ಮಹಾದೇವ ಸಾಹುಕಾರ ಜಾಮೀನು ಅರ್ಜಿ ತೀರ್ಪು ಕಾಯ್ದಿರಿಸಿದ ಕೋರ್ಟ್
ವಿಜಯಪುರ, ಜೂನ್ 29 : ಗಂಗಾಧರ ಚಡಚಣ ಹತ್ಯೆ ಪ್ರಕರಣದ ಆರೋಪಿ ಮಹಾದೇವ ಸಾಹುಕಾರ ಸಲ್ಲಿಸಿದ್ದ ಜಾಮೀನು ಅರ್ಜಿಯ ತೀರ್ಪನ್ನು ವಿಜಯಪುರ ನ್ಯಾಯಾಲಯ ಕಾಯ್ದಿರಿಸಿದೆ. ಸಿಐಡಿ ಈ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿದೆ.
ಮಹಾದೇವ ಸಾಹುಕಾರ (ಭೈರಗೊಂಡ) ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆಯನ್ನು ಶುಕ್ರವಾರ ನ್ಯಾಯಾಲಯ ಪೂರ್ಣಗೊಳಿಸಿತು. ವಿಜಯಪುರ ಅಪರ ಜಿಲ್ಲಾ ವಿಶೇಷ ನ್ಯಾಯಾಲಯ ಜುಲೈ 2ರಂದು ತೀರ್ಪು ಪ್ರಕಟಿಸಲಿದೆ.
ಗಂಗಾಧರ ಚಡಚಣ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಮಹಾದೇವ ಸಾಹುಕಾರ ತಲೆಮರಿಸಿಕೊಂಡಿದ್ದು, ಸಿಐಡಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಹತ್ಯೆ ಪ್ರಕರಣ ಬೆಳಕಿಗೆ ಬಂದ ಬಳಿಕ ಆತ ನಾಪತ್ತೆಯಾಗಿದ್ದಾನೆ.

ಮಹಾದೇವ ಸಾಹುಕಾರ ಮಹಾರಾಷ್ಟ್ರದಲ್ಲಿ ಇರಬಹುದು ಎಂದು ಎಸ್‌ಐಟಿ ತಂಡ ಶಂಕಿಸಿತ್ತು. ಮಹಾರಾಷ್ಟ್ರಕ್ಕೆ ತೆರಳು ಹುಡುಕಾಟವನ್ನು ನಡೆಸಿತ್ತು. ಶುಕ್ರವಾರ ಅವರು ನ್ಯಾಯಾಲಯದ ಮುಂದೆ ಶರಣಾಗಲಿದ್ದಾರೆ ಎಂದು ತಿಳಿದುಬಂದಿತ್ತು.
ಮಹಾದೇವ ಸಾಹುಕಾರಗೆ ನಿರೀಕ್ಷಣಾ ಜಾಮೀನು ನೀಡಬಾರದು ಎಂದು ಸಿಐಡಿ ನ್ಯಾಯಾಲಯಕ್ಕೆ ಆಕ್ಷೇಪಣೆ ಸಲ್ಲಿಸಿದೆ. ನ್ಯಾಯಾಲಯಕ್ಕೆ ಶರಣಾಗಲು ಆತ ಆಗಮಿಸಿದರೆ ವಶಕ್ಕೆ ಪಡೆಯಲು ಸಿಐಡಿ ತಂಡ ಸಿದ್ಧತೆ ಮಾಡಿಕೊಂಡಿತ್ತು.
ಗಂಗಾಧರ ಚಡಚಣ ಹತ್ಯೆ ಪ್ರಕರಣ ವಿಜಯಪುರ ಜಿಲ್ಲೆಯಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಅದರಲ್ಲೂ ಪೊಲೀಸ್ ಅಧಿಕಾರಿಗಳು ಈ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂಬ ವಿಚಾರ ತಿಳಿದ ಮೇಲೆ ಚರ್ಚೆ ತೀವ್ರಗೊಂಡಿದೆ. ಸಿಐಡಿ ಪ್ರಕರಣರ ತನಿಖೆಯನ್ನು ಸಿಐಡಿಗೆ ವಹಿಸಿದೆ.












Click it and Unblock the Notifications