ವಿ.ಸೋಮಣ್ಣ ಮೂಲಕ ಬಸನಗೌಡ ಯತ್ನಾಳ್ ಗೆ ಸಿಎಂ ಬಿಎಸ್ವೈ ಸಂದೇಶ ರವಾನೆ
ವಿಜಯಪುರ, ನ 12: ಖಾಸಗಿ ಟಿವಿಯ ಕಾರ್ಯಕ್ರಮವೊಂದರಲ್ಲಿ ಏಕವಚನದಲ್ಲಿ ಬಯ್ದಾಡಿಕೊಂಡಿದ್ದ ಸಚಿವ ವಿ.ಸೋಮಣ್ಣ ಮತ್ತು ವಿಜಯಪುರ (ನಗರ) ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ನಾವಿಬ್ಬರೂ ಈಗ ಸಹೋದರರು ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ಯಡಿಯೂರಪ್ಪನವರ ವಿರುದ್ದ ಬಹಿರಂಗವಾಗಿಯೇ ಟೀಕಿಸುತ್ತಿದ್ದ ಯತ್ನಾಳ್, ಇನ್ನು ಸ್ವಲ್ಪದಿನ ಸುಮ್ಮನಿರುತ್ತೇನೆ ಎಂದು ಹೇಳಿದ್ದಾರೆ. "ವಿ.ಸೋಮಣ್ಣ ಮೂಲಕ ಮುಖ್ಯಮಂತ್ರಿ ಯಡಿಯೂರಪ್ಪ ಸಂದೇಶ ರವಾನಿಸಿದ್ದಾರೆ"ಎಂದು ಯತ್ನಾಳ್ ಹೇಳಿಕೆಯನ್ನು ನೀಡಿದ್ದಾರೆ.
ಉಪಚುನಾವಣೆಯ ಫಲಿತಾಂಶದ ನಂತರ, ಸಂಪುಟ ವಿಸ್ತರಣೆಯ ವಿಚಾರ ಮತ್ತೆ ಮುನ್ನಲೆಗೆ ಬಂದ ಹಿನ್ನಲೆಯಲ್ಲಿ ಯತ್ನಾಳ್ ಅವರ ಹೇಳಿಕೆ ಮಹತ್ವ ಪಡೆದುಕೊಂಡಿದೆ. ದೊಡ್ಡ ಮಟ್ಟದಲ್ಲಿ ಸಂಪುಟ ವಿಸ್ತರಣೆಯ ಬಗ್ಗೆ ಚಿಂತನೆ ಮಾಡುತ್ತಿದ್ದೇನೆ ಎಂದು ಯಡಿಯೂರಪ್ಪ ಹೇಳಿದ್ದರು.

"ನವೆಂಬರ್ 25ರ ವರೆಗೆ ಯಾವುದೇ ವಿಚಾರದ ಬಗ್ಗೆ ಹೇಳಿಕೆಯನ್ನು ನೀಡುವುದಿಲ್ಲ. ನಾನೇನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ"ಎಂದು ಬಸನಗೌಡ ಯತ್ನಾಳ್ ಹೇಳಿಕೆಯನ್ನು ನೀಡಿದ್ದರೂ, ವಿ.ಸೋಮಣ್ಣ ಮೂಲಕ ಯಡಿಯೂರಪ್ಪ ಸಚಿವ ಸ್ಥಾನದ ಭರವಸೆಯನ್ನು ನೀಡಿರಬಹುದು ಎಂದು ಹೇಳಲಾಗುತ್ತಿದೆ.
ಉಪಚುನಾವಣೆಯ ಫಲಿತಾಂಶದ ನಂತರ ಯಡಿಯೂರಪ್ಪ ಮುಖ್ಯಮಂತ್ರಿ ಕೆಳಗಿಳಿಯಲಿದ್ದಾರೆ ಎಂದು ಯತ್ನಾಳ್ ಹೇಳಿಕೆಯನ್ನು ನೀಡಿದ್ದರು. ಇದು, ಬಿಜೆಪಿಯನ್ನು ಟೀಕಿಸಲು ವಿರೋಧ ಪಕ್ಷಗಳಿಗೆ ಪ್ರಮುಖ ಅಸ್ತ್ರವಾಗಿತ್ತು.
ನಳಿನ್ ಕಟೀಲ್, ಜಗದೀಶ್ ಶೆಟ್ಟರ್ ಮುಂತಾದ ಮುಖಂಡರು, ಮುಂದಿನ ಅವಧಿಗೆ ಯಡಿಯೂರಪ್ಪನವರೇ ಸಿಎಂ ಎಂದು ಹೇಳಿದ್ದರೂ, ಬಸನಗೌಡ ಪಾಟೀಲ್ ಯತ್ನಾಳ್, ಸಿಎಂ ಬಿಎಸ್ವೈ ವಿರುದ್ದ ಹೇಳಿಕೆ ನೀಡುವುದನ್ನು ನಿಲ್ಲಿಸಿರಲಿಲ್ಲ.












Click it and Unblock the Notifications