ಬೆಂಗಳೂರು-ತುಮಕೂರು 4 ಪಥದ ರೈಲ್ವೆ ಮಾರ್ಗದ ಕುರಿತು ಬಿಗ್ ಅಪ್ಡೇಟ್
Bengaluru-Tumakuru Railway line: ರಾಜ್ಯದಲ್ಲಿ ರೈಲ್ವೆ ಜಾಲ ವಿಸ್ತರಣೆ ಆಗುತ್ತಲಿದೆ. ಹಾಗೆಯೇ ಇದೀಗ ಬೆಂಗಳೂರು ಮತ್ತು ತುಮಕೂರು ರೈಲ್ವೆ ಮಾರ್ಗವನ್ನು ಚತುಷ್ಪಥಗಳನ್ನಾಗಿ ಮೇಲ್ದರ್ಜೆಗೇರಿಸಲು ಬೃಹತ್ ಕ್ರಿಯಾಯೋಜನೆ ಬಗ್ಗೆ ಮಹತ್ವದ ಅಪ್ಡೇಟ್‌ವೊಂದು ಹೊರಬಿದ್ದಿದೆ. ಹಗಾದ್ರೆ ಇದರಿಂದ ಈ ಕುರಿತು ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಬೆಂಗಳೂರು ಮತ್ತು ತುಮಕೂರು ರೈಲ್ವೆ ಮಾರ್ಗವನ್ನು ನಾಲ್ಕು ಪಥಗಳನ್ನಾಗಿ ಮೇಲ್ದರ್ಜೆಗೇರಿಸಲು 6,000 ಕೋಟಿ ರೂಪಾಯಿ ಬೃಹತ್ ಕ್ರಿಯಾಯೋಜನೆಯನ್ನು ಸಿದ್ಧಪಡಿಸಲಾಗಿದೆ. ಮುಂಬರುವ ಸಭೆಯಲ್ಲಿ ಇದಕ್ಕೆ ಅಧಿಕೃತ ಅನುಮೋದನೆ ಸಿಕ್ಕ ತಕ್ಷಣವೇ ಕೆಲಸ ಆರಂಭಿಸಲಾಗುವುದು ಎಂದು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ.ಸೋಮಣ್ಣ ಅವರು ತಿಳಿಸಿದ್ದಾರೆ.

ತುಮಕೂರು ತಾಲೂಕಿನ ಕಳ್ಳಿಪಾಳ್ಯ ಗ್ರಾಮದಲ್ಲಿ 10.86 ಕೋಟಿ ರೂಪಾಯಿ ವೆಚ್ಚದ ರೈಲ್ವೆ ಕೆಳಸೇತುವೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. 'ಬೆಂಗಳೂರಿನಲ್ಲಿ ಜನಸಂಖ್ಯೆ ಮಿತಿ ಮೀರುತ್ತಿರುವುದರಿಂದ ಈಗ ತುಮಕೂರಿನ ಕಡೆಗೆ ಮುಖ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಆದ್ದರಿಂದ ಈ ಭಾಗದ ರೈತರು ಯಾವುದೇ ಕಾರಣಕ್ಕೂ ತಮ್ಮ ಜಮೀನುಗಳನ್ನು ಮಾರಾಟ ಮಾಡಬಾರದು, ಮುಂದಿನ ದಿನಗಳ ನಿಮ್ಮ ಜೀವನಕ್ಕಾಗಿ ಉಳಿಸಿಕೊಳ್ಳಬೇಕು,' ಎಂದು ಕಿವಿಮಾತು ಹೇಳಿದದರು. ಇದೇ ವೇಳೆ ಅವರು ತುಮಕೂರು ಜಿಲ್ಲೆಯ ರೈಲ್ವೆ ಸಂಪರ್ಕ ಮತ್ತು ಮೂಲಸೌಕರ್ಯವನ್ನು ಬಲಪಡಿಸಲು ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ರೂಪಿಸಿದೆ ಅಂತಲೂ ತಿಳಿಸಿದ್ದಾರೆ.
ವಿ.ಸೋಮಣ್ಣ ಬಿಚ್ಚಿಟ್ಟ ಮಹತ್ವದ ಅಂಶಗಳು
* ₹100 ಕೋಟಿ ಅನುದಾನ: ತುಮಕೂರು ರೈಲ್ವೆ ನಿಲ್ದಾಣವನ್ನು ಅತ್ಯಾಧುನಿಕ ಹಾಗೂ ಹೈಟೆಕ್ ನಿಲ್ದಾಣವನ್ನಾಗಿ ಪರಿವರ್ತಿಸಲು 100 ಕೋಟಿ ರೂಪಾಯಿ ಅನುದಾನ ಬಿಡುಗಡೆಯಾಗಿದೆ.
* ಸಿದ್ಧಗಂಗಾ ಶ್ರೀಗಳ ಹೆಸರು: ಹೈಟೆಕ್ ರೈಲ್ವೆ ನಿಲ್ದಾಣಕ್ಕೆ ಸಿದ್ಧಗಂಗಾ ಶ್ರೀಗಳ ಹೆಸರನ್ನು ನಾಮಕರಣ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಈಗಾಗಲೇ ಶಿಫಾರಸು ಪತ್ರ ಕಳುಹಿಸಲಾಗಿದೆ.
* ಕರ್ನಾಟಕದಾದ್ಯಂತ ಒಟ್ಟು 61 ರೈಲ್ವೆ ನಿಲ್ದಾಣಗಳ ಆಧುನೀಕರಣಕ್ಕಾಗಿ 2 ಕೋಟಿ ರೂಪಾಯಿಗೂ ಅಧಿಕ ಅನುದಾನದಡಿ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಹೇಳಿದರು.
ಜಿಲ್ಲೆಯ ಎಲ್ಲಾ ರೈಲ್ವೆ ಯೋಜನೆಗಳು ಪೂರ್ಣಗೊಂಡ ಬಳಿಕ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ತುಮಕೂರಿಗೆ ಆಹ್ವಾನಿಸಲಾಗುವುದು. ಅವರನ್ನು ಖುದ್ದಾಗಿ ಬಂದು ಅಭಿವೃದ್ಧಿ ಕೆಲಸಗಳನ್ನು ವೀಕ್ಷಿಸಿದರೆ ಜಿಲ್ಲೆಯ ಅಭಿವೃದ್ಧಿಗೆ ಮತ್ತಷ್ಟು ಹೆಚ್ಚಿನ ಸಹಕಾರ ಹಾಗೂ ಅನುದಾನ ಸಿಗಲು ಸಾಧ್ಯವಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇನ್ನೂ ಕಳ್ಳಿಪಾಳ್ಯದಲ್ಲಿ ನಿರ್ಮಾಣವಾಗಲಿರುವ ಹೊಸ ಕೆಳಸೇತುವೆಯಿಂದಾಗಿ ಸ್ಥಳೀಯ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರಿಗೆ ಸುರಕ್ಷಿತ ಮತ್ತು ಸುಗಮ ಸಂಚಾರಕ್ಕೆ ಅನುಕೂಲ ಆಗಲಿದೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.
ನಾಲ್ಕು ಪಥದ ರೈಲ್ವೆ ಮಾರ್ಗದಿಂದ ಏನೆಲ್ಲಾ ಪ್ರಯೋಜನಗಳಿವೆ?
* ರೈಲುಗಳ ಸಂಚಾರ ಸಾಮರ್ಥ್ಯ ಹೆಚ್ಚಳ
* ಪ್ರಯಾಣ ಸಮಯದಲ್ಲಿ ಕಡಿತ
* ಸರಕು ಸಾಗಣೆಗೆ ಅನುಕೂಲ
* ಹೊಸ ರೈಲು ಸೇವೆಗಳ ಆರಂಭ
* ಬೆಂಗಳೂರು ಉಪನಗರ ರೈಲು ಯೋಜನೆಗೆ ನೆರವು
* ದಟ್ಟಣೆ ನಿಯಂತ್ರಣ
* ಪ್ರಾದೇಶಿಕ ಆರ್ಥಿಕ ಅಭಿವೃದ್ಧಿ
ಬೆಂಗಳೂರು ಮತ್ತು ತುಮಕೂರು ನಡುವಿನ ರೈಲ್ವೆ ಮಾರ್ಗವು ರಾಜ್ಯದ ಅತ್ಯಂತ ಪ್ರಮುಖ ಸಂಚಾರ ಮಾರ್ಗಗಳಲ್ಲಿ ಒಂದಾಗಿದೆ. ಈ ಮಾರ್ಗದಲ್ಲಿ ನಾಲ್ಕು ಪಥಗಳ ಕಾಮಗಾರಿ ಪೂರ್ಣಗೊಂಡರೆ ರೈಲು ಸಂಚಾರ ವ್ಯವಸ್ಥೆಯಲ್ಲಿ ದೊಡ್ಡ ಮಟ್ಟದಲ್ಲಿ ಬದಲಾವಣೆ ಕಾಣಬಹುದು. ಮಾರ್ಗದ ಸಾಮರ್ಥ್ಯ ಹೆಚ್ಚುವುದರಿಂದ ಹೆಚ್ಚಿನ ಸಂಖ್ಯೆಯ ಪ್ರಯಾಣಿಕ ಮತ್ತು ಗೂಡ್ಸ್ ರೈಲುಗಳನ್ನು ಓಡಿಸಲು ಸಾಧ್ಯವಾಗುತ್ತದೆ. ಇದರಿಂದ ಟ್ರಾಫಿಕ್ ಒತ್ತಡ ಕಡಿಮೆಯಾಗುವ ನಿರೀಕ್ಷೆಯಿದೆ. ಪ್ರಯಾಣ ಸಮಯದಲ್ಲಿ ಇಳಿಕೆಯಾಗಲಿದೆ.
ಬೆಂಗಳೂರು ನಗರಕ್ಕೆ ಪ್ರತಿದಿನ ಕೆಲಸ, ಶಿಕ್ಷಣ ಹಾಗೂ ವ್ಯಾಪಾರ ಉದ್ದೇಶಗಳಿಗಾಗಿ ಪ್ರಯಾಣಿಸುವ ಸಾವಿರಾರು ಜನರಿಗೆ ಈ ಯೋಜನೆ ಹೆಚ್ಚು ಅನುಕೂಲವಾಗಲಿದೆ. ಉಪನಗರ ಮತ್ತು ಸ್ಥಳೀಯ ರೈಲು ಸೇವೆಗಳನ್ನು ವಿಸ್ತರಿಸಲು ಕೂಡ ಪಥಗಳು ನೆರವಾಗಲಿದೆ. ಸರಕು ಸಾಗಣೆ ಕ್ಷೇತ್ರಕ್ಕೂ ಇದು ದೊಡ್ಡ ಮಟ್ಟದ ಪ್ರಯೋಜನ ನೀಡಲಿದೆ. ಕೈಗಾರಿಕಾ ವಲಯಗಳಿಂದ ಉತ್ಪನ್ನಗಳನ್ನು ವೇಗವಾಗಿ ಸಾಗಿಸಲು ಸಾಧ್ಯವಾಗುವುದರಿಂದ ವ್ಯಾಪಾರ ಚಟುವಟಿಕೆಗಳಿಗೆ ಉತ್ತೇಜನ ಸಿಗಬಹುದು. ಜೊತೆಗೆ ಸಾರಿಗೆ ವೆಚ್ಚ ಕಡಿಮೆಯಾಗುವ ಸಾಧ್ಯತೆಯಿದೆ.
ಒಟ್ಟಿನಲ್ಲಿ ಹೇಳುವುದಾದರೆ ಬೆಂಗಳೂರು-ತುಮಕೂರು ಮಾರ್ಗದ ನಾಲ್ಕು ಪಥಗಳ ರೈಲ್ವೆ ಯೋಜನೆ ಪೂರ್ಣಗೊಂಡರೆ ಸಂಚಾರ ದಟ್ಟಣೆ ಕಡಿಮೆಯಾಗುವುದು, ಕೈಗಾರಿಕಾ ಅಭಿವೃದ್ಧಿಗೆ ಉತ್ತೇಜನ ಸಿಗುವುದು, ಪ್ರದೇಶದ ಆರ್ಥಿಕ ಬೆಳವಣಿಗೆಗೆ ಸಹಕಾರಿಯಾಗುವುದು ಸೇರಿದಂತೆ ಇನ್ನೂ ಮುಂತಾದ ಪ್ರಯೋಜನೆಗಳು ಆಗಲಿವೆ.












Click it and Unblock the Notifications