ಲಂಚ ಪ್ರಕರಣ : ಮಹಾರಾಷ್ಟ್ರ ಎಸಿಬಿಯಿಂದ ಡಿವೈಎಸ್‌ಪಿ ಹುಡುಕಾಟ
ವಿಜಯಪುರ, ಆಗಸ್ಟ್ 29 : ಲಂಚ ಪ್ರಕರಣವೊಂದರಲ್ಲಿ ಮಹಾರಾಷ್ಟ್ರದ ಎಸಿಬಿ ಅಧಿಕಾರಿಗಳು ಕರ್ನಾಟಕಕ್ಕೆ ಭೇಟಿ ನೀಡಿದ್ದಾರೆ. ಕಾಂಗ್ರೆಸ್ ಮುಖಂಡೆ ರೇಷ್ಮಾ ಪಡೇಕನೂರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಲಂಚ ಪಡೆಯಲಾಗಿದೆ ಎಂಬುದು ಕುತೂಹಲದ ವಿಷಯವಾಗಿದೆ.
ಬಸವನಬಾಗೇವಾಡಿ ಉಪ ವಿಭಾಗದ ಡಿವೈಎಸ್‌ಪಿ ಮಹೇಶ್ವರ ಗೌಡ ಹುಡುಕಿಕೊಂಡು ಎಸಿಬಿ ಅಧಿಕಾರಿಗಳು ಆಗಮಿಸಿದ್ದಾರೆ. ರೇಷ್ಮಾ ಪಡೇಕನೂರ ಹತ್ಯೆ ಪ್ರಕರಣದ ಆರೋಪಿ ತೌಫಿಕ್ ಪೈಲ್ವಾನ್ ಕುಟುಂಬಸ್ಥರಿಂದ ಡಿವೈಎಸ್‌ಪಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂಬುದು ಆರೋಪ.
ಮಹೇಶ್ವರ ಗೌಡ ಮತ್ತು ರೈಟರ್ ಮಲ್ಲಿಕಾರ್ಜುನ ಪೂಜಾರಿ ಒಟ್ಟಾಗಿ 5 ಲಕ್ಷ ರೂ. ಲಂಚಕ್ಕಾಗಿ ಬೇಡಿಕೆ ಇಟ್ಟಿದ್ದರು. ಪೈಲ್ವಾನ್ ಕುಟುಂಬ 1 ಲಕ್ಷ ರೂ. ಲಂಚ ನೀಡಲು ಒಪ್ಪಿಗೆ ನೀಡಿತ್ತು. ಆಗಸ್ಟ್ 22ರಂದು ಲಂಚ ಪಡೆಯುವಾಗ ಪೂಜಾರಿ ಮತ್ತು ರಿಯಾಜ್ ಎಂಬುವವರನ್ನು ಬಂಧಿಸಲಾಗಿತ್ತು.

ಇಬ್ಬರನ್ನು ಬಂಧಿಸಿದ್ದ ಎಸಿಬಿ ಅಧಿಕಾರಿಗಳು ಮಹೇಶ್ವರ ಗೌಡ ಬಂಧನಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ. ಇಬ್ಬರ ಬಂಧನವಾಗುತ್ತಿದ್ದಂತೆ ಅವರು ನಾಪತ್ತೆಯಾಗಿದ್ದಾರೆ. ಗುರುವಾರ ಎಸಿಬಿ ತಂಡ ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ಭೇಟಿ ನೀಡಿದ್ದಾರೆ.
ಮಹೇಶ್ವರ ಗೌಡ ಬಂಧನಕ್ಕಾಗಿ ತಂಡವನ್ನು ರಚನೆ ಮಾಡಲಾಗಿದೆ. ಶೀಘ್ರದಲ್ಲೇ ಬಂಧಿಸಲಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ. ರೇಷ್ಮಾ ಪಡೇಕನೂರ ಆರೋಪಿಗಳಿಂದ ಲಂಚ ಪಡೆದಿರುವುದು ಏಕೆ? ಎಂಬುದು ತನಿಖೆಯ ಬಳಿಕ ತಿಳಿದು ಬರಲಿದೆ.












Click it and Unblock the Notifications