Vijayapura: ಬರ ಪರಿಹಾರ: ಅಧಿಕಾರಿಗಳಿಂದ ರೈತರಿಗೆ ಅನ್ಯಾಯ: ಕೃಷ್ಣ ಬೈರೇಗೌಡ ಕಿಡಿ
ವಿಜಯಪುರ, ನವೆಂಬರ್ 29: 'ಜಿಲ್ಲೆಯಲ್ಲಿ ಈಗಾಗಲೇ ಬೆಳೆ ಸಮೀಕ್ಷೆ ಮುಗಿದಿದೆ. ಆದರೆ, ಎಲ್ಲಾ ರೈತರ ಒಟ್ಟು ಜಮೀನಿನ ವಿಸ್ತೀರ್ಣದ ಮಾಹಿತಿ ಇನ್ನೂ ನಿಖರವಾಗಿ ನಮೂದಿಸಲಾಗಿಲ್ಲ. ಅಧಿಕಾರಿಗಳ ಇಂತಹ ನಡೆಯಿಂದ ರೈತರಿಗೆ ಅನ್ಯಾಯವಾಗಲಿದೆ' ಎಂದು ಅಧಿಕಾರಿಗಳನ್ನು ಸಚಿವ ಕೃಷ್ಣ ಬೈರೇಗೌಡ ಅವರು ಎಚ್ಚರಿಸಿದ್ದಾರೆ.
ಬಿಜಾಪುರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಬುಧವಾರ ನಡೆದ ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, "ಬರ ಪರಿಹಾರದ ಹಣ ರೈತರಿಗೆ ಆನ್ಲೈನ್ ಮೂಲಕವೇ ತಲುಪಲಿದೆ. "ಫ್ರೂಟ್ಸ್" ತಂತ್ರಾಂಶದಲ್ಲಿ ರೈತರ ಸಂಪೂರ್ಣ ಜಮೀನಿನ ಒಟ್ಟು ವಿಸ್ತೀರ್ಣ ನಮೂದಿಸಿದರೆ ಮಾತ್ರ ಅವರಿಗೆ ನ್ಯಾಯಯುತ ಪರಿಹಾರ ತಲುಪಲಿದೆ.

ಆದರೆ ಬಿಜಾಪುರ ಜಿಲ್ಲೆಯಲ್ಲಿ ಬೆಳೆ ಸಮೀಕ್ಷೆ ನಡೆದಿದ್ದರು ಎಲ್ಲಾ ರೈತರ ಜಮೀನಿನ ಒಟ್ಟು ವಿಸ್ತೀರ್ಣದ ಮಾಹಿತಿ ಫ್ರೂಟ್ಸ್ ತಂತ್ರಾಂಶದಲ್ಲಿ ಸಂಪೂರ್ಣವಾಗಿ ನಮೂದಿಸಲಾಗಿಲ್ಲ ಏಕೆ ? ಸರ್ಕಾರದ ಸೂಚನೆ ಪಾಲಿಸಲೂ ನಿಮಗೆ ಕಷ್ಟವೇ?" ಎಂದು ಅಧಿಕಾರಿಗಳ ವಿರುದ್ಧ ಅವರು ಆಕ್ರೋಶ ಹೊರಹಾಕಿದರು.
"ಗ್ರಾಮ ಆಡಳಿತ ಅಧಿಕಾರಿಗೆ ಆತನ ಅಧಿಕಾರದ ವ್ಯಾಪ್ತಿಯಲ್ಲಿ ಯಾವ ರೈತನಿಗೆ ಎಲ್ಲಿ.. ಎಷ್ಟು ಏಕರೆ ಜಮೀನಿದೆ? ಎಂಬ ಕನಿಷ್ಟ ಮಾಹಿತಿ ಇದ್ದೇ ಇರುತ್ತದೆ. ಅದನ್ನು ಮತ್ತೆ ರೈತನಲ್ಲಿ ಕೇಳಿ ತಂತ್ರಾಂಶದಲ್ಲಿ ನಮೂದಿಸಿ" ಎಂದು ಸೂಚಿಸಿದರು.
"ಅಧಿಕಾರಿಗಳು ರೈತರ ಜಮೀನಿನ ಸಂಪೂರ್ಣ ವಿಸ್ತೀರ್ಣವನ್ನು ನಮೂದಿಸದಿದ್ದರೆ ರೈತರಿಗೆ ನ್ಯಾಯಯುತ ಪರಿಹಾರ ನೀಡಲು ಸಾಧ್ಯವಿಲ್ಲ. ಇದರಿಂದ ರೈತರಿಗೆ ಅನ್ಯಾಯವಾಗಲಿದೆ. ಮಳೆ ಇಲ್ಲದ ಕಾರಣ ರೈತರು ಬೆಳೆ ಕೈಸೇರದೆ ಸಂಕಷ್ಟಕ್ಕೀಡಾಗಿದ್ದಾರೆ. ಇಂತಹ ಸಂದರ್ಭದಲ್ಲಿ ನಾವು ರೈತರ ಪರ ನಿಲ್ಲಬೇಕಾಗಿದೆ. ಹೀಗಾಗಿ ರೈತರಿಗೆ ನ್ಯಾಯಯುತ ಪರಿಹಾರ ತಲುಪಿಸಲು ಮುಂದಿನ ವಾರದ ಒಳಗಾಗಿ ಅಧಿಕಾರಿಗಳು ತ್ವರಿತ ಗತಿಯಲ್ಲಿ ರೈತರ ಜಮೀನಿನ ನಿಖರ ಮಾಹಿತಿಯನ್ನು ನಮೂದಿಸಿ, ಇನ್ನಾದರೂ ಬೆಂಕಿ ಬಿದ್ದ ಮೇಲೆ ಭಾವಿ ತೋಡುವ ರೀತಿಯ ವರ್ತನೆ ನಿಲ್ಲಿಸಿ" ಎಂದರು.
ಪಹಣಿ ಜೊತೆಗೆ ಆಧಾರ್ ಲಿಂಕ್ ಮಾಡಲು ಕರೆ:
ರಾಜ್ಯದಲ್ಲಿ ಶೇ.70 ರಷ್ಟು ಸಣ್ಣ ರೈತರಿದ್ದಾರೆ. ಆದರೆ, ಕೇಂದ್ರ ಸರ್ಕಾರದ ಹಳೆಯ ಅಂಕಿಅಂಶಗಳ ಪ್ರಕಾರ ರಾಜ್ಯದಲ್ಲಿನ ಸಣ್ಣ ರೈತರ ಸಂಖ್ಯೆ ಶೇ.44 ಮಾತ್ರ. ಇದರಿಂದ ರಾಜ್ಯಕ್ಕೆ ಲಭ್ಯವಾಗುವ ಬರ ಪರಿಹಾರದಲ್ಲೂ ಅನ್ಯಾಯವಾಗುತ್ತಿದೆ.

