ಸಾರಿಗೆ ಮುಷ್ಕರ; ಸಂಚಾರ ನಡೆಸಲಿವೆ 32 ಸಾವಿರ ಖಾಸಗಿ ವಾಹನ!
ಉಡುಪಿ, ಏಪ್ರಿಲ್ 06; ಸಾರಿಗೆ ನೌಕರರು ಬುಧವಾರದಿಂದ ಮುಷ್ಕರ ನಡೆಸಲು ತೀರ್ಮಾನಿಸಿದ್ದಾರೆ. ವಿವಿಧ ಜಿಲ್ಲೆಗಳಲ್ಲಿ ಖಾಸಗಿ ವಾಹನಗಳನ್ನು ಓಡಿಸಲು ಸರ್ಕಾರ ತೀರ್ಮಾನಿಸಿದೆ.
ಮಂಗಳವಾರ ಉಡುಪಿಯಲ್ಲಿ ಖಾಸಗಿ ಬಸ್ ಒಕ್ಕೂಟದ ರಾಜ್ಯ ಖಜಾಂಚಿ ಕುಯಿಲಾಡಿ ಸುರೇಶ್ ನಾಯಕ್ ಪತ್ರಿಕಾಗೋಷ್ಠಿ ನಡೆಸಿದರು. "ಮುಷ್ಕರದಿಂದ ಸಾರ್ವಜನಿಕರಿಗೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ 32,000 ಖಾಸಗಿ ವಾಹನಗಳನ್ನು ರಸ್ತೆಗೆ ಇಳಿಸುತ್ತೇವೆ" ಎಂದು ಹೇಳಿದರು.
"ಬುಧವಾರದಿಂದ 8 ಸಾವಿರ ಖಾಸಗಿ ಬಸ್, 20 ಸಾವಿರ ಮ್ಯಾಕ್ಸಿ ಕ್ಯಾಬ್ ಓಡಾಟ ನಡೆಸಲಿದೆ. 4000 ಸ್ಟೇಜ್ ಕ್ಯಾರೇಜ್ ವಾಹನಗಳು ನಮ್ಮ ಬಳಿ ಇವೆ. ಜನ ಸೇವೆಗೆ ಎಲ್ಲಾ ವಾಹನ ರಸ್ತೆಗೆ ಇಳಿಯುತ್ತವೆ" ಎಂದರು.

"ರಾಜ್ಯಾದ್ಯಂತ 60:40 ಅನುಪಾತ ಜಾರಿಗೆ ತನ್ನಿ, ಉತ್ತರ ಕರ್ನಾಟಕದಲ್ಲಿ ಸರಕಾರಿ ಬಸ್ ಏಕಸ್ವಾಮ್ಯತೆ ಇದೆ. ಖಾಸಗಿ ವಾಹನಗಳಿಗೆ ಪರವಾನಿಗೆ ಕೊಡಿ, ರಾಜ್ಯಾದ್ಯಂತ ಖಾಸಗೀಕರಣ ವ್ಯವಸ್ಥೆ ಜಾರಿಗೆ ತನ್ನಿ. ಇದರಿಂದ ಸರಕಾರಕ್ಕೆ ತೆರಿಗೆ ಸಂಗ್ರಹಕ್ಕೆ ಬಹಳ ಉಪಯೋಗವಾಗಲಿದೆ" ಎಂದು ಹೇಳಿದರು.
ಮನವೊಲಿಕೆ ಯತ್ನ ಇಲ್ಲ; "ಮುಷ್ಕರಕ್ಕೆ ಕರೆ ನೀಡಿರುವ ಸಾರಿಗೆ ನೌಕರರ ಮನವೊಲಿಕೆ ಯತ್ನ ಮಾಡುವುದಿಲ್ಲ. ಪರ್ಯಾಯ ಮಾರ್ಗಕ್ಕೆ ನಾವು ಸಿದ್ಧವಾಗಿದ್ದೇವೆ" ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಹೇಳಿದ್ದಾರೆ.
ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಜೊತೆ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, "ಯಾವುದೇ ಕಾರಣಕ್ಕೂ ಸಾರಿಗೆ ನೌಕರರನ್ನು ಸರ್ಕಾರಿ ನೌಕರರು ಎಂದು ಪರಿಗಣಿಸಲು ಸಾಧ್ಯವಿಲ್ಲ" ಎಂದು ಸ್ಪಷ್ಟಪಡಿಸಿದರು.












Click it and Unblock the Notifications