ದಿ ಕೇರಳ ಸ್ಟೋರಿ: ಮುಂದಿನ ಜನಾಂಗ ಮೂಕಾಂಬಿಕಾ ದರ್ಶನಕ್ಕೆ ಬರಬೇಕಂದ್ರೆ "ದಿ ಕೇರಳ ಸ್ಟೋರಿ" ನೋಡಿ, ಪೋಸ್ಟರ್ ವೈರಲ್
ದಿ ಕೇರಳ ಸ್ಟೋರಿ: ಉಡುಪಿ, ಮೇ, 15: ನಿಮ್ಮ ಮುಂದಿನ ಜನಾಂಗ ಕೊಲ್ಲೂರು ಮೂಕಾಂಬಿಕೆ ದರ್ಶನಕ್ಕೆ ಬರಬೇಕೆಂದರೆ ದಿ ಕೇರಳ ಸ್ಟೋರಿ ನೋಡಿ ಎಂದು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ದ್ವಾರ ಹಾಗೂ ಆವರಣದಲ್ಲಿ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಬ್ಯಾನರ್ ಅಳವಡಿಕೆ ಮಾಡಿದ್ದಾರೆ. ಇದೀಗ ಇದೇ ಪೋಸ್ಟರ್ ಎಲ್ಲೆಡೆ ಸದ್ದು ಮಾಡುತ್ತಿದೆ.
ದೇಶದಾದ್ಯಂತ ಸಾಕಷ್ಟು ವಿವಾದಕ್ಕೆ ಕಾರಣವಾಗಿದ್ದ ಕೇರಳ ಸ್ಟೋರಿ ಚಲನಚಿತ್ರ ಹಲವು ಭಾಗಗಳಲ್ಲಿ ಇದೀಗ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಇದರ ನಡುವೆಯೇ ಪಶ್ಚಿಮ ಬಂಗಾಳ ಸೇರಿದಂತೆ ಹಲವು ರಾಜ್ಯಗಳಲ್ಲಿ ಸಿನಿಮಾ ವಿರುದ್ಧ ಆಕ್ರೋಶ ಕೇಳಿಬಂದಿದೆ. ಲವ್ ಜಿಹಾದ್ ಕುರಿತು ಮೂಡಿಬಂದಿರುವ ಚಿತ್ರ ಕೇರಳ ಸ್ಟೋರಿ, ಒಂದು ಕೋಮುವಿನ ವಿರುದ್ಧ ಗುರಿಯಾಗಿ ನಿರ್ಮಾಣ ಮಾಡಲಾಗಿದೆ ಎಂದು ಹಲವರು ಆರೋಪಿಸಿದ್ದಾರೆ.

ಇದರ ನಡುವೆಯೂ ಉಡುಪಿಯ ಮೂಕಾಂಬಿಕ ಸನ್ನಿದಿಯಲ್ಲಿ ಚಿತ್ರ ಪರ ಪ್ರಚಾರ ನಡೆಸಲಾಗುತ್ತಿದೆ. ಉಡುಪಿ ಜಿಲ್ಲೆ ಬೈಂದೂರು ತಾಲೂಕಿನ ಕೊಲ್ಲೂರು ಮೂಕಾಂಬಿಕಾ ಕ್ಷೇತ್ರಕ್ಕೆ ಕೇರಳಿಗರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿ ದೇವರ ದರ್ಶನ ಪಡೆದುಕೊಳ್ಳುತ್ತಾರೆ. ಈ ಹಿನ್ನೆಲೆಯಲ್ಲಿ ಮಲಯಾಳಂನಲ್ಲೇ ಭಕ್ತರಿಗೆ ಸ್ವಾಗತ ಕೋರಿ ಬ್ಯಾನರ್ ಅಳವಡಿಕೆ ಮಾಡಲಾಗಿದ್ದು, ಅದರಲ್ಲಿ ನಿಮ್ಮ ಮುಂದಿನ ಜನಾಂಗ ಕೊಲ್ಲೂರು ಮೂಕಾಂಬಿಕೆ ದರ್ಶನಕ್ಕೆ ಬರಬೇಕೆಂದರೆ ಕೇರಳ ಸ್ಟೋರಿ ನೋಡಿ ಎಂದು ಬರೆಯಲಾಗಿದೆ.
ಅಲ್ಲದೆ, ಇಂಗ್ಲೀಷ್ನಲ್ಲೂ ಸಾಲುಗಳನ್ನು ಮುದ್ರಿಸಲಾಗಿದ್ದು, ಈ ಬ್ಯಾನರ್ ಕೊಲ್ಲೂರಿಗೆ ಬರುವ ಪ್ರವಾಸಿಗರ ಗಮನ ಸೆಳೆಯುತ್ತಿದೆ. ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ದೇವಾಲಯದ ದ್ವಾರ ಹಾಗೂ ಆವರಣ ಎರಡು ಕಡೆ ಬ್ಯಾನರ್ ಅಳವಡಿಸಿದ್ದಾರೆ. ವಿನೋದ್ ಕೊಲ್ಲೂರು, ವಿಜಯ ಬಳಗಾರ್, ಸಂತೋಷ್ ಭಟ್, ಪ್ರಕಾಶ್ ಹಳ್ಳಿ ಬೇರು, ಹರೀಶ್ ಶೆಟ್ಟಿ ನೇತೃತ್ವದಲ್ಲಿ ಈ ಬ್ಯಾನರ್ ಅನ್ನು ಅಳವಡಿಕೆ ಮಾಡಲಾಗಿದೆ.












Click it and Unblock the Notifications