"ಕರ್ನಾಟಕದಲ್ಲಿ ಗೃಹ ಇಲಾಖೆ ಬದುಕಿದೆಯೋ, ಸತ್ತಿದೆಯೋ"
ರಾಜ್ಯದಲ್ಲಿ ಗೃಹ ಇಲಾಖೆ ಬದುಕಿದೆಯೋ, ಸತ್ತಿದೆಯೋ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಪ್ರಶ್ನೆ ಮಾಡಿದ್ದಾರೆ. ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ ಎನೆಲ್ಲಾ ಆಗಿದೆ ಎಂದು ಅವರು ಲಿಸ್ಟ್ ಕೊಟ್ಟಿದ್ದಾರೆ.
* ಗದಗದಲ್ಲಿ ಸಮೀರ್, ಉಮರ್ ಹಾಗೂ ಜಾಕಿರ್ ಎಂಬುವವರು ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ್ದಾರೆ.
* ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿಯವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಮಾಡಿದ್ದಾರೆ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಗೃಹ ಇಲಾಖೆ ಬದುಕಿದೆಯೋ, ಸತ್ತಿದೆಯೋ ಎಂದು ಜನರೇ ಹೇಳಬೇಕು. ಬ್ಯಾಂಕ್ ದರೋಡೆಕೋರರಿಗೆ, ಅತ್ಯಾಚಾರಿಗಳಿಗೆ, ಕೊಲೆಗಡುಕರು ಸಿಕ್ಕರೆ ಅವರಿಗೆ ಯಾವುದೇ ಮುಲಾಜು ತೋರದೆ ಅಲ್ಲೇ ಎನ್ಕೌಂಟರ್ ಮಾಡಿ ಪ್ರಕರಣವನ್ನು ಮುಗಿಸಬೇಕೇ ಹೊರತು ಅವರಿಗೆ ಯಾವುದೇ ಕನಿಕರ, ಕಾನೂನು ನೆರವು ನೀಡಬಾರದು. ಸರ್ಕಾರ ಕೊಲೆಗಡುಕರು, ಅತ್ಯಾಚಾರಿಗಳಿಗೆ ನಡುಕ ಸೃಷ್ಟಿಸಬೇಕು. ಈಗಿರುವ ಗೃಹ ಮಂತ್ರಿಗಳು ಸಮಜಾಯಿಷಿ ನೀಡುವಲ್ಲಿ, ಮಾಹಿತಿ ತರಿಸಿಕೊಳ್ಳುವಲ್ಲಿ, ಅಸಂಬದ್ಧ ಓತ ಪ್ರೋತ ಹೇಳಿಕೆ ನೀಡುವಲ್ಲಿ ಇರುವುದರಿಂದಲೇ ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿರುವುದು ಎಂದು ಅವರು ಹೇಳಿದ್ದಾರೆ.
ಪ್ರಹ್ಲಾದ್ ಜೋಶಿ ವಾಗ್ದಾಳಿ: ಇನ್ನು ಈ ವಿಚಾರವಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಸಹ ವಾಗ್ದಾಳಿ ನಡೆಸಿದ್ದಾರೆ. ರಾಜ್ಯದಲ್ಲಿ ತುಷ್ಟೀಕರಣ ಸರ್ಕಾರದಿಂದಾಗಿ ಕಾನೂನು ಸುವ್ಯವಸ್ಥೆ ನಶಿಸುತ್ತಿದೆ. ಮತಾಂಧರಿಂದ ಹಿಂದೂಗಳ ಹತ್ಯೆ, ಹಿಂದೂಗಳ ಮೇಲೆ ದೌರ್ಜನ್ಯ, ದಬ್ಬಾಳಿಕೆ, ಅತ್ಯಾಚಾರ ಎಲ್ಲೆ ಮೀರಿದೆ. ಹಿಂದೂಗಳು ರಕ್ಷಣೆ ಪಡೆದು ಓಡಾಡುವಂತಹ ವಿಷಮ ಪರಿಸ್ಥಿತಿ ಎದುರಾಗಿದೆ ಎಂದಿದ್ದಾರೆ.
