ಉಡುಪಿ ಬಬ್ಬುಸ್ವಾಮಿ ದೈವಸ್ಥಾನದಲ್ಲಿ ಕಳ್ಳತನ: ನಿದ್ದೆಯಿಂದ ಸಿಕ್ಕಿಬಿದ್ದ ಕಳ್ಳ
ಉಡುಪಿ, ಜುಲೈ 12: ಕರಾವಳಿ ಜಿಲ್ಲೆಯ ದೈವಗಳ ಕಾರಣಿಕಕ್ಕೆಸಾವಿರಾರು ನಿದರ್ಶನ ನೀಡಬಹುದು. ಇದಕ್ಕೆ ಸಾಕ್ಷಿ ಎನ್ನುವಂತೆ ಉಡುಪಿಯಲ್ಲಿ ಒಂದು ಘಟನೆ ನಡೆದಿದೆ. ದೇವರ ಕಾಣಿಕೆ ಹಣ ಕದ್ದು ಪರಾರಿಯಾಗಿದ್ದ ಕಳ್ಳ 24 ಗಂಟೆ ಒಳಗೆ ಸಿಕ್ಕಿಬಿದ್ದ ಘಟನೆ ನಡೆದಿದೆ.
ಹೊರ ಜಿಲ್ಲೆಯಿಂದ ಬಂದ ಕಳ್ಳನೋರ್ವ ಉಡುಪಿಯ ಚಿಟ್ಪಾಡಿ ಸಮೀಪದ ಕಸ್ತೂರ್ಬ ನಗರದ ಶ್ರೀ ಬಬ್ಬುಸ್ವಾಮಿ ದೈವಸ್ಥಾನದಲ್ಲಿ ಕಳ್ಳತನ ಮಾಡಿದ್ದಾನೆ. ದೈವಸ್ಥಾನದಲ್ಲಿದ್ದ ಕಾಣಿಕೆ ಡಬ್ಬಿಯನ್ನು ಒಡೆದು ಅದರಲ್ಲಿದ್ದ ಹಣವನ್ನ ಕದ್ದು ಕಣ್ಮರೆಯಾಗಿದ್ದ ಕಳ್ಳನ ಪತ್ತೆಗಾಗಿ ದೈವಸ್ಥಾನದ ಭಕ್ತರು ದೇವರಲ್ಲಿ ಮೊರೆ ಇಟ್ಟಿದ್ದಾರೆ.

ಭಕ್ತರ ಮೊರೆಗೆ ಓಗೊಟ್ಟ ದೈವ, ಕಳ್ಳನನ್ನ ನಂಬಲಸಾಧ್ಯವಾದ ರೀತಿಯಲ್ಲಿ ಪತ್ತೆ ಹಚ್ಚುವ ಮೂಲಕ ತನ್ನ ಇರುವಿಕೆಯನ್ನು ಭಕ್ತರಿಗೆ ತೋರಿಸಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.
ಉಡುಪಿಯ ಚಿಟ್ಪಾಡಿ ಕಸ್ತೂರ್ಬಾ ನಗರ ಬಬ್ಬು ಸ್ವಾಮಿ ಸನ್ನಿಧಾನದಲ್ಲಿ ಜು.4 ರ ನಡುರಾತ್ರಿ ದೈವಸ್ಥಾನದ ಕಾಣಿಕೆ ಡಬ್ಬಿ ಒಡೆದು ಕಳ್ಳತನ ನಡೆದಿತ್ತು. ಕಳ್ಳತನ ನಡೆದ ಮರುದಿನ ಅಂದರೆ ಜು.5 ಕಳ್ಳತನ ಪ್ರಕರಣ ಬೆಳಕಿಗೆ ಬಂದಿತ್ತು. ಕಳ್ಳತನ ಬೆಳಕಿಗೆ ಬರುತ್ತಿದ್ದಂತೆ ಭಕ್ತರು ಕಳ್ಳನ ಪತ್ತೆಗಾಗಿ ಸಾಮೂಹಿಕ ಪ್ರಾರ್ಥನೆ ಮಾಡಿದ್ದರು. ದೈವದ ಸನ್ನಿಧಾನದಲ್ಲಿ ಕಳ್ಳತನ ಮಾಡಿದರೆ ಅಪಚಾರವಾಗುವುದಿಲ್ಲವೇ ? ಎಂದು ಭಕ್ತರು ದೈವಕ್ಕೆ ಪ್ರಶ್ನಿಸಿದ್ದರು. ಇದಕ್ಕೆ ಉತ್ತರವಾಗಿ 24 ಗಂಟೆಯೊಳಗೆ ಕಳ್ಳನನ್ನು ಹುಡುಕಿ ಕೊಡುವುದಾಗಿ ದೈವ ಭಕ್ತರಿಗೆ ಅಭಯ ನೀಡಿತ್ತು.
