ವಿಜಯಪುರ: ಮೊದಲ ದಿನವೇ SSLC ಪ್ರಶ್ನೆ ಪತ್ರಿಕೆ ಬಹಿರಂಗ
ವಿಜಯಪುರ, ಮಾರ್ಚ್ 23: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಬಹಿರಂಗದಂತಹಾ ಘಟನೆಗಳು ನಡೆಯಲಿಲ್ಲವೆಂದು ನೆಮ್ಮದಿಯ ನಿಟ್ಟುಸಿರು ಬಿಡುತ್ತಿರುವಾಗಲೇ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಮೊದಲ ದಿನವೇ ಪ್ರಶ್ನೆ ಪತ್ರಿಕೆ ಬಹಿರಂಗವಾಗಿರುವ ಘಟನೆ ವಿಜಯಪುರದಲ್ಲಿ ಬೆಳಕಿಗೆ ಬಂದಿದೆ.
ಎಸ್‌ಎಸ್‌ಎಲ್‌ಸಿ ಪರೀಕ್ಷೆ ಪ್ರಾರಂಭವಾಗಿ ಒಂದು ಗಂಟೆ ಕಳೆಯುವ ಮೊದಲೇ ಪ್ರಶ್ನೆ ಪತ್ರಿಕೆ ಹೊರ ಬಂದಿದ್ದು, ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆ ಪತ್ರಿಕೆಯ ಚಿತ್ರಗಳು ಹರಿದಾಡುತ್ತಿದೆ.
ಯಾರೋ ವಿದ್ಯಾರ್ಥಿ ಪರೀಕ್ಷಾ ಕೊಠಡಿಗೆ ತೆರಳಿ ಪ್ರಶ್ನೆ ಪತ್ರಿಕೆ ಪಡೆದು ಕೆಲವೇ ಸಮಯದಲ್ಲಿ ವಾಪಾಸ್ಸಾಗಿ ಪ್ರಶ್ನೆ ಪತ್ರಿಕೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದಾನೆ ಎನ್ನಲಾಗಿದೆ.

ಆದರೆ ಪರೀಕ್ಷೆ ಮುಗಿಯುವ ಅವಧಿಗೆ ಮುಂಚೆ ಹೊರ ಬರುವ ವಿದ್ಯಾರ್ಥಿಗಳು ಪ್ರಶ್ನೆ ಪತ್ರಿಕೆಯನ್ನು ಕೊಠಡಿ ಮೇಲ್ವಿಚಾರಕರ ಬಳಿಯೇ ಬಿಟ್ಟು ಬರಬೇಕೆಂಬ ನಿಯಮವಿದ್ದರೂ ಸಹ ಹೇಗೆ ಈ ಪ್ರಶ್ನೆ ಪತ್ರಿಕೆ ಹೊರಬಂದಿದೆ ಎಂಬ ಅನುಮಾನ ಕಾಡುತ್ತಿದ್ದು, ಕೊಠಡಿ ಮೇಲ್ವಿಚಾರಕರ ಬೇಜವಾಬ್ದಾರಿಯಿಂದಲೇ ಈ ಘಟನೆ ನಡೆದಿದೆ ಎಂದು ಅನುಮಾನಿಸಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಎಸ್‌ಎಸ್‌ಎಲ್‌ಸಿ ಬೋರ್ಡ್ ನಿರ್ದೇಶಕಿ ಸುಮಂಗಲಾ ಅವರು, ಯಾವುದೇ ವಿದ್ಯಾರ್ಥಿ ಅವಧಿಗೆ ಮುಂಚೆ ಪರೀಕ್ಷಾ ಕೊಠಡಿಯಿಂದ ನಿರ್ಗಮಿಸುವ ಮುಂಚೆ ಆತನ ಪ್ರಶ್ನೆ ಪತ್ರಿಕೆಯನ್ನು ಮೇಲ್ವಿಚಾರಕರು ಪಡೆದುಕೊಳ್ಳಬೇಕು ಎಂದು ಸ್ಪಷ್ಟಪಡಿಸಿದ್ದಾರೆ. ವಿಜಯಪುರದಲ್ಲಿ ನಡೆದಿರುವ ಘಟನೆ ಬಗ್ಗೆ ತನಿಖೆ ನಡೆಸಲಾಗುತ್ತದೆ, ಕರ್ತವ್ಯಲೋಪ ಎಸಗಿರುವವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.












Click it and Unblock the Notifications