ಉಡುಪಿ; ಮಾಂಗ್ರೋವ್ ವನದ ನಡುವೆ ಮೂಡಿದ ಮತದಾನ ಜಾಗೃತಿ
ಉಡುಪಿ, ಏಪ್ರಿಲ್ 28; ಕರ್ನಾಟಕ ವಿಧಾನಸಭೆ ಚುನಾವಣೆಗ ಮತದಾನ ಮೇ 10ರಂದು ನಡೆಯಲಿದೆ. ಚುನಾಣಾ ಆಯೋಗ ಮತದಾನದ ಪ್ರಮಾಣ ಹೆಚ್ಚಳ ಮಾಡಲು ಹಲವಾರು ಕ್ರಮ ಕೈಗೊಂಡಿದೆ. ಜಿಲ್ಲಾಡಳಿತದ ನೆರವಿನಲ್ಲಿ ಅನೇಕ ಕಾರ್ಯಕ್ರಮಗಳನ್ನು ಮತದಾನದ ಜಾಗೃತಿಗಾಗಿ ಹಮ್ಮಿಕೊಂಡಿದೆ. ಉಡುಪಿಯಲ್ಲಿ ನಡೆದ ಮತದಾನ ಜಾಗೃತಿ ಅಭಿಯಾನದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮಾಂಗ್ರೋವ್ ವನದ ಮಧ್ಯೆ ಕಯಾಕ್ ಮೂಲಕ ವಿನೂತನ ರೀತಿಯಲ್ಲಿ ಮತದಾನದ ಜಾಗೃತಿ ಮೂಡಿಸಲಾಗಿದೆ. ಉಡುಪಿ ಜಿಲ್ಲೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸುವ ಕುರಿತಂತೆ ಸ್ವೀಪ್ ವತಿಯಿಂದ ವಿವಿಧ ರೀತಿಯಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಇದೇ ಮೊದಲ ಬಾರಿಗ ಅತ್ಯಂತ ವಿಶಿಷ್ಟ ರೀತಿಯಲ್ಲಿ ಹೊಳೆಯಲ್ಲಿ ಕಯಾಕಿಂಗ್ ಮೂಲಕ ತೆರಳಿ ಜಾಗೃತಿ ಮೂಡಿಸಲಾಗಿದೆ.

ಉಡುಪಿಯ ಮಾಂಗ್ರೋವ್ ಕಾಡುಗಳು ಪ್ರವಾಸಿಗರ ನೆಚ್ಚಿನ ತಾಣ ಈ ಕಾಡುಗಳ ಮಧ್ಯೆ ಕಯಾಕ್‌ಗಳಲ್ಲಿ ವಿನೂತನ ರೀತಿಯಲ್ಲಿ ಮತದಾನ ಮಹತ್ವ ಕುರಿತು ಜಾಗೃತಿ ಮೂಡಿಸಲಾಗಿದೆ. ಜಿಲ್ಲಾಡಳಿತ ಉಡುಪಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಸಾಲಿಗ್ರಾಮದ ಸೀತಾ ನದಿಯ ಹಿನ್ನೀರಿನ ನಡುವಿನ ದಟ್ಟ ಕಾಂಡ್ಲಾವನದ ನಡುವೆ ಕಯಾಕಿಂಗ್ ಮಾಡಲು ಬಳಸುವ ದೋಣಿಗಳ ಮೂಲಕ ಮತದಾನ ಜಾಗೃತಿಯ ಸಂದೇಶವನ್ನು ಸಾರಲಾಯಿತು.
ವಿವಿಧ ಅಧಿಕಾರಿಗಳು ಭಾಗಿ; ಸಾಲಿಗ್ರಾಮ ಬಳಿಯ ಕಯಾಕಿಂಗ್ ಪಾಯಿಂಟ್ ಬಳಿಗೆ ತೆರಳಿದ ಜಿಲ್ಲಾ ಚುನಾವಣಾಧಿಕಾರಿ ಮತ್ತು ಉಡುಪಿ ಜಿಲ್ಲಾಧಿಕಾರಿ ಕೂರ್ಮರಾವ್ ಎಂ., ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರು ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರಸನ್ನ ಹೆಚ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಎಂ ಹಾಕೆ ಮುಂತಾದವರು ನೈತಿಕ ಮತದಾನ ಪ್ರತಿಜ್ಞೆ ಕುರಿತ ಫಲಕದಲ್ಲಿ ಸಹಿ ಮಾಡಿ, ಸಂಪೂರ್ಣ ಸುರಕ್ಷತಾ ಉಪಕರಣಗಳನ್ನು ಧರಿಸಿ ಕಯಾಕಿಂಗ್ ಆರಂಭಿಸಿದರು.