ಹೀಗಾಗಿ ಗ್ರಾಮ ಲೆಕ್ಕಿಗರು ಮುಂದಿನ ದಿನಗಳಲ್ಲಿ ರೈತರ ಪಹಣಿಗಳನ್ನು ಆಧಾರ್ ನಂಬರ್ ಜೊತೆಗೆ ಲಿಂಕ್ ಮಾಡಿದರೆ ರಾಜ್ಯದ ಸಣ್ಣ ರೈತರ ಅಂಕಿಸಂಖ್ಯೆ ನಿಖರವಾಗಿ ತಿಳಿಯಲಿದೆ. ಇದನ್ನೇ ಕೇಂದ್ರದ ಮುಂದಿಟ್ಟು ರಾಜ್ಯದ ಹಕ್ಕನ್ನು ಮಂಡಿಸಬಹುದು. ಇದಕ್ಕೆ ಸಹಕಾರಿಯಾಗುವಂತೆ ಶೀಘ್ರದಲ್ಲೇ ಆ್ಯಪ್ ಒಂದನ್ನೂ ಅಭಿವೃದ್ಧಿ ಪಡಿಸಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ಸೂಚಿಸಿದರು.
ಇ- ಆಫೀಸ್ ಅನುಷ್ಠಾನ, ಸಚಿವರ ತೀವ್ರ ಅಸಮಾಧಾನ!
ಅತ್ಯಂತ ಹಿಂದುಳಿದ ಜಿಲ್ಲೆಗಳಲ್ಲೂ ಇ-ಆಫೀಸ್ ಬಳಸುತ್ತಿದ್ದಾರೆ. ಆದರೂ, ಬಿಜಾಪುರ ತಾಲೂಕು ಕಚೇರಿಗಳಲ್ಲಿ ಇ-ಆಫೀಸ್ ಬಳಸುತ್ತಿಲ್ಲ. ಹಾಗಾದ್ರೆ ಸಚಿವರ ಮಾತಿಗೆ ಬೆಲೆ ಇಲ್ವ? ನಮ್ಮ ಸೂಚನೆಗಳನ್ನು ಯಾರೂ ಪಾಲಿಸೋದಿಲ್ವ?" ಎಂದು ಸಚಿವರು ಅಧಿಕಾರಿಗಳ ವಿರುದ್ಧ ಅಸಮಾಧಾನ ಹೊರಹಾಕಿದರು.
ನಾಲ್ಕು ತಿಂಗಳಿನಿಂದ ಹೇಳಿದರೂ ಬಿಜಾಪುರ ತಾಲೂಕು ಕಚೇರಿಯಲ್ಲೇ ಈವರೆಗೆ ತೀರಾ ಕಡಿಮೆ ಸಂಖ್ಯೆಯಲ್ಲಿ ಮಾತ್ರ ಇ-ಆಫೀಸ್ ನಲ್ಲಿ ಕಡತಗಳನ್ನು ರಚಿಸಲಾಗಿದೆ ಎಂದು ಆಕ್ರೋಶ ಹೊರಹಾಕಿದ ಸಚಿವರು, ತಹಶೀಲ್ದಾರರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಅಲ್ಲದೇ ಮುಂದಿನ ದಿನಗಳಲ್ಲಿ ಎಲ್ಲಾ ಕಡತಗಳ ವಿಲೇವಾರಿಯೂ ಇ-ಆಫೀಸ್ ಮೂಲಕವೇ ನಡೆಯಬೇಕು, ಇಲ್ಲದಿದ್ದರೆ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.












Click it and Unblock the Notifications