ವಿಜಯಪುರ: ಬಾರ್ ಮುಂದೆ ಹಲಿಗೆ ಬಾರಿಸಿದ ಪೌರಕಾರ್ಮಿಕರು, ತೆರಿಗೆ ಪಾವತಿಸುವಂತೆ ಒತ್ತಾಯ
ವಿಜಯಪುರ, ಆಗಸ್ಟ್, 22: ಜಿಲ್ಲೆಯ ಮುದ್ದೇಬಿಹಾಳ ಪುರಸಭೆಗೆ ಬರಬೇಕಿದ್ದ ತೆರಿಗೆ ಬಾಕಿ ಪಾವತಿಸುವಂತೆ ಬಾರ್‌ವೊಂದರ ಮುಂದೆ ಪುರಸಭೆ ಪೌರಕಾರ್ಮಿಕರು ಹಲಿಗೆ ಬಾರಿಸುವ ಮೂಲಕ ವಿನೂತನ ರೀತಿಯಲ್ಲಿ ಒತ್ತಾಯಿಸಿದ್ದಾರೆ.
ಮುದೇಬಿಹಾಳ ಪಟ್ಟಣದ ಆಲಮಟ್ಟಿ ರಸ್ತೆಯಲ್ಲಿರುವ ವಾರ್ಡ್ ಸಂಖ್ಯೆ 7ರಲ್ಲಿ ಬರುವ ಆಸ್ತಿ ಸಂಖ್ಯೆ 1968ರ ಎಸ್.ಎಸ್.ಕರಭಂಟನಾಳ ಅವರಿಗೆ ಸೇರಿದ ಪಲ್ಲವಿ ಬಾರ್ ಹಾಗೂ ರೆಸ್ಟೋರೆಂಟ್‌ನ ಕಟ್ಟಡದ ಎದುರಿಗೆ ಪುರಸಭೆ ಕಂದಾಯ ವಿಭಾಗದ ಅಧಿಕಾರಿಗಳು, ಪೌರಕಾರ್ಮಿಕರು ಹಲಿಗೆ ಬಡಿದು ಬಾಕಿ ಪಾವತಿಸುವಂತೆ ಒತ್ತಾಯಿಯಿಸಿದರು. ಹೀಗೆ ಮಧ್ಯಾಹ್ನದವರೆಗೂ ಹಲಿಗೆ ಬಡಿಯುವ ಕಾರ್ಯವನ್ನು ಪುರಸಭೆ ಪೌರಕಾರ್ಮಿಕರು ಮಾಡಿದರು.

ತಕ್ಷಣ ಸ್ಥಳಕ್ಕೆ ಆಗಮಿಸಿದ ಆಸ್ತಿಯ ಮಾಲೀಕ ಸಂಗಮೇಶ ಕರಭಂಟನಾಳ ಪುರಸಭೆ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದರಲ್ಲದೆ, ನಾವು ಟ್ಯಾಕ್ಸ್ ಕಟ್ಟಬೇಕು ನಿಜ. ನಮ್ಮ ಕಟ್ಟಡದ ಎದುರಿಗೆ ಹಲಿಗೆ ಬಡಿಯುವಂತೆ ಆದೇಶ ಏನಾದರೂ ಇದೆಯೇ? ಇದ್ದರೆ ತಂದು ಹಲಿಗೆ ಬಡಿಯಿರಿ ಎಂದು ಅಧಿಕಾರಿಗಳೊಂದಿಗೆ ಜಟಾಪಟಿ ನಡೆಸಿದರು.
ಪುರಸಭೆ ಕಂದಾಯ ಅಧಿಕಾರಿ ಎನ್.ಎಸ್.ಪಾಟೀಲ, ಕಂದಾಯ ನಿರೀಕ್ಷಕ ಸಂತೋಷ್ ಮಠ ಮಾತನಾಡಿ, ಈಗಾಗಲೇ ಆಸ್ತಿ ತೆರಿಗೆ ಬಾಕಿ ಕಟ್ಟಲು ತಮಗೆ ತಿಳಿಸಲಾಗಿದೆ. ಬಾಕಿ ಇರಿಸಿಕೊಂಡಿದ್ದಕ್ಕೆ ನಾವು ಹಲಿಗೆ ಬಡಿಯಲು ಹಚ್ಚಿದ್ದು. ನೀವು ಬಾಕಿ ಸರ್ಕಾರಕ್ಕೆ ತುಂಬಿ ಎಂದು ಹೇಳಿದರು.
ಈ ವೇಳೆ ಬಿಲ್ ಕಲೆಕ್ಟರ್ ಶರಣು ಚಲವಾದಿ, ಶಮ್ಸುದ್ದೀನ್ ಮೂಲಿಮನಿ, ಉಮೇಶ ದೇವರ, ಆರೋಗ್ಯ ನಿರೀಕ್ಷಕರಾದ ಜಾವೇದ ನಾಯ್ಕೋಡಿ, ಮಹಾಂತೇಶ ಕಟ್ಟಿಮನಿ ಸೇರಿದಂತೆ ಮತ್ತಿತರಿದ್ದರು.












Click it and Unblock the Notifications