ಈ ದೀಪಾವಳಿ ಆಚರಿಸಲ್ಲ ಎಂದ ರಾಜ್ಯದ ಅನ್ನದಾತರು, ಯಾಕೆ?
ಬೆಳಕಿನ ಹಬ್ಬ ದೀಪಾವಳಿಗೆ ಇನ್ನೇನು ಕ್ಷಣಗಣನೆ ಶುರುವಾಗಿದೆ. ಈ ಹೊತ್ತಿನಲ್ಲೇ ರಾಜ್ಯದ ರೈತರು ದೀಪಾವಳಿಯನ್ನು ಆಚರಿಸದಿರಲು ನಿರ್ಧರಿಸಿದ್ದಾರೆ. ಈ ಮೂಲಕ ರೈತರು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ವಿಜಯಪುರ ಜಿಲ್ಲೆಯ ಹಲವು ರೈತರಿಗೆ ವಕ್ಫ್ ಬೋರ್ಡ್‌ನಿಂದ ನೋಟಿಸ್ ಬಂದಿರುವ ವಿಚಾರವೂ ರಾಜಕೀಯವಾಗಿ ಕೆಸರೆರಚಾಟ ಶುರುವಾಗಿದೆ. ರೈತರು ಉಳುಮೆ ಮಾಡಿಕೊಂಡಿದ್ದ ಭೂಮಿಯು ವಕ್ಫ್ ಬೋರ್ಡ್‌ಗೆ ಸೇರಿದ್ದು ಎಂದು ನೋಟಿಸ್ ನೀಡಿರುವುದಾಗಿ ಹೇಳಲಾಗಿದೆ.

ಈ ವಿಚಾರವಾಗಿ ರೈತರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಈ ಬಾರಿ ದೀಪಾವಳಿ ಹಬ್ಬವನ್ನು ಆಚರಿಸದಿರಲು ನಿರ್ಧರಿಸಿದ್ದಾರೆ. ನಾಳೆ ವಿಜಯಪುರ ಜಿಲ್ಲಾಧಿಕಾರಿ ಕಚೇರಿಗೆ ಮೆರವಣಿಗೆ ನಡೆಸಿ, ಅಹೋರಾತ್ರಿ ಧರಣಿ ಕೂರಲು ಸಜ್ಜಾಗಿದ್ದಾರೆ. ಅಲ್ಲಿಯೇ ಅಡುಗೆ ಮಾಡಿ, ದೀಪ ಬೆಳಗಿಸಲು ರೈತರು ಮುಂದಾಗಿದ್ದಾರೆ.
ಈ ವಿಚಾರವಾಗಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಕೂಡ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ಭಾರತವನ್ನು ಇಸ್ಲಾಮೀಕರಣ ಮಾಡುವ ಏಕೈಕ ಉದ್ದೇಶ ಹೊಂದಿದ್ದ ಟಿಪ್ಪು ಸುಲ್ತಾನ್ ದೀಪಾವಳಿ ಸಮಯದಲ್ಲಿ ಮಂಡ್ಯ ಜಿಲ್ಲೆಯ ಮಂಡ್ಯಮ್ ಐಯಂಗಾರ್‌ಗಳು ಇದ್ದ ಗ್ರಾಮಕ್ಕೆ ಲಗ್ಗೆ ಇಟ್ಟು ಸಾವಿರಾರು ಜನವನ್ನು ಕೊಚ್ಚು ಹಾಕಿದ. ಟಿಪ್ಪುವಿನ ಕ್ರೌರ್ಯ ಎಷ್ಟರ ಮಟ್ಟಿಗೆ ಅವರ ಮೇಲೆ ಪ್ರಭಾವ ಬೀರಿದೆಯೆಂದರೆ ಇಂದಿಗೂ ಸಹ ಮಂಡ್ಯಮ್ ಐಯಂಗಾರ್‌ಗಳು ದೀಪಾವಳಿ ಆಚರಣೆ ಮಾಡೋದಿಲ್ಲ ಎಂದು ಇತಿಹಾಸ ನೆನಪಿಸಿದ್ದಾರೆ.
ಈಗ, ಸಿದ್ದರಾಮಯ್ಯನವರ ಆಡಳಿತದಲ್ಲೂ ಸಹ ವಕ್ಫ್ ಕಾನೂನನ್ನು ಹೇರಿ ರೈತರ ಜಾಮೀನು ನಮ್ಮದೆಂದು ಹೇಳುತ್ತಿರುವ ಸರ್ಕಾರದ ನಡೆಯಿಂದ ಬೇಸತ್ತಿರುವ ಅನ್ನದಾತರು ದೀಪಾವಳಿ ಆಚರಿಸೋದಿಲ್ಲ ಎಂದು ಹೇಳಿದ್ದಾರೆ. ಅನ್ನದಾತನ ಅಳಲು ಸರ್ಕಾರಕ್ಕೆ ಕೇಳುತ್ತಿಲ್ಲವೇ? ಎಂದು ಆಕ್ರೋಶ ಹೊರಹಾಕಿದ್ದಾರೆ.

ಅನ್ನದಾತನ ಮೇಲೆ ಏನಾದರೂ ಬಲವಂತದ ಕ್ರಮವೆಸಗಿದರೆ, ರಾಜ್ಯಾದ್ಯಂತ ಹೋರಾಟ ಆಗುವುದು ನಿಶ್ಚಿತ. ಅಲ್ಲದೆ, ವಕ್ಫ್ ಮಂಡಳಿ ತನ್ನ ಪೌರುಷವನ್ನು ರೈತರ ಮೇಲೆ ತೋರಿಸಿದ್ದಲ್ಲಿ ರಾಜ್ಯಾದ್ಯಂತ ಇರುವ ವಕ್ಫ್ ಕಚೇರಿಗಳಿಗೆ ಬೀಗ ಹಾಕುವ ಕೆಲಸ ಮಾಡಬೇಕಾಗುತ್ತದೆ ಎಂದು ವಾರ್ನಿಂಗ್ ಕೊಟ್ಟಿದ್ದಾರೆ.
ನಿಮ್ಮ ತುಷ್ಟೀಕರಣ ರಾಜಕೀಯದ ಪ್ರಯೋಗವನ್ನು ಅನ್ನದಾತನ ಮೇಲೆ ಮಾಡಬೇಡಿ. ವಕ್ಫ್ ನಿರಂಕುಶ ನಡೆಯ ಬಗ್ಗೆ ರೈತರು ಧೃತಿಗೆಡಬೇಕಾಗಿಲ್ಲ. ನಾನು ನಿಮ್ಮ ಜೊತೆ ಇದ್ದೇನೆ ಎಂದು ಪುನರುಚ್ಚರಿಸಲು ಬಯಸುತ್ತೇನೆ ಎಂದಿದ್ದಾರೆ.
ವಕ್ಫ್ ಬೋರ್ಡ್ ನವರು ನಿಮ್ಮ ಪಹಣಿಯಲ್ಲಿ ಅವರ ಹೆಸರು ಹಾಕಿದ್ದಾರೆ ಎಂಬುದನ್ನು ರೈತರು ಒಮ್ಮೆ ಪರಿಶೀಲಿಸಿ. ಈ ಕೆಲಸವನ್ನು ಪ್ರತಿಯೊಂದು ರೈತರು ಆದಷ್ಟು ಬೇಗ ಮಾಡಬೇಕು. ಈ ಮಾಹಿತಿ ನಮ್ಮ ಕಾನೂನು ಹೋರಾಟಕ್ಕೆ ನಿರ್ಣಾಯಕ ಹಾಗೂ ಸಾಕ್ಷ್ಯ ಸಂಗ್ರಹಿಸಲು ಅಗತ್ಯವಾದ ಪ್ರಕ್ರಿಯೆ ಆಗಿರುತ್ತದೆ. ಆದ್ದರಿಂದ ಇಂದೇ ನಿಮ್ಮ ಪಹಣಿಯ ಕಾಪಿ ಪಡೆದು ಪರಿಶೀಲನೆ ಮಾಡಿ, ಒಂದು ವೇಳೆ ವಕ್ಫ್ ಎಂದು ನಮೂದಿಸಲಾಗಿದ್ದಲ್ಲಿ ಕೂಡಲೇ ಜಮೀನಿನ ದಾಖಲೆ ಹಾಗೂ ಪಹಣಿಯನ್ನು ನಮ್ಮ ಕಚೇರಿಗೆ ನೀಡಿ ಎಂದು ರೈತರಿಗೆ ಕೇಳಿದ್ದಾರೆ. ನಮ್ಮ ದೇಶ ಸಂವಿಧಾನದಿಂದ ನಡೆಯುತ್ತಿದೆಯೇ ಹೊರತು ಷರಿಯಾ ಕಾನೂನಿಂದಲ್ಲ. ಈ ಹೋರಾಟದಲ್ಲಿ ನಮಗೆ ಖಂಡಿತ ಯಶಸ್ಸು ಸಿಗುತ್ತದೆ ಎಂದು ಯತ್ನಾಳ್ ರೈತರ ಬೆನ್ನಿಗೆ ನಿಂತಿದ್ದಾರೆ.
ಲ್ಯಾಂಡ್ ಜಿಹಾದ್ ಎಂದ ಅಶೋಕ್!
ರೈತರಿಗೆ ವಕ್ಫ್ ಬೋರ್ಡ್ ನೋಟಿಸ್ ನೀಡಿರುವ ಬಗ್ಗೆ ವಿಪಕ್ಷ ನಾಯಕ ಆರ್.ಅಶೋಕ್ ಕೂಡ ಕಿಡಿಕಾರಿದ್ದಾರೆ. ಇದನ್ನು ಲ್ಯಾಂಡ್ ಜಿಹಾದ್ ಎಂದು ಅಶೋಕ್ ಕರೆದಿದ್ದಾರೆ. ಅನ್ನದಾತರ ಭೂಮಿಗೆ ಕನ್ನ ಹಾಕಿದ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ. ವಕ್ಫ್ ಆಸ್ತಿ ಹೆಸರಿನಲ್ಲಿ ಲ್ಯಾಂಡ್ ಜಿಹಾದ್ ಮಾಡಲು ಹೊರಟಿರುವ ಕಾಂಗ್ರೆಸ್ ಸರ್ಕಾರದ ದೌರ್ಜನ್ಯ ವಿರೋಧಿಸಿ ವಿಜಯಪುರದ ರೈತರು ಈ ವರ್ಷ ದೀಪಾವಳಿ ಆಚರಿಸದಿರಲು ನಿರ್ಧರಿಸಿದ್ದಾರೆ ಎಂದು ದೂರಿದ್ದಾರೆ. ಅನ್ನ ನೀಡುವ ರೈತರ ಭೂಮಿಗೆ ಕನ್ನ ಹಾಕಿ, ರೈತರ ಮನೆ ದೀಪ ಕಸಿದುಕೊಂಡ ಕಾಂಗ್ರೆಸ್ ಸರ್ಕಾರಕ್ಕೆ ಅನ್ನದಾತರ ಶಾಪ ತಟ್ಟದೇ ಇರದು ಎಂದು ಎಚ್ಚರಿಸಿದ್ದಾರೆ.












Click it and Unblock the Notifications