ಉಡುಪಿ ಜಿಲ್ಲೆಯ ಈ ಪುಣ್ಯಕ್ಷೇತ್ರದಲ್ಲಿ ಎಂದೂ ಬತ್ತದ ಜೀವಸೆಲೆ: ಅಚ್ಚರಿಯ ವಿಚಾರ ತಿಳಿಯಿರಿ
ಉಡುಪಿ, ಮೇ 19: ಸದ್ಯ ಉಡುಪಿ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ನಿಧಾನವಾಗಿ ಆರಂಭವಾಗಿದ್ದು, ಈ ಮಧ್ಯೆ ಕಳೆದ ಕೆಲವು ದಿನಗಳಿಂದ ಮಳೆ ಆರಂಭವಾಗಿದೆ. ಆದರೆ ನಗರ ಪ್ರದೇಶದಲ್ಲಿ ನೀರಿನ ಸಮಸ್ಯೆ ಇದ್ದು, ಈಗಾಗಲೇ ನೀರಿನ ರೇಷನ್ ಪದ್ಧತಿಯೂ ಆರಂಭ ಆಗಿದೆ. ಝಳ ಝಳ ಬಿಸಿಲು, ಬಿಸಿಲಿನ ಧಗೆ, ಸೆಕೆಯಿಂದ ಜನ ಹೈರಾಣಾಗಿದ್ದ ಉಡುಪಿ ಜಿಲ್ಲೆಯಲ್ಲಿ ಸಮುದ್ರಮಟ್ಟಕ್ಕಿಂತ 300 ಅಡಿಗಳ ಮೇಲೆ ನೀರು ಸಿಗುತ್ತಿದೆ. ಅಚ್ಚರಿಯಾದರೂ ಇದು ಸತ್ಯ.
ಕರಾವಳಿ ಜಿಲ್ಲೆಗಳಲ್ಲಿ ಒಂದಾದ ಉಡುಪಿ ವಿಶಿಷ್ಟ ಮತ್ತು ವೈವಿಧ್ಯತೆಗಳಿಂದ ಕೂಡಿರುವ ಜಿಲ್ಲೆ ಎಂದರೆ ತಪ್ಪಾಗಲಾರದು. ಜಿಲ್ಲೆಯ ಪಶ್ಚಿಮ ದಿಕ್ಕಿನಲ್ಲಿ ಬೋರ್ಗೆರೆಯುವ ಆರಬ್ಬೀ ಸಮುದ್ರ ವಿದ್ದರೂ ಕೂಡ ಇಲ್ಲಿನ ಜನರಿಗೆ ಬೇಸಿಗೆಯಲ್ಲಿ ಕುಡಿಯುವ ನೀರಿನ ಭವಣೆ ತಪ್ಪಿದ್ದಲ್ಲ. ಸದ್ಯ ಜಿಲ್ಲೆಯ ಸಮುದ್ರ ಮಟ್ಟಕ್ಕೆ ಸಮಾನಾಂತರವಾಗಿರುವ ಬಹುತೇಕ ಜಾಗಗಳಲ್ಲಿ ಜಲಮೂಲಗಳು ಇಂಗಿ ಹೋಗಿದೆ ಎನ್ನಬಹುದು.

ಜೂನ್ ಮೊದಲ ವಾರದಲ್ಲಿ ಬರಬಹುದಾದ ಮಳೆಯ ನಿರೀಕ್ಷೆಯಲ್ಲಿ ಜಿಲ್ಲೆಯ ಜನರಿದ್ದಾರೆ. ಇಂತಹ ಜಿಲ್ಲೆಯಲ್ಲಿ ಸಮುದ್ರ ಮಟ್ಟಕ್ಕಿಂತ 300 ಅಡಿ ಎತ್ತರದಲ್ಲಿ ಕುಡಿಯುವ ನೀರು ಶೇಖರಣೆಯಾಗಿದೆ. ಕುಂದಾಪುರ ತಾಲೂಕಿನ ಸಿದ್ದಾಪುರ ಹೊಸಂಗಡಿ ಬಳಿಯ ಮೆಟ್ಕಲ್ ಗುಡ್ಡ ಈ ಪ್ರಕೃತಿ ವೈಚಿತ್ರಕ್ಕೆ ಸಾಕ್ಷಿಯಾಗಿದೆ.
ಮೆಟ್ಕಲ್ ಗುಡ್ಡವು ಉಡುಪಿ ಜಿಲ್ಲೆಯ ಹೊಸಂಗಡಿ ಗ್ರಾಮದಲ್ಲಿದೆ. ಈ ಸ್ಥಳವು ಬಿದನೂರು ಮತ್ತು ಕೆಳದಿ ಸಾಮ್ರಾಜ್ಯದ ಐತಿಹಾಸಿಕವಾಗಿ ಮಹತ್ವದ್ದಾಗಿದೆ ಮತ್ತು ಕೆಳದಿ ಸಾಮ್ರಾಜ್ಯದ ರಾಜ ಶಿವಪ್ಪ ನಾಯಕ ಈ ಪ್ರದೇಶವನ್ನು ಆಳಿದಾಗ ಪ್ರಮುಖ ಸ್ಥಳವಾಗಿತ್ತು. ವಿಶೇಷವಾಗಿ ಬೆಟ್ಟದ ತುದಿಯಲ್ಲಿ ಕೋಟೆಗಳ ಅವಶೇಷಗಳಿವೆ ಸಾಹಸ ಪ್ರಿಯರಿಗೆ ಗಮನಾರ್ಹ ಮತ್ತು ದೊಡ್ಡ ಅನ್ವೇಷಣೆಯಾಗಿದೆ.

ಈ ಸ್ಥಳವು ವರಾಹಿ ಭೂಗತ ವಿದ್ಯುತ್ ಯೋಜನೆಗೆ ಸಮೀಪದಲ್ಲಿದೆ, ಇಡೀ ಹುಲಿಕಲ್ ಘಾಟ್ (ಬಾಳೆಬರೆ) ಪ್ರದೇಶ ಮತ್ತು ಉಳಿದ ಕುಂಚಿಕಲ್ ಜಲಪಾತವು ಮೇಲಿನಿಂದ ಗೋಚರಿಸುತ್ತದೆ. ಬೆಟ್ಟದ ತುದಿಯಲ್ಲಿ ಇರುವ ಗಣೇಶ ದೇವಾಲಯದ ಮುಂಭಾಗದಲ್ಲಿರುವಂತ ಪುರಾತನ ಜಲ ವಿಸ್ಮಯ ಎನ್ನುವಂತಿದೆ. ಈ ಬಾವಿಯಲ್ಲಿ ವರ್ಷದ 365 ದಿನಗಳು ಕೂಡ ನೀರು ಲಭ್ಯವಿದ್ದು, ಇಲ್ಲಿಗೆ ಭೇಟಿ ನೀಡುವ ಎಲ್ಲರನ್ನ ಆಶ್ಚರ್ಯಚಕಿತರನ್ನಾಗಿಸುತ್ತಿದೆ. ಜಿಲ್ಲೆಯಲ್ಲಿ ನೀರಿನ ಭವಣೆ ಇದ್ದರೂ ಕೂಡ ಬಹುತೇಕ ಇಂತಹ ಪುರಾತನ ಮತ್ತು ಐತಿಹಾಸಿಕ ಸ್ಥಳಗಳಲ್ಲಿ ಇಂದಿಗೂ ನೀರಿನ ಲಭ್ಯತೆ ಇರುವುದು ಆಶ್ಚರ್ಯಕ್ಕೆ ಕಾರಣವಾಗಿದೆ.












Click it and Unblock the Notifications