತ್ತಿದ್ದ ಮೇಲ್ವಿಚಾರಕ, ಸೋಡಿಯಂ ಹೈಡ್ರಾಕ್ಸೈಡ್ ಮಿತಿ ಮೀರಿ ಏರಿಕೆ ಮಾಡುತ್ತಿರುವುದನ್ನು ಕಂಪ್ಯೂಟರ್ ಪರದೆ ಮೇಲೆ ಕಂಡ ಕೂಡಲೇ ಅದನ್ನು ಸ್ಥಗಿತಗೊಳಿಸಿದ್ದಾರೆ.
ಈ ಸೋಡಿಯಂ ಹೈಡ್ರಾಕ್ಸೈಡ್ ಪ್ರಮಾಣ ಸಾಮಾನ್ಯವಾಗಿ ಪ್ರತಿ ಮಿಲಿಯನ್ ಗೆ 100 ಅಂಶಗಳಿರುತ್ತದೆ ಆದರೆ ವ್ಯವಸ್ಥೆಯನ್ನು ಹ್ಯಾಕ್ ಮಾಡಿದ ಹ್ಯಾಕರ್ ಪ್ರತಿ ಮಿಲಿಯನ್ ಗೆ 11,100 ಪಾರ್ಟ್ ಗಳಿಗೆ ಏರಿಕೆ ಮಾಡಿದ್ದಾನೆ.