ಆಳ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದವರು ನಾಪತ್ತೆ
ಉಡುಪಿ, ಡಿಸೆಂಬರ್ 24: ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ 8 ಮಂದಿ ಮೀನುಗಾರರು ನಾಪತ್ತೆಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಉಡುಪಿಯ ಮಲ್ಪೆ ಬಂದರಿನಿಂದ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ ಎಂಟು ಮಂದಿ ಮೀನುಗಾರರು ಕಳೆದ ಎಂಟು ದಿನಗಳಿಂದ ಬೋಟು ಸಮೇತ ನಾಪತ್ತೆಯಾಗಿದ್ದಾರೆ. ನಾಪತ್ತೆಯಾದವರನ್ನು ಬೋಟ್ ಮಾಲೀಕ ಬಡಾನಿಡಿಯೂರಿನ ಚಂದ್ರ ಶೇಖರ, ಮೀನುಗಾರರಾದ ದಾಮೋದರ, ಲಕ್ಷ್ಮಣ್, ಸತೀಶ್, ರವಿ, ಹರೀಶ್, ರಮೇಶ್, ಜೋಗಯ್ಯ ಎಂದು ಗುರುತಿಸಲಾಗಿದೆ.
ಇವರೆಲ್ಲ ಸುವರ್ಣ ತ್ರಿಭುಜ ಎಂಬ ಮೀನುಗಾರಿಕಾ ಬೋಟಿನಲ್ಲಿ ಡಿಸೆಂಬರ್ 13 ರಂದು ರಾತ್ರಿ 11 ಗಂಟೆಗೆ ಸುಮಾರಿಗೆ ಮಲ್ಪೆಬಂದರಿನಿಂದ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದರು. ಡಿಸೆಂಬರ್ 15ರ ರಾತ್ರಿ 8 ರಿಂದ ಒಂದು ಗಂಟೆಯವರೆಗೆ ಸಂಪರ್ಕದಲ್ಲಿದ್ದ ಇವರು ನಂತರ ಸಂಪರ್ಕ ಸಿಗದೆ ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗಿದೆ.

ನಾಪತ್ತೆಯಾದ ಬೋಟು ಹಾಗೂ ಎಂಟು ಮಂದಿಯನ್ನು ಹುಡುಕಾಡಿದರೂ ಈವರೆಗೆ ಪತ್ತೆಯಾಗಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.











Click it and Unblock the Notifications