ಕದಲದ ಬಿಜೆಪಿ ಭದ್ರಕೋಟೆ: ಕೃಷ್ಣನೂರಿನಲ್ಲಿ ಕಮಲ ಕಮಾಲ್
ಉಡುಪಿ ಮೇ 13: ಕರ್ನಾಟಕ ವಿಧಾನಸಭಾ ಚುನಾವಣೆ 2023ರ ಫಲಿತಾಂಶ ಹೊರ ಬಿದ್ದಿದೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಬಹುತೇಕ ಖಚಿತವಾದರೂ, ಕೃಷ್ಟನೂರು ಉಡುಪಿಯಲ್ಲಿ ಬಿಜೆಪಿ ಭದ್ರಕೋಟೆ ಮತ್ತಷ್ಟು ಬಿಗಿಯಾಗಿದೆ. ಕಳೆದ ಬಾರಿಗಿಂದ ಈ ಬಾರಿ ಅನೇಕ ಕ್ಷೇತ್ರಗಳಲ್ಲಿ ಬಿಜೆಪಿ ಸೋಲು ಕಂಡರೂ, ಉಡುಪಿ ಜಿಲ್ಲೆಯ ಐದು ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ.
ಕರಾವಳಿ ಬಿಜೆಪಿ ಭದ್ರಕೋಟೆ ಹಾಗೂ ಹಿಂದೂತ್ವದ ಪ್ರಯೋಗ ಶಾಲೆಯಾಗಿದ್ದು, ಉಡುಪಿಯಲ್ಲಿ ಬಿಜೆಪಿಯ ಬೇರು ಆಳದಲ್ಲಿದ್ದು, ಈ ಬಾರಿಯ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಮತ್ತಷ್ಟು ಬಲಗೊಂಡಿದೆ. ಕಳೆದ ಬಾರಿಯಂತೆ ಈ ಬಾರಿಯೂ ಉಡುಪಿ ಜಿಲ್ಲೆಯನ್ನು ಬಿಜೆಪಿ ಕಬ್ಜ ಮಾಡಿದೆ.

ಈ ಬಾರಿ ಬಿಜೆಪಿ ಹೈಕಮಾಂಡ್ ಹೊಸ ಪ್ರಯೋಗವೊಂದನ್ನು ರಾಜ್ಯದಲ್ಲಿ ಮಾಡಿತ್ತು. ಅನೇಕ ಹೊಸ ಮುಖಗಳಿಗೆ ಟಿಕೆಟ್ ಕೊಡುವ ಮೂಲಕ ಬಿಜೆಪಿ ಸಾಮಾನ್ಯ ಕಾರ್ಯಕರ್ತರ ಪಕ್ಷ ಎಂದು ಸಾಬೀತು ಮಾಡಲು ಮುಂದಾಗಿತ್ತು. ಆದರೆ ಈ ಪ್ರಯೋಗ ಕೆಲ ಕ್ಷೇತ್ರದಲ್ಲಿ ಕೈ ಕೊಟ್ಟರೂ, ಉಡುಪಿಯಲ್ಲಿ ಬಿಜೆಪಿ ಪ್ರಯೋಗ ಯಶಸ್ಸು ಕಂಡಿದೆ.
ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾರ್ಕಳ ವಿಧಾನಸಭಾ ಕ್ಷೇತ್ರ ಹೊರತು ಪಡಿಸಿ ಉಳಿದ ಕುಂದಾಪುರ, ಕಾಪು, ಬೈಂದೂರು, ಹಾಗೂ ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಹೊಸ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗಿತ್ತು. ಇದೀಗ ಚುನಾವಣಾ ಫಲಿತಾಂಶ ಹೊರ ಬಿದ್ದಿದ್ದು, ಐದು ವಿಧಾನಸಭಾ ಕ್ಷೇತ್ರ ಬಿಜೆಪಿ ತೆಕ್ಕೆಗೆ ಬಿದ್ದಿದೆ.
ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಸಚಿವ, ಹಾಲಿ ಶಾಸಕ ಸುನೀಲ್ ಕುಮಾರ್ ಕಾಂಗ್ರೆಸ್ ಅಭ್ಯರ್ಥಿ ಮುನಿಯಾಲು ಉದಯ ಶೆಟ್ಟಿ ವಿರುದ್ಧ ಪ್ರಯಾಸದ ಗೆಲುವು ಸಾಧಿಸಿದ್ದಾರೆ.
ಉಡುಪಿ ಕ್ಷೇತ್ರದಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಯಶಪಾಲ್ ಸುವರ್ಣ ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್ ರಾಜ್ ಕಾಂಚನ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದಾರೆ.
ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ ಅವರು ಮೊದಲ ಪ್ರಯತ್ನದಲ್ಲೇ ಯಶಸ್ಸು ಕಂಡಿದ್ದು ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಬಾವುಟ ಹಾರಿಸಿದ್ದಾರೆ. ಇನ್ನು ಮಾಜಿ ಸಚಿವ ಕಾಂಗ್ರೆಸ್ ಅಭ್ಯರ್ಥಿಗೆ ವಿನಯ್ ಕುಮಾರ್ ಸೊರಕೆ ಅವರಿಗೆ ಈ ಬಾರಿಯೂ ಸೋಲಾಗಿದೆ.
ವ್ಯಕ್ತಿ ವರ್ಚಸ್ಸಿನ ಮೇಲೆ ನಿಂತಿದ್ದ ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಕೂಡ ಬಿಜೆಪಿ ಗೆಲುವು ಸಾಧಿಸಿದ್ದು, ಹಾಲಾಡಿ ಶ್ರೀನಿವಾಸ ಶೆಟ್ಟಿ ಬೆಂಬಲಿತ ಬಿಜೆಪಿ ಅಭ್ಯರ್ಥಿ ಕಿರಣ್ ಕೊಡ್ಗಿ ಇಪ್ಪತ್ತು ಸಾವಿರಕ್ಕೂ ಅಧಿಕ ಮತಗಳ ಅಂತರದಲ್ಲಿ ಭರ್ಜರಿ ಗೆಲುವು ಸಾಧಿಸಿದ್ದು, ಕಾಂಗ್ರೆಸ್ ಅಭ್ಯರ್ಥಿ ದಿನೇಶ್ ಹೆಗ್ಡೆ ಮೊಳಹಳ್ಳಿ ಅವರಿಗೆ ಸೋಲಾಗಿದೆ.
ಬೈಂದೂರು ಕ್ಷೇತ್ರದಲ್ಲಿ ಈ ಬಾರಿ ಸಾಮಾನ್ಯ ಕಾರ್ಯಕರ್ತನಿಗೆ ಬಿಜೆಪಿ ಟಿಕೆಟ್ ನೀಡಿತ್ತು. ಹಾಲಿ ಶಾಸಕ ಸುಕುಮಾರ್ ಶೆಟ್ಟಿ ಬದಲಿಗೆ ಉತ್ತಮ ಜನ ಬೆಂಬಲ ಹೊಂದಿದ್ದ ಗುರುರಾಜ ಗಂಟಿಹೊಳಿ ಅವರಿಗೆ ಟಿಕೆಟ್ ನೀಡಿತ್ತು. ಸದ್ಯ ಬೈಂದೂರು ಕ್ಷೇತ್ರ ಬಿಜೆಪಿ ಪಾಲಾಗಿದ್ದು, ಗುರುರಾಜ ಗಂಟಿಹೊಳಿ ಮಾಜಿ ಶಾಸಕ ಕಾಂಗ್ರೆಸ್ ಅಭ್ಯರ್ಥಿ ಗೋಪಾಲ ಪೂಜಾರಿಯವರಿಗೆ ಮತ್ತೊಮ್ಮೆ ಸೋಲು ಅನುಭವಿಸುವಂತೆ ಮಾಡಿದ್ದಾರೆ.












Click it and Unblock the Notifications