ರಿವರ್ಸ್ ಗೇರ್ ಸರ್ಕಾರ ಬಂದ್ರೆ ಎಲ್ಲವನ್ನೂ ವಾಪಾಸ್ ಪಡೆಯುತ್ತದೆ- ಕಾಂಗ್ರೆಸ್ ವಿರುದ್ಧ ಅಮಿತ್ ಶಾ ಟೀಕೆ
ಉಡುಪಿ, ಏಪ್ರಿಲ್ 29: ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದುರಂದು ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಮಾಡಲು ಉಡುಪಿ ಆಗಮಿಸಿದ್ದಾರೆ. ಕಾಪು ಕ್ಷೇತ್ರದ ಕಟಪಾಡಿಯ ಗ್ರೀನ್ ವ್ಯಾಲಿ ಮೈದಾನದಲ್ಲಿ ಚುನಾವಣಾ ಪ್ರಚಾರ ಸಮಾವೇಶ ಆಯೋಜಿಸಲಾಗಿದ್ದು,ಉಡುಪಿ ಬಿಜೆಪಿ ಅಭ್ಯರ್ಥಿ ಯಶ್‌ಪಾಲ್ ಸುವರ್ಣ ಹಾಗೂ ಕಾಪು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ ಪರ ಅಮಿತ ಶಾ ಮತಯಾಚನೆ ಮಾಡಿದ್ದಾರೆ.
ಗೃಹ ಸಚಿವನಾಗಿ ಮೊದಲ ಬಾರಿ ಉಡುಪಿಯ ಭೂಮಿಗೆ ಬಂದಿದ್ದೇನೆ. ಉಡುಪಿ ಶ್ರೀಕೃಷ್ಣ ಮಂದಿರ, ಕೊಲ್ಲೂರು ಮೂಕಾಂಬಿಕೆ, ಲಕ್ಷ್ಮಿ ಜನಾರ್ದನ ದೇವರಿಗೆ ಪ್ರಣಾಮ ಸಲ್ಲಿಸುತ್ತೇನೆ. ದೇವಭೂಮಿಗೆ ಆಗಮಿಸಿದ್ದು ನನ್ನ ಸೌಭಾಗ್ಯ, ಪರಶುರಾಮ ಸೃಷ್ಟಿಯಾದ ಈ ಭೂಮಿಗೆ ಭಾರತದಲ್ಲೇ ಗೌರವ ಇದೆ ಎಂದು ಕರಾವಳಿಯನ್ನು ಹೊಗಳಿದರು.

ಮಧ್ವಾಚಾರ್ಯರಿಂದ ಸ್ಥಾಪಿತ ಉಡುಪಿ ಕೃಷ್ಣ ಮಠ ಮತ್ತು ಉಡುಪಿಯ ಅಷ್ಠ ಮಠಗಳಿಗೂ ಪ್ರಣಾಮಗಳನ್ನು ಸಲ್ಲಿಸುತ್ತೇನೆ. ನಾರಾಯಣ ಗುರುಗಳಿಗೂ ಪ್ರಣಾಮಗಳನ್ನು ಸಲ್ಲಿಸುತ್ತೇನೆ. ನಾರಾಯಣ ಗುರುಗಳು ದಕ್ಷಿಣ ಭಾರತದಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿದ ಗುರುಗಳು. ಧರ್ಮದ ಬಹಳ ದೊಡ್ಡ ಸೇವೆಯನ್ನು ನಾರಾಯಣ ಗುರುಗಳು ಮಾಡಿದ್ದಾರೆ. ನಮ್ಮ ಪಕ್ಷದ ವರಿಷ್ಠರಾಗಿದ್ದ ಉಡುಪಿಯ ವಿ.ಎಸ್.ಆಚಾರ್ಯರು ಅವರಿಗೂ ಪ್ರಣಾಮ ಸಲ್ಲಿಸುತ್ತೇನೆ ಎಂದರು.
ಮತಾಂಧರು ನಮ್ಮ ಯುವನೇತಾರ ಪ್ರವೀಣ್ ನೆಟ್ಟಾರು ಹತ್ಯೆ ಮಾಡಿದರು. ಅವರ ಪ್ರಾಣ ವಾಪಾಸ್ ತರಲು ಆಗಲ್ಲ. ಆದರೆ ಅವರ ಹತ್ಯೆಗೆ ಕಾರಣವಾದ ಪಿಎಫ್ಐನ್ನು ಮೋದಿ ಸರ್ಕಾರ ಬ್ಯಾನ್ ಮಾಡಿತು. ಕರ್ನಾಟಕದಲ್ಲಿ ಪಿಎಫ್ಐನ 92ಕ್ಕೂ ಅಧಿಕ ಜನರನ್ನ ಗಲ್ಲಿ ಗಲ್ಲಿಗಳಲ್ಲಿ ಹುಡುಕಿ ಬಂಧಿಸುವ ಕೆಲಸ ಬಿಜೆಪಿ ಸರ್ಕಾರ ಮಾಡಿದೆ ಎಂದರು.
