ವೈಭವ್ ಸೂರ್ಯವಂಶಿ ಐಪಿಎಲ್ ಆಡಲು ಯಾಕೆ ಬಂದ್ನೋ ಏನೋ.. ಅವನು ಹೈಸ್ಕೂಲ್‌ನಲ್ಲೇ ಇರಬೇಕಿತ್ತು: ಪ್ಯಾಟ್ ಕಮ್ಮಿನ್ಸ್
Pat Commins: ಐಪಿಎಲ್ 2026ರಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶನ ಮಾಡಿದ 15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ ಅವರು ಕ್ರಿಕೆಟ್ ದಿಗ್ಗಜರ ಗಮನ ಸೆಳೆದಿದ್ದಾರೆ. ಈ ಯುವ ಬ್ಯಾಟರ್‌ನ ಸ್ಫೋಟಕ ಆಟಕ್ಕೆ ಆಸ್ಟ್ರೇಲಿಯಾ ತಂಡದ ನಾಯಕ ಹಾಗೂ ಎಸ್‌ಆರ್‌ಎಚ್ ಕ್ಯಾಪ್ಟನ್ ಕಮ್ಮಿನ್ಸ್ ಕೂಡ ಫಿದಾ ಆಗಿದ್ದಾರೆ.
ಕೇವಲ 15 ವರ್ಷ ವಯಸ್ಸಿನ ವೈಭವ್ ಸೂರ್ಯವಂಶಿ ಈ ಬಾರಿಯ ಐಪಿಎಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಪ್ರಮುಖ ಓಪನರ್ ಆಗಿ ಅಬ್ಬರಿಸಿದ್ದಾರೆ. ಇಡೀ ಟೂರ್ನಿಯಲ್ಲಿ ಬರೋಬ್ಬರಿ 776 ರನ್‌ಗಳನ್ನು ಚಚ್ಚಿರುವ ಇವರು, 230ಕ್ಕೂ ಹೆಚ್ಚು ಸ್ಟ್ರೈಕ್ ರೇಟ್ ಹೊಂದುವ ಮೂಲಕ ಎದುರಾಳಿ ಬೌಲರ್‌ಗಳ ನಿದ್ದೆಗೆಡುವಂತೆ ಮಾಡಿದ್ದರು.

ವಿಶ್ವ ಶ್ರೇಷ್ಠ ಬೌಲರ್‌ಗಳ ಮೇಲೆ ದಂಡಯಾತ್ರೆ
ವಿಶ್ವ ಶ್ರೇಷ್ಠ ಬೌಲರ್‌ಗಳಾದ ಜಸ್ಪ್ರಿತ್ ಬುಮ್ರಾ, ಜೋಶ್ ಹ್ಯಾಜಲ್‌ವುಡ್, ಭುವನೇಶ್ವರ್ ಕುಮಾರ್ ಮತ್ತು ಪ್ಯಾಟ್ ಕಮ್ಮಿನ್ಸ್ ಅವರನ್ನು ಕೂಡ ಬಿಡದೇ ಲೀಲಾಜಾಲವಾಗಿ ದಂಡಿಸಿದ್ದಾರೆ. ಕೇವಲ ಬಲಪ್ರಯೋಗ ಮಾಡದೆ, ಆತ್ಮವಿಶ್ವಾಸದಿಂದ ಬ್ಯಾಟ್ ಬೀಸಿ ತಂಡವನ್ನು ಪ್ಲೇಆಫ್ ಹಂತಕ್ಕೆ ತಗೆದುಕೊಂಡುಹೋಗುವಲ್ಲಿ ಇವರು ಪ್ರಮುಖ ಪಾತ್ರ ವಹಿಸಿದ್ದರು.
ಎಸ್‌ಆರ್‌ಎಚ್ ವಿರುದ್ಧ ಸ್ಫೋಟಕ ಬ್ಯಾಟಿಂಗ್
ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಎಲಿಮಿನೇಟರ್ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಆಡಿದ ಆಟ ಮಾತ್ರ ಇತಿಹಾಸ ಪುಟ ಸೇರಿದೆ. ಕೇವಲ 29 ಎಸೆತಗಳಲ್ಲಿ ಬರೋಬ್ಬರಿ 97 ರನ್ ಸಿಡಿಸಿದ ಅವರು ರಾಜಸ್ಥಾನ್ ತಂಡಕ್ಕೆ ಭರ್ಜರಿ ಜಯ ತಂದುಕೊಟ್ಟಿದ್ದರು. ಈ ಸ್ಫೋಟಕ ಇನಿಂಗ್ಸ್ ವೇಳೆ ಕಮ್ಮಿನ್ಸ್ ಬೌಲಿಂಗ್‌ನಲ್ಲಿ ಸೂರ್ಯವಂಶಿ ಸತತ 3 ಸಿಕ್ಸರ್‌ಗಳನ್ನು ಚಚ್ಚಿದ್ದರು. ಈ ಬಾಲಕನ ಸ್ಫೋಟಕ ಬ್ಯಾಟಿಂಗ್ ಕಂಡು ಕಮ್ಮಿನ್ಸ್ ದಂಗಾಗಿ ಬಾಯಿ ಮೇಲೆ ಕೈ ಇಟ್ಟುಕೊಂಡಿದ್ದರು. ಅಬ್ಬಬ್ಬಾ.. ಇವನೇನು ಮನುಷ್ಯನನಾ ಎನ್ನುವ ರೀತಿಯಲ್ಲಿ ಅಚ್ಚರಿಗೆ ಒಳಗಾಗಿದ್ದು ಹೌದು.