ಸುಮಾರು 30 ನಿಮಿಷಗಳ ಕಯಾಕಿಂಗ್ ನಂತರ ಮಾಂಗ್ರೋವ್ ಕಾಡುಗಳ ಮಧ್ಯೆ ಇರುವ ಪ್ರದೇಶದಲ್ಲಿ ಸುಮಾರು 40 ಕ್ಕೂ ಹೆಚ್ಚು ಕಯಾಕ್ ದೋಣಿಗಳ ಮೂಲಕ ಮತದಾನ ದಿನವಾದ, ಮೇ 10 ದಿನಾಂಕದ ಚಿತ್ರಣ ರೂಪಿಸಿ ಮತ್ತು ಮತದಾನ ಜಾಗೃತಿಯ ಫಲಕವನ್ನು ನೀರಿನ ಮೇಲೆ ಪ್ರದರ್ಶಿಸಿ ಅತ್ಯಂತ ಆಕರ್ಷಕ ರೀತಿಯಲ್ಲಿ ಮತದಾನ ಜಾಗೃತಿ ಮೂಡಿಸಲಾಯಿತು. ಇದರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಕಯಾಕಿಂಗ್‌ನ ಆರಂಭದ ಸ್ಥಳದಿಂದ ನದಿ ಮಧ್ಯದ ಕಾರ್ಯಕ್ರಮ ನಡೆಯವ ಸ್ಥಳದ ವರೆಗೂ ನದಿಯಲ್ಲಿ ಮತದಾನ ಜಾಗೃತಿ ಸಾರುವ ಯಕ್ಷಗಾನ ಮುಖುಟ ಮಾದರಿಯ ಆಕೃತಿಗಳು ಗಮನ ಸೆಳೆದವು. ಇದೇ ಸಂದರ್ಭದಲ್ಲಿ, ಕಯಾಕಿಂಗ್ ಮೂಲಕ ಆ ಪ್ರದೇಶಕ್ಕೆ ಆಗಮಿಸಿದ್ದ ಮಣೂರು ಪಡುಕೆರೆ ಕಾಲೇಜಿನ ವಿದ್ಯಾರ್ಥಿಗಳಿಗೆ ಮತದಾರರ ಪ್ರತಿಜ್ಞಾ ವಿಧಿ ಭೋಧಿಸಿ,ಮತದಾನ ದಿನಾಂಕವನ್ನು ಒಳಗೊಂಡ ಬಲೂನ್‌ಗಳನ್ನು ಹಾರಿಬಿಡುವ ಮೂಲಕ ಕೂಡಾ ಜಾಗೃತಿ ಮೂಡಿಸಿದರು. ಈ ಕಾರ್ಯಕ್ರಮಕ್ಕೆ ಸಾಲಿಗ್ರಾಮ ಕಯಕಿಂಗ್ ಪಾಯಿಂಟ್‌ನಲ್ಲಿ ಕಾರ್ಯನಿರ್ವಹಿಸುವ ವಿವಿಧ ಸಂಸ್ಥೆಗಳು ಮತ್ತು ಸಿಬ್ಬಂದಿ ಅಗತ್ಯ ಸಹಕಾರ ನೀಡಿದರು.
ಜಿಲ್ಲಾಧಿಕಾರಿಗಳು ಮಾತನಾಡಿ, "ರಾಜ್ಯದಲ್ಲೇ ಇದೇ ಮೊದಲ ಬಾರಿಗೆ ಹಿನ್ನಿರಿನಲ್ಲಿ ಮಾಂಗ್ರೋವ್ ವನದ ನಡುವೆ ಕಯಾಕ್‌ಗಳ ಮೂಲಕ ವಿಶಿಷ್ಠ ಮತ್ತು ವಿನೂತನ ಮಾದರಿಯಲ್ಲಿ ಮತದಾನ ಜಾಗೃತಿ ಮೂಡಿಸಲಾಗಿದೆ. ಪ್ರವಾಸಿ ತಾಣಗಳು ಹಾಗೂ ಸಾಹಸ ಚಟುವಟಿಕೆಗಳು ನಡೆಯುವ ಸ್ಥಳಗಳು ಯುವ ಜನತೆಯನ್ನು ಹೆಚ್ಚು ಆಕರ್ಷಿಸಲಿದ್ದು, ಇಲ್ಲಿ ನಡೆಸುವ ಮತದಾನ ಜಾಗೃತಿ ಕಾರ್ಯಕ್ರಮಗಳ ಮೂಲಕ ಯುವ ಜನತೆಯನ್ನು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಕೇಂದ್ರಗಳಿಗೆ ಸೆಳೆಯಲು ಸಹಕಾರಿಯಾಗಲಿದೆ" ಎಂದರು.












Click it and Unblock the Notifications