ಭಾರೀ ಮಳೆ: SDRF ತಂಡ ನೀಡುವಂತೆ ಸರ್ಕಾರಕ್ಕೆ ಉಡುಪಿ ಜಿಲ್ಲಾಧಿಕಾರಿ ಮನವಿ
ಉಡುಪಿ, ಜುಲೈ 07: ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯ ಕಾರಣ ಉಂಟಾಗುವ ಪ್ರಾಕೃತಿಕ ವಿಕೋಪ ಪರಿಸ್ಥಿತಿಯ ಸಮರ್ಪಕ ನಿರ್ವಹಣೆಗೆ ರಾಜ್ಯ ವಿಕೋಪ ನಿರ್ವಹಣಾ ಪಡೆಯ ಒಂದು ತಂಡವನ್ನು ನೀಡುವಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರನ್ನು ಕೋರಲಾಗಿದೆ ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ವಿಕೋಪ ನಿರ್ವಹಣೆ ಕುರಿತಂತೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ನಡೆಸಿದ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಎಲ್ಲಾ ಅಧಿಕಾರಿಗಳು ಕೇಂದ್ರಸ್ಥಾನದಲ್ಲಿದ್ದು, ಯಾವುದೇ ಸಂದರ್ಭದಲ್ಲೂ ತಕ್ಷಣ ಸಂಪರ್ಕಕ್ಕೆ ಸಿಗುವಂತೆ ಇರಬೇಕು ಮತ್ತು ಎಲ್ಲಾ ಇಲಾಖೆಗಳು ಪರಸ್ಪರ ಸಮನ್ವಯದಿಂದ ಒಂದು ತಂಡವಾಗಿ ಕಾರ್ಯನಿರ್ವಹಿಸಿ ಸಾರ್ವಜನಿಕರ ರಕ್ಷಣೆ ಮಾಡಬೇಕು. ಜಿಲ್ಲೆಯಲ್ಲಿ ವಿಪತ್ತು ನಿರ್ವಹಣೆಗೆ ರಚಿಸಲಾಗಿರುವ ಎಲ್ಲಾ ವಾರ್ಡ್ ಮತ್ತು ಗ್ರಾಮ ತಾಲೂಕು ಮಟ್ಟ ಸೇರಿದಂತೆ ಎಲ್ಲಾ ಟಾಸ್ಕ್ ಪೋರ್ಸ್ ತಂಡಗಳು ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸಬೇಕೆಂದು ಸೂಚಿಸಿದರು.

ನೆರೆಯಿಂದ ತೊಂದರೆಗೊಳಗಾದ ಸಾರ್ವಜನಿಕರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಬೇಕು. ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆಯುವವರಿಗೆ ಎಲ್ಲಾ ಅಗತ್ಯ ವ್ಯವಸ್ಥೆಗಳನ್ನು ಮಾಡುವಂತೆ ಮತ್ತು ನಂತರ ಅವರು ಮನೆಗಳಿಗೆ ತೆರಳುವಾಗ ಅಗತ್ಯವಿರುವ ಸಾಮಗ್ರಿಗಳನ್ನು ನೀಡುವಂತೆ ಎಲ್ಲಾ ತಹಸೀಲ್ದಾರ್‌ಗಳಿಗೆ ತಿಳಿಸಿದರು.
ನೆರೆಯಿಂದ ತೊಂದರೆಗೊಳಗಾದ ಸಾರ್ವಜನಿಕರ ರಕ್ಷಣೆಗೆ ಕರಾವಳಿ ಕಾವಲು ಪಡೆ, ಆಪದ ಮಿತ್ರ , ಮೀನುಗಾರರು, ಗೃಹರಕ್ಷಕ ದಳದ ನೆರವು ಪಡೆಯುವಂತೆ ತಿಳಿಸಿದ ಜಿಲ್ಲಾಧಿಕಾರಿಗಳು ಮೀನುಗಾರಿಕಾ ಇಲಾಖೆ ವತಿಯಿಂದ ಅಗತ್ಯ ಬಿದ್ದಲ್ಲಿ ಬೋಟುಗಳನ್ನು ಮತ್ತು ಕಯಾಕಿಂಗ್ ಬೋಟುಗಳನ್ನು ಬಳಸಿಕೊಳ್ಳುವಂತೆ ಹಾಗೂ ಸ್ವಯಂ ಸೇವಾ ಸಂಸ್ಥೆಗಳು ಮತ್ತು ಸ್ಥಳೀಯ ಜನಪ್ರತಿನಿಧಿಗಳ ಅಗತ್ಯ ಸಹಕಾರ ಪಡೆಯುವಂತೆ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಗೆ ಸೂಚಿಸಿದರು.
ವಿಕೋಪದಿಂದ ತೊಂದರೆಗೊಳಗಾದವರಿಗೆ ಅಗತ್ಯ ತುರ್ತು ಪರಿಹಾರವನ್ನು ಶೀಘ್ರದಲ್ಲಿಯೇ ವಿತರಿಸಲು ಮುಂದಾಗಬೇಕು ಎಂದ ಅವರು ಕಳೆದ ಬಾರಿ ಮುಂಗಾರಿನಲ್ಲಿ ತೊಂದರೆಗೊಳಗಾದ ತಗ್ಗು ಪ್ರದೇಶದಲ್ಲಿ ಈ ಬಾರಿಯೂ ಪ್ರವಾಹವಾಗುವ ಸಾಧ್ಯತೆಯಿರುವ ಹಿನ್ನಲೆಯಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.

ಜಿಲ್ಲೆಯಲ್ಲಿನ ಮಳೆಯ ಮುನ್ಸೂಚನೆಗಳನ್ನು ಸಾರ್ವಜನಿಕರಿಗೆ ತಲುಪುವಂತೆ ಸ್ವಚ್ಚತಾ ವಾಹನಗಳ ಮೂಲಕ ನಿರಂತರವಾಗಿ ಮಾಹಿತಿ ನೀಡುವಂತೆ ಹಾಗೂ ಮಳೆ ಅಧಿಕವಾಗಿ ಬರುತ್ತಿರುವ ಸಂದರ್ಭದಲ್ಲಿ ತುಂಬಿ ಹರಿಯುತ್ತಿರುವ ಹಳ್ಳ ಮತ್ತು ತೋಡುಗಳನ್ನು ದಾಟುವಾಗ ಎಚ್ಚರವಹಿಸುವಂತೆ ಜನ ಸಾಮಾನ್ಯರಿಗೆ ತಿಳಿಸುವಂತೆ ಸೂಚಿಸಿದರು.
ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ತಗ್ಗು ಪ್ರದೇಶಗಳಿಗೆ ನೀರು ನುಗ್ಗುತಿದ್ದು, ಇಂತಹ ಪ್ರದೇಶಗಳಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು, ಇಲ್ಲಿನ ನಿವಾಸಿಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಅಲ್ಲದೇ ಮಳೆಯಿಂದ ತುರ್ತು ನೆರವು ಪಡೆಯಲು ಸಾರ್ವಜನಿಕರು 24*7 ಉಚಿತ ಟೋಲ್ ಫ್ರೀ ಸಂಖ್ಯೆ 1077 ಅಥವಾ 0820-2574802 ಯಾವುದೇ ಸಂದರ್ಭದಲ್ಲಿ ಸಂಪರ್ಕಿಸಬಹು ಎಂದು ತಿಳಿಸಿದರು.












Click it and Unblock the Notifications