ಗಂಗಾಧರ ಚಡಚಣ ಹತ್ಯೆ : ಪಿಎಸ್‌ಐ, ಮೂವರು ಪೇದೆಗಳ ಬಂಧನ
ವಿಜಯಪುರ, ಜೂನ್ 17 : ರೌಡಿ ಶೀಟರ್ ಗಂಗಾಧರ ಚಡಚಣನ ನಿಗೂಢ ನಾಪತ್ತೆ, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಎಸ್‌ಐ ಸೇರಿ ಮೂವರು ಪೇದೆಗಳನ್ನು ಬಂಧಿಸಲಾಗಿದೆ.
ಭೀಮಾ ತೀರದ ರೌಡಿ ಶೀಟರ್ ಧರ್ಮರಾಜ ಚಡಚಣನ ಸಹೋದರ ಗಂಗಾಧರ ಚಡಚಣನ ನಾಪತ್ತೆ ಮತ್ತು ಹತ್ಯೆ ಪ್ರಕರಣದ ತನಿಖೆಯನ್ನು ಸಿಐಡಿ ನಡೆಸುತ್ತಿದೆ. ಸಿಐಡಿ ಡಿವೈಎಸ್‌ಪಿ ಜನಾರ್ದನ ನೇತೃತ್ವದ ತಂಡ ಬಿರುಸಿನಿಂದ ತನಿಖೆ ನಡೆಸುತ್ತಿದೆ.
'ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಎಸ್‌ಐ ಗೋಪಾಲ ಹಳ್ಳೂರ, ಪೊಲೀಸ್ ಪೇದೆಗಳಾದ ಸಿದ್ಧಾರೂಢ ರಾಗಿ, ಚಂದ್ರಶೇಖರ ಜಾಧವ, ಗೆದ್ದಪ್ಪ ನಾಯ್ಕೋಡಿ ಅವರನ್ನು ಬಂಧಿಸಲಾಗಿದೆ. ಎಲ್ಲರೂ ನ್ಯಾಯಾಂಗ ಬಂಧನದಲ್ಲಿದ್ದಾರೆ' ಎಂದು ವಿಜಯಪುರ ಜಿಲ್ಲಾ ಎಸ್ಪಿ ನಿಕ್ಕಂ ಪ್ರಕಾಶ್ ಅಮೃತ್ ಹೇಳಿದ್ದಾರೆ.

ಪಿಎಸ್‌ಐ ಗೋಪಾಲ ಹಳ್ಳೂರ ಈಗ ಬೆಳಗಾವಿ ಡಿಸಿಆರ್‌ಬಿಯಲ್ಲಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಚಡಚಣದ ಆಗಿನ ಸಿಪಿಐ ಎಂ.ಬಿ.ಅಸೋಡೆ ಅವರನ್ನು ಸಿಐಡಿ ತಂಡ ವಿಚಾರಣೆ ನಡೆಸುವ ಸಾಧ್ಯತೆ ಇದೆ.
ಚಡಚಣದಿಂದ 4 ಕಿ.ಮೀ. ದೂರದ ಕೊಂಕಣಗಾಂವ್‌ನ ಹೊರವಲಯದಲ್ಲಿ ಗಂಗಾಧರ ಚಡಚಣನನ್ನು ಗೋಪಾಲ ಹಳ್ಳೂರ ಇತ್ತೀಚೆಗೆ ಎನ್‌ಕೌಂಟರ್ ಮಾಡಿದ್ದರು. ಈ ಕಾರ್ಯಾಚರಣೆ ಬಗ್ಗೆ ಅನುಮಾನಗಳಿದ್ದು, ಸಿಐಡಿ ಈ ಕುರಿತು ತನಿಖೆ ನಡೆಸುತ್ತಿದೆ.
ಗಂಗಾಧರ ಹತ್ಯೆಗೆ ಸಂಬಂಧಿಸಿದಂತೆ ಹಣಮಂತ ಪೂಜಾರಿ, ಸಿದ್ಧಗೊಂಡಪ್ಪ ತಿಕ್ಕುಂಡಿಯನ್ನು ಕೆಲವು ದಿನಗಳ ಹಿಂದೆ ಬಂಧಿಸಲಾಗಿತ್ತು. ಅವರು ಕೊಟ್ಟ ಸುಳಿವಿನ ಮೇಲೆ ಪೊಲೀಸರ ಕೈವಾಡವಿರುವುದು ಪತ್ತೆಯಾಗಿದೆ.
ಪ್ರಮಖ ಆರೋಪಿ ಕಾಂಗ್ರೆಸ್ ಮಖಂಡ ಮಹಾದೇವ ಭೈರಗೊಂಡ ಕೂಡಾ ನಾಪತ್ತೆಯಾಗಿದ್ದಾನೆ. ಈತನ ಪತ್ತೆಗಾಗಿ ಎರಡು ತಂಡಗಳನ್ನು ರಚನೆ ಮಾಡಲಾಗಿದೆ.












Click it and Unblock the Notifications