'ಮಿಸ್ ಕ್ವೀನ್ ಕರ್ನಾಟಕ' ಪ್ರಶಸ್ತಿ ಮುಡಿಗೇರಿಸಿಕೊಂಡ ಶಾಸ್ತ್ರ ಎಸ್.ಶೆಟ್ಟಿ
ಉಡುಪಿ, ಏಪ್ರಿಲ್ 06 : ಆಕೆ ಬಾಲ್ಯದಲ್ಲೇ ಸೌಂದರ್ಯ ಸ್ಪರ್ಧೆಯಲ್ಲಿ ಪ್ರಶಸ್ತಿಯನ್ನು ಬಾಚಿಕೊಂಡ ಕರಾವಳಿ ಬೆಡಗಿ. ಇದೀಗ ಆಕೆ 'ಮಿಸ್ ಕ್ವೀನ್ ಕರ್ನಾಟಕ' ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾಳೆ. ಮೂವತ್ತು ದೇಶಗಳ ಸ್ಪರ್ಧಿಗಳಿಂದ ತೀವ್ರ ಸ್ಪರ್ಧೆ ಎದುರಿಸಿ ಗೆಲುವಿನ ನಗೆ ಬೀರಿದ್ದಾಳೆ.
ಹೀಲ್ಡ್ ಹಾಕಿ ವಾಕಿಂಗ್ ಫಿಟ್ನೆಸ್, ಪೋಸಿಂಗ್ ನಿರತಳಾಗಿರುವ ಈ ಸುಂದರಿಯ ಹೆಸರು ಶಾಸ್ತ್ರ ಎಸ್.ಶೆಟ್ಟಿ. ಉಡುಪಿಯ ಶಶಿ ಶೆಟ್ಟಿ, ಶರ್ಮಿಳಾ ದಂಪತಿಯ ಪುತ್ರಿಯಾಗಿರುವ ಈಕೆ ಇತ್ತೀಚೆಗೆ ಕೇರಳದ ಕೊಚ್ಚಿಯಲ್ಲಿ ನಡೆದ 'ಮಿಸ್ ಕ್ವೀನ್ ಕರ್ನಾಟಕ' ಸ್ಪರ್ಧೆಯಲ್ಲಿ ಗೆಲವಿನ ನಗೆ ಬೀರಿದ್ದಾರೆ.
5 ದಿನದ ಸ್ಪರ್ಧೆಯಲ್ಲಿ ದಕ್ಷಿಣ ಭಾರತದಿಂದ ಸುಮಾರು 22 ಸ್ಪರ್ಧಿಗಳು ಭಾಗವಹಿಸಿದ್ದರು. ತೀವ್ರ ಸ್ಪರ್ಧೆ ಎದುರಿಸಿ 5 ಸುತ್ತಿನಲ್ಲಿ ಒಬ್ಬರಾಗಿ ಮಿಸ್ ಕ್ವೀನ್ ಕರ್ನಾಟಕ ಸುಂದರಿಯ ಪಟ್ಟವನ್ನು ಅಲಂಕರಿಸಿದ್ದಾರೆ. ಸ್ಪರ್ಧೆಯಲ್ಲಿ ಕರಾವಳಿ ಮಣ್ಣಿನ ಕಲೆ ಯಕ್ಷಗಾನದ ವೇಷಭೂಷಣವನ್ನು ಪ್ರಸ್ತುತಪಡಿಸಿ ಹೆಚ್ಚಿನ ಅಂಕ ಗಳಿಸಿಕೊಂಡಿದ್ದಾಳೆ.

ಬಾಲ್ಯದಲ್ಲೇ ಪತ್ರಕರ್ತೆಯಾಗುವ ಕನಸು ಕಂಡು ಅಧ್ಯಯನ ನಿರತಳಾದ ಈ ಯುವತಿ ಮೂರು ಸೌಂದರ್ಯ ಸ್ಪರ್ಧೆ ಗೆದ್ದು ರಾಯಭಾರಿಯಾಗುವ ಕನಸು ಕಂಡಿದ್ದಾಳೆ. 5 ಅಡಿ 6 ಇಂಚಿನ ಶಾಸ್ತ್ರಾ ಎಸ್.ಶೆಟ್ಟಿ ಈಗಾಗಲೇ ಮಿಸ್ ಕರಾವಳಿ ಐಕಾನ್, ಮಿಸ್ ಮಂಗಳೂರು ಸ್ಪರ್ಧೆ ಗೆದ್ದು 2018ರ ಜನವರಿಯಲ್ಲಿ ನಡೆಯುವ ಮಿಸ್ ಸೌತ್ ಇಂಡಿಯಾ ಸೌಂದರ್ಯ ಸ್ಪರ್ಧೆಗೆ ನೇರ ಪ್ರವೇಶ ಪಡೆದಿದ್ದಾಳೆ.
ಈಕೆಯ ಈ ಸೌಂದರ್ಯ ಸಾಧನೆಗೆ ಈಕೆಯ ಪೋಷಕರು ಸಂಪೂರ್ಣ ಪ್ರೋತ್ಸಾಹ ನೀಡಿದ್ದಾರೆ. ಸೌಂದರ್ಯ ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಾ ಭಾರತೀಯ ನಾಗರಿಕ ಸೇವೆಗಳ ಪರೀಕ್ಷೆ ಬರೆದು ಎರಡು ದೇಶಗಳ ನಡುವೆ ರಾಯಭಾರಿಯಾಗುವ ಬಯಕೆಯನ್ನು ಈಕೆ ಹೊಂದಿದ್ದಾಳೆ.

ಸದ್ಯ ಮಣಿಪಾಲದ ಸ್ಕೂಲ್ ಆಫ್ ಕಮ್ಯುನಿಕೇಶನ್‌ನಲ್ಲಿ ಅಂತಿಮ ವರ್ಷದ ಮಾಧ್ಯಮ ಮತ್ತು ಸಂವಹನ ಪದವಿಯಲ್ಲಿ ಒದುತ್ತಿರುವ ಶಾಸ್ತ್ರ ಮುಂದೆ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಕನಸಿಟ್ಟುಕೊಂಡಿದ್ದಾಳೆ.
ಈ ನಡುವೆ ಸೌಂದರ್ಯ ರಾಯಭಾರಿ ಜತೆಗೆ ದೇಶದ ರಾಯಭಾರಿಯಾಗುವ ಕನಸು ಹೊಂದಿದ್ದಾಳೆ. ಒಟ್ಟಿನಲ್ಲಿ ಶಾಸ್ತ್ರಾಳ ಮುಂದಿನ ಭವಿಷ್ಯ ಉಜ್ವಲವಾಗಲಿ ಎಂಬುದೇ ನಮ್ಮ ಆಶಯ.











Click it and Unblock the Notifications