ಕಾಂಗ್ರೆಸ್ ಪಕ್ಷದ ಸಿದ್ದರಾಮಯ್ಯ ಸರ್ಕಾರ ಪಿಎಫ್ಐನ ಕೇಸ್‌ಗಳನ್ನ ವಾಪಾಸ್ ಪಡೆದಿತ್ತು. ಕಾಂಗ್ರೆಸ್ ಓಟ್ ಬ್ಯಾಂಕ್ ಗಾಗಿ ದೇಶದ ಸುರಕ್ಷತೆಯನ್ನೇ ಕಡೆಗಣಿಸಿತ್ತು. ಆದರೆ ಬಿಜೆಪಿ ಸರ್ಕಾರ ಪಿಎಫ್ಐ ಬ್ಯಾನ್ ಮಾಡಿ ದೇಶವನ್ನು ರಕ್ಷಿಸಿದೆ. ಈ ಚುನಾವಣೆ ಅಭ್ಯರ್ಥಿಗಳನ್ನು ಶಾಸಕರನ್ನಾಗಿ ಅಥವಾ ಮಂತ್ರಿ ಮಾಡುವ ಚುನಾವಣೆ ಅಲ್ಲ. ರಾಜ್ಯದ ಭವಿಷ್ಯವನ್ನು ಸುರಕ್ಷಿತವಾಗಿ ಮಾಡುವ ಚುನಾವಣೆ ಇದು ಎಂದು ಹೇಳಿದರು.

ಮತ್ತೆ ಮೋದಿ
ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಎನ್ಐಎಗೆ ಕೊಟ್ಟು ಭಯೋತ್ಪಾದಕರನ್ನು ಕಂಬಿ ಹಿಂದೆ ತಳ್ಳಿದ್ದೇವೆ. ಯಡಿಯೂರಪ್ಪ ಮತ್ತು ಬೊಮ್ಮಾಯಿ ಮೂಲಕ ಮೋದಿ ಸರ್ಕಾರ ಕೆಲಸ ಮಾಡುತ್ತಿದೆ. ಬಿಜೆಪಿ ಗೋ ಹತ್ಯೆ ಪ್ರತಿಬಂಧಕ ಕಾನೂನು ಜಾರಿಗೆ ತಂದಿದೆ. ಆದರೆ ಈ ರಿವರ್ಸ್ ಗೇರ್ ಸರ್ಕಾರ ಬಂದರೆ ಎಲ್ಲಾ ಕಾನೂನು ವಾಪಾಸ್ ಪಡೆಯುತ್ತದೆ ಎಂದು ಟೀಕಿಸಿದರು.
ಎಸ್ಸಿ ಎಸ್ಟಿ ಮೀಸಲಾತಿ, ಒಕ್ಕಲಿಗರ ಮೀಸಲಾತಿ ಹೆಚ್ಚಿಸಿದೆವು, ಮುಸ್ಲಿಂ ಮೀಸಲಾತಿ ವಿಚಾರದಲ್ಲಿ ಬಿಜೆಪಿ ಬಹುದೊಡ್ಡ ನಿರ್ಧಾರ ತೆಗೆದುಕೊಂಡಿದೆ. ಆದರೆ ಕಾಂಗ್ರೆಸ್ ಸರ್ಕಾರ ಬಂದರೆ ಮುಸ್ಲಿಂ ಮೀಸಲಾತಿ ಮತ್ತೆ ಕೊಡುತ್ತದೆ. ಅಂಬೇಡ್ಕರ್ ಸಂವಿಧಾನದಲ್ಲಿ ಧರ್ಮದ ಆಧಾರದಲ್ಲಿ ಮೀಸಲಾತಿಗೆ ಅವಕಾಶ ಇಲ್ಲ. ಹೀಗಾಗಿ ನಾವು ಮುಸ್ಲಿಂ ಮೀಸಲಾತಿ ಸ್ಥಗಿತ ಮಾಡಿದೆವು. ಡಿಕೆ ಶಿವಕುಮಾರ್ ಮುಸ್ಲಿಂ ಮೀಸಲಾತಿ ತರುವ ಮಾತು ಆಡಿದ್ದಾರೆ. ಮತ್ತೆ ಮೀಸಲಾತಿ ತರಲು ಒಕ್ಕಲಿಗರದ್ದು ಕಡಿಮೆ ಮಾಡ್ತಾರಾ? ಎಸ್ಸಿ ಎಸ್ಟಿ ಕಡಿಮೆ ಮಾಡ್ತಾರಾ ಹಾಗಾಗಿ ಬಿಜೆಪಿ ಸರ್ಕಾರ ಬಂದ್ರೆ ಯಾವುದೇ ಕಾರಣಕ್ಕೂ ಮುಸ್ಲಿಂ ಮೀಸಲಾತಿ ಹೆಚ್ಚಿಸಲು ಬಿಡಲ್ಲ ಎಂದರು.