ಪ್ಯಾಟ್ ಕಮ್ಮಿನ್ಸ್ ತಮಾಷೆಯ ಪ್ರತಿಕ್ರಿಯೆ
ಫಾಕ್ಸ್ ಕ್ರಿಕೆಟ್‌ನೊಂದಿಗೆ ಮಾತನಾಡಿದ ಪ್ಯಾಟ್ ಕಮ್ಮಿನ್ಸ್, ವೈಭವ್ ಸೂರ್ಯವಂಶಿಗೆ ಬೌಲಿಂಗ್ ಮಾಡುವುದು ಎಷ್ಟು ಕಷ್ಟ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಈ ವೇಳೆ ನಿರೂಪಕರು ಶಾಲೆಗೆ ಹೋಗಬೇಕಾದ ವಯಸ್ಸಿನ ಹುಡುಗನಿಗೆ ಬೌಲಿಂಗ್ ಮಾಡುವುದು ವಿಚಿತ್ರ ಅನಿಸಿತೇ? ಎಂದು ಕೇಳಿದ ಪ್ರಶ್ನೆಗೆ ಕಮ್ಮಿನ್ಸ್ ಹಾಸ್ಯಭರಿತವಾಗಿ ಉತ್ತರ ನೀಡಿ ಗಮನ ಸೆಳೆದಿದ್ದಾರೆ.
ಪ್ಯಾಟ್ ಕಮ್ಮಿನ್ಸ್ ಹೇಳಿದ್ದೇನು?
'ಅವನು ಇನ್ನೂ ಹೈಸ್ಕೂಲ್‌ನಲ್ಲೇ ಇರಬೇಕಾಗಿತ್ತು. ಹಾಗಾಗಿದ್ದರೆ ನಾನು ಅವನಿಗೆ ಬೌಲಿಂಗ್ ಮಾಡುವ ಅಗತ್ಯವೇ ಇರುತ್ತಿರಲಿಲ್ಲ. ಅವನ ಬ್ಯಾಟಿಂಗ್ ನಿಜಕ್ಕೂ ನಂಬಲಸಾಧ್ಯವಾದದ್ದು. 15 ವರ್ಷದ ಹುಡುಗನೊಬ್ಬ ಈ ರೀತಿ ಬ್ಯಾಟ್ ಮಾಡುವುದನ್ನು ನಾನು ಎಲ್ಲೂ ನೋಡಿಲ್ಲ. ಅವನಿಗೆ 15 ವರ್ಷ ಇರಲಿ ಅಥವಾ 30 ವರ್ಷ ಇರಲಿ ಅವನು ಯಾವುದೇ ಭಯ, ಒತ್ತಡವಿಲ್ಲದೆ ಲೀಲಾಜಾಯವಾಗಿ ಚೆಂಡನ್ನು ಸಿಕ್ಸರ್‌ಗೆ ಅಟ್ಟುವ ಸಾಮರ್ಥ್ಯ ಹೊಂದಿದ್ದಾನೆ,' ಎಂದು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಐಪಿಎಲ್ 2026ರ ಅತ್ಯಂತ ದೊಡ್ಡ ಯಶಸ್ಸಿನ ಕಥೆಯಾಗಿ ಹೊರಹೊಮ್ಮಿರುವ ವೈಭವ್ ಸೂರ್ಯವಂಶಿ ಕೇವಲ ಭರವಸೆಯ ಆಟಗಾರನಾಗಿ ಉಳಿಯದೆ ವಿಶ್ವದ ದಿಗ್ಗಜ ಬೌಲರ್‌ಗಳೇ ಬೌಲಿಂಗ್ ಮಾಡಲು ಯೋಚನೆ ಮಾಡುವಂತೆ ಮಾಡಿದ್ದಾರೆ. ಅಷ್ಟು ಧೈರ್ಯದಿಂದ ಸ್ಟಾರ್ ಬೌಲರ್‌ಗಳ ವಿರುದ್ಧ ಆಕ್ರಮಣಕಾರಿ ಬ್ಯಾಟಿಂಗ್ ಮಾಡಿ ಗಮನ ಸೆಳೆದಿದ್ದಾರೆ.
15 ವರ್ಷದ ಈ ಬಾಲಕ ಮುಂದಿನ ದಿನಗಳಲ್ಲಿ ಒಬ್ಬ ಸ್ಟಾರ್ ಸ್ಟಾರ್ ಪ್ಲೇಯರ್ ಆಗುವುದರಲ್ಲಿ ಎರಡು ಮಾತಿಲ್ಲ ಎಂದು ಹಲವು ಕ್ರಿಕೆಟ್ ದಿಗ್ಗಜರು ಭವಿಷ್ಯ ನುಡಿದಿದ್ದಾರೆ. ಯಾಕಂದ್ರೆ ಇವರು ಆಕ್ರಮಣಕಾರಿ ಬ್ಯಾಟಿಂಗ್ ಆಡುವುದಲ್ಲದೆ, ಜೊತೆಗೆ ಸಂದರ್ಭಕ್ಕೆ ತಕ್ಕಂತೆ ಜವಾಬ್ದಾರಿಯುತ ಆಟ ಆಡುವ ಕೌಶಲ್ಯವನ್ನು ಹೊಂದಿದ್ದಾರೆ.












Click it and Unblock the Notifications