ನಿರ್ಗತಿಕರ ಪಾಲಿನ ಆಪತ್ಭಾಂಧವರು: ನೂರಕ್ಕೂ ಹೆಚ್ಚು ಅಪರಿಚಿತ ಶವಗಳ ಅಂತ್ಯಸಂಸ್ಕಾರ
ಉಡುಪಿ, ಆಗಸ್ಟ್ 19: ಉಡುಪಿ ಜಿಲ್ಲಾ ನಾಗರೀಕ ಸಮಿತಿಯ ನಿತ್ಯಾನಂದ ಒಳಕಾಡು ಮತ್ತು ತಾರಾನಾಥ್ ಮೇಸ್ತ ಹೆಸರನ್ನು ಕೇಳದವರು ಜಿಲ್ಲೆಯಲ್ಲಿ ಕಡಿಮೆ. ಸಮಾಜ ಸೇವೆಗೆಂದು ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಈ ಜೋಡಿ ಈತನಕ ನೂರಕ್ಕೂ ಹೆಚ್ಚು ನಿರ್ಗತಿಕರ ಶವಸಂಸ್ಕಾರ ಮಾಡಿದೆ.
Recommended Video
ನಿನ್ನೆ ಅಜ್ಜರಕಾಡು ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ರಕ್ಷಿಸಿಡಲಾಗಿದ್ದ ಐದು ಅಪರಿಚಿತ ಶವಗಳಿಗೆ ಗೌತವಯುತ ಅಂತ್ಯಸಂಸ್ಕಾರ ಮಾಡುವುದರೊಂದಿಗೆ ಇವರಿಬ್ಬರು ಅಂತ್ಯಸಂಸ್ಕಾರ ನಡೆಸಿದ ಮೃತದೇಹಗಳ ಸಂಖ್ಯೆ ನೂರು ದಾಟಿದೆ. ಈಗ ಹೇಳಿ ಕೇಳಿ ಕೊರೊನಾ ಬೇರೆ. ಸಂಬಂಧಿಕರ ಶವಗಳ ಹತ್ತಿರ ಬರಲೂ ಜನ ಹಿಂದೆ ಮುಂದೆ ನೋಡುತ್ತಾರೆ. ಆದರೆ ಈ ಜೋಡಿಯ ಮಾನವೀಯ ಸೇವೆಗೆ ಕೊರೊನಾ ಕೂಡ ಅಡ್ಡಿಯಾಗಿಲ್ಲ.

ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಒಳರೋಗಿಗಳಾಗಿ ದಾಖಲಾಗಿದ್ದ ಮೂವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದರು. ಉಡುಪಿ ನಗರದ ಸಾರ್ವಜನಿಕ ಸ್ಥಳದಲ್ಲಿ 75 ವರ್ಷದ ವೃದ್ಧರೊಬ್ಬರ ಶವ ಪತ್ತೆಯಾಗಿತ್ತು. ಅವರನ್ನು ಲಾರೆನ್ಸ್ ಫೆರ್ನಾಂಡಿಸ್ ಎಂದು ಗುರುತಿಸಲಾಗಿತ್ತು. ಹಾಗೆಯೇ ಮಲ್ಪೆಯ ತೊಟ್ಟಂ ಸಮುದ್ರ ಕಿನಾರೆಯಲ್ಲಿ ಅಪರಿಚಿತ ಗಂಡಸಿನ ಶವ ಪತ್ತೆಯಾಗಿತ್ತು. ಈ ಐದು ಶವಗಳ ವಾರಸುದಾರರ ಪತ್ತೆಗಾಗಿ ಮಾಧ್ಯಮ ಪ್ರಕಟಣೆ ನೀಡಲಾಗಿತ್ತು. ಕಾಯುವಿಕೆಯ ಕಾಲಮಿತಿ ಕಳೆದ ಬಳಿಕ ನಿತ್ಯಾನಂದ ಒಳಕಾಡು ಮತ್ತು ತಾರಾನಾಥ್ ಮೇಸ್ತ ಆಂಬುಲೆನ್ಸ್ ನಲ್ಲಿ ಮೃತದೇಹವನ್ನು ಒಯ್ದು ಅಂತ್ಯಸಂಸ್ಕಾರ ನಡೆಸಿದ್ದಾರೆ.

ಇಷ್ಟೇ ಅಲ್ಲ, ಉಡುಪಿಯಲ್ಲಿ ಏನೇ ಅವಘಡಗಳು ನಡೆದರೂ, ಅಪಘಾತಗಳು ನಡೆದರೂ ತಕ್ಷಣ ಇಲ್ಲಿಯ ಜನ ಕರೆ ಮಾಡುವುದು ಇವರಿಬ್ಬರಿಗೆ. ತುರ್ತು ಸೇವೆಗೆಂದೇ ಇವರ ಬಳಿ ಆಂಬುಲೆನ್ಸ್ ಇದೆ. ಈ ಆಂಬುಲೆನ್ಸ್ ಅಪಘಾತ, ಆಕಸ್ಮಿಕ ಸಾವಾದಾಗಲೆಲ್ಲ ನೆರವಿಗೆ ಧಾವಿಸುತ್ತದೆ. ನಿಜ ಅರ್ಥದಲ್ಲಿ 24x7 ಸೇವೆಯಲ್ಲಿರುವ ಈ ಜೋಡಿ ಕೊರೊನಾ ವಾರಿಯರ್ ಗಳಿಗಿಂತ ಯಾವುದೇ ರೀತಿಯಲ್ಲೂ ಕಡಿಮೆ ಇಲ್ಲದಂತೆ ಜನಸೇವೆ ಮಾಡುತ್ತಿದೆ. ಪ್ರಚಾರ ಬಯಸದ ಈ ಸಮಾಜ ಸೇವಕರು ಜಿಲ್ಲೆಯಲ್ಲ, ದೇಶಕ್ಕೇ ಆಸ್ತಿ ಎಂದರೂ ತಪ್ಪಾಗಲಾರದು.












Click it and Unblock the Notifications