ರಾಹುಲ್ ಮತ್ತು ಪ್ರಿಯಾಂಕ ರಾಜ್ಯದಲ್ಲಿ ಚುನಾವಣಾ ಟೂರಿಸಂ ಆರಂಭಿಸಿದ್ದಾರೆ. ಈ ಮೂಲಕ ಕರ್ನಾಟಕವನ್ನು ಮತ್ತೊಮ್ಮೆ ಎಟಿಎಂ ಮಾಡುವ ಯೋಜನೆ ಅವರದ್ದು ಮೋದಿ ಜೀ ಭಾರತವನ್ನು ಸಮೃದ್ಧವಾಗಿ, ಸುರಕ್ಷಿತವಾಗಿ ಮಾಡಿದ್ದಾರೆ. ಮೋದಿ ಬಗ್ಗೆ ವಿಷದ ಹಾವು ಶಬ್ದ ಪ್ರಯೋಗ ಮಾಡಿದ್ದಾರೆ, ಇದು ಸರಿಯಾ? ಸೋನಿಯಾ ಗಾಂಧಿ, ಪ್ರಿಯಾಂಕ ಗಾಂಧಿ, ರಾಹುಲ್, ಬಿ.ಕೆ.ಹರಿ ಪ್ರಸಾದ್ ಎಲ್ಲರೂ ಮೋದಿ ಬಗ್ಗೆ ಇಂಥದ್ದೇ ಶಬ್ಧ ಪ್ರಯೋಗ ಮಾಡಿದ್ದರು. ಆದರೆ ಆಗೆಲ್ಲಾ ಕಾಂಗ್ರೆಸ್ ಸೋತಿದೆ, ಬಿಜೆಪಿ ಮತ್ತೆ ಗೆದ್ದು ಬಂದಿದೆ. ರಾಜ್ಯದ ಜನತೆ ಇಂಥ ಭಾಷೆ ಪ್ರಯೋಗ ಮಾಡಬಾರದು, ಅದರ ಬದಲು ಮೋದಿ ಪರವಾಗಿ ಮತ ಹಾಕಿ ಎಂದು ಮನವಿ ಮಾಡಿದರು.
ಕಾಂಗ್ರೆಸ್ ಗುಜರಾತ್, ಅಸ್ಸಾಂ, ಮಣಿಪುರದಲ್ಲೂ ಗ್ಯಾರಂಟಿ ಕಾರ್ಡ್ ನೀಡಿದೆ. ಆದರೆ ಕಾಂಗ್ರೆಸ್ ಬರುವುದದೇ ಗ್ಯಾರಂಟಿ ಇಲ್ಲ, ಕಾಂಗ್ರೆಸ್ ಬಂದರೆ ಭ್ರಷ್ಟಾಚಾರದ ಗ್ಯಾರಂಟಿ, ಪಿಎಫ್ಐ ಸಮರ್ಥನೆಯ ಗ್ಯಾರಂಟಿ. ಹೀಗಾಗಿ ಮೋದಿಜೀ ಡಬಲ್ ಇಂಜಿನ್ ಸರ್ಕಾರ ಬಂದ್ರೆ ಸುರಕ್ಷತೆ, ಅಭಿವೃದ್ಧಿಯ ಗ್ಯಾರಂಟಿ. ಕರಾವಳಿ ಕರ್ನಾಟಕ ಬಿಜೆಪಿಯ ಭದ್ರಕೋಟೆಯಾಗಿದೆ. ಈ ಬಾರಿ ಒಂದೇ ಒಂದು ಸೀಟ್ ಕರಾವಳಿಯಲ್ಲಿ ಕಾಂಗ್ರೆಸ್‌ಗೆ ಹೋಗಬಾರದು. ಜೆಡಿಎಸ್‌ಗೆ ಓಟು ಕೊಟ್ಟರೆ ಕಾಂಗ್ರೆಸ್‌ಗೆ ಓಟು ಕೊಟ್ಟಂತೆ. ಬಿಜೆಪಿಗೆ ಮಾತ್ರ ಮತ ನೀಡಿ, ಅದು ನೇರವಾಗಿ ಮೋದಿಗೆ ತಲುಪುತ್ತದೆ. ನಮ್ಮ ಎಲ್ಲಾ ಅಭ್ಯರ್ಥಿಗಳನ್ನು ಪ್ರಚಂಡ ಬಹುಮತದಿಂದ ಗೆಲ್ಲಿಸಿ.ಪೂರ್ಣ ಬಹುಮತದಿಂದ ನಮ್ಮ ಸರ್ಕಾರ ರಚನೆಗೆ ಸಹಕರಿಸಿ ಎಂದರು.












Click it and Unblock the Notifications