ಕಳ್ಳತನ ಮಾಡಿದ್ದ ಕಳ್ಳನ ಕೃತ್ಯ ಸಿಸಿ ಕ್ಯಾಮರದಲ್ಲಿ ಸರಿಯಾಗಿದ್ದನ್ನ ಬಹುತೇಕ ಭಕ್ತರು ಗಮನಿಸಿದ್ದರು. ಸಿಸಿ ಕ್ಯಾಮೆರಾದ ಪುಟೇಜ್ ನಲ್ಲಿ ನೋಡಿದ ಕಳ್ಳನ ಚಹರೆಯನ್ನು ಹೋಲುವ ವ್ಯಕ್ತಿಯೊಬ್ಬ ನಗರದ ಕೆಎಸ್‌ಆರ್‌ಟಿಸಿ ಬಸ್ ಸ್ಟ್ಯಾಂಡ್ ನಲ್ಲಿ ನಿದ್ರೆ ಮಾಡುತ್ತಿರುವುದನ್ನು ಸ್ಥಳೀಯ ಆಟೋ ರಿಕ್ಷಾ ಚಾಲಕರೋರ್ವರು ಜುಲೈ 6 ರಂದು ಗಮನಿಸಿದ್ದಾರೆ. ತಕ್ಷಣ ಸ್ಥಳೀಯ ಪೊಲೀಸರಿಗೆ ಆಟೋ ಚಾಲಕ ಕರೆ ಮಾಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಕಳ್ಳ ನನ್ನ ಬಂಧಿಸಿ ವಶಕ್ಕೆ ಪಡೆದಿದ್ದಾರೆ.
ಮೂಲತಃ ಬಾಗಲಕೋಟೆ ಮೂಲದ ಮುದುಕಪ್ಪ, ವಿಚಾರಣೆ ಮಾಡಿದಾಗ ಬಬ್ಬು ಸ್ವಾಮಿ ದೈವಸ್ಥಾನದಲ್ಲಿ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ದೇವಸ್ಥಾನಗಳಲ್ಲಿ ಕಳ್ಳತನ ಮಾಡುವ ಚಾಳಿ ಇರುವ ಮುದುಕಪ್ಪ ಚಿಟ್ಪಾಡಿ, ಉದ್ಯಾವರ ಭಾಗದಲ್ಲಿ ಕಳ್ಳತನ ನಡೆಸಿ ಕದ್ದ ಹಣದೊಂದಿಗೆ ಊರಿಗೆ ತೆರಳುವ ಸಿದ್ಧತೆ ಮಾಡಿದ್ದ. ಬಸ್ ಸಿಗದ ಕಾರಣ ಬಸ್ ನಿಲ್ದಾಣದಲ್ಲಿ ಮಲಗಿದ್ದ ಮುದುಕಪ್ಪ ನಿಗೆ ಮುಂಜಾನೆ ಎಂಟು ಗಂಟೆಯಾದರೂ ಎಚ್ಚರಿಕೆ ಆಗದೇ ಸ್ಥಳೀಯರ ಕೈಗೆ ಸಿಕ್ಕಿಬಿದ್ದಿದ್ದಾನೆ.












Click it and Unblock the Notifications