ಮಗ, ಮೊದಲ ಪತ್ನಿ ಸಮಾಧಿ ಬಳಿ ಭಾವುಕರಾದ ಬೈಡನ್
ಡೆಲಾವೆರ್, ನ. 4: ಅಮೆರಿಕ ಅಧ್ಯಕ್ಷ ಸ್ಥಾನಕ್ಕಾಗಿ ಸ್ಪರ್ಧಿಸಿರುವ ಡೆಮೊಕ್ರಾಟಿಕ್ ಅಭ್ಯರ್ಥಿ ಜೋ ಬೈಡನ್ ಅವರು ಚುನಾವಣಾ ದಿನದಂದು ಪ್ರಚಾರ ಕಾರ್ಯ ಮುಂದುವರೆಸಿದರು.
ಪೆನ್ಸಿಲ್ವೇನಿಯಾ ಪ್ರಾಂತ್ಯದಲ್ಲಿರುವ ತಮ್ಮ ಸ್ವಂತ ಊರು ಸ್ಕ್ರಾಂಟನ್ ಕಡೆಗೆ ತೆರಳುವ ಮುನ್ನ ಚರ್ಚ್, ಸಮಾಧಿ ಸ್ಥಳಕ್ಕೆ ಭೇಟಿ ನೀಡಿದರು. ಪತ್ನಿ ಜಿಲ್, ಮೊಮ್ಮಕ್ಕಳಾದ ಫಿನ್ನೆಜಾನ್, ನತಾಲಿಯಾ ಜೊತೆ ಡೆಲಾವೇರ್ ನ ವಿಲ್ಮಂಗ್ಟನ್ ನಲ್ಲಿರುವ ಸೈಂಟ್ ಜೋಸೆಫ್ ಚರ್ಚ್ ಗೆ ಭೇಟಿ ನೀಡಿದರು.
ನಂತರ ಅಲ್ಲೇ ಸಮೀಪದಲ್ಲಿರುವ ಸ್ಮಶಾನಕ್ಕೆ ತೆರಳಿದರು. ತಮ್ಮ ಪುತ್ರ ಬಿಯು, ಮೊದಲ ಪತ್ನಿ, ಪುತ್ರಿ ಸಮಾಧಿ ಬಳಿ ಕೆಲ ಕಾಲ ಮೌನಾಚರಣೆಯಲ್ಲಿ ತೊಡಗಿ ಭಾವುಕರಾದರು. 2015ರಲ್ಲಿ ಕ್ಯಾನ್ಸರ್ ವ್ಯಾಧಿಗೆ ಬಿಯು ಮೃತರಾದರು. ಬೈಡನ್ ಅವರ ಮೊದಲ ಪತ್ನಿ ನೈಲಿಯಾ ಹಾಗೂ ಸಣ್ಣ ಹೆಣ್ಣು ಮಗು ನಿಯೋಮಿ 1972ರಲ್ಲಿ ಕಾರು ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ಈ ಸ್ಥಳದಿಂದ ನಂತರ ಪೆನ್ಸಿಲ್ವೇನಿಯಾ ಪ್ರಾಂತ್ಯದ ಸ್ವಂತ ಊರು ಸ್ಕ್ರಾಂಟನ್ ನಲ್ಲಿ ತಮ್ಮ ಬಾಲ್ಯದ ಮನೆಗೆ ಭೇಟಿ ನೀಡಿದರು ನಂತರ ಮತದಾರರನ್ನು ಭೇಟಿ ಮಾಡಿ, ಮತಯಾಚಿಸಿದರು.
ಶ್ವೇತ ಭವನಕ್ಕೆ ತೆರಳಲು 270 ಎಲೆಕ್ಟೋರಲ್ ಕಾಲೇಜ್ ಮತಗಳು ಅಗತ್ಯವಾಗಿದ್ದು, ಬೈಡನ್ ಅವರು ಮಿಶಿಗನ್, ವಿಸ್ಕೋಸಿನ್ ಹಾಗೂ ಪೆನ್ಸಿಲ್ವೇನಿಯಾ ರಾಜ್ಯಗಳಲ್ಲಿ ಗೆಲ್ಲುವುದು ಮುಖ್ಯವಾಗಿದೆ.

ಮನೆಗೆ ಹಿಂತಿರುಗುವುದು ಒಳ್ಳೆಯ ಶಕುನ ಎಂದು ತಮ್ಮ ಊರಿನ ಮತದಾರರ ಮುಂದೆ ಬೈಡನ್ ಹೇಳಿದರು. ಡಿಕ್ಸ್ ವಿಲೆ ನಾಚ್, ನ್ಯೂ ಹ್ಯಾಂಪ್ ಶೈರ್ ನಲ್ಲಿ ಮೊದಲ ಮತದಾನ ಆರಂಭವಾಗುತ್ತಿದ್ದಂತೆ ಪ್ರತಿಕ್ರಿಯಿಸಿದ ಬೈಡನ್, ಬೇಗ ಫಲಿತಾಂಶ ಪ್ರಕಟಿಸಬೇಕು ಎಂದಿರುವ ಟ್ರಂಪ್ ಕಿಚಾಯಿಸಿ, ''ಟ್ರಂಪ್ ಅವರ ಸೂಚನೆಯಂತೆ ಇಂದು ರಾತ್ರಿ ವಿಜಯದ ಸುದ್ದಿ ಪ್ರಕಟಿಸುವೆ'' ಎಂದಿದ್ದಾರೆ.












Click it and Unblock the Notifications