ನಿನ್ನೆ ರಾತ್ರಿ ಮಂಗಳೂರಿನಲ್ಲಿ ನಡೆದ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ ಭಯಾನಕವಾಗಿದೆ. ಅಮಾನವೀಯ ಕೃತ್ಯವನ್ನು ತೀವ್ರವಾಗಿ ಖಂಡಿಸುತ್ತೇನೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ, ಭಯೋತ್ಪಾದನಾ ವಿಷಯದಲ್ಲಿ ಶಾಂತಿದೂತರಾಗಲು ಹೊರಟ ತಾವು, ರಾಜ್ಯದಲ್ಲಿ ಏಕೆ ಅದನ್ನು ಅನುಸರಿಸುತ್ತಿಲ್ಲ? ತಮ್ಮ ಆಡಳಿತದಲ್ಲಿ ಶಾಂತಿ ಸುವ್ಯವಸ್ಥೆ ಅನ್ನೋದು ಸಂಪೂರ್ಣ ನೆಲಕಚ್ಚಿದೆ. ಜನಸಾಮಾನ್ಯರನ್ನು ರಕ್ಷಿಸಲು ಆಗದಿದ್ದರೆ ನಿಮ್ಮ ಸರ್ಕಾರ ಇದ್ದರೆಷ್ಟು ಬಿಟ್ಟರೆಷ್ಟು ಎಂದು ಪ್ರಶ್ನೆ ಮಾಡಿದ್ದಾರೆ.
ನಮ್ಮನ್ನು ಕೆಣಕಿದರೆ ನಿಮ್ಮ ಅಡ್ರೆಸ್ ಇರಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ನೀಡಿರುವ ಹೇಳಿಕೆಗೂ ಪ್ರಹ್ಲಾದ್ ಜೋಶಿ ಅವರು ಕಿಡಿಕಾರಿದ್ದಾರೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ಮಲ್ಲಿಕಾರ್ಜುನ ಖರ್ಗೆಯಂತಹ ಹಿರಿಯರಿಗೆ ಇದು ಶೋಭೆ ತರುವುದಂತಹದಲ್ಲ. ಧಮ್ಕಿ ರಾಜಕಾರಣ ಕಾಂಗ್ರೆಸ್ ಪಕ್ಷದ ಸಂಸ್ಕೃತಿ ಅನ್ನೊದನ್ನು ಈ ಹೇಳಿಕೆಯ ಮೂಲಕ ಸಾಬೀತು ಪಡಿಸಿದ್ದಾರೆ ಎಂದು ಹೇಳಿದ್ದಾರೆ.
ಮುಂದುವರಿದು ನಿಮ್ಮ ಪಕ್ಷದ ಮುಖಂಡರು ವಿದೇಶಿ ನೆಲದಲ್ಲಿ ದೇಶ ವಿರೋಧಿ ಮಾತುಗಳು, ದೇಶಕ್ಕೆ ಅಪಮಾನ ಮಾಡುವುದು, ಪಾಕಿಸ್ತಾನದ ಪರ ಮಾತನಾಡುತ್ತಾರೆ. ನಿಮ್ಮ ಸರ್ಕಾರದ ವೈಫಲ್ಯವನ್ನು ಮುಚ್ಚಿಹಾಕಲು, ದಿನನಿತ್ಯದ ಜೀವನ ದುಸ್ಥರಕ್ಕೆ ತಳ್ಳಿ ಯಾವ ಪುರುಷಾರ್ಥಕ್ಕಾಗಿ ಈ ಧಮ್ಕಿ ರಾಜಕಾರಣ ಮಾಡುತ್ತಿದ್ದೀರಿ? ಸ್ವಲ್ಪ ಅವಲೋಕನ ಮಾಡಿಕೊಳ್ಳಿ ಖರ್ಗೆಯವರೇ ಎಂದಿದ್ದಾರೆ. ವಿರೋಧ ಪಕ್ಷದಲ್ಲಿ ಹಿರಿಯರಾದ ನೀವು ಹೀಗೆ ಮಾತನಾಡುವುದು ನಿಜಕ್ಕೂ ದುರಂತ. ದೇಶದ ಕಾನೂನನ್ನು ಅಗೌರವಿಸುವುತ್ತಿರುವುದು ಖಂಡನೀಯ ಅಂತ ಅವರು ಆಕ್ರೋಶ ಹೊರ ಹಾಕಿದ್ದಾರೆ.












Click it and Unblock the Notifications