ಕೋವಿಡ್ ಬೂಸ್ಟರ್ ಓಮಿಕ್ರಾನ್ ವಿರುದ್ಧ ಹೋರಾಡಬಲ್ಲದು: ಫೌಸಿ
ವಾಷಿಂಗ್ಟನ್, ಡಿಸೆಂಬರ್ 16: ಈಗಿರುವ ಬೂಸ್ಟರ್ ಡೋಸ್‌ಗಳು ಓಮಿಕ್ರಾನ್ ವಿರುದ್ಧ ಹೋರಾಡಬಲ್ಲದು ಎಂದು ಶ್ವೇತಭವನದ ಆರೋಗ್ಯ ಸಲಹೆಗಾರ ಆಂಥೊನಿ ಫೌಸಿ ಹೇಳಿದ್ದಾರೆ.
ನಮ್ಮ ಬೂಸ್ಟರ್ ಡೋಸ್‌ಗಳು ಓಮಿಕ್ರಾನ್ ವಿರುದ್ಧ ಹೋರಾಡಬಲ್ಲದು ಅದಕ್ಕಾಗಿ ಪ್ರತ್ಯೇಕ ಬೂಸ್ಟರ್‌ಗಳನ್ನು ಪಡೆಯಯವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.
ಫೈಜರ್ ಹಾಗೂ ಬಯೋಎನ್‌ಟೆಕ್ ಲಸಿಕೆಗಳು ಓಮಿಕ್ರಾನ್ ವಿರುದ್ಧ ರಕ್ಷಣೆ ನೀಡಬಲ್ಲದು. ಈ ಮೊದಲು ಎರಡು ಲಸಿಕೆಗಳು ಶೇ.80ರಷ್ಟು ರಕ್ಷಣೆ ನೀಡುತ್ತಿದ್ದವು. ಆದರೆ ಓಮಿಕ್ರಾನ್ ಬಂದ ಬಳಿಕ ಶೇ.30ರಷ್ಟು ಕಡಿಮೆಯಾಗಿ ಇದೀಗ ಓಮಿಕ್ರಾನ್ ವಿರುದ್ಧ ಶೇ.70ರಷ್ಟು ರಕ್ಷಣೆ ನೀಡುತ್ತದೆ ಎಂದು ತಿಳಿಸಲಾಗಿದೆ.

ಬೂಸ್ಟರ್ ಡೋಸ್‌ಗಳು ಲಕ್ಷಣಗಳಿರುವ ಸೋಂಕಿನಿಂದ ಶೇ.75ರಷ್ಟು ರಕ್ಷಣೆ ನೀಡಲಿದೆ. ರಾಜ್ಯದ ಆರೋಗ್ಯ ಕಾರ್ಯಕರ್ತರು ಹಾಗೂ ಮುಂಚೂಣಿ ಕಾರ್ಯಕರ್ತರಿಗೆ ಬೂಸ್ಟರ್ ಡೋಸ್ ನೀಡುವ ಕುರಿತು ಚರ್ಚೆ ನಡೆಯುತ್ತಿರುವ ವೇಳೆಗಾಗಲೇ, ಸದ್ಯಕ್ಕೆ ಅದರ ಅಗತ್ಯವಿಲ್ಲ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಸ್ಪಷ್ಟಪಡಿಸಿದೆ.
ಓಮಿಕ್ರಾನ್ ಸೋಂಕು ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಬೂಸ್ಟರ್ ಡೋಸ್ ನೀಡಲು ಅನುಮತಿ ನೀಡುವಂತೆ ಕರ್ನಾಟಕ ರಾಜ್ಯ ಸರಕಾರ, ಕೇಂದ್ರ ಸರಕಾರಕ್ಕೆ ಮನವಿ ಮಾಡಿತ್ತು. ಆದರೆ, ಈ ಮನವಿ ತಿರಸ್ಕರಿಸಿರುವ ಐಸಿಎಂಆರ್, ಬೂಸ್ಟರ್ ಡೋಸ್ ಬದಲು ಪೂರ್ಣಪ್ರಮಾಣದಲ್ಲಿ ಎರಡನೇ ಡೋಸ್ ಲಸಿಕೆ ಒದಗಿಸುವುದರ ಬಗ್ಗೆ ಗಮನ ಹರಿಸುವಂತೆ ಸಲಹೆ ನೀಡಿದೆ ಎಂದು ತಜ್ಞರು ತಿಳಿಸಿದ್ದಾರೆ.
ಸಂಭವನೀಯ ಮೂರನೇ ಅಲೆ ಹಿನ್ನೆಲೆಯಲ್ಲಿ ಈಗಾಗಲೇ ರಾಜ್ಯದ ವೈದ್ಯಕೀಯ ವಲಯದಲ್ಲಿ ಬಹಳಷ್ಟು ವೈದ್ಯರು, ಶುಶ್ರೂಷಕರು ಸ್ವಯಂ ಪ್ರೇರಿತರಾಗಿ ಈಗಾಗಲೇ ಬೂಸ್ಟರ್ ಡೋಸ್ ಪಡೆದುಕೊಂಡಿದ್ದಾರೆ. ಆದರೆ ಅದಕ್ಕೆ ಅಧಿಕೃತ ದಾಖಲೆ ಇಲ್ಲ. ಇದೀಗ ಓಮಿಕ್ರಾನ್ ಭೀತಿ ಎದುರಾಗಿದ್ದು, ಬೂಸ್ಟರ್ ಡೋಸ್‌ಗೆ ಬೇಡಿಕೆ ಹೆಚ್ಚಾಗಿದೆ. ಆದರೆ ಎರಡನೇ ಡೋಸ್ ಪೂರ್ಣಗೊಳಿಸಲು ಐಸಿಎಂಆರ್ ಸೂಚಿಸಿರುವುದರಿಂದ ಸದ್ಯಕ್ಕೆ ಬೂಸ್ಟರ್ ಡೋಸ್ ಲಭಿಸುವ ಸಾಧ್ಯತೆಗಳಿಲ್ಲ ಎನ್ನಲಾಗಿದೆ.
ಓಮಿಕ್ರಾನ್ ಆತಂಕ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಈಗಾಗಲೇ ಎರಡೂ ಡೋಸ್ ಪಡೆದು 6 ತಿಂಗಳ ಮೀರಿರುವ ಆರೋಗ್ಯ ಕಾರ್ಯಕರ್ತರು ಹಾಗೂ ಮುಂಚೂಣಿ ಕಾರ್ಯಕರ್ತರಿಗೆ ಮತ್ತು ರೋಗಿಗಳ ಆರೈಕೆ ಮಾಡುವ ವೈದ್ಯರು ಹಾಗೂ ಶುಶ್ರೂಷಕರಿಗೆ ಬೂಸ್ಟರ್ ಡೋಸ್ ಅಗತ್ಯವಿದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಫೈಜರ್ ಹಾಗೂ ಬ್ರಿಟನ್‌ನ ಆಸ್ಟ್ರಾಜೆನೆಕಾದ (ಭಾರತದಲ್ಲಿನ ಕೋವಿಶೀಲ್ಡ್) 2 ಡೋಸ್ ಲಸಿಕೆಗಳು ಹೊಸದಾಗಿ ಪಸರಿಸುತ್ತಿರುವ ಕೊರೋನಾದ ಒಮಿಕ್ರೋನ್ ರೂಪಾಂತರಿ ವಿರುದ್ಧ ನಿರೀಕ್ಷಿತ ಪ್ರಮಾಣದಲ್ಲಿ ಪ್ರತಿಕಾಯ ಸೃಷ್ಟಿಸುವುದಿಲ್ಲ ಎಂದು ಆಕ್ಸ್‌ಫರ್ಡ್ ವಿವಿ ಅಧ್ಯಯನದಿಂದ ತಿಳಿದುಬಂದಿದೆ. ಹೀಗಾಗಿ ಈ ಲಸಿಕೆ ಪಡೆದವರು ಹಾಗೂ ಈ ಹಿಂದೆ ಸೋಂಕಿನಿಂದ ಗುಣಮುಖರಾದವರು ಮತ್ತೆ ಮರುಸೋಂಕಿನ ಅಪಾಯದಲ್ಲಿರುತ್ತಾರೆ ಎಂದು ಅದು ಎಚ್ಚರಿಸಿದೆ.
ಆಕ್ಸ್‌ಫರ್ಡ್ ವಿವಿ ತಜ್ಞರು ಓಮಿಕ್ರೋನ್ ರೂಪಾಂತರಿಯು ಆಸ್ಟ್ರಾಜೆನೆಕಾ ಹಾಗೂ ಫೈಜರ್ ಲಸಿಕೆ ಪಡೆದವರ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬ ಅಧ್ಯಯನ ನಡೆಸಿದ್ದರು.
ಆಗ ಸೋಂಕನ್ನು ನಿಷ್ಕ್ರಿಯಗೊಳಿಸುವ ದೇಹದಲ್ಲಿನ ಪ್ರತಿಕಾಯ ಶಕ್ತಿ ಓಮಿಕ್ರೋನ್ ಮೇಲೆ ತುಂಬಾ ಕಡಿಮೆ ಪರಿಣಾಮ ಬೀರುತ್ತದೆ ಎಂದು ವ್ಯಕ್ತವಾಗಿದೆ. ಹೀಗಾಗಿ ಓಮಿಕ್ರೋನ್ ರೂಪಾಂತರಿ ಮುಂದಿನ ದಿನಗಳಲ್ಲಿ ಇನ್ನೊಂದು ಸೋಂಕಿನ ಅಲೆ ಸೃಷ್ಟಿಸಬಹುದು. ಲಸಿಕೆ ಪಡೆದವರೂ ಬಾಧಿತರಾಗಬಹುದು ಎಂದು ಕಂಡುಬಂದಿದೆ. ಆದರೆ ಮೂರನೇ ಡೋಸ್ ಪಡೆದರೆ ಪರಿಣಾಮ ಹೆಚ್ಚಬಹುದು ಎಂದೂ ಅದು ಹೇಳಿದೆ.
ರೂಪಾಂತರಿ ಓಮಿಕ್ರೋನ್ ವೈರಸ್‌ನಿಂದ ಜನ ಸಾಮಾನ್ಯರ ರಕ್ಷಣೆಗಾಗಿ ಹಲವು ದೇಶಗಳಲ್ಲಿ ಬೂಸ್ಟರ್ ಡೋಸ್ ನೀಡಿಕೆ ಆರಂಭವಾಗಿರುವಾಗಲೇ, ಬೂಸ್ಟರ್ ಡೋಸ್ ಸಹ ಓಮಿಕ್ರೋನ್ ವೈರಸ್‌ನಿಂದ ಖಚಿತವಾಗಿ ರಕ್ಷಿಸುತ್ತದೆ ಎಂಬುದಕ್ಕೆ ಸಾಕ್ಷ್ಯಗಳೇನೂ ಇಲ್ಲ ಎಂದು ಕೇಂದ್ರ ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ. ಬ್ರಿಟನ್ ಸೇರಿದಂತೆ ಹಲವು ದೇಶಗಳಲ್ಲಿ ಓಮಿಕ್ರೋನ್‌ನಿಂದ ರಕ್ಷಣೆ ಒದಗಿಸಲು ಬೂಸ್ಟರ್ ಡೋಸ್ ನೀಡಲಾಗುತ್ತಿದೆ.
ಆದರೆ ಭಾರತದಲ್ಲಿ ಓಮಿಕ್ರೋನ್ ತೀವ್ರತೆ ಅಷ್ಟೇನೂ ಕಂಡುಬಂದಿಲ್ಲ. ಈ ಹಿನ್ನೆಲೆಯಲ್ಲಿ ಬೂಸ್ಟರ್ ಡೋಸ್ ಅಗತ್ಯವಿಲ್ಲ ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಓಮಿಕ್ರೋನ್ ವಿರುದ್ಧ ಬೂಸ್ಟರ್ ಡೋಸ್ ಪೂರ್ತಿ ರಕ್ಷಣೆ ನೀಡದೇ ಇರಬಹುದು. ಆದರೆ, ಈ ಸೋಂಕಿಗೆ ತುತ್ತಾದವರು ಆಸ್ಪತ್ರೆಗೆ ಸೇರುವ ಸಾಧ್ಯತೆಯನ್ನು ತಪ್ಪಿಸುತ್ತದೆ ಎಂದು ತಜ್ಞರು ಹೇಳಿದ್ದಾರೆ.












Click it and Unblock the